ADVERTISEMENT

ಅವಲೋಕನ: ಯಕ್ಷಗಾನ ವಿರಾಟ್‌ ರೂಪದ ದರ್ಶನ ‘ಯಕ್ಷಗಾನ ಗಾನಸಂಹಿತೆ’

ಗ.ನಾ.ಭಟ್ಟ
Published 17 ಜುಲೈ 2022, 0:00 IST
Last Updated 17 ಜುಲೈ 2022, 0:00 IST
ಯಕ್ಷಗಾರ ಗಾನಸಂಹಿತೆ ಕೃತಿ
ಯಕ್ಷಗಾರ ಗಾನಸಂಹಿತೆ ಕೃತಿ   

ಹೆಸರಾಂತ ಭಾಗವತರೂ ಸಂಸ್ಕೃತ ವಿದ್ವಾಂಸರೂ ಆದ ಗಣಪತಿ ಭಟ್ಟರು ಯಕ್ಷಗಾನ ಸಂಬಂಧಿ ತಮ್ಮ ಚೊಚ್ಚಲ ಕೃತಿಗೆ ‘ಯಕ್ಷಗಾನ ಗಾನಸಂಹಿತೆ’ ಎಂದು ನಾಮಕರಣ ಮಾಡಿದ್ದಾರೆ. ‘ಯಕ್ಷಗಾನ’ ಎಂಬ ಪದದಲ್ಲೇ ಗಾನ ಶಬ್ದವೂ ನಿಹಿತಾಗಿದ್ದರಿಂದ ಪ್ರತ್ಯೇಕವಾಗಿ ‘ಗಾನ’ ಎಂಬ ಶಬ್ದದ ಪ್ರಸಕ್ತಿ ಇರಲಿಲ್ಲವೇನೋ! ಪ್ರಾಯಃ ಯಕ್ಷಗಾನ ಭಾಗವತಿಕೆ, ಹಾಡು, ಗಾನವನ್ನು ಕುರಿತೇ ಹೇಳಬೇಕಾದ ಕಾರಣಕ್ಕಾಗಿಯೋ, ಅದು ಒಂದು ಪ್ರತ್ಯೇಕ ಘಟಕ ಎಂದು ಅವರು ಭಾವಿಸಿದ್ದಕ್ಕಾಗಿಯೋ ‘ಯಕ್ಷಗಾನ ಗಾನಸಂಹಿತೆ’ ಎಂದು ನಾಮಕರಣ ಮಾಡಿರಬೇಕು! ಈ ಗಾನಸಂಹಿತೆಯಿಂದ ಓದುಗರಿಗೆ, ಜಿಜ್ಞಾಸುಗಳಿಗೆ ಒಂದು ಮಹೋಪಕಾರವೇ ಆಗಿದೆ.

ಭಟ್ಟರು ಯಕ್ಷಗಾನ ಒಂದು ಆರಾಧನಾ ಕಲೆಯೆಂದು ಹೇಳುತ್ತಲೇ ಮತ್ತು ಸೋದಾಹರಣವಾಗಿ ಅದನ್ನು ಸಮರ್ಥಿಸುತ್ತಲೇ ಯಕ್ಷಗಾನ ಪದ್ಯಗಳಲ್ಲಿ ಬಳಸಬಹುದಾದ ರಾಗ, ತಾಳ, ಭಾವ, ಲಯ, ರಸ, ಮಟ್ಟು, ಶೈಲಿ, ನಾದ ಮೊದಲಾದವುಗಳ ಕುರಿತು ವಿಸ್ತಾರವಾಗಿಯೇ ಹೇಳಿದ್ದಾರೆ. ನಾದದ ವಿವಿಧ ಉಗಮಗಳನ್ನು ಸಾಧಾರಿತವಾಗಿ ನಿರೂಪಿಸಿದ್ದಾರೆ. ಗಾನಪ್ರಭೇದಗಳಲ್ಲಿ ಮಾರ್ಗ ಮತ್ತು ದೇಶೀ ಹೇಗಾಯಿತು ಅನ್ನುವುದನ್ನು ವಿವರಿಸುತ್ತಾ ಯಕ್ಷಗಾನದ ಹಾಡು ದೇಶೀ ಮೂಲದ್ದೆಂದು ದೃಢೀಕರಿಸಿದ್ದಾರೆ. ಜನರಿಂದಾಗಿ, ಜನರಿಗೋಸ್ಕರ ಆಯಾಯ ಪ್ರದೇಶದಲ್ಲಿ ಬೆಳೆದು ಬಂದ ಕಲೆಯೇ ದೇಶೀ ಕಲೆ. ಈ ದೇಶೀ ಕಲೆಯ ಪ್ರಭೇದವೇ ಯಕ್ಷಗಾನ ಎಂದು ಹೇಳುವ ಅವರು ದೇಶೀಸೂಚಕಗಳಾದ ಮಾರವ, ಮಾಳವ, ಸೌರಾಷ್ಟ್ರ, ತಿಲಂಗ್, ಭೂಪಾಳಿ ಮೊದಲಾದ ರಾಗಗಳಿಂದ ಅದನ್ನು ಮತ್ತಷ್ಟು ಸಮರ್ಥಿಸಿದ್ದಾರೆ.

‘ಕರ್ನಾಟಕ ಸಂಗೀತ ಪದ್ಧತಿ ಹುಟ್ಟುವ ಕಾಲದಲ್ಲಿಯೇ ಯಕ್ಷಗಾನವು ಸುಸಂಬದ್ಧವಾದ, ಪ್ರಭಾವಶಾಲಿಯಾದ, ವಿಕಸಿತವಾದ ಒಂದು ಸಂಗೀತ ಪದ್ಧತಿಯಾಗಿ ಬೆಳೆದಿತ್ತು. ಇದು ಪ್ರತ್ಯೇಕವಾದ ಒಂದು ಗೀತಶೈಲಿಯೇ ಆಗಿದೆ. ಇದು ತನ್ನತನವನ್ನು ಪ್ರತ್ಯೇಕವಾಗಿ ಗುರುತಿಸಿಕೊಳ್ಳುವುದಕ್ಕಾಗಿ ‘ಯಕ್ಷ’ ಎಂಬ ವಿಶೇಷಣವನ್ನು ಹೊಂದಿತ್ತು’ ಎಂದು ಯಕ್ಷಗಾನದ ಹುಟ್ಟು, ಬೆಳವಣಿಗೆಯ ಕುರಿತು ಹೇಳಿರುವ ಮಾತು ತುಂಬಾ ಗಮನಾರ್ಹವಾದುದು.

ADVERTISEMENT

ಯಕ್ಷಗಾನ ಗೀತಶೈಲಿಯನ್ನು ರಾಗಗಳ ಆಧಾರದ ಮೇಲೆ ಗುರುತಿಸಿ ಅದಕ್ಕೊಂದು ವೈಶಿಷ್ಟ್ಯವನ್ನು ತಂದುಕೊಟ್ಟಿದ್ದಾರೆ ಲೇಖಕರು. ನಾಟಿ, ಕಲ್ಯಾಣಿ, ಕಾಂಭೋಜಿ, ತೋಡಿ, ಕೇದಾರಗೌಳ ಮುಂತಾದ ಐವತ್ತಕ್ಕೂ ಹೆಚ್ಚು ರಾಗಗಳನ್ನು ಉಲ್ಲೇಖಿಸಿ ಯಕ್ಷಗಾನದ ಅನನ್ಯತೆಯನ್ನು ಎತ್ತಿ ಹಿಡಿದಿದ್ದಾರೆ.

ಯಕ್ಷಗಾನದ ಬಯಲಾಟವೇ ಇರಲಿ, ತಾಳಮದ್ದಳೆಯೇ ಇರಲಿ ಅದಕ್ಕೆ ಮೂಲ ಆಧಾರ ‘ಪ್ರಸಂಗ’ಗಳು. ಪ್ರಸಂಗ ಅಂದರೆ ಸಂದರ್ಭ, ಘಟನೆ ಎಂಬ ಅರ್ಥಗಳಿದ್ದರೂ ಯಕ್ಷಗಾನ ಪರಿಭಾಷೆಯಲ್ಲಿ ಅದಕ್ಕೆ ‘ಕಥಾನಕ’ ಎಂಬ ಅರ್ಥವಿದೆ. ಭಟ್ಟರು ಇದನ್ನು ಗೇಯನಾಟಕವೆಂದೂ, ಗೇಯಕಾವ್ಯವೆಂದೂ, ಗೇಯಪ್ರಬಂಧವೆಂದೂ ಕರೆದು ಇದರಲ್ಲಿ ದೈತ್ಯ-ರಾಕ್ಷಸ-ಕ್ಷತ್ರಿಯರ ಕಥೆಗಳಿವೆ, ಅವರ ಇತಿಹಾಸವಿದೆ, ಅವರ ಸೋಲು-ಗೆಲುವುಗಳಿವೆ, ಭೂತ-ಪ್ರೇತ-ಪಿಶಾಚಾದಿಗಳ ಕೈವಾಡಗಳಿವೆ, ಅವರ ನರ್ತನಗಳಿವೆ, ಲೋಕ-ಲೋಕಾಂತರಗಳ ಪರಿಚಯವಿದೆ, ಪ್ರಕೃತಿಯ ವರ್ಣನೆಗಳಿವೆ, ಕಲಾಕೃತಿಗೆ ಬೇಕಾಗುವ ಎಲ್ಲಾ ರಸ- ಭಾವಗಳೂ, ರಾಗಗಳೂ ಇವೆ ಎಂದು ಯಕ್ಷಗಾನದ ಮಹತ್ವವನ್ನೂ, ಹಿರಿಮೆಯನ್ನೂ ಪ್ರಚುರಪಡಿಸಿದ್ದಾರೆ.

‘ಮಟ್ಟು’ ಎಂಬ ಪದ ಯಕ್ಷಗಾನದಲ್ಲಿ ಹೆಚ್ಚು ಪ್ರಚಲಿತವಾದ ಪದ. ಎಲ್ಲರೂ ಹೇಳುವಂತೆಯೇ ಭಟ್ಟರೂ ಕೂಡಾ ಇದನ್ನು ‘ಹಾಡುವ ಧಾಟಿ’ ಎಂದೇ ಕರೆದಿದ್ದಾರೆ. ಯಕ್ಷಗಾನದಲ್ಲಿ ಇಂದಿಗೂ ಮಟ್ಟುಗಳೇ ವಿಜೃಂಭಿಸುತ್ತವೆ ಎಂಬುದನ್ನು ಎತ್ತಿ ತೋರಿದ್ದಾರೆ. ಯಕ್ಷಗಾನದಲ್ಲಿ ‘ಭಾಗವತ’ ಎಂದರೆ ಹಾಡುಗಾರ ಅಂತ ಅಷ್ಟೇ ಅರ್ಥ. ‘ಭಾಗವತರ ತಲೆಯ ಮೇಲೆ ಕಿರೀಟವಿರದು. ಆದರೆ ಕಿರೀಟ ಹೊತ್ತ ವೇಷಧಾರಿಗಿಂತಲೂ ಭಾಗವತರ ಹೊಣೆಗಾರಿಕೆ ಎಷ್ಟೋ ಪಾಲು ದೊಡ್ಡದು’ ಎಂಬ ಮಾತು ಭಾಗವತರ ಹೊಣೆಗಾರಿಕೆಯನ್ನು ಮತ್ತಷ್ಟು ಹೆಚ್ಚಿಸುವಂತಿದೆ.

ಮೃದಂಗ, ಮೃದಂಗ ವಾದಕರು, ಚಂಡೆ, ಚಂಡೆ ವಾದಕರು, ಯಕ್ಷಗಾನ ಪಾತ್ರಗಳು, ಸಭಾಲಕ್ಷಣ, ರಸ, ಭಾವ, ರಾಗ, ಯಕ್ಷಗಾನ ಹಾಡು, ಭಾಗವತ, ಶಾಸ್ತ್ರೀಯ ಸಂಗೀತದ ಪಾತ್ರ, ಮಟ್ಟುಗಳ ಪಾತ್ರ, ಜಾನಪದದ ಪಾತ್ರ ಮೊದಲಾದವುಗಳ ಬಗ್ಗೆ ಖಚಿತವಾಗಿ ತಿಳಸಿಕೊಡುವ ಒಂದು ಉದ್ಗ್ರಂಥವಾಗಿ ಭಟ್ಟರ ‘ಯಕ್ಷಗಾನ ಗಾನಸಂಹಿತೆ’ ಹೊರಹೊಮ್ಮಿದೆ.

ಕೃತಿ: ಯಕ್ಷಗಾನ ಗಾನಸಂಹಿತೆ

ಲೇ: ವಿದ್ವಾನ್‌ ಗಣಪತಿ ಭಟ್‌ ಯಲ್ಲಾಪುರ

ಪ್ರ: ಶ್ರೀದುರ್ಗ ಪ್ರಕಾಶನ

ಸಂ: 9481447156

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.