ADVERTISEMENT

ಜೈಪುರ ಸಾಹಿತ್ಯೋತ್ಸವ ಮುಕ್ತಾಯ| ಸಾಹಿತ್ಯ–ಸಮಕಾಲೀನ ಬೆಸುಗೆಯ ಸಾಹಿತ್ಯೋತ್ಸವ

ಜೈಪುರ ಸಾಹಿತ್ಯೋತ್ಸವ ಮುಕ್ತಾಯ l ನಾಲ್ಕೂವರೆ ಲಕ್ಷ ಜನರ ಸಾಕ್ಷಿ

ವಿಶಾಖ ಎನ್.
Published 25 ಜನವರಿ 2023, 19:24 IST
Last Updated 25 ಜನವರಿ 2023, 19:24 IST
ಉತ್ಸವದ ಗೋಷ್ಠಿಯೊಂದರಲ್ಲಿ ಜಾವೇದ್‌ ಅಖ್ತರ್, ಶಬಾನಾ ಆಜ್ಮಿ
ಉತ್ಸವದ ಗೋಷ್ಠಿಯೊಂದರಲ್ಲಿ ಜಾವೇದ್‌ ಅಖ್ತರ್, ಶಬಾನಾ ಆಜ್ಮಿ   

ಜೈಪುರ: ಹದಿನಾರು ವರ್ಷಗಳ ಹಿಂದೆ ಜೈಪುರ ಸಾಹಿತ್ಯೋತ್ಸವ (ಜೆಎಲ್‌ಎಫ್) ಶುರುವಾದದ್ದು. ಮೊದಲ ವರ್ಷ ಪ್ರೇಕ್ಷಕರ ಸಾಲಿನಲ್ಲಿ ಮೂವತ್ತು ಜನರಿ ದ್ದರು. ಅವರಲ್ಲಿ ಜಪಾನೀಯರೇ ಹೆಚ್ಚು; ಅದೂ ಅವರೆಲ್ಲ ದಾರಿ ತಪ್ಪಿ ಬಂದಿದ್ದರು. ಈಗ ಸುಮಾರು ನಾಲ್ಕೂವರೆ ಲಕ್ಷ ಜನರು ಈ ಸಾಹಿತ್ಯೋತ್ಸವಕ್ಕೆ ಸಾಕ್ಷಿಯಾಗುತ್ತಿದ್ದಾರೆ.

ಸಾಹಿತ್ಯೋತ್ಸವದ ಸಹ ಸ್ಥಾಪಕರಲ್ಲಿ ಒಬ್ಬರಾದ ವಿಲಿಯಂ ಡಾಲ್‌ರಿಂಪಲ್‌ ಈ ಸಂಗತಿಯನ್ನು ಈ ಸಲ ಉದ್ಘಾಟನಾ ಭಾಷಣದಲ್ಲಿ ಮೊದಲ ದಿನವೇ ಹೇಳಿಕೊಂಡರು. ಕೊನೆಯ ದಿನದಾಂತ್ಯಕ್ಕೆ ಉತ್ಸವದ ಪ್ರೊಡ್ಯೂಸರ್ ಸಂಜಯ್ ರಾಯ್, ‘2019ರಲ್ಲಿ ಎಷ್ಟು ಪುಸ್ತಕಗಳು ಬಿಕರಿ ಯಾಗಿದ್ದವೋ ಈ ಸಲವೂ ಅಷ್ಟೇ ಸಂಖ್ಯೆಯ ಕೃತಿಗಳು ಸಾಹಿತ್ಯೋತ್ಸವದಲ್ಲಿ ಮಾರಾಟಗೊಂಡಿವೆ’ ಎಂದು ಹೇಳಿದರು.

ಕೋವಿಡ್‌ ಕಾರಣದಿಂದಾಗಿ ಎರಡು ವರ್ಷ ಜೈಪುರ ಸಾಹಿತ್ಯೋತ್ಸವ ಆನ್‌ಲೈನ್‌ನಲ್ಲಿ ನಡೆದಿತ್ತು. ಈ ಸಲ ಅದೇ ರೀತಿಯಲ್ಲಿ ಸಾಹಿತ್ಯಾಸಕ್ತರು ಬರುವರೋ ಇಲ್ಲವೋ ಎನ್ನುವ ಅನುಮಾನ ಆಯೋಜಕರಲ್ಲಿ ಇತ್ತು. ಅದು ನಿವಾರಣೆಯಾಗುವ ರೀತಿಯಲ್ಲಿ ಜೆಎಲ್‌ಎಫ್‌ ಯಶಸ್ವಿಯಾಯಿತೆನ್ನು ವುದಕ್ಕೆ ಅವರ ಮಾತೇ ಸಾಕ್ಷಿ.

ADVERTISEMENT

ಜೈಪುರ ಸಾಹಿತ್ಯೋತ್ಸವದ ಮೊದಲ ದಿನ ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಹಿತಿ ‘ಅಬ್ದುಲ್‌ರಜಾಕ್ ಗುರ್ನಾ’ ಚುಟುಕು ಪ್ರಾಸ್ತಾವಿಕ ಭಾಷಣ ಮಾಡಿದರು. ಲೇಖಕನು ಯಾವುದಕ್ಕೆ ಪ್ರತಿರೋಧ ತೋರಬೇಕು ಎನ್ನುವುದನ್ನು ಅವರು ಹೇಳಿದ್ದು ಮಾರ್ಮಿಕವಾಗಿತ್ತು. ದಾರಿತಪ್ಪಿಸಬಹುದಾದ ಆಮಿಷಗಳಿಗೆ, ಯಾವು ದನ್ನೋ ಅಮುಖ್ಯ ಎಂದು ಉದಾಸೀನ ಮಾಡುವುದಕ್ಕೆ ಸಾಹಿತಿಯಲ್ಲಿ ಪ್ರತಿರೋಧ ಇರಬೇಕು ಎಂದು ಅವರು ಸಲಹೆ ನೀಡಿದರು.

ಸಾಹಿತಿ–ರಾಜಕಾರಣಿ ಶಶಿ ತರೂರ್‌ ಸಾಹಿತ್ಯೋತ್ಸವದಲ್ಲಿ ಜನಪ್ರಿಯ ಭಾಷಣಕಾರ. ಅವರು ಇರುತ್ತಿದ್ದ ಗೋಷ್ಠಿಗಳಿಗೆ ಲಭ್ಯವಿದ್ದ ಆಸನಗಳ ಸಂಖ್ಯೆಯ ಮೂರು ಪಟ್ಟು ಜನರು ಸೇರುತ್ತಿದ್ದರು. ಇನ್ಫೊಸಿಸ್‌ ಫೌಂಡೇಷನ್‌ನಿಂದಾಗಿ ಗುರುತಾಗಿರುವ ಸಾಹಿತಿ ಸುಧಾ ಮೂರ್ತಿ ಅವರ ಗೋಷ್ಠಿಗಳಿಗೂ ಮುಗಿಬಿದ್ದವರ ಸಂಖ್ಯೆ ಕಡಿಮೆ ಇರಲಿಲ್ಲ.

ಸಂಗೀತ ಕಛೇರಿಗಳ ಮೆರುಗು: ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಹೆಸರು ಮಾಡಿರುವ ಸುಷ್ಮಾ ಸೋಮ, ಪಂಡಿತ್‌ ರವಿಶಂಕರ್‌ ಅವರೊಟ್ಟಿಗೆ ಚಿಕ್ಕ ವಯಸ್ಸಿನಲ್ಲೇ ವೇದಿಕೆ ಹಂಚಿಕೊಂಡು ಜನಪ್ರಿಯರಾಗಿರುವ ಆದಿತ್ಯ ಪ್ರಕಾಶ್, ದೆಹಲಿಯ ಸಮಕಾಲೀನ ಸಂಗೀತದ ಬ್ಯಾಂಡ್ ‘ದಿ ಅನಿರುದ್ಧ್ ವರ್ಮ ಕಲೆಕ್ಟಿವ್’, ದೆಹಲಿಯ ಮತ್ತೊಂದು ಹಿಂದೂಸ್ತಾನಿ ಶಾಸ್ತ್ರೀಯ ಗಾಯಕರ ತಂಡ ‘ಪಂಜಿಯಾ’ ಹಾಗೂ ಸಿತಾರ್ ವಾದಕ ಸೌರಬ್ರತ ಚಕ್ರವರ್ತಿ ಅವರ ಸಂಗೀತದೊಂದಿಗೆ ಸಾಹಿತ್ಯೋತ್ಸವದ ಪ್ರತಿದಿನದ ಬೆಳಗುಗಳು ಪ್ರಾರಂಭ ವಾದವು.

ಪಕ್ಷಿ, ಲಿಫಾಫ, ರಿದಮ್ಸ್ ಆಫ್ ಇಂಡಿಯಾ, ಪೀಟರ್‌ ಕ್ಯಾಟ್ ರೆಕಾರ್ಡಿಂಗ್‌ ಕಂಪನಿ, ಶ್ಯಾಡೊ ಅಂಡ್ ಲೈಟ್, ಕಬೀರ್‌ ಕೆಫೆ ಹೆಸರಿನ ತಂಡಗಳು ಪ್ರತಿದಿನ ಸಂಜೆ ಸಂಗೀತೋತ್ಸವ ಪ್ರಸ್ತುತಪಡಿಸಿದವು. ಸಂಗೀತ ಕಾರ್ಯಕ್ರಮಗಳು ಹೆಚ್ಚು ಸಹೃದಯರು ನೆರೆಯುವಂತೆ ಮಾಡಿದವು.

ಬೆಂಗಳೂರಿನ ಉದ್ಯಮಿ ನಂದನ್‌ ನಿಲೇಕಣಿ ಭಾರತದ ಡಿಜಿಟಲ್ ಜಗತ್ತು ಸದ್ಬಳಕೆಗೆ ಹೇಗೆ ಕಾರಣವಾಗು ತ್ತಿದೆ ಎಂದು ಮಾತನಾಡುತ್ತಲೇ, ವ್ಯಕ್ತಿ ಗಳು ಇಂಟರ್ನೆಟ್‌ ದಾಸರಾಗುತ್ತಾ ಭಾವನಾ ತ್ಮಕ ಜಗತ್ತಿನಿಂದ ದೂರವಾಗುತ್ತಿರುವುದಕ್ಕೆ ವಿಷಾದವನ್ನೂ ವ್ಯಕ್ತಪಡಿಸಿದರು. ಮಹಾತ್ಮ ಗಾಂಧಿಯವರ ಸತ್ಯಾಗ್ರಹದಲ್ಲಿ ನಿರತರಾಗಿದ್ದ ತಮ್ಮ ತಾತನಿಂದ ತಾವು ಬಾಲ್ಯದಲ್ಲೇ ಪಡೆದ ಪ್ರೇರಣೆಯನ್ನು ಲೇಖಕಿ ರೋಹಿಣಿ ನಿಲೇಕಣಿ ಹೇಳಿ ಕೊಂಡರು.

ಭಾನು ಮುಷ್ತಾಕ್ ಅವರ ಆಯ್ದ ಸಣ್ಣಕಥೆಗಳನ್ನು ಇಂಗ್ಲಿಷ್‌ಗೆ ಅನುವಾದಿ ಸುತ್ತಿರುವ ಕನ್ನಡತಿ ದೀಪಾ ಭಾಸ್ತಿ, ಮೂಲ ಕೃತಿಕಾರರಿಗೆ ಕೊಡುವಷ್ಟೆ ಕಿಮ್ಮತ್ತನ್ನು ಅನುವಾದಕರಿಗೂ ಕೊಡ ಬೇಕು ಎಂದು ಇತ್ತೀಚೆಗೆ ನಡೆದ ಚಳ ವಳಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು. ಅನುವಾದದಲ್ಲಿ ಧ್ವನ್ಯಾರ್ಥ ಹಿಡಿಯುವ ಕಷ್ಟಗಳ ಮೇಲೂ ಬೆಳಕು ಚೆಲ್ಲಿದರು.

ಅಂತಿಮ ದಿನ ಬಿಸಿ ಬಿಸಿ ಚರ್ಚೆ: ಸಾಹಿತ್ಯೋತ್ಸವದ ಕೊನೆಯ ದಿನ ‘ಎಡ ಮತ್ತು ಬಲದ ನಡುವಿನ ಕಂದಕಕ್ಕೆ ಸೇತುವೆ ಕಟ್ಟಲು ಸಾಧ್ಯವಿಲ್ಲ’ ಎಂಬ ವಿಷಯವಾಗಿ ಪರ–ವಿರೋಧದ ಚರ್ಚೆ ನಡೆಯಿತು. ಆಮೇಲೆ ಇದೇ ವಿಷಯವನ್ನು ಜನ ಮತಕ್ಕೂ ಹಾಕಲಾಯಿತು. ವಿಷಯದ ಪರವಾಗಿಯೇ ಹೆಚ್ಚು ಜನರು ಧ್ವನಿಮತ ಹಾಕಿದರು.

ಸಂಸದ ಜವಾಹರ್ ಸರ್ಕಾರ್, ಸಾಹಿತಿ ಪುರುಷೋತ್ತಮ್ ಅಗರ್‌ವಾಲ್ ಹಾಗೂ ಪರಿಸರ ಹೋರಾಟಗಾರ್ತಿ ವಂದನಾ ಶಿವ ವಿಷಯದ ಪರವಾಗಿ ವಾದ ಮಂಡಿಸಿದರು. ಮಕರಂದ್ ಪರಾಂಜಪೆ, ಸಂಸದ ಹಾಗೂ ಲೇಖಕ ಪವನ್ ಕೆ. ವರ್ಮ ಹಾಗೂ ಮಹಾರಾಷ್ಟ್ರದ ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ ವಿಷಯದ ವಿರುದ್ಧವಾಗಿ ವಾದ ಮಂಡಿಸಿದರು.

ಸಂವಾದ ನಡೆಯುತ್ತಿದ್ದಾಗ ವಿದೇಶದ ಯುವಕರೊಬ್ಬರು ಪ್ರಶ್ನೆ ಕೇಳಿದರು. ಆಗ, ‘ವಿದೇಶದ ಯಾರೋ ಪ್ರಶ್ನೆ ಕೇಳುವ ಮೂಲಕ ನಮ್ಮ ದೇಶದ ಸಮಸ್ಯೆಯನ್ನು ಸರಿಪಡಿಸುವ ಅಗತ್ಯವಿಲ್ಲ’ ಎಂದು ಜೆಎನ್‌ಯು ಪ್ರೊಫೆಸರ್ ಹಾಗೂ ಲೇಖಕ ಮಕರಂದ್ ಆರ್. ಪರಾಂಜಪೆ ಹೇಳಿದ್ದಕ್ಕೆ ಪ್ರತಿರೋಧ ವ್ಯಕ್ತವಾಯಿತು. ಕೊನೆಗೆ ಅವರು ಆ ಯುವಕನಲ್ಲಿ ಕ್ಷಮೆ ಯಾಚಿಸಿದರು.

ಸುಮಿತ್ ಸಾಮೊಸ್, ಸೂರಜ್‌ ಎಂಗಡೆ, ಯೋಗೇಶ್ ಮೈತ್ರೇಯಾ ಅವರ ನ್ನೊಳಗೊಂಡ, ಪರಿಪೂರ್ಣವಾಗಿ ದಲಿತರ ಮೊದಲ ಗೋಷ್ಠಿಗೂ ಈ ಬಾರಿ ಜೈಪುರ ಸಾಹಿತ್ಯೋತ್ಸವ ಸಾಕ್ಷಿಯಾ ಯಿತು.

ಕೊನೆಯಲ್ಲಿ ಪ್ರೇಕ್ಷಕರು ಕೇಳುತ್ತಿದ್ದ ಪ್ರಶ್ನೆಗಳಿಂದಲೇ ಕೆಲವು ಗೋಷ್ಠಿಗಳು ಕಳೆಗಟ್ಟಿದವು.

ಜನಪ್ರಿಯರ ನೋಡಲು ನೂಕುನುಗ್ಗಲು

ಗುಲ್ಜಾರ್, ಜಾವೆದ್ ಅಖ್ತರ್, ಶಬಾನಾ ಆಜ್ಮಿ, ಹರಿಪ್ರಸಾದ್ ಚೌರಾಸಿಯಾ ಇವರೆಲ್ಲರಿದ್ದ ಗೋಷ್ಠಿಗಳನ್ನು ನೋಡಲೆಂದೇ ಎಷ್ಟೋ ಅಭಿಮಾನಿಗಳು ಬಂದಿದ್ದರು. ಹಿಂದಿಯ ಹಲವು ಉಪಭಾಷೆಗಳು, ಮಹಿಳೆಯರಿಗೆ ಸಂಬಂಧಿಸಿದ ಗೋಷ್ಠಿಗಳು ಮೆಚ್ಚುಗೆ ಪಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.