ADVERTISEMENT

ವಿರಾಟ್ ವಿಶ್ವಕರ್ಮ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2012, 19:30 IST
Last Updated 17 ಆಗಸ್ಟ್ 2012, 19:30 IST

ಸಾಲಿಗ್ರಾಮ ಮೇಳ ಮತ್ತು ಅತಿಥಿ ಕಲಾವಿದರಿಂದ ಇದೇ 20ರಂದು ರವೀಂದ್ರ ಕಲಾಕ್ಷೇತ್ರದಲ್ಲಿ `ವಿರಾಟ್ ವಿಶ್ವಕರ್ಮ, ವೀರ ತರಣಿಸೇನ ಮತ್ತು ಗದಾಯುದ್ಧ~ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ವಿಶ್ವಕರ್ಮ ಪುರಾಣ ಆಧರಿಸಿ ಭಾಗವತರಾದ ಕೆ.ಜೆ. ಗಣೇಶ್ ಆಚಾರ್ಯ ಬರೆದ ಈ ಪ್ರಸಂಗ ಪೌರಾಣಿಕ ಕತೆಯ ಆವರಣದೊಳಗೆ ಹೊಸ ಪ್ರಸಂಗವನ್ನು ಹೆಣೆಯುವ ಪ್ರಯತ್ನವಿದು. ವಿಶ್ವಕರ್ಮ ಕುಲದ ಅಧಿದೇವತೆಯಾಗಿ, ವಿರಾಟ್ ಸೃಷ್ಟಿಯ ಕಾರಣೀಕರ್ತನಾಗಿ, ಐದು ಗೋತ್ರಗಳ ಪ್ರವರ್ತಕನಾಗಿ ಶಿಲ್ಪಜ್ಞ, ವೇದಜ್ಞ, ಮಹಾಪುರಷ ವಿಶ್ವಕರ್ಮ ಅವಿರ್ಭವಿಸಿದ ಕತೆ ಇಲ್ಲಿದೆ. ಭಾಗವತಿಕೆಯಲ್ಲಿ ಹೆರಂಜಾಲು ಗೋಪಾಲ ಗಾಣಿಗ ಮತ್ತು ಕೃಷ್ಣ ಭಂಡಾರಿ ಗುಣವಂತೆ ಇವರೊಡನೆ ಅತಿಥಿಗಳಾಗಿ ಸುರೇಶ್ ಶೆಟ್ಟಿ ಮತ್ತು ಗಣೇಶ ಆಚಾರ್ಯ ಹಾಡಲಿದ್ದಾರೆ.

ಬಳ್ಕೂರು ಕೃಷ್ಣಯಾಜಿ, ಹಳ್ಳಾಡಿ ಜಯರಾಮ ಶೆಟ್ಟಿ, ರಮೇಶ್ ಭಂಡಾರಿ ಮಾರೂರು, ಕೋಡಿ ವಿಶ್ವನಾಥ ಗಾಣಿಗ, ಶಶಿಕಾಂತ ಶೆಟ್ಟಿ ಮೊದಲಾದ ಹಿರಿಯ ಕಲಾವಿದರಿದ್ದಾರೆ. ಅತಿಥಿ ಕಲಾವಿದರಾಗಿ ಪಾಲ್ಗೊಳ್ಳುವ ಅರ್ಪಿತಾ ಹೆಗ್ಡೆ ಮತ್ತು ನಾಗಶ್ರೀ ಅವರಿಂದ ಶಿವತಾಂಡವ ನೃತ್ಯದ ಆಕರ್ಷಣೆಯೂ ಇದೆ. ಕೊನೆಯ ಪ್ರಸಂಗ `ಗದಾಯುದ್ಧ~ದಲ್ಲಿ ಕುಂದಾಪುರ ಶೈಲಿಯ ಕನ್ನಡ ಬಳಸಿರುವುದು ಮತ್ತೊಂದು ವಿಶೇಷ. ಸಮಯ: ರಾತ್ರಿ 10ರಿಂದ ಆರಂಭ. 
 
ದಿ ಡ್ರಾಮಾ ಇನ್ ರಾಗಾಸ್

ಹಿಂದುಸ್ತಾನಿ ಶಾಸ್ತ್ರೀಯ ಗಾಯಕಿ ತಾರಾ ಕಿಣಿ ಅವರಿಂದ `ದಿ ಡ್ರಾಮಾ ಇನ್ ರಾಗಾಸ್~ ಕಾರ್ಯಕ್ರಮ. 20 ವರ್ಷಗಳಿಂದ ಶಾಸ್ತ್ರೀಯ ಸಂಗೀತಾಭ್ಯಾಸ ಮಾಡುತ್ತಿರುವ ತಾರಾ ಸುನಾದ್ ತಂಡವನ್ನೂ ರಚಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಹಾಗೂ ಭಾರತದಾದ್ಯಂತ ಹಲವಾರು ಸಂಗೀತ ಕಾರ್ಯಕ್ರಮ ನೀಡಿರುವ ಇವರು ಶನಿವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಖ್ಯಾಲ್ ಹಾಗೂ ಧ್ರುಪದ್‌ಗಳಲ್ಲಿ ರಾಗಗಳನ್ನು ಪ್ರಸ್ತುತಪಡಿಸಲಿದ್ದಾರೆ.

ತಾರಾ ಅವರಿಗೆ ಶಶಿಭೂಷಣ್ ಗುರ್ಜಾರ್ (ತಬಲಾ), ಧ್ಯನೇಶ್ವರ್ ದೇಶ್‌ಮುಖ್ (ಪಕ್ಕವಾದ್ಯ), ದೀಪ್ತಿ ರಾವ್ (ತಂಬೂರಿ) ಸಾಥ್ ನೀಡಲಿದ್ದಾರೆ. ಟಿಕೆಟ್ ದರ 300ರೂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.