ಎ ಡಿ ಎ ರಂಗಮಂದಿರದಲ್ಲಿ ನಡೆದ ಭರತನಾಟ್ಯದಲ್ಲಿ ಮಿಂಚಿದ ಕೆ. ಇಶಾ, ಅದೊಂದು ಚೊಚ್ಚಲ ಕಾರ್ಯಕ್ರಮವೆನಿಸದೆ ಭಾವ, ರಾಗ ಮತ್ತು ಲಯ ಪ್ರೌಢಿಮೆಗಳಾಗಿ ಕಂಡಿರಿಸಿ ಬಹು ಆತ್ಮ ವಿಶ್ವಾಸ ಹಾಗೂ ಉತ್ಸಾಹದಿಂದ ಸ್ಪಂದಿಸಿದುದು ವಿಶೇಷ ಸಂಗತಿ. ಒಂದು ಭವ್ಯ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪರಂಪರೆಗೆ ಸೇರಿರುವ ಇಶಾ ತನ್ನ ತಾಯಿ ಡಾ. ಎ. ಲೇಖಾಅವರನ್ನೇ ಗುರುವನ್ನಾಗಿ ಪಡೆದಿರುವುದು ಘನಾತ್ಮಕ ಅಂಶ.
ಗುರು ಲೇಖಾ ಸದ್ದು ಗದ್ದಲವಿಲ್ಲದೆ ತಮ್ಮ ಕಲಿಕೆಯ ಸತ್ಫಲಗಳನ್ನು ತಮ್ಮ ಶಿಷ್ಯೆಯರ ಮೂಲಕ ಹಂಚುತ್ತಿರುವುದು ಸ್ತುತ್ಯರ್ಹ. ಪುಷ್ಪಾಂಜಲಿಯ ಪ್ರಸ್ತುತಿ ಮೂಲಕ ನಟರಾಜ, ವೇದಿಕೆ, ವಿದ್ವಾಂಸರು, ರಸಿಕರನ್ನೆಲ್ಲಾ ವಂದಿಸಿ ಇಶಾ ಗಮನ ಸೆಳೆದರು. ಗಣಪತಿಯ ವಂದನೆಯಲ್ಲಿ ಗಣಪತಿ ಶ್ಲೋಕವನ್ನು ವಿಶಿಷ್ಟ ಹಾಗೂ ಮೇಜರ್ ಐಟಂ ಆಗಿ ನಿರ್ವಹಿಸಿದ್ದು ಪ್ರಶಂಸನೀಯ.
ಗಣೇಶನ ಗಜವದನ, ಈಶಪ್ರಿಯ ಮುಂತಾದ ವಿವಿಧ ನಾಮಗಳ ಮೂಲಕ ಆತನ ವಿವಿಧತೆಯನ್ನು ತೋರಿ ಧಿತಕಿಟ ಪ್ರಮಥ ಗುರು, ವಿಕತೋತ್ಕಟ ಸುಂದರ ದಂತಿಮುಖಂ ಎಂದು ಹೇಳುತ್ತಾ ಸಂಪನ್ನಗೊಳಿಸುವ ರಚನೆಯನ್ನು ಗಣಪತಿ ತಾಳದ ಬಿಗುವಾದ ಲಯ ಚೌಕಟ್ಟಿನಲ್ಲಿ ಕಾಣಿಸಿ ಗತಿ-ವಿನ್ಯಾಸಗಳನ್ನು ಹರಡಿದ್ದು ಸವಾಲಿನ ಪ್ರಸ್ತುತಿಯಾಗಿ ಇಶಾ ಮತ್ತು ಲೇಖಾ ಇಬ್ಬಿರಿಗೂ ಅದರ ಯಶಸ್ಸಿನ ಶ್ರೇಯ ಸಂದಿತು.
ಗಾಯಕಿ ಭಾರತೀ ವೇಣುಗೋಪಾಲ್ ವಿರಚಿತ ಅಪೂರ್ವ ರಾಗಮಾಲಿಕಾ ಶಬ್ಚ (ಲೋಕ ಜನನಿ ಶೋಕಹಾರಿಣಿ)ರಚನೆಯೂ ಅನೇಕ ವಿಶೇಷತೆಗಳನ್ನು ಹೊಂದಿತ್ತು. ತ್ರಿಮಾತೆಯರಾದ ಸರಸ್ವತಿ, ಲಕ್ಷ್ಮಿ ಮತ್ತು ಪಾರ್ವತಿಯರ ದಿವ್ಯತೆ ಮತ್ತು ಭವ್ಯತೆಯನ್ನು ತನ್ನ ಅಭಿನಯ ಕುಶಲತೆಯಿಂದ ಸಾಕ್ಷಾತ್ಕಾರಗೊಳಿಸಿದ ಇಶಾ ಸರಸ್ವತಿಯನ್ನು ಶುಭಪಪ್ರದೆ, ಸಪ್ತಸ್ವರಶೋಭಿತೆಯೆಂದೂ, ಲಕ್ಷ್ಮಿಯನ್ನುಆರೋಗ್ಯಪ್ರದೆ, ಅನ್ನದಾತೆ, ದಾರಿದ್ರ್ಯ ನಿವಾರಕಿಯೆಂದೂ, ಪಾರ್ವತಿಯನ್ನು ರುದ್ರಾಂಶ ಸಂಭೂತೆ, ಶಕ್ತಿ-ಮುಕ್ತಿ ಸ್ವರೂಪಿಣಿ, ತಾಂಡವ ನರ್ತನ ಪ್ರತಿರೂಪಿಣಿ ಮುಂತಾಗಿ ಕೊಂಡಾಡಿ ಆ ಮಾತೆಯರನ್ನು ಸೃಷ್ಟಿ, ಸ್ಥಿತಿ ಮತ್ತು ಸಂಹಾರಕ ಶಕ್ತಿಗಳನ್ನಾಗಿ ಸೊಗಸಾಗಿ ಚಿತ್ರಿಸಿದರು. ಜಗದ್ಗುರು ಶ್ರೀ ಶಂಕರಾಚಾರ್ಯರ ಕನಕಧಾರಾ ಸ್ತೋತ್ರವನ್ನು ಇಲ್ಲಿ ಬಳಸಿಕೊಂಡಿದ್ದು, ಗುರು ಲೇಖಾ ಅವರ ಜಾಣ್ಮೆ ಹಾಗೂ ನಿರಾಳವಾಗಿ ನಿರೂಪಿಸಿದ ಶಿಷ್ಯೆ ಇಶಾ ನೋಡುಗರ ಮನ ಗೆದ್ದರು.
ಸುಮಂಗಲಾ ರತ್ನಾಕರರಾವ್‌ಅವರ ವಿರಹೋತ್ಕಂಠಿತ ನಾಯಿಕಾ-ಪ್ರಧಾನ ಸುದೀರ್ಘ ಅಷ್ಟರಾಗಮಾಲಾ ಕೀರವಾಣಿ (ಪಲ್ಲವಿ), ಮೋಹನ (ಅನುಪಲ್ಲವಿ), ವಸಂತ, ಅಮೃತವರ್ಷಿಣಿ, ನಳಿನಕಾಂತಿ, ಭೈರವಿ, ಲತಾಂಗಿ, ರಸಿಕಪ್ರಿಯ) ಸವಿಶೇಷ ವರ್ಣದ ವರ್ಣನೆಯಲ್ಲಿ ನೃತ್ಯ ಸಂಯೋಜಕರ ಪಾಂಡಿತ್ಯ ಮತ್ತು ಶಾಸ್ತ್ರ ಪರಿಣತಿಯ ಜೊತೆಗೆ ಕಲಾ ಪ್ರತಿಭೆ ಪ್ರಕರ್ಷವಾಗಿ ಕಾಣಬರುತ್ತದೆ.
ನಾಯಕ ಕೃಷ್ಣನಿಂದ ದೂರವಾಗಿರುವ ನಾಯಕಿಯು 'ಕಾಂತನ ಕರೆತಾರೆ ಕೀರವಾಣಿ' ಎನ್ನುತ್ತಾ ಬಿನ್ನವಿಸಿಕೊಳ್ಳುತ್ತಾಳೆ. ಭೈರವಿಯ ಅಣ್ಣನಾಗಿ ಕೃಷ್ಣನ ಮೂಲರೂಪ ತೋರಿದುದು ಇಷ್ಟವಾಯಿತು. ಉತ್ತಮ ಸಾಹಿತ್ಯ, ರಾಗಗಳ ಹೆಸರುಗಳ ಔಚಿತ್ಯಪೂರ್ಣ ಅಡಕ, ಚತುರ್ವಿಧಾಭಿನಕ್ಕೆ ವಿಪುಲವಾದ ಅವಕಾಶ, ಗಟ್ಟಿಯಾದ ಲಯ ಬಂಧಗಳು, ಇಶಾಳ ಶಾರೀರಿಕ ಹಾಗೂ ಬೌದ್ದಿಕ ಸಾಮರ್ಥ್ಯಗಳ ದಿಗ್ದರ್ಶನ ಅಂದಿನ ಕಾರ್ಯಕ್ರಮವನ್ನು ಸಾರ್ಥಕಗೊಳಿಸಿದ ಅಂಶಗಳು.
ಗುರು ಎ. ಲೇಖಾಅವರ ಸಶಕ್ತ ನಟುವಾಂಗ ಮತ್ತು ಹಿರಿಯ ಗಾಯಕಿ ಭಾರತೀ ವೇಣುಗೋಪಾಲ್‌ಅವರ ನೃತ್ಯಕ್ಕೆ ಒಗ್ಗಿಕೊಂಡ ಗಾಯನ ಒಟ್ಟಾರೆ ಪರಿಣಾಮ ಹೆಚ್ಚಿಸಿತು. ನೀತೇಶ್ ಅಮಣ್ಣಾಯ (ಕೊಳಲು), ಗೋಪಾಲ್ (ವೀಣೆ), ಕಾರ್ತಿಕ್ ವೈಧಾತ್ರಿ (ರಿದಂಪ್ಯಾಡ್ಸ್) ಮತ್ತು ಗುರುಮೂರ್ತಿ (ಮೃದಂಗ) ಪಕ್ಕವಾದ್ಯಗಾರರಾಗಿ ಬೆಳಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.