ಪರಿಣತ ಗುರು ಡಾ. ರಕ್ಷಾ ಕಾರ್ತಿಕ್‌ತಮ್ಮ ಸಕ್ರಿಯ ತೊಡಗಿಸಿಯಿಂದ ನೃತ್ಯ ಕ್ಷೇತ್ರದಲ್ಲಿ ಸದಾ ನಿರತರಾಗಿರುವಂತಹವರು. ಒಂದಲ್ಲ ಒಂದು ವಿಶಿಷ್ಟ ನೃತ್ಯ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸುವ ಅವರ ಉಮ್ಮೇದು ಸದಾ ಹಸಿರಾಗಿರುವುದು. ಜೆಎಸ್‌ಎಸ್ ಸಭಾಂಗಣದಲ್ಲಿ ನಡೆದ ತನ್ಮಯಿ ಸುಧಾಕರ್ ಕಾರ್ಯಕ್ರಮ ಪ್ರೌಢವಾಗಿ ಮೂಡಿಬಂದು ರಕ್ಷಾಅವರ ಬೋಧನಾ ಕ್ಷಮತೆ ಮತ್ತು ವಿಶಿಷ್ಟತೆಗಳನ್ನು ತೆರೆದಿಡುವುದು. ತನ್ಮಯಿಯ ತೆಳ್ಳಗೆ, ಎತ್ತರವಾದ ಶರೀರ, ಆಕರ್ಷಕ ಮುಖ ಮತ್ತು ಕಣ್ಣುಗಳು ಸಫಲ ನರ್ತಕಿಯನ್ನು ರೂಪಿಸಿದ್ದವು.
ಗುರು ರಕ್ಷಾ ಕಾರ್ತಿಕ್(ಪ್ರೇರಕ ನಟುವಾಂಗ), ಬಾಲಸುಬ್ರಹ್ಮಣ್ಯ ಶರ್ಮ(ಗಾಯನ), ಗೋಪಾಲ(ವೀಣೆ), ಶ್ರೀಹರಿ(ಮೃದಂಗ), ಜಯರಾಂ(ಕೊಳಲು) ಮತು ಪ್ರಸನ್ನಕುಮಾರ್(ರಿದಂಪ್ಯಾಡ್ಸ್) ಅವರ ಪ್ರೋತ್ಸಾಹಕ ಸಹಕಾರದೊಂದಿಗೆ ತನ್ಮಯಿ ಊತ್ತುಕ್ಕಾಡು ಅವರ ʼಪ್ರಣವಾಕಾರಂʼನ ಆಶಯದಂತೆ ಗಣೇಶನ ರೂಪ-ಗುಣಗಳನ್ನು ಅಭಿನಯಿಸುತ್ತಾ ಸ್ತುತಿಸಿದ್ದು ಹಲವು ಕಾಲ ನೆನೆಪಿನಲ್ಲಿರುವಂತಹ ನಿರೂಪಣೆ. ನಾರಾಯಣ ತೀರ್ಥರ ನೀಲಾಂಬರಿ ರಾಗದ ʼಮಾಧಮ ಮಾಮವʼದ ಸಾಹಿತ್ಯವನ್ನು ಅವಲಂಬಿಸಿ ಶ್ರೀಕೃಷ್ಣನ ಹಿರಿಮೆ-ಗರಿಮೆಗಳ ಪುನರ್‌ದರ್ಶನದಲ್ಲಿ ತನ್ಮಯಿಅವರ ಭಾವಪ್ರೇಷಕ ಅಭಿನಯ ಸೆಳೆಯುತ್ತದೆ. ಶ್ರೀಕೃಷ್ಣ-ಸುಧಾಮರ ಪ್ರಸಂಗದ ಅನಾವರಣದಲ್ಲಿ ನರ್ತಕಿಯು ತನ್ನ ನಟನಾ ಕೌಶಲದ ಹೂರಣ ತುಂಬಿ ಕಡುಬಿನಂತೆ ಸವಿಯುವಂತೆ ಮನದಟ್ಟು ಮಾಡಿದರು.
ಅಭಿನಯ-ಐಟಂಗಳ ಬಾಹುಳ್ಯ ಮೆಚ್ಚಿಸಿತು. ತನ್ಮಯಿ ತನ್ಮಯಳಾಗಿ ಅವುಗಳನ್ನು ನಿರೂಪಿಸಿದುದು ಅಭಿನಂದನಾರ್ಹ. ಅಣ್ಣಮಾಚಾರ್ಯರ ʼಅದಿವೋ ಅಲ್ಲದಿವೋʼ(ಮಧ್ಯಮಾವತಿ) ಶ್ರೀವೆಂಕಟೇಶ್ವರನ ತಿರುಮಲೆಯ ದಿವ್ಯ ಸನ್ನಿಧಿಗೆ ಹೋಗುವ ಯಾತ್ರೆ, ಅದರ ಹಿಂದಿರುವ ಅಚಲ ಭಕ್ತಿಯ ಪರಾಕಾಷ್ಠೆ ಮುಂತಾದವು ಕೇವಲ ಲೌಕಿಕ ಯಾತ್ರೆಯಾಗದೆ ಆತ್ಮದ ಪರಮಾತ್ಮನೆಡಗಿನ ಯಾತ್ರೆಯಂತೆ ಚಿತ್ರಿಸಿ ತನ್ಮಯಿ ಮನಗೆದ್ದರು. ಪರಗತಿ ಹಾಗೂ ಪರಾಗತಿಯೂ ನೀನೇ ಎಂಬ ಭಾವ ಉದ್ದೀಪನಗೊಳಿಸುವ ಪಾಪನಾಶಂಶಿವನ್ ನಾಟ್ಟಿಕುರಂಜಿ ವರ್ಣ(ಸ್ವಾಮಿಯೇ ಉನ್‌ದನ್)ನ ವಿವರಣೆಯ ಪ್ರತಿಯೊಂದು ಅಂಶದಲ್ಲೂ ತನ್ಮಯಿ ಮಿಂಚಿದರು ವಾಕ್ಯಾಭಿನಯ, ಪದಾಭಿನಯ ಮತ್ತು ಸಂಚಾರಿ-ಅಭಿನಯದಲ್ಲಿ ಅವರಿಗೆ ಪೂರ್ಣ ಅಂಕಗಳು ದೊರೆತವು. ಶಿವ ಭಕ್ತ ಭೃಂಗಿ ಮತ್ತು ಮಾರ್ಕಂಡೇಯ ಕಥಾಪ್ರಸಂಗದ ವಿಸ್ತರಣೆಯಲ್ಲಿ ಹಾಗೂ ವರ್ಣದ ಆದ್ಯಂತ ಅಡಕವಾಗಿದ್ದ ನೃತ್ತ, ನೃತ್ಯ ಮತ್ತು ಅಭಿನಯದಲ್ಲಿ ಸುಂದರವಾಗಿ ರೂಪಿಸುವ ಚಿತ್ರ-ಚತುರ ಮತ್ತು ಶಿಲ್ಪ ವರ್ಯನ ದರ್ಶನವಾಗಿದ್ದು ಸಹಜವೇ ಸರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.