ಡಣಕ ಡಣ್... ಡಡ್ಡಣಕ ಡಣ್... ಬಿಲ್ಲಿನಂತೆ ಮೈ ಬಾಗಿಸಿ, ಹೊಟ್ಟೆಯ ಮೇಲೆ, ಡೊಳ್ಳಿನ ಭಾರ ಹೊತ್ತು, ಅಷ್ಟೂ ಭಾರವನ್ನು ಕಾಲುಗಳ ಮೇಲೆ ಹೇರಿ, ಡೊಳ್ಳು ನುಡಿಸುತ್ತಿದ್ದರೆ ಕೇಳುಗರ ನರನಾಡಿಗಳಲ್ಲೆಲ್ಲ ಹೊಸ ಸಂಚಲನ. ಡೊಳ್ಳಿಗಿರುವ ಮಾಂತ್ರಿಕ ಶಕ್ತಿಯೇ ಅಂಥದ್ದು.
ಇನ್ನು ಹುಲಿರಾಯನ ವೇಷಧರಿಸಿ, ಹುಲಿಗಳಂತೆಯೇ ಹೆಜ್ಜೆ ಹಾಕುತ್ತಾ, ಕಣ್ಣು ಕೆಂಪಾಗಿಸಿ, ಮುಂಗೈ ಹಿಗ್ಗಲಿಸಿ, ಹುಲಿಯಂತೆ ಹೆಜ್ಜೆ ಹಾಕುತ್ತಿದ್ದರೆ ರೌದ್ರದರ್ಶನ ಈ ಹೆಜ್ಜೆಗಳಲ್ಲಿ ಕಾಣುತ್ತದೆ.ದೇಹದ ಮೇಲಿನ ಪಟ್ಟೆಗಳಿಂದಲೇ ಶೌರ್ಯರಸ ಹೊರ ಉಕ್ಕುವಂತಿರುತ್ತದೆ. ಈ ಎರಡೂ ಕಲೆಗಳನ್ನು ಪ್ರದರ್ಶಿಸುತ್ತಲೇ ಕಲೆಗಾರಿಕೆ ಮುಂದುವರಿಯಲು ವಿದ್ಯಾರ್ಥಿಗಳಿಗೆ ಕಲಿಸುತ್ತಿರುವ ಯುವ ಕಲಾವಿದರೊಬ್ಬರಿದ್ದಾರೆ.
ಕಳೆದ ಮೂರು ವರ್ಷಗಳಿಂದ ಕೆಪಿಎಲ್‌ನಲ್ಲಿ ಡೊಳ್ಳು ಕುಣಿತದ ‘ಡೊಳ್ಳು ಚಂದ್ರು ಶ್ರೀನಿವಾಸ್’ ತಂಡ ಸದ್ದು ಮಾಡತ್ತಿದೆ. ಈ ತಂಡದ ನಾಯಕರಾಗಿರುವ ಎ.ಎಸ್. ಚಂದ್ರಕುಮಾರ್ ಅವರು ‘ಡೊಳ್ಳು ಚಂದ್ರ’ ಎಂದೇ ಫೇಮಸ್.
ಡೊಳ್ಳು ಕುಣಿತದಲ್ಲಿ ನಾಲ್ಕು ಬಾರಿ ಬೆಂಗಳೂರು ವಿಶ್ವವಿದ್ಯಾಲಯವನ್ನು ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿರುವ ಅವರು, 2016ರಲ್ಲಿ ಎನ್‌ಎಸ್‌ಎಸ್‌ನ ರಾಜ್ಯ ಪ್ರಸ್ತಿಯನ್ನು ಪಡೆದಿದ್ದಾರೆ.
ಡೊಳ್ಳು ಕುಣಿತದ ಜೊತೆಗೆ ಹುಲಿವೇಷ, ಕಂಸಾಳೆ, ಬೇಡರ ವೇಷ ಮತ್ತು ಸೋಮನ ಕುಣಿತದಂಥ ಜನಪದ ನೃತ್ಯಗಳಲ್ಲಿ ಇವರ ತಂಡ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ‘ದೊಡ್ಮನೆ ಹುಡುಗ’ ಸಿನಿಮಾದಲ್ಲಿಯೂ ಈ ತಂಡ ಮಿಂಚಿದೆ. ವಿಶೇಷವೆಂದರೆ ಈ ತಂಡದ ಹಲವು ಯುವಕರು ಜನಪದ ಕುಣಿತಗಳೊಂದಿಗೆ ವಿದ್ಯಾಭ್ಯಾಸವನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ. ಚಂದ್ರ ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಪಿ.ಇಡಿ ಪದವಿ ಪಡೆದಿದ್ದಾರೆ.
ಬಿಡುವಿನಲ್ಲಿ ಸರ್ಕಾರಿ ಕಾಲೇಜಿನ ಆಸಕ್ತ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿವಿಧ ಜಾನಪದ ಕಲೆಗಳನ್ನು ಇವರು ಕಲಿಸಿಕೊಡುತ್ತಿದ್ದಾರೆ. ವಾರ್ತಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ಸರ್ಕಾರಿ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೂ ತರಬೇತಿ ನೀಡಿದ್ದಾರೆ.
ಡೊಳ್ಳು ಕುಣಿತದ ಜೊತೆಗೆ ಹುಲಿವೇಷಕ್ಕೂ ಚಂದ್ರ ಅವರು ಪ್ರಖ್ಯಾತಿಗಳಿಸಿದ್ದಾರೆ. ‘ಹುಲಿ ವೇಷದ ಮಜವೇ ಬೇರೆ. ಜನ ನಮ್ಮನ್ನು ಅಚ್ಚರಿಯ ಕಣ್ಣುಗಳಿಂದ ನೋಡುವಾಗ ಖುಷಿಯಾಗುತ್ತದೆ’ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಅವರು.
‘ನನ್ನ ತಂದೆಯೇ ನನ್ನ ಗುರು. ಅವರೇ ನನಗೆ ಪ್ರೇರಣೆ. ಐದನೇ ತರಗತಿಯಲ್ಲಿದ್ದಾಗಲೇ ಡೊಳ್ಳು ಕುಣಿತದ ಮೇಲೆ ಆಸಕ್ತಿ ಮೂಡಿತ್ತು. ಈಗ ನಾನೇ ಒಂದು ತಂಡ ಕಟ್ಟಿಕೊಂಡಿದ್ದೇನೆ’ ಎಂದು ಅವರ ಕಲಿಕಾ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.
‘ನಾನು ಬಡತನದಲ್ಲಿಯೇ ಬೆಳೆದವನು. ಹೀಗಾಗಿಯೇ ಸರ್ಕಾರಿ ಕಾಲೇಜುಗಳಲ್ಲಿ ಜಾನಪದ ಕಲೆಗಳನ್ನು ಉಚಿತವಾಗಿ ಹೇಳಿಕೊಡುತ್ತಿದ್ದೇನೆ’ ಎನ್ನುತ್ತಾರೆ ಅವರು.
ಸಂಪರ್ಕಕ್ಕೆ: 9731345838⇒v
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.