ನೃತ್ಯ ಪ್ರಸ್ತುತಿಯಲ್ಲಿ ನೂತನ ಪ್ರಯೋಗಗಳನ್ನು ಮಾಡುತ್ತಿರುವ ಸಂಸ್ಥೆ ಸಹಕಾರನಗರದ ‘ದೃಷ್ಟಿ’ ನೃತ್ಯಶಾಲೆ. ಇದರ ಸಂಸ್ಥಾಪಕಿ ನೃತ್ಯಗಾರ್ತಿ ಅನುರಾಧಾ ವಿಕ್ರಾಂತ್.ಇವರು ಪ್ರತಿವರ್ಷ ನಡೆಸುವ ರಾಷ್ಟ್ರೀಯ ನೃತ್ಯೋತ್ಸವದಲ್ಲಿ ಪುರಾಣದ ಎಳೆ ಇಟ್ಟುಕೊಂಡ ನೃತ್ಯ ನಾಟಕ ಪ್ರದರ್ಶಿಸುತ್ತಾ ಬಂದಿದ್ದಾರೆ. ಇದೆ 19ರಂದು ಸಂಜೆ 6ಕ್ಕೆ ವೈಯ್ಯಾಲಿಕಾವಲ್‌ನ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ದೃಷ್ಟಿ ಸಂಸ್ಥೆಯ ವತಿಯಿಂದ 14ನೇ ರಾಷ್ಟ್ರೀಯ ನೃತ್ಯೋತ್ಸವ ಆಯೋಜಿಸಲಾಗಿದೆ.ಈ ವರ್ಷದ ಪ್ರಸ್ತುತಿ ‘ಐಕ್ಯಂ’.
ದೃಷ್ಟಿ ನೃತ್ಯಶಾಲೆಯ ವಿದ್ಯಾರ್ಥಿಗಳು ಐಕ್ಯಂ ನೃತ್ಯನಾಟಕ ಪ್ರಸ್ತುತಪಡಿಸಲಿದ್ದಾರೆ. ಇದರ ಮೂಲ ಪರಿಕಲ್ಪನೆ ಮತ್ತು ನೃತ್ಯ ಸಂಯೋಜನೆ, ವಿದುಷಿ ಅನುರಾಧಾ ವಿಕ್ರಾಂತ್ ಅವರದು.‘ಪುರಾಣ, ಇತಿಹಾಸದ ಎಳೆಯನ್ನು ತೆಗೆದುಕೊಂಡು ಅದನ್ನು ವಿಸ್ತರಿಸುತ್ತಲೇ ಸಮಕಾಲೀನ ಬದುಕಿಗೆ ಕನ್ನಡಿ ಹಿಡಿಯುವುದು ಈ ರೂಪಕದ ಉದ್ದೇಶ’ ಎಂದು ಅನುರಾಧಾ ವಿಕ್ರಾಂತ್ ವಿವರಿಸುತ್ತಾರೆ.
ಭಾರತೀಯ ಪುರಾಣ, ಮಹಾಕಾವ್ಯಗಳೆಲ್ಲವೂ ದೇವ-ದೇವತಾ ಆದರ್ಶ ಪ್ರಣೀತವಾದವು. ಸಾಮರಸ್ಯದ ದಾಂಪತ್ಯಕ್ಕೆ ಈಶ್ವರ ಕುಟುಂಬ ಪರಿವಾರವೇ ಒಂದು ದೊಡ್ಡ ಮಾದರಿ. ಒಟ್ಟಾರೆ ಇಂದಿನ ಅವಸರದ ಜೀವನದ `ಸುಖಮಯ ಕುಟುಂಬ' ಕ್ಕೆ ಸುಖಮಯ ಸೂತ್ರಗಳನ್ನು`ಐಕ್ಯಂ' ತೆರೆದಿಡಲಿದೆ.
‘ಪಾರ್ವತಿ ದೇವಿಯ ದೀರ್ಘ ತಪಸ್ಸಿನ ಫಲವಾಗಿ ಶಿವ ಆಕೆಗೆ ಪತಿಯಾಗಿ ಒಲಿಯುತ್ತಾನೆ. ಆಕೆಯ ತ್ಯಾಗ, ರೂಪ, ಕಠಿಣ ಸಾಧನೆ, ತಪಸ್ಸು ಮತ್ತು ದಯಾ ಗುಣಗಳೇ ಪರಶಿವನ ಒಲುಮೆ ಗಳಿಸಲು ಕಾರಣ ಎಂಬುದು ಕತೆಯ ಒಂದು ಒಂದು ಭಾಗ. ಲೋಕಮಾತೆಯಾದ ಆಕೆಯಲ್ಲಿ ಢಾಳಾಗಿ ಕಂಡುಬರುವ ಗುಣಗಳು ಮತ್ತು ಸಾಮರ್ಥ್ಯ ರೂಪಕವಾಗಿ ಹೊರ ಹೊಮ್ಮಲಿದೆ.
ಹಾಗಾಗಿ ಶಿವ`ಅರ್ಧನಾರೀಶ್ವರ' ರೂಪ ತಳೆದು ದೇವಿಯನ್ನು ತನ್ನ ದೇಹ ಮತ್ತು ಮನಸ್ಸಿನ ‘ಅರ್ಧ ಭಾಗ' ಎಂಬ ದರ್ಶನ ಮಾಡುತ್ತಾನೆ. ಇದು ವಿಶ್ವದ ಪರಮ ಆದರ್ಶವಾದ ದಾಂಪತ್ಯದ ದ್ಯೋತಕ. ಸತಿ-ಪತಿಗಳ ಸಾಮರಸ್ಯ, ಸಂಸಾರದಲ್ಲಿ ಇರಬೇಕಾದ ಲೌಕಿಕ ಮತ್ತು ಪರಮಾರ್ಥಿಕ ಸಂದೇಶಗಳ ಮಹಾಸಾರ. ಇದು ಕೇವಲ ಪುರಾಣ ಮತ್ತು ಇತಿಹಾಸಕ್ಕೆ ಸೀಮಿತವಲ್ಲ. ವರ್ತಮಾನದ ಬದುಕಿಗೂ ಅಗತ್ಯ ಎಂಬುದನ್ನು ಈ ಕಥಾನಕ ಸಾರಲಿದೆ’ ಎನ್ನುತ್ತಾರೆ ಅವರು.
‘ದೃಷ್ಟಿ’ ಪುರಸ್ಕಾರ ಪ್ರದಾನ: ಕಲಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಸಾಧಕರಿಗೆ ಪ್ರತಿ ವರ್ಷ ನೃತ್ಯೋತ್ಸವ ಸಂದರ್ಭದಲ್ಲಿ ‘ದೃಷ್ಟಿ ಪುರಸ್ಕಾರ' ನೀಡಿ ಗೌರವಿಸುವುದು ಸಂಸ್ಥೆಯ ಸಂಪ್ರದಾಯ. ಈ ವರ್ಷ ಕರ್ನಾಟಕ ಶಾಸ್ತ್ರೀಯ ಸಂಗೀತದ ಖ್ಯಾತ ಗಾಯಕ ವಿದುಷಿ ಡಾ. ಪುಸ್ತಕಂ ರಮಾ ಮತ್ತು ನುರಿತ ನೃತ್ಯ ವಿದುಷಿ ಉಷಾ ದಾತಾರ್ ‘ದೃಷ್ಟಿ ಪುರಸ್ಕಾರ' ಕ್ಕೆಭಾಜನರಾಗಿದ್ದಾರೆ. ಇಬ್ಬರು ಗಣ್ಯರಿಗೂ ಇದೇ ಸಂದರ್ಭ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ವಿಶೇಷ ನೃತ್ಯ ಪ್ರದರ್ಶನ: ವಿದುಷಿ ವೈಜಯಂತಿ ಕಾಶಿ ಮತ್ತು ಅವರ ಸಂಸ್ಥೆಯಾದ ‘ಶಾಂಭವಿ ಡಾನ್ಸ್’ ತಂಡದಿಂದ ಕೂಚುಪುಡಿ ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ. ನಂತರ ನವದೆಹಲಿಯ ಕಲಾವಿದರಾದ ರಾಕೇಶ ಸಾಯಿಬಾಬು ಮತ್ತು ತ್ರಿಕಾಯ ಡಾನ್ಸ್ ಕಂಪನಿ ತಂಡದಿಂದ`ಮಯೂರ್ ಭಂಜ್ ಛೌ' ಸಾಹಸ ಪ್ರದಾನ ನರ್ತನ ಮೂಡಿಬರಲಿದೆ. ಕಾರ್ಯಕ್ರಮದಲ್ಲಿ ಹಿರಿಯ ನೃತ್ಯ ವಿಮರ್ಷಕ ಪದ್ಮಶ್ರೀ ಪುರಸ್ಕೃತ ಡಾ. ಸುನಿಲ್ ಕೊಠಾರಿ ಮತ್ತು ಖ್ಯಾತ ಇತಿಹಾಸ ತಜ್ಞೆ, ನರ್ತನ ಕ್ಷೇತ್ರದ ಪರಿಣಿತೆ ಲೀಲಾ ವೆಂಕಟರಾಮನ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.