ADVERTISEMENT

ಹನುಮ-ಭೀಮ-ಮಧ್ವರ ಪ್ರಭಂಜನ ಚರಿತಂ

ಹನುಮ-ಭೀಮ-ಮಧ್ವರ ಪರಿಚಯ-ಪ್ರಭಂಜನ ಚರಿತಂ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2019, 20:15 IST
Last Updated 21 ಮಾರ್ಚ್ 2019, 20:15 IST
ಪ್ರಭಂಜನ ಚರಿತಂ ನೃತ್ಯರೂಪಕದ ದೃಶ್ಯ
ಪ್ರಭಂಜನ ಚರಿತಂ ನೃತ್ಯರೂಪಕದ ದೃಶ್ಯ   

ಮಲ್ಲೇಶ್ವರದ ಸೇವಾಸದನದಲ್ಲಿ ಈಚೆಗೆ ಭರತಾಂಜಲಿ ನಾಟ್ಯ ಶಾಲೆ ‘ಪ್ರಭಂಜನ ಚರಿತೆ’ ನೃತ್ಯರೂಪಕ ಆಯೋಜಿಸಿತ್ತು.

ಏಕವ್ಯಕ್ತಿ ಪ್ರದರ್ಶನದಲ್ಲಿ ಕಲಾವಿದೆ ಭುವನಾ ಜಿ. ಪ್ರಸಾದ್, ಗುರು ಸೀತಾ ಗುರುಪ್ರಸಾದ್ ಅವರ ಮಾರ್ಗದರ್ಶನದಲ್ಲಿ ವಾಯುದೇವರ ಮೂರು ಅವತಾರಗಳನ್ನು ಪ್ರಸ್ತುತಪಡಿಸಿದರು.

ದೀರ್ಘವಾದ ಹನುಮಾವತಾರದಲ್ಲಿ ಹನುಮ ಜನನದ ಸಂದರ್ಭದಿಂದ ಕಥಾನಕ ಆರಂಭವಾಯಿತು. ದಶರಥ ಪುತ್ರರು ಮತ್ತು ಹನುಮಂತರ ಜನನ ಸಂದರ್ಭ ಒಂದೇ ಎಂಬ ವಿಷಯವನ್ನು ವಿಸ್ತರಿಸಲಾಯಿತು. ಉಳಿದಂತೆ ಹನುಮ ಸೂರ್ಯನನ್ನು ಹಣ್ಣೆಂದು ಭ್ರಮಿಸಿ ಹಿಡಿಯಲು ಹಾರುವುದು, ಗ್ರಹಣಕ್ಕೆ ಸಿದ್ದವಾಗಿದ್ದ ರಾಹು ಆತಂಕಗೊಂಡು ಇಂದ್ರನಿಗೆ ದೂರು ಕೊಡುವುದು, ಇಂದ್ರ ವಜ್ರಾಯುಧ ಪ್ರಯೋಗಿಸಿ ಹನುಮ ಭೂಮಿಗೆ ಕುಸಿಯುವುದು, ಸಿಟ್ಟುಗೊಂಡ ವಾಯು ಪ್ರಾಣುವಾಯು ಹಿಂಪಡೆಯುವುದು, ಇದರಿಂದಾಗಬಹುದಾದ ಅಪಾಯವನ್ನು ತಪ್ಪಿಸಲು ತ್ರಿಮೂರ್ತಿಗಳು ವಾಯುವನ್ನು ಸಮಾಧಾನಗೊಳಿಸುವುದು ಮುಂತಾಗಿ ಕಥಾನಕ ತೆರೆದುಕೊಂಡಿತು.

ADVERTISEMENT

ಹನುಮನ ಶ್ರೀರಾಮ ಭೇಟಿ, ಸೀತೆಯನ್ನು ಅರಸಿ ಹನುಮ ಲಂಕೆಗೆ ಹಾರುವುದು. ಸೀತೆಗೆ ಮುದ್ರೆಯುಂಗರ ನೀಡಿ, ಚೂಡಾಮಣಿ ಪಡೆಯುವುದು, ಲಂಕಾದಹನ ಮುಂತಾದ ಸನ್ನಿವೇಶಗಳನ್ನು ಅಳವಡಿಸಿಕೊಳ್ಳಲಾಗಿತ್ತು.

ದ್ವಾಪರಯುಗದಲ್ಲಿ ವಾಯುದೇವ ತಳೆದ ಭೀಮಾವತಾರವನ್ನು ಆರಿಸಿಕೊಳ್ಳಲಾಗಿತ್ತು. ದುಷ್ಟಶಕ್ತಿ ನಿರ್ಮೂಲನ ಈ ಅವತಾರದ ಪ್ರಮುಖ ಉದ್ದೇಶ. ಆ ಹಿನ್ನೆಲೆಯಲ್ಲಿ ಬಕಾಸುರ, ಕೀಚಕ, ದುಶ್ಯಾಸನ, ದುರ್ಯೋಧನರನ್ನು ಭೀಮ ‍ಸಂಹರಿಸುವ ಸಂದರ್ಭಗಳನ್ನು ಸಂಕ್ಷಿಪ್ತವಾಗಿ ಮೂಡಿಸಲಾಯಿತು.

ಕಲಿಯುಗದಲ್ಲಿ ವಾಯುದೇವ ಶ್ರೀಮಧ್ವಾಚಾರ್ಯರಾಗಿ ಅವತರಿಸುತ್ತಾನೆ. ಹಿಂದಿನ ಎರಡು ಅವತಾರಗಳಲ್ಲಿ ಯುದ್ಧ ಪ್ರಧಾನವಾದರೆ, ಮಧ್ವಾವತಾರದ ಉದ್ದೇಶ ಜ್ಞಾನ ಪ್ರಚಾರ. ಎಲ್ಲ ಸಿದ್ಧಾಂತಗಳನ್ನು ಒಪ್ಪಿಕೊಳ್ಳುತ್ತಲೇ ತಮ್ಮ ಸಿದ್ಧಾಂತಗಳನ್ನು ಪ್ರತಿಪಾದಿಸುವ ಮಧ್ವಾಚಾರ್ಯರ ಭಾಗವನ್ನು ಭಾವುಕವಾಗಿ ಪ್ರಸ್ತುತಪಡಿಸಲಾಯಿತು.

ಹಡಗಿನಲ್ಲಿರುವ ಗೋಪಿಚಂದನದ ಗಡ್ಡೆಯಲ್ಲಿ ಶ್ರೀ ಕೃಷ್ಣ ವಿಗ್ರಹವಿರುವುದನ್ನು ತಮ್ಮ ಜ್ಞಾನಬಲದಿಂದ ಅರಿತ ಆಚಾರ್ಯರು ತಮ್ಮ ಶಾಟಿಯನ್ನು ಬೀಸಿ ಹಡಗನ್ನು ದಡಕ್ಕೆ ತಂದು, ಗೋಪಿಚಂದನದ ಗಡ್ಡೆಯೊಳಗಿದ್ದ ಶ್ರೀೃಷ್ಣ ವಿಗ್ರಹವನ್ನು ಉಡುಪಿಯಲ್ಲಿ ಪ್ರತಿಷ್ಟಾಪಿಸಿದ ಕಥಾನಕವನ್ನು ತೆರೆದಿರಿಸಲಾಯಿತು.

ಮೂರು ವಿಶೇಷವಾದ ಪುರುಷ ಪಾತ್ರಗಳನ್ನು ಭುವನಾ ಜಿ. ಪ್ರಸಾದ್ ಯಶಸ್ವಿಯಾಗಿ ಪ್ರಸ್ತುತಪಡಿಸಿದರು. ಡಿ.ಎಸ್. ಶ್ರೀವತ್ಸ ಅವರ ಸಂಗೀತ ಸಂಯೋಜನೆ ಮತ್ತು ಗಾಯನ ನೃತ್ಯರೂಪಕಕ್ಕೆ ಮೆರುಗು ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.