ADVERTISEMENT

ಕನ್ನಡಿಗರ ಔದಾರ್ಯ ಅನುಕರಣೀಯ

music festivals, Karnataka

ಪೃಥ್ವಿರಾಜ್ ಎಂ ಎಚ್
Published 23 ನವೆಂಬರ್ 2018, 19:46 IST
Last Updated 23 ನವೆಂಬರ್ 2018, 19:46 IST
Prabal Gupta( Director & Choreographer)
Prabal Gupta( Director & Choreographer)   

ಬಂಗಾಳಿಯವರಾದರೂ ಕಥಕ್ಕಳಿಯ ಧ್ಯಾನ ಮಾಡುತ್ತಾ, ಈ ಸಾಂಪ್ರದಾಯಿಕ ನೃತ್ಯದ ಸೊಬಗನ್ನು ದೇಶದ ಮೂಲೆ ಮೂಲೆಗೂ ಪರಿಚಯಿಸಲು ಶ್ರಮಿಸುತ್ತಿದ್ದಾರೆ ಕಥಕ್ಕಳಿ ನೃತ್ಯ ಕಲಾವಿದ, ಸಂಯೋಜಕ ಮತ್ತು ಸಂಶೋಧಕರಾದ ಪ್ರಬಲ್‌ ಗುಪ್ತ. ಕಥಕ್ಕಳಿಯೊಂದಿಗಿನ ತಮ್ಮ ಒಡನಾಟದ ಬಗ್ಗೆ ಅವರು ‘ಮೆಟ್ರೊ’ದೊಂದಿಗೆ ಹಂಚಿಕೊಂಡರು.

*ಕಥಕ್ಕಳಿ ನಿಮ್ಮನ್ನು ಹೇಗೆ ಸೆಳೆಯಿತು?
ಒಂದೇ, ಎರಡೇ ಈ ನೃತ್ಯದ ಸೊಬಗು, ಮುಖಕ್ಕೆ ಬಣ್ಣ ಬಳಿದುಕೊಂಡು, ಆಕರ್ಷಿಸುವಂತಹ ಉಡುಗೆ ತೊಟ್ಟು, ಹಿಮ್ಮೇಳನದ ಗಾಯನಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ, ನನ್ನನ್ನು ನಾನು ಅದೆಷ್ಟೊ ಬಾರಿ ಮರೆತಿದ್ದೇನೆ. ಈ ನೃತ್ಯಕ್ಕಿರುವ ಗತ್ತು ಅಂಥದ್ದು. ಕುಣಿಯಲು ಪ್ರೇರೇಪಿಸುವ ಚೆಂಡ, ಎಡೆಕ್ಯ ಮತ್ತು ಮದ್ದಳಂ ವಾದ್ಯಗಳ ಸದ್ದು ರೋಮಾಂಚನಗೊಳಿಸುವಂಥದ್ದು. ಈ ನೃತ್ಯದ ಬಗ್ಗೆ ಹೇಳುತ್ತಾ ಹೋದರೆ ದಿನ ಸಾಲುವುದಿಲ್ಲ.

*ಕಲಿತದ್ದು ಹೇಗೆ?
ನನ್ನ ಬಾಲ್ಯವೆಲ್ಲಾ ಕೋಲ್ಕತ್ತದಲ್ಲೇ ಕಳೆಯಿತು. ನಮ್ಮ ತಾಯಿಗೆ ಕಲಾವಿದೆಯಾಗಿ ಗುರುತಿಸಿಕೊಳ್ಳಬೇಕೆಂಬ ಆಸೆ ಇತ್ತು. ಆದರೆ ಅಂದಿನ ಸಾಮಾಜಿಕ ವ್ಯವಸ್ಥೆ ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ನನ್ನ ತಾಯಿಯ ಆಶಯವೇ ನನ್ನ ಜೀವನದ ಗುರಿಯಾಯಿತು. ಮೂರನೇ ವಯಸ್ಸಿಗೆ ನೃತ್ಯ ಕಲಿಯಲು ಆರಂಭಿಸಿದೆ. ಮೊದಲು ಕಲಿತದ್ದು ಒಡಿಸ್ಸಿ, ಮನೆಯವರು ಭರತನಾಟ್ಯಂ ಕಲಿಯುವಂತೆ ಸೂಚಿಸಿದದ ನಂತರ, ಐದು ವರ್ಷ ಭರತನಾಟ್ಯದಲ್ಲಿ ತಲ್ಲೀನನಾಗಿದ್ದೆ. ಕೊನೆಗೆ ನನ್ನ ಮನಸ್ಸು ಕಥಕ್ಕಳಿ ಕಡೆಗೆ ಹೊರಳಿತು. ಇದನ್ನು ಕಲಿಯಲು ಆರಂಭಿಸಿದ ಮೇಲೆಗಮನ ಬೇರೆ ಕಡೆಗೆ ಹೊರಡಲಿಲ್ಲ.

ADVERTISEMENT

* ಕೋಲ್ಕತ್ತದಲ್ಲಿ ಕಥಕ್ಕಳಿ ಕಂಪು ಹೇಗೆ ಹರಡಿತು?
ರವೀಂಧ್ರನಾಥ ಟ್ಯಾಗೋರ್ ಅವರು ಕಥಕ್ಕಳಿ ನೃತ್ಯ ಕಲಾವಿದ ಕೆಲು ನಾಯರ್ ಅವರನ್ನು ಕಥಕ್ಕಳಿ ಪ್ರಸ್ತುತಪಡಿಸಲು ಕೋಲ್ಕತ್ತಕ್ಕೆ ಆಹ್ವಾನಿಸಿದ್ದರು. ಅಲ್ಲಿ ಈ ಕಲೆಗೆ ಆದರಣೆ ದೊರೆಯಿತು. ನಂತರ ಕಥಕ್ಕಳಿಯಲ್ಲಿ ಅಪಾರ ಖ್ಯಾತಿ ಗಳಿಸಿರುವ ಗೋವಿಂದನ್‌ಕುಟ್ಟಿ ಅವರು ಕೇರಳದಿಂದ ಇಲ್ಲಿಗೆ ಬಂದು ಕಥಕ್ಕಳಿ ಕಲಿಸಲು ಶಾಲೆ ಆರಂಭಿಸಿದರು. ಅವರ ಬಳಿ ಶಿಷ್ಯನಾಗಿ ಸೇರಲು ಅವಕಾಶ ನೀಡುವಂತೆ ಕೇಳಿಕೊಂಡೆ. ಆರು ತಿಂಗಳು ಭರತನಾಟ್ಯಂ ಅಭ್ಯಾಸ ಮಾಡದೇ ಸುಮ್ಮನಿರು. ನಂತರ ನನ್ನನ್ನು ಭೇಟಿಯಾಗು ಎಂದರು. ಕಥಕ್ಕಳಿಯ ಮೇಲೆ ಯಾವುದೇ ನೃತ್ಯದ ನೆರಳು ಬೀಳಬಾರದು ಎಂಬುದೇ ನನ್ನ ಉದ್ದೇಶ ಎಂದರು.

* ಬೆಂಗಳೂರಿಗೆ ಬರಲು ಕಾರಣ?
ಕಥಕ್ಕಳಿಯ ಬಗ್ಗೆ ನನಗಿರುವ ಆಸಕ್ತಿಯನ್ನು ನಮ್ಮ ಕುಟುಂಬದವರಿಗೆ ತಿಳಿಸಿದೆ. ಇದರಲ್ಲೇ ನನ್ನ ಜೀವನ ಕಂಡುಕೊಳ್ಳುವ ಉದ್ದೇಶವಿದೆ ಎಂದು ಹೇಳಿ ಬೆಂಗಳೂರಿಗೆ ಬಂದೆ. ಆದರೆ ಈ ನೃತ್ಯದ ಬಗ್ಗೆ ದಕ್ಷಿಣಭಾರತದವರಿಗೆ ಮಾತ್ರ ಚೆನ್ನಾಗಿ ಗೊತ್ತು. ಉತ್ತರ ಭಾರತದಲ್ಲಿ ತಿಳಿದವರು ಕಡಿಮೆ ಎಂಬುದು ಗಮನಕ್ಕೆ ಬಂದ ಮೇಲೆ ಇದರ ಪ್ರಚಾರ ಮಾಡುವುದನ್ನೇ ಪ್ರವೃತ್ತಿಯಾಗಿಸಿಕೊಂಡಿದ್ದೇನೆ.

* ಬೆಂಗಳೂರಿನ ಬಗ್ಗೆ ಏನು ಹೇಳುತ್ತೀರಿ?
ಇಲ್ಲಿಗೆ ಬಂದ ಮೇಲಷ್ಟೇ ನಾನು ‘ಪ್ರಬಲ್ ಗುಪ್ತಾ’ ಆಗಿದ್ದು. ನನಗೆ ಹೆಸರು ತಂದುಕೊಟ್ಟಿದ್ದೇ ಈ ನಗರ. ಸುಮಾರು 18 ವರ್ಷಗಳಿಂದ ಇಲ್ಲೇ ಇದ್ದೇನೆ. ಬಿಟ್ಟು ಹೋಗುವ ಯೋಚನೆ ಎಂದೂ ಬಂದಿಲ್ಲ, ಬರುವುದೂ ಇಲ್ಲ. ಎಲ್ಲಿಗೇ ಹೋದರೂ ಗಮನವೆಲ್ಲಾ ಇಲ್ಲೇ ಇರುತ್ತದೆ. ಅಷ್ಟರ ಮಟ್ಟಿಗೆ ಈ ನಗರ ನನ್ನನ್ನು ಸೆಳೆದಿದೆ.

* ಕಥಕ್ಕಳಿಗೆ ಕರ್ನಾಟಕದಲ್ಲಿ ಆದರಣೆ ಹೇಗಿದೆ?
ಕಲೆಯನ್ನು ಆರಾಧಿಸುವುದರಲ್ಲಿ, ಕಲಾವಿದರನ್ನು ಗೌರವಿಸುವುದರಲ್ಲಿ ಕನ್ನಡಿಗರಿಗೆ ಯಾರೂ ಸಾಟಿ ಇಲ್ಲ. ಬಂಗಾಳವಷ್ಟೇ ಅಲ್ಲ, ದೇಶದ ಯಾವುದೇ ರಾಜ್ಯದಲ್ಲಿ ಈ ಮಟ್ಟಿಗೆ ಕಲಾ ರಸಿಕರನ್ನು ನಾನು ಕಂಡಿಲ್ಲ. ನನ್ನ ಮನೆಯಲ್ಲಿ ನಿತ್ಯ ಮುಂಜಾನೆ ಅಭ್ಯಾಸ ಮಾಡುತ್ತಿರುತ್ತೇನೆ. ಚೆಂಡ, ಎಡೆಕ್ಯ, ಮದ್ದಳಂ ಸದ್ದು ಅಕ್ಕ–ಪಕ್ಕದವರಿಗೆ ಕೇಳಿಸುತ್ತಿರುತ್ತದೆ. ಈ ವರೆಗೂ ಯಾರೊಬ್ಬರೂ ನನ್ನ ಬಳಿಗೆ ಬಂದು ನಮಗೆ ತೊಂದರೆ ಆಗುತ್ತಿದೆ ಎಂದು ಹೇಳಿಲ್ಲ. ಸಾಂಪ್ರದಾಯಿಕ ನೃತ್ಯಗಳಿರುವ ಸೊಬಗು ಅಂಥದ್ದು. ಎಂಥವರ ಮನಸ್ಸನ್ನೂ ಉಲ್ಲಾಸಗೊಳಿಸುತ್ತವೆ. ಆದರೆ ಪಾಶ್ಚಾತ್ಯ ಸಂಗೀತದ ಆರ್ಭಟಕ್ಕೆ ಬೆಚ್ಚಿ ಜಗಳ ಆಡಿದವರನ್ನು ನೋಡಿದ್ದೇನೆ.

* ಯಕ್ಷಗಾನದ ಬಗ್ಗೆ ಏನು ಹೇಳುತ್ತೀರಿ?
ಕಥಕ್ಕಳಿ ಸಾಂಪ್ರದಾಯಿಕ ನೃತ್ಯವಾದರೆ, ಯಕ್ಷಗಾನ ಜನಪದ ನೃತ್ಯ. ಆದರೆ ತೆಂಕುತಿಟ್ಟು ಯಕ್ಷಗಾನ ಮತ್ತು ಕಥಕ್ಕಳಿ ನಡುವೆ ಹಲವು ಸಾಮ್ಯಗಳಿವ

* ಬಂಗಾಳಿಯ ಪುರಿಲಿಯ ಛೌ ಮತ್ತು ಕಥಕ್ಕಳಿ ಜುಗಲ್‌ಬಂದಿ ಬಗ್ಗೆ ಏನು ಹೇಳುತ್ತೀರಿ?
ಈಚೆಗೆ ನಡೆದ ಆನಂದಧ್ವನಿ ವೈಟ್‌ಫೀಲ್ಡ್‌ ಸಂಗೀತ ಉತ್ಸವದಲ್ಲಿ ಇಂತಹ ಪ್ರಯೋಗವನ್ನು ಇದೇ ಮೊದಲ ಬಾರಿಗೆ ಮಾಡಲಾಯಿತು. ಈ ಬಗ್ಗೆ ಆಯೋಜಕರಾದ ಪ್ರಬೀರ್ ಭಟ್ಟಾಚಾರ್ಯ ಅವರು ಹೇಳಿದಾಗ, ಛೌ ಜನಪದ ನೃತ್ಯವಾದರೆ ಕಥಕ್ಕಳಿ ಸಾಂಪ್ರದಾಯಿಕ ನೃತ್ಯ. ಇವನ್ನು ಒಂದೇ ವೇದಿಕೆಯಲ್ಲಿ ಪ್ರಸ್ತುತಪಡಿಸುವುದಾದರೂ ಹೇಗೆ ಎಂದು ಆಯೋಚನೆಯಲ್ಲಿ ಮುಳುಗಿದೆ. ಆದರೆ ಸವಾಲಾಗಿ ಸ್ವೀಕರಿಸಿ ಅಭ್ಯಾಸ ಮಾಡಲು ಆರಂಭಿಸಿದೆ. ಇದು ನಾಲ್ಕು ನಿಮಿಷದ ಜುಗಲ್‌ಬಂದಿಯಾಗಿತ್ತು. ಅಭ್ಯಾಸ ಮಾಡಿದ ನಂತರ ಕಥಕ್ಕಳಿ ಮತ್ತು ಛೌ ನಡುವೆ ಇರುವ ಸಾಮ್ಯಗಳನ್ನು ಗುರುತಿಸಿದೆ, ನಿಜಕ್ಕೂ ವಿಸ್ಮಯ ಎನಿಸಿತು.

ಕಥಕ್ಕಳಿ ವೇಷದಲ್ಲಿ ಪ್ರಬಲ್ ಗುಪ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.