ADVERTISEMENT

ಚೀನಾದಲ್ಲಿ ಭರತನಾಟ್ಯ ಪ್ರದರ್ಶಿಸಿದ ಸೌಜನ್ಯಾ ಕುಲಕರ್ಣಿ...

ಮಲ್ಲಿಕಾರ್ಜುನ ಮ.ಶಿವಳ್ಳಿ
Published 28 ಆಗಸ್ಟ್ 2018, 19:30 IST
Last Updated 28 ಆಗಸ್ಟ್ 2018, 19:30 IST
ಸೌಜನ್ಯಾ ಕುಲಕರ್ಣಿ
ಸೌಜನ್ಯಾ ಕುಲಕರ್ಣಿ   

ಉತ್ತರ ಕರ್ನಾಟಕದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಒಂದಿಷ್ಟು ಪ್ರತಿಭೆಗಳು ನಮ್ಮ ನೆಲದಲ್ಲಿ ಅರಳಿದರೆ ಇನ್ನಷ್ಟು ಪ್ರತಿಭೆಗಳು ವಿದೇಶದಲ್ಲಿಯೂ ಮಿಂಚುತ್ತಿವೆ. ತಮ್ಮ ಪ್ರತಿಭಾ ಪ್ರದರ್ಶನದ ಮೂಲಕ ವಿದೇಶಿ ನೆಲದಲ್ಲಿಯೂ ಭೇಷ್ ಅನ್ನಿಸಿ ಕೊಂಡವರಲ್ಲಿ ಹುಬ್ಬಳ್ಳಿಯ ಸೌಜನ್ಯಾ ಕುಲಕರ್ಣಿ ಅವರೂ ಒಬ್ಬರು.

ಹುಬ್ಬಳ್ಳಿ ಮೂರು ಸಾವಿರ ಮಠದ ಮಹಿಳಾ ಕಾಲೇಜಿನಲ್ಲಿ ಎಂ.ಎ ಪ್ರಥಮ ವರ್ಷದಲ್ಲಿ ಹಿಂದೂಸ್ತಾನಿ ಸಂಗೀತವನ್ನು ಅಭ್ಯಾಸ ಮಾಡುತ್ತಿರುವ ಸೌಜನ್ಯಾ ಕುಲಕರ್ಣಿ ಚೀನಾ ದಲ್ಲಿ ಜುಲೈ 3ರಿಂದ 10ರವರೆಗೆ ನಡೆದ ಅಂತರ ರಾಷ್ಟ್ರೀಯ ಯುವ ಪ್ರತಿನಿಧಿಗಳ ಕಾರ್ಯಕ್ರಮದಲ್ಲಿ ಭಾರತದ ಪ್ರತಿನಿಧಿಯಾಗಿ ಪಾಲ್ಗೊಂಡು ಅಲ್ಲಿ ಭರತನಾಟ್ಯ ಪ್ರದರ್ಶನ ಹಾಗೂ ಹಿಂದೂಸ್ತಾನಿ ಗಾಯನ ಕಾರ್ಯಕ್ರಮ ನೀಡಿದ್ದಾರೆ.

ಭಾರತ ಹಾಗೂ ಚೀನಾ ದೇಶಗಳ ಬಾಂಧವ್ಯ ವೃದ್ಧಿಸುವ ಉದ್ದೇಶದಿಂದ ಚೀನಾ ಹಾಗೂ ಭಾರತ ಸರ್ಕಾರದ ಯುವಜನಸೇವಾ ಮತ್ತು ಕ್ರೀಡಾ ಇಲಾಖೆ ಚೀನಾದಲ್ಲಿ ತಂತ್ರಜ್ಞಾನ ಹಾಗೂ ಸಾಂಸ್ಕೃತಿಕ ವಿನಿಮಯದ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾರತದ ಬೇರೆ ಬೇರೆ ಕಲಾ ಪ್ರಕಾರಗಳ ಪ್ರದರ್ಶನಕ್ಕಾಗಿ ನೂರಕ್ಕೂ ಅಧಿಕ ಯುವಜನರು ಪಾಲ್ಗೊಂಡಿದ್ದರು.

ADVERTISEMENT

10 ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಸೌಜನ್ಯಾ ಎರಡು ಬಾರಿ ಚೀನಾದ ಬೇರೆ ಬೇರೆ ಸ್ಥಳಗಳಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ. ಬೀಜಿಂಗ್‌ನ ಕುನ್ಮಿಂಗ್‌ ಹಾಗೂ ಗ್ಯಾಂಜ್‌ಜಾನ್ ಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮ್ಮ ಕಲಾ ಪ್ರದರ್ಶನ ನೀಡಿದರು.

ಗ್ಯಾಂಗ್‌ಜಾನ್‌ನ ಸಮುದ್ರದ ಮಧ್ಯೆ ಕ್ರೂಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚೀನಾ ಕಲಾವಿದರು ಅಲ್ಲಿನ ಜಾನಪದ ಕಲೆ ಪ್ರದರ್ಶನ ಮಾಡಿದರೆ, ಸೌಜನ್ಯಾ ಅವರು ನಮ್ಮ ಸಂಸ್ಕೃತಿಯ ಪುರಾತನ ನೃತ್ಯ ಕಲೆಯಾದ ಭರತನಾಟ್ಯ ಪ್ರದರ್ಶಿಸಿದ್ದಾರೆ. ಅಷ್ಟೇ ಅಲ್ಲದೇ, ಹಿಂದೂಸ್ತಾನಿ ಸಂಗೀತವನ್ನು ಅಭ್ಯಾಸ ಮಾಡಿರುವುದರಿಂದ ಕಾರ್ಯಕ್ರಮದಲ್ಲಿ ಹಿಂದೂಸ್ತಾನಿ ಗಾಯನದ ಮೂಲಕ ಅಲ್ಲಿನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ತಾಯಿಯೆ ಮೊದಲ ಗುರು

ಮೂಲತಃ ಹುಬ್ಬಳ್ಳಿಯವರಾದ ರವಿಕುಮಾರ ಮತ್ತು ರೂಪಾರ ಮಗಳಾದ ಸೌಜನ್ಯಾ (ಜನನ 1997) ಅವರಿಗೆ ಚಿಕ್ಕನಿಂದಲೂ ನೃತ್ಯದಲ್ಲಿ ಅಪಾರ ಆಸಕ್ತಿ. ಅಲ್ಲದೆ ಇವರ ತಾಯಿ ಸಹ ನೃತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ್ದು ಮಗಳಿಗೆ ತಾಯಿಯೇ ಸ್ಫೂರ್ತಿ. ಮೊದಲ ಗುರುವಾಗಿ ಮಗಳಿಗೆ ನೃತ್ಯವನ್ನು ಕಲಿಸಿಕೊಟ್ಟರು. ಶಾಲಾದಿನಗಳಲ್ಲಿಯೇ ಭರತನಾಟ್ಯದ ಹೆಚ್ಚಿನ ವ್ಯಾಸಂಗ ಮಾಡಿಸುವ ಉದ್ದೇಶದಿಂದ ಹುಬ್ಬಳ್ಳಿಯ ಚಂದ್ರನಗರದಲ್ಲಿ ಇರುವ ಉರ್ಮಿಳಾ ಪಾತ್ರಾ ಅವರ ಕಡೆ ಏಳುವರ್ಷಗಳ ಕಾಲ ಭರತನಾಟ್ಯವನ್ನು ಅಭ್ಯಾಸ ಮಾಡಿಸಿದರು. ಭರತನಾಟ್ಯ ಜೂನಿಯರ್ ಪರೀಕ್ಷೆ ತೇರ್ಗಡೆ ಹೊಂದಿದರು. ಏಳನೇ ತರಗತಿಯಲ್ಲಿ ಇರುವಾಗ ಉದಯ ಟಿವಿಯಲ್ಲಿ ಭರತನಾಟ್ಯ ಕಾರ್ಯಕ್ರಮವನ್ನು ನೀಡಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಭರತನಾಟ್ಯ ಸೀನಿಯರ್ ಪರೀಕ್ಷೆ ತೇರ್ಗಡೆ ಹೊಂದುವ ಅಭಿಲಾಷೆ ಹೊಂದಿದ್ದಾರೆ.

ಈ ನಡುವೆ ಅಪ್ಪನ ಅಗಲಿಕೆ ಇವರ ಬದುಕಿನಲ್ಲಿ ಸುನಾಮಿಯನ್ನೇ ಎಬ್ಬಿಸಿತ್ತು. ಆದರೆ ತಾಯಿಯ ಧೈರ್ಯ ಮತ್ತು ಆತ್ಮಸ್ಥೈರ್ಯದೊಂದಿಗೆ ಸೌಜನ್ಯಾರ ಸಾಧನೆ ಮುಂದುವರಿಯಿತು. ಹೀಗೆ ಪ್ರಾರಂಭವಾದ ಇವರ ಭರತನಾಟ್ಯದ ಪಯಣ ಯಶಸ್ವಿಯಾಗಿ ಸಾಗಿತು. ಶಾಲಾ ದಿನಗಳಲ್ಲಿ ಹತ್ತು ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಹಲವಾರು ಬಹುಮಾನಗಳನ್ನು ಬಾಚಿಕೊಂಡಿದ್ದಾರೆ.

ಬಹುಮುಖ ಪ್ರತಿಭಾವಂತೆ...

ನೃತ್ಯ, ಸಂಗೀತ ಅಷ್ಟೇ ಅಲ್ಲದೆ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್) ಕಾರ್ಯಕರ್ತೆಯೂ ಹೌದು. ಇದೇ ವರ್ಷ ಜನವರಿಯಲ್ಲಿ ನಡೆದ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಸೌಜನ್ಯಾ ಪಾಲ್ಗೊಂಡಿದ್ದಾರೆ. ದ್ವಿತೀಯ ವರ್ಷದ ಬಿ.ಎ ಓದುವಾಗ ಕಾಲೇಜಿನ ಪ್ರಾಂಶುಪಾಲರಾದ ಅಕ್ಕಮಹಾದೇವಿ ನಾಡಗೌಡ ಅವರು ಇವರ ಪ್ರತಿಭೆ ಮತ್ತು ನಾಯಕತ್ವದ ಗುಣಗಳನ್ನು ಕಂಡು ಎನ್.ಎಸ್‌.ಎಸ್ ಸೇರಲು ಹೇಳಿದರು. ಹೀಗೆ ಸೇರಿಕೊಂಡು ಅದರಲ್ಲಿ ಬರುವಂತ ಆರ್.ಡಿ. ಪರೇಡ್‌ಗಳಲ್ಲಿ ಮೊದಲು ಕಾಲೇಜು ಹಂತದಲ್ಲಿ ಆಯ್ಕೆಯಾದರು. ನಂತರದಲ್ಲಿ ಯುನಿವರ್ಸಿಟಿ ಹಂತದಲ್ಲಿ ತೇರ್ಗಡೆ ಹೊಂದಿ ರಾಜ್ಯಮಟ್ಟಕ್ಕೂ ಆಯ್ಕೆಯಾದರು. ಬೆಂಗಳೂರಿನಲ್ಲಿ ನಡೆದ ಈ ಆಯ್ಕೆಯಲ್ಲಿ ಸಹ ಪಾಸಾಗಿ ಮುಂದೆ ಕೇರಳದಲ್ಲಿ ನಡೆದ ದಕ್ಷಿಣ ವಲಯ (ಸೌತ್ ಜೋನ್) ಹತ್ತು ದಿನಗಳ ತರಬೇತಿ ಪಡೆದರು. ಅಲ್ಲಿ ಪರೇಡ್ ಮತ್ತು ಶಾಸ್ತ್ರೀಯ ನೃತ್ಯದ ಆಧಾರದ ಮೇಲೆ ಇವರನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಜನವರಿ 1 ರಿಂದ 30 ದಿನಗಳ ಕಾಲ ದೆಹಲಿಯಲ್ಲಿ ಸೈನಿಕ ತರಬೇತಿಯಲ್ಲಿ ಪರೇಡ್ ಕಲಿಸಲಾಯಿತು. ಅಷ್ಟೇ ಅಲ್ಲದೆ ಗಣರಾಜ್ಯೋತ್ಸವದಂದು 11 ಕಿ.ಮಿ ಪರೇಡ್ ಮಾಡಿ, ಜನವರಿ 27 ಮತ್ತು 28 ರಂದು ಪ್ರಧಾನಮಂತ್ರಿ ಮತ್ತು ರಾಷ್ಟ್ರಪತಿಗಳ ಎದುರು ನೃತ್ಯ ಪ್ರದರ್ಶನ ಮಾಡಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.

ಈ ಮೆಚ್ಚುಗೆಯಿಂದಲೇ ಮುಂದೆ ಚೀನಾದಲ್ಲಿ ಭರತನಾಟ್ಯವನ್ನು ಪ್ರದರ್ಶಿಸುವಂತಹ ಅವಕಾಶ ದೊರೆಯಿತು. ‘ಚೀನಾ ದೇಶದಲ್ಲಿ ಭಾರತದ ನೃತ್ಯವನ್ನು ಹೆಚ್ಚು ಜನ ಇಷ್ಟಪಡುತ್ತಾರೆ. ಕಲಿಯುವ ಹಂಬಲವನ್ನು ವ್ಯಕ್ತಪಡಿಸಿದರು. ನಮ್ಮ ದೇಶದ ಬಗ್ಗೆ ಗೌರವಭಾವನೆಯನ್ನು ಹೊಂದಿದ್ದಾರೆ. ನಮ್ಮ ಕಲೆ, ಸಂಸ್ಕೃತಿಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಾರೆ. ಅವರೊಂದಿಗೆ ಸಂಭಾಷಣೆ ನಡೆಸಲು ನಮ್ಮ ಜೊತೆ ಅನುವಾದಕರಿದ್ದುದರಿಂದ ಅಲ್ಲಿಯ ಜನರೊಂದಿಗೆ ಹೆಚ್ಚು ಹೆಚ್ಚು ಬೆರೆಯಲು ಸಹಾಯವಾಯಿತು’ ಎನ್ನುವ ಸೌಜನ್ಯಾ ಕುಲಕರ್ಣಿ ಅವರು, ‘ನಮ್ಮ ದೇಶದ ಪ್ರಧಾನಿ ಹಾಗೂ ರಾಷ್ಟ್ರಪತಿಗಳ ಎದುರು ಮತ್ತು ಚೀನಾದಲ್ಲಿ ನೀಡಿದ ಕಾರ್ಯಕ್ರಮ ನನ್ನ ಜೀವನದ ಅವಿಸ್ಮರಣೀಯ ಘಟನೆಗಳು’ ಎಂದು ಖುಷಿಯಿಂದ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.