ADVERTISEMENT

ಮತದಾರರೊಂದಿಗೆ ಒಂದು ದಿನ…

ಪ್ರಕಾಶ ಶೆಟ್ಟಿ
Published 12 ಏಪ್ರಿಲ್ 2019, 20:30 IST
Last Updated 12 ಏಪ್ರಿಲ್ 2019, 20:30 IST
   

‘ಮತದಾರರೊಂದಿಗೆ ಒಂದು ದಿನ’ ಅಂದಾಗ ಇದು ಅಭ್ಯರ್ಥಿಯ ಮತಬೇಟೆ ಎಂದು ತಿಳಿದುಕೊಳ್ಳಬೇಡಿ. ಏಪ್ರಿಲ್ ತಿಂಗಳ ಉರಿಬಿಸಿಲಿನ ಒಂದು ದಿನ ನನಗೆ ಮತದಾರರ ಬೇಟೆ ಮಾಡುವ ಮನಸ್ಸಾಯಿತು. ಕೂಡಲೇ ನನ್ನ ನಡೆ ಪ್ರಜಾಪ್ರಭುವಿನೆಡೆಗೆ ಸಾಗಿತು. ಅಬ್ಬಾ! ಚುನಾವಣೆ ತಾಪಮಾನ ಯಾವ ರೀತಿ ಇತ್ತು ಎಂದು ಗೊತ್ತಾಗಬೇಕಿದ್ದರೆ ಮುಂದೆ ಓದುವಂತವರಾಗಿ:

ಅಲ್ರೀ, ಚುನಾವಣೆಯನ್ನು ‘ಪ್ರಜಾತಂತ್ರದ ಹಬ್ಬ’ ಅಂತ ಸ್ವತಃ ಚುನಾವಣಾ ಆಯೋಗವೇ ಹೇಳಿಕೊಂಡು ಬರುತ್ತಿದೆ. ಹಬ್ಬ ಅಂದ್ಬಿಟ್ಟು ಮೊನ್ನೆ ಆ ಪಕ್ಷದವರು ಬಾಡೂಟ ಕೊಟ್ರೆ, ಒಂದು ಪೀಸ್ ಮಟನ್ ತಿನ್ನೋದಕ್ಕೂ ಬಿಡದೆ ನಮ್ಮನ್ನೆಲ್ಲಾ ಊಟದ ನಡುವೆಯೇ ಒದ್ದೋಡಿಸಿದ್ದು ಯಾವ ನ್ಯಾಯ ಹೇಳಿ ಸಾರ್?
–ಹೊಟ್ಟೆರಾಜ,ಮದ್ದೂರು

*
ನನಗ್ಯಾಕೋ ಸಂಶಯ… ಎಲ್ಲಾ ಪಕ್ಷದಲ್ಲೂ ಚುನಾವಣಾ ಅಪಪ್ರಚಾರ ಸಮಿತಿ ಇದೆಯೆಂದು ಕಾಣುತ್ತದೆ. ಯಾಕೆಂದರೆ ಯಾವ ಅಭ್ಯರ್ಥಿಯೂ ತಮ್ಮ ಪಕ್ಷದ ಪರವಾಗಿ ಪ್ರಚಾರ ಮಾಡುವ ಗೋಜಿಗೇ ಹೋಗುತ್ತಿಲ್ಲ!
–ಪ್ರಜಾಪತಿ,ಬೆಂಗಳೂರು

ADVERTISEMENT

ಈ ಬಾರಿ ಎರಡೇ ‘ಕೋಣ’ಗಳ ನಡುವೆ ಪೈಪೋಟಿಯಿರುವುದರಿಂದ ರಾಜ್ಯದ ಚುನಾವಣೆ ತುಂಬಾ ಸಪ್ಪೆಯಾಗಿಬಿಟ್ಟಿದೆ. ತ್ರಿ-ಕೋಣ ಸ್ಪರ್ಧೆ ಇದ್ದರೇನೇ ಚೆನ್ನ ಅಂತ ನನ್ನ ಅಭಿಪ್ರಾಯ.
–ಬೋರ್‌ನಾಥ್,ಮಂಗಳೂರು

*
ನಮ್ಮ ಕ್ಷೇತ್ರದ ಅಭ್ಯರ್ಥಿ ‘ನಾನು ಚೌಕೀದಾರ’ ಅಂತ ಹೇಳಿಕೊಂಡಿದ್ದಾರೆ. ಆದರೆ ಅವರ ಒಟ್ಟು ಆಸ್ತಿ ಎಷ್ಟು ಗೊತ್ತಾ? ಕೇವಲ ₹ 125 ಕೋಟಿ! ಹತ್ತು ಸಾವಿರ ಸಂಬಳ ಸಿಗುವ ಚೌಕೀದಾರ ಇಷ್ಟೊಂದು ಅಕ್ರಮ ಸಂಪತ್ತು ಮಾಡಿದ್ದು ಐಟಿ ಕಣ್ಣಿಗೆ ಯಾಕೆ ಬೀಳಲಿಲ್ಲವೋ!
–ಉಲ್ಟೇಶ್ವರ,ಕೋಲಾರ

*
ಎಂತಹ ಕಾಲ ಬಂದಿದೆಯಪ್ಪಾ! ಹಿಂದೆ ಮತದಾನ ಎಂದರೆ ತುಂಬಾ ಗೋಪ್ಯತೆಯ ವಿಚಾರವಾಗಿತ್ತು. ಈಗ ನೋಡಿ, ಫೇಸ್‌ಬುಕ್, ವಾಟ್ಸ್‌ ಆ್ಯಪ್‌ನಲ್ಲಿ ಎಲ್ಲರೂ ಬಹಿರಂಗವಾಗಿ ತಾವು ಬೆಂಬಲಿಸುವ ಪಕ್ಷದ ಹೆಸರನ್ನು ಹೇಳಿಕೊಂಡು ತಿರುಗಾಡುತ್ತಿರುತ್ತಾರೆ! ಆಮೇಲೆ ಮತಗಟ್ಟೆಯಲ್ಲಿ ಗೋಪ್ಯವಾಗಿಟ್ಟಿರುವ ಇವಿಎಂ ಬಟನ್‌ ಒತ್ತಿ ಏನು ಪ್ರಯೋಜನ ಹೇಳಿ?
–ಸೀರಿಯಸ್ಸಯ್ಯ,ಶಿವಮೊಗ್ಗ

*
‘ಮಂಡ್ಯ ಮೊದಲು, ಇಂಡಿಯಾ ನಂತರ’ ಎಂದೇ ಟಿವಿ ಚಾನೆಲ್‌ನೋರು ತಿಳ್ಕೊಂಡಹಾಗಿದೆ! ಯಾವಾಗ ನೋಡಿದರೂ ಮಂಡ್ಯ ಚುನಾವಣೆಯದ್ದೇ ಸುದ್ದಿ. ಅಡ್ವಾಣಿ ಅವರು ಮೋದಿಜೀಗೆ ‘ದೇಶ ಮೊದಲು’ ಎಂದು ಉಪದೇಶ ನೀಡುವ ಬದಲು, ಈ ಟಿವಿಯೋರಿಗಾದರೂ ಹೇಳಬಾರದಿತ್ತೇ?
–ದೇಸವಾಸಿ,ಬೆಂಗಳೂರು

*
ರಾಜಕೀಯದಲ್ಲಿ ಮೈತ್ರಿಗೆ ಮೂರು ಕಾಸಿನ ಬೆಲೆಯಿಲ್ಲ ಎಂಬಂತಾಗಿದೆ. ನಮ್ಮ ರಾಜ್ಯದ ಕತೆ ಬಿಡಿ, ಸ್ವತಃ ಕಾಂಗ್ರೆಸ್‌ ಅಧ್ಯಕ್ಷರೇ ವಯನಾಡಿಗೆ ಹೋಗಿ, ಹಳೇ ದೋಸ್ತು ಸಿಪಿಎಂನ ಅಭ್ಯರ್ಥಿ ಎದುರು ಸ್ಪರ್ಧೆಗೆ ನಿಂತಿದ್ದಾರೆ ಅಂದರೆ! ಪಾಪ, ಇದನ್ನು ಕೇಳಿ ನಮ್ಮ ತುಮಕೂರು ಹಾಲಿ ಸಂಸದರು ಇನ್ನೂ ಪಿಳಿಪಿಳಿ ನೋಡುತ್ತಿದ್ದಾರಂತೆ!
ಪದ್ಮಕ್ಕ,ತುಮಕೂರು

*
ನಮ್ಮ ಕ್ಷೇತ್ರದ ಅಭ್ಯರ್ಥಿಯೊಬ್ಬರು, ಅಧಿಕಾರಕ್ಕೆ ಬರುವುದಕ್ಕೆ ಮುಂಚೆಯೇ ಬಡವರಿಗೆ ‘ನ್ಯಾಯ್’ ಯೋಜನೆಯನ್ನು ಕಾರ್ಯರೂಪಕ್ಕೆ ತರಬೇಕೆಂದಿದ್ದರು. ಆದರೆ ಐಟಿಯವರ ಹಠಾತ್ ದಾಳಿಯಿಂದಾಗಿ ಅವರ ಮತ್ತು ಬಡವರ ಕನಸು ನುಚ್ಚು ನೂರಾಗಿದೆ!
–ವಿಚಿತ್ರಕುಮಾರ,ಚಿತ್ರದುರ್ಗ

*
‘ಸಂಕಲ್ಪ ಪತ್ರ’ ಓದಿ ನನ್ನ ಸಿಟ್ಟು ನೆತ್ತಿಗೇರಿದೆ. ಅಲ್ರೀ, ಇವರು ಪಕೋಡಾ ಮಾರುವವರ ಬಗ್ಗೆ ಅಪಾರ ಪ್ರೀತಿ ತೋರಿಸ್ತಾರಲ್ಲ... ಆ ‘ಪ್ರೇಮ ಪತ್ರ’ದಲ್ಲಿ ನನ್ನಂತಹ ಪಕೋಡಾವಾಲಾರಿಗೂ ಪಿಂಚಣಿ ಕೊಡುವ ವಿಚಾರ ಎತ್ತಬೇಕಿತ್ತಲ್ಲವೇ?
–ಗರಂಲಾಲ್,ಬೆಳಗಾವಿ

*
ನಮ್ಮ ಕ್ಷೇತ್ರದ ಹಾಲಿ ಸಂಸದರನ್ನು ನಾವೆಲ್ಲಾ ಐದು ವರ್ಷಗಳ ನಂತರವೇ ನೋಡುತ್ತಿರುವುದು! ಮೊನ್ನೆ ನಮ್ಮ ಸಿ.ಎಂ ಸಭೆಯೊಂದರಲ್ಲಿ ಮಗನನ್ನು ‘ಎಲ್ಲಿದೀಯಪ್ಪಾ?’ ಎಂದು ಕೇಳಿದ್ದೇ ದೊಡ್ದ ಸುದ್ದಿಯಾಗಿತ್ತು. ಆದರೆ ನಾವು ಈ ಸಂಸದರನ್ನು ಕಳೆದ ಐದು ವರ್ಷಗಳಿಂದ ‘ಎಲ್ಲಿದೀಯಪ್ಪಾ?’ ಎಂದು ಹುಡುಕಾಡ್ತಾ ಇದ್ದರೂ ಅದು ಸುದ್ದಿಯಾಗಲೇ ಇಲ್ಲ ನೋಡಿ!
–ನೊಂದೇಶ,ಸ್ಲಂಪುರ

*
ಪಾಕ್ ಪ್ರಧಾನಿಯನ್ನು ಗೆಳೆಯ ಸಿಧು ಕಾಂಗ್ರೆಸ್‌ನ ತಾರಾಪ್ರಚಾರಕರಾಗಿ ಕರೆತರಬಹುದೆಂದೇ ಬಿಜೆಪಿ ಭಾವಿಸಿತ್ತು. ಆದರೆ ಎಲ್ಲಾ ತಿರುಗ ಮುರುಗವಾಗಿಬಿಟ್ಟಿದೆ. ಬಿಜೆಪಿಯ ಪ್ರಚಾರಕ್ಕೆ ಬರುವುದಕ್ಕೆ ಸ್ವತಃ ಇಮ್ರಾನ್ ಖಾನ್ ತುದಿಗಾಲಲ್ಲಿ ಕಾದು ನಿಂತಿದ್ದಾರಂತೆ!
–ಬೋಳೆ ರಂಗ,ವಿಜಯಪುರ

*
ನಾನು ಈ ಚುನಾವಣೆ ಮುಗಿಯುವವರೆಗೆ ತುಂಬಾ ಬಿಜಿಯಾಗಿರುತ್ತೇನೆ. ಕಾಂಗ್ರೆಸ್‌ ಅಧ್ಯಕ್ಷರು ಮೋದಿಜೀಯನ್ನು ಎಷ್ಟು ಬಾರಿ ‘ಕಳ್ಳ’ ಅಂತ ಕರೆದಿದ್ದಾರೆ ಎಂದು ಲೆಕ್ಕ ಇಡುತ್ತಿದ್ದೇನೆ.
–ಎಸ್.ನಿರುದ್ಯೋಗ್,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.