ADVERTISEMENT

ಸಾಲ ಮನ್ನಾ ರಾಜಕಾರಣ

ಪ್ರಕಾಶ ಶೆಟ್ಟಿ
Published 21 ಡಿಸೆಂಬರ್ 2018, 19:49 IST
Last Updated 21 ಡಿಸೆಂಬರ್ 2018, 19:49 IST
   

ರಾಜಕಾರಣದಲ್ಲಿ ‘ಸಾಲ ಮನ್ನಾ’ದಹೊಸ ಶಕೆ ಆರಂಭವಾಗಿದೆ. ಚುನಾವಣೆಗೆ ಮುನ್ನ ‘ಸಾಲ ಮನ್ನಾ’ ಭರವಸೆಯನ್ನೇ ಸೂತ್ರವಾಗಿರಿಸಿಕೊಂಡರೆ ಗದ್ದುಗೆಗೇರುವುದು ಸುಸೂತ್ರವಾಗುತ್ತದೆ ಎಂದು ಪಕ್ಷಗಳು ರೈತನಾಣೆಗೂ ನಂಬಿಕೊಂಡಿವೆ.

ಹಿಂದೆ ‘ರೈತ ಪರ ಸರ್ಕಾರ’ ಅನ್ನಿಸಿಕೊಳ್ಳಬೇಕಿದ್ದರೆ ಬಡ್ಡಿ ಮನ್ನಾ ಮಾಡಿದರೂ ಸಾಕಾಗಿತ್ತು. ಈಗ ಪೂರ್ತಿ ಸಾಲವನ್ನೇ ಮನ್ನಾ ಮಾಡುವಂತಹ 56 ಇಂಚಿನ ಕೆಚ್ಚೆದೆಯುಳ್ಳ ಮುಖ್ಯಮಂತ್ರಿಗಳಿಗೆ ಕೊರತೆಯೇನಿಲ್ಲ.

ಇಲ್ಲದಿದ್ದರೆ ಉತ್ತರ ಪ್ರದೇಶದ ಸಂತರಿಗೆ ₹ 36 ಸಾವಿರ ಕೋಟಿ ಸಾಲ ಮನ್ನಾ ಮಾಡುವಷ್ಟು ಧೈರ್ಯ ಬರುತ್ತಿತ್ತೇ? ಉತ್ತರ ಪ್ರದೇಶದ ಚುನಾವಣೆಯ ಹೊತ್ತಿಗೆ ಬಾಜಪ್ಪರು ತಮ್ಮ ಪ್ರಣಾಳಿಕೆಯಲ್ಲಿ, ‘ಕೃಷಿ ಸಾಲ ಮನ್ನಾ ಮಾಡುತ್ತೇವೆ’ ಎಂದು ಭರವಸೆ ನೀಡಿ ರೈತ ಮತದಾರರನ್ನು ಬುಟ್ಟಿಗೆ ಹಾಕಿಕೊಂಡರೆ, ನಮ್ಮ ಜಾಡೀಸ್ ಪಾರ್ಟಿ ಅದೇ ಭರವಸೆಗೆ ಇಪ್ಪತ್ತನಾಲ್ಕು ಗಂಟೆಗಳ ಸಮಯವನ್ನು ನಿಗದಿಗೊಳಿಸಿತ್ತು!

ADVERTISEMENT

ಈಗ ಸುಮ್ಮನೆ ಚುನಾವಣೆ ಭರವಸೆ ಕೊಟ್ಟರೆ ಮತದಾರರೂ ನಂಬುವ ಸ್ಥಿತಿಯಲ್ಲಿ ಇಲ್ಲ ಎಂಬುದು ನಿಜ. ಹಾಗೆಂದು ಬರೋಬ್ಬರಿ ₹ 44,000 ಕೋಟಿ ಮೊತ್ತದ ಸಾಲವನ್ನು ಬರೀ 24 ಗಂಟೆಗಳಲ್ಲಿ ಮನ್ನಾ ಮಾಡುವುದೇ? ಅಷ್ಟೊಂದು ಪೆದ್ದುತನ ತೋರಿಸುವುದು ಬೇಡವೆಂದು ರಾಯಲ್ ಗಾಂಧಿ ಪಕ್ಷವು ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಡದಲ್ಲಿ ದಿನಗಳ ಲೆಕ್ಕದಲ್ಲಿ ಸಾಲಮನ್ನಾದ ಸಮಯ ನಿಗದಿಪಡಿಸಿತ್ತು.

ಆದರೆ ಮಧ್ಯಪ್ರದೇಶ ಮತ್ತು ಛತ್ತೀಸಗಡದ ಸಿ.ಎಂ. ಸಾಹೇಬ್ರುಗಳಿಗೆ ಪೆದ್ದುತನ ತೋರಿಸುವ ತರಾತುರಿ. ಬಹುಶಃ ನಮ್ಮ ಇಂಡಿಯಾ ದೇಶದಲ್ಲಿ ಪ್ರಮಾಣವಚನ ಸ್ವೀಕರಿಸಿದ ಒಂದೆರಡು ಗಂಟೆಗಳಲ್ಲೇ ಸಾಲ ಮನ್ನಾ ಘೋಷಣೆ ಮಾಡಿದ ಮುಖ್ಯಮಂತ್ರಿಗಳಲ್ಲಿ ಇವರೇ ಮೊದಲಿಗರಿರಬೇಕು! ರಾಜಸ್ಥಾನದ ಸಿ.ಎಂ. ಅದ್ಯಾಕೆ ಎರಡು ದಿವಸ ತೆಗೆದುಕೊಂಡರೋ ಗೊತ್ತಿಲ್ಲ. ಅವರಿಗೆ ಸರ್ಕಾರದ ಬೊಕ್ಕಸದಲ್ಲಿ ಅಷ್ಟು ದುಡ್ದು ಇದೆಯೋ ಇಲ್ಲವೋ ಎಂದು ನೋಡುವಷ್ಟಾದರೂ ವ್ಯವಧಾನ ಇದ್ದಿರಬೇಕು.

ಸಾಲ ಮನ್ನಾ ರಾಜಕಾರಣದ ಬಗ್ಗೆ ತಿಳಿದುಕೊಳ್ಳಲು ಕೆಲವು ರಾಜಕಾರಣಿಗಳನ್ನು ಸಂಪರ್ಕಿಸಿದಾಗ ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬಂದವು. ಅವರ ಮಾತಿನ ತುಣುಕುಗಳು ಇಲ್ಲಿವೆ...

‘ಸಾಲ ಮನ್ನಾ ಎಂದರೆ ನೇರ ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕುವುದೆಂದೇ ತಿಳಿದುಕೊಳ್ಳಬೇಕು’.

‘ಈ ಗಂಟೆ ಲೆಕ್ಕದಲ್ಲಿ ಸಾಲ ಮನ್ನಾ ಮಾಡುವುದು ಬರೀ ಮೆಲೋಡ್ರಾಮ. ಮುಖ್ಯಮಂತ್ರಿ ತರಾತುರಿಯಲ್ಲಿ ಘೋಷಣೆ ಮಾಡುತ್ತಾರಷ್ಟೆ. ರೈತರಿಗೆ ಮನ್ನಾ ಭಾಗ್ಯ ಸಿಗುವುದಕ್ಕೆ ಆರು ತಿಂಗಳು ಅಥವಾ ಅದಕ್ಕಿಂತಲೂ ಜಾಸ್ತಿ ಸಮಯ ತಗಲುತ್ತದೆ’.

‘ಸಾಲ ಮನ್ನಾ ರಾಜಕಾರಣ ಇದ್ದಕಿದ್ದಂತೆ ಈ ರೀತಿ ದೇಶವಿಡೀ ಪಸರಿಸುವುದಕ್ಕೆ ಕಾರಣ ಮಲ್ಯ ಮತ್ತು ನೀರವ್. ಕುಬೇರರ ಕೋಟ್ಯಂತರ ರೂಪಾಯಿ ಸಾಲ ಮನ್ನಾ ಮಾಡಬಹುದಾದರೆ ದೇಶದಬೆನ್ನೆಲು‘ಬಾಗಿರುವ’ ರೈತರ ಒಂದೋ ಎರಡೋ ಲಕ್ಷ ರೂಪಾಯಿ ಜುಜುಬಿ ಸಾಲ ಮನ್ನಾ ಮಾಡುವುದರಲ್ಲಿ ತಪ್ಪಿಲ್ಲ’.

‘ರೈತರು ಸರಣಿ ಆತ್ಮಹತ್ಯೆ ಮಾಡಿಕೊಂಡಂತೆ ದೇಶದಲ್ಲಿ ಒಂದರ ಹಿಂದೆ ಇನ್ನೊಂದರಂತೆ ರಾಜ್ಯ ಸರ್ಕಾರಗಳು ಸಾಲ ಮನ್ನಾ ಮಾಡುತ್ತಿವೆ. ಸಾಲ ಮನ್ನಾ ರಾಜಕಾರಣದ ದೆಸೆಯಿಂದಾಗಿ ಸರ್ಕಾರಗಳು ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ. ಆದ್ದರಿಂದ ಇದೂ ಒಂದು ರೀತಿಯಲ್ಲಿ ‘ಆತ್ಮಹತ್ಯೆ’ ಪ್ರಯತ್ನ!’

‘ಕೊಟ್ಟ ಮಾತಿನಂತೆ ಜನರ ಖಾತೆಗಳಿಗೆ ₹ 15 ಲಕ್ಷ ಹಾಕುವುದಕ್ಕೆ ಕೇಂದ್ರ ಸರ್ಕಾರಕ್ಕೆ ಇದುವರೆಗೂ ಸಾಧ್ಯವಾಗಿಲ್ಲ. ರೈತರ ₹ 2 ಲಕ್ಷ ಸಾಲ ಮನ್ನಾವನ್ನಾದರೂ ಮಾಡಿರುತ್ತಿದ್ದರೆ ಮೊನ್ನೆ ಪಂಚ ರಾಜ್ಯಚುನಾವಣೆಗಳಲ್ಲಿ ಬಾಜಪ್ಪರ ನಾಗಾಲೋಟ ಮುಂದುವರಿಯುತ್ತಿತ್ತು’.

‘ಚುನಾವಣಾ ಪ್ರಣಾಳಿಕೆಯಲ್ಲಿ ಕೃಷಿ ಸಾಲ ಮನ್ನಾದ ವಿಚಾರ ಇದ್ದರೆ ರೈತರಿಗೆ ಎರಡು ಲಕ್ಷ ರೂಪಾಯಿ ಹಣದ ಆಮಿಷ ಒಡ್ಡಿದಂತೆಯೇ ಸರಿ! ಇದು ಎಷ್ಟು ಒಳ್ಳೆಯ ಐಡಿಯಾ ಎಂದರೆ ₹ 40,000 ಕೋಟಿಯಷ್ಟು ಚುನಾವಣಾ ಆಮಿಷವನ್ನು ಸರ್ಕಾರವೇ ಭರಿಸುತ್ತದೆ!’

‘ಮುಂದೆ ಚುನಾವಣೆಗಳಲ್ಲಿ ಕೃಷಿ ಸಾಲ ಮನ್ನಾದ ಜತೆಗೆ ಮೀಟರ್ ಬಡ್ಡಿ ಸಾಲ ಮತ್ತು ಗೃಹ, ವಾಹನ ಇತ್ಯಾದಿ ಸಾಲಗಳ ಮನ್ನಾ ಭರವಸೆ ಕೊಟ್ಟು ಮತದಾರರನ್ನು ಸೆಳೆಯಲು ಅವಕಾಶಗಳಿವೆ’.

‘ಬರುವ ಅಸೆಂಬ್ಲಿ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳಿಂದ ರೈತ ಸಾಲ ಮನ್ನಾ ಭರವಸೆ ಕೊಡುವುದಕ್ಕೆ ಪೈಪೋಟಿ ಇರಬಹುದು. ನಮ್ಮ ಪಕ್ಷ ದಿನಗಳು ಅಥವಾ ಗಂಟೆಗಳ ಗಡುವು ಕೊಡುವುದಿಲ್ಲ. ಅದರ ಬದಲು ಅಧಿಕಾರ ಸಿಕ್ಕಿದ ಐದು ನಿಮಿಷಗಳಲ್ಲೇ ಮನ್ನಾ ಘೋಷಣೆ ಮಾಡಲಿದ್ದೇವೆ!’

‘ನಮ್ಮ ಸರ್ಕಾರ ಎಲ್ಲಾ ರೈತರಿಗೆ ನಿರ್ಭೀತಿಯಿಂದ ಸಾಲ ತೆಗೆದುಕೊಳ್ಳಲು ಉತ್ತೇಜಿಸುತ್ತದೆ. ಯಾಕೆಂದರೆ ನಾವು ಮುಂದಿನ ಚುನಾವಣೆಯಲ್ಲೂ ಸಾಲ ಮನ್ನಾದ ಭರವಸೆಯೊಂದಿಗೆ ಜಯಭೇರಿ ಗಳಿಸಬೇಕೆಂದು ನಿರ್ಧರಿಸಿದ್ದೇವೆ’.

‘ಕೇಂದ್ರ ಸರ್ಕಾರ ಕೃಷಿ ಸಾಲ ಮನ್ನಾ ಮಾಡುವ ತನಕ ಪ್ರಧಾನಿಯವರನ್ನು ನಿದ್ರಿಸಲು ಬಿಡೊಲ್ಲ ಎಂದು ಗುಡುಗಿರುವ ರಾಯಲ್ ಗಾಂಧಿ, ನಮ್ಮ ಮಾಜಿ ಸಿಎಮ್ಮಯ್ಯರನ್ನು ನಿದ್ರಿಸಲು ಬಿಟ್ಟಿದ್ಯಾಕೆ? ಅವರು ಕೃಷಿ ಸಾಲ ಮನ್ನಾ ಮಾಡಿರುತ್ತಿದ್ದರೆ ಈಗ ಜಾಡೀಸ್ ಪಕ್ಷದ ಬಿ-ಟೀಮ್ ಆಗಿರಬೇಕಾಗಿತ್ತೇ?’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.