ADVERTISEMENT

ಇನ್ನೆಲ್ಲಿ ಬಳ್ಳಾರಿಯ ಆ ಗಾನಸುಧೆ?

ಹೊನಕೆರೆ ನಂಜುಂಡೇಗೌಡ
Published 11 ಡಿಸೆಂಬರ್ 2021, 19:30 IST
Last Updated 11 ಡಿಸೆಂಬರ್ 2021, 19:30 IST
ಹಂಪಿ ಉತ್ಸವದಲ್ಲಿ ಕಾರ್ಯಕ್ರಮ ನೀಡುತ್ತಿರುವ ವಿಜಯಾ ಕಿಶೋರ್‌
ಹಂಪಿ ಉತ್ಸವದಲ್ಲಿ ಕಾರ್ಯಕ್ರಮ ನೀಡುತ್ತಿರುವ ವಿಜಯಾ ಕಿಶೋರ್‌   

‘ಲಾಲಿಸಿದಳು ಮ‌ಗನ ಯಶೋದೆ, ಲಾಲಿಸಿದಳು ಮಗನ ಯಶೋದೆ... ಅರಳೆಲೆ ಮಾಗಾಯಿ ಬೆರಳಿಗುಂಗುರವಿಟ್ಟು, ತರಳನ ಮೈಸಿರಿ ತರುಣಿ ನೋಡುತ ಹಿಗ್ಗಿ...’

‘ಧಾನಿ ರಾಗ’ದಲ್ಲಿ ಹಿಂದೂಸ್ತಾನಿ ಗಾಯಕಿ ಬಳ್ಳಾರಿಯ ವಿಜಯಾ ಕಿಶೋರ್‌ ‘ಫೇಸ್‌ಬುಕ್‌ ಲೈವ್‌’ನಲ್ಲಿ ಪ್ರಸ್ತುತಪಡಿಸಿದ್ದ ಪುರಂದರ ದಾಸರ ಈ ಕೀರ್ತನೆ ಸಂಗೀತಪ್ರಿಯರ ಮನಸೂರೆಗೊಂಡಿತ್ತು. ಅವರದ್ದು ಕೋಗಿಲೆಯ ಕಂಠ. ಮಾಧುರ್ಯ ತುಂಬಿದ ದನಿ. ಪರವಶ ಭಾವದಿಂದ ಹಾಡಿದ್ದ ಕೀರ್ತನೆಗೆ ಅಭಿಮಾನಿಗಳು ತಲೆದೂಗಿದ್ದರು. ಹಿತವಾದ ಮೆದುದನಿ ಗಾಯನಕ್ಕೆ ಮತ್ತಷ್ಟು ಮೆರಗು ನೀಡಿತ್ತು.

ಕೋವಿಡ್‌ ಭೀತಿ ಇರದಿದ್ದರೆ ಅಭಿಮಾನಿಗಳ ಮುಂದೆ ವಿಜಯಾ ಕಿಶೋರ್‌ ಲೈವ್‌ ಕಾರ್ಯಕ್ರಮ ನೀಡುತ್ತಿದ್ದರು. ಈ ಅವಕಾಶ ತಪ್ಪಿಹೋಗಿದ್ದು ದುರದೃಷ್ಟ. ವಿಜಯಾ, ಬಳ್ಳಾರಿ ಚಂದ್ರಶೇಖರ ಗವಾಯಿ ಅವರ ಬಳಿ ಹಲವು ವರ್ಷ ಹಿಂದೂಸ್ತಾನಿ ಸಂಗೀತ ಅಭ್ಯಾಸ ಮಾಡಿದ್ದರು. ಗವಾಯಿ ಅವರಿಗೆ ‘ಗುರು ನಮನ’ ಸಲ್ಲಿಸುವುದಕ್ಕಾಗಿಯೇ ಫೇಸ್‌ಬುಕ್‌ ಲೈವ್‌ ನಡೆಸಿದ್ದರು. ಇದೇ ಅವರ ಕೊನೆಯ ಕಾರ್ಯಕ್ರಮವಾಯಿತು. ಕಳೆದ ವಾರ (ಡಿಸೆಂಬರ್‌ 8ರಂದು) ಬಂದ ಅವರ ನಿಧನದ ಸುದ್ದಿ ಸಂಗೀತಪ್ರಿಯರಿಗೆ ಆಘಾತ ಉಂಟುಮಾಡಿತು.

ADVERTISEMENT

‘ಇದು ಯಾರು ಹೂಡಿದ ಆಟವೋ; ಯಾರು ಮಾಡಿದ ಮಾಟವೋ; ಮಾಯೆಯೆಂಬ ಜಾಲ ಹೂಡಿ ತೆರೆದ ಭಾಗ್ಯದ ನೋಟವೋ...’ ಎನ್‌.ಎಸ್‌. ಲಕ್ಷ್ಮೀನಾರಾಯಣ ಭಟ್ಟರ ಕವಿತೆಯನ್ನು ‘ಖಮಾಜ್‌ ರಾಗ’ದಲ್ಲಿ ಅವರು ಅಂದು ಹಾಡಿದ್ದರು. ದ.ರಾ ಬೇಂದ್ರೆಯವರ ‘ಸಿಂಗಾರಿ ನಿನ್ನ ಮುಖ...’ ಕವಿತೆಯನ್ನೂ ಚಾರುಕೇಶಿ ರಾಗದಲ್ಲಿ ಮನದುಂಬಿ ಹಾಡಿದ್ದರು. ಅಂದುಅವರ ಕಂಠದಿಂದ ಕವಿತೆಗಳು, ವಚನಗಳು ಮತ್ತು ಕೀರ್ತನೆಗಳು ಸೊಗಸಾಗಿ ಹೊರಹೊಮ್ಮಿದ್ದವು. ವಿಶೇಷವೆಂದರೆ, ಚಂದ್ರಶೇಖರ ಗವಾಯಿ ರಾಗ ಸಂಯೋಜನೆ ಮಾಡಿದ್ದ ರಚನೆಗಳನ್ನೇ ಆಯ್ಕೆ ಮಾಡಿಕೊಂಡು ಪ್ರಸ್ತುತಪಡಿಸಿ, ಗುರುವಿಗೆ ಕಡೇ ನಮನ ಸಲ್ಲಿಸಿದ್ದರು.

ವಿಜಯಾ ಮೂಲತಃ ಮೈಸೂರಿನವರು. ಹಿರಿಯ ರಂಗ ಕಲಾವಿದರಾಗಿದ್ದ ಕೊಟ್ಟೂರಪ್ಪನವರ ಮೊಮ್ಮಗಳು. ಮನೆಯಲ್ಲಿದ್ದ ವಾತಾವರಣದಿಂದ ಐದನೇ ವಯಸ್ಸಿನಿಂದ ಶಾಸ್ತ್ರೀಯ ಸಂಗೀತ ಅಭ್ಯಾಸ ಆರಂಭಿಸಿದ್ದರು. ಮೈಸೂರಿನಲ್ಲಿ ಕರ್ನಾಟಕ ಸಂಗೀತ ಕಲಿತರು. 1980ರಲ್ಲಿ ಮದುವೆ ಆಗಿ ಬಳ್ಳಾರಿಗೆ ಬಂದ ಬಳಿಕ ಗವಾಯಿ ಬಳಿ ಹಿಂದೂಸ್ತಾನಿ ಸಂಗೀತ ಕಲಿತರು. ಗವಾಯಿಗಳು ತಮ್ಮ ಗುರುಗಳಾಗಿದ್ದ ಸಿದ್ದರಾಮ ಜಂಬಲ್‌ದಿನ್ನಿ ಅವರಿಂದ ಕಲಿತಿದ್ದನ್ನು ವಿಜಯಾ ಅವರಿಗೆ ಧಾರೆ ಎರೆದಿದ್ದರು. ಇಂಪಾದ ದನಿ, ನಯ– ವಿನಯ, ಮಿತವಾದ ಮಾತು, ಸಂಗೀತದ ಮೇಲಿನ ಪ್ರೀತಿ ಮುಂತಾದ ಗುಣಗಳಿಂದ ವಿಜಯಾ ಗುರುವಿಗೆ ಮೆಚ್ಚಿನ ಶಿಷ್ಯೆಯಾಗಿದ್ದರು.

ಹಾಡು– ಸಂಗೀತವೇ ವಿಜಯಾರ ಬದುಕಾಗಿತ್ತು. ಅದನ್ನು ಬಿಟ್ಟು ಬೇರೆ ಪ್ರಪಂಚ ಅವರಿಗಿರಲಿಲ್ಲ. ಹೀಗಾಗಿ, ತಾವು ಕಲಿತಿದ್ದನ್ನು ನೂರಾರು ಮಕ್ಕಳಿಗೆ ಹೇಳಿಕೊಡಲು ‘ಸುಸ್ವರ ಸಂಗೀತ ವಿದ್ಯಾಲಯ’ ಸ್ಥಾಪಿಸಿ, ಬದುಕಿನ ಅಂತಿಮ ಕ್ಷಣದವರೆಗೂ ಮಕ್ಕಳಿಗೆ ಸಂಗೀತ ಹೇಳಿಕೊಟ್ಟರು. ಮಕ್ಕಳು ನಿಖರವಾಗಿ ಕಲಿಯುವವರೆಗೂ ಬಿಡುತ್ತಿರಲಿಲ್ಲ. ಅವರ ಬಳಿ ಕಲಿತ ಕೆಲವು ಮಕ್ಕಳು ಟಿ.ವಿ ಚಾನೆಲ್‌ಗಳ ‘ರಿಯಾಲಿಟಿ ಷೋ’ಗಳಲ್ಲಿ ಹಾಡಿ, ಮಿಂಚಿದ್ದಾರೆ. ಹೀಗಾಗಿ, ಅವರೊಬ್ಬ ಅತ್ಯುತ್ತಮ ಸಂಗೀತ ಶಿಕ್ಷಕಿಯೂ ಆಗಿದ್ದರು.

ದೂರದರ್ಶನ, ಆಕಾಶವಾಣಿಯ ‘ಬಿ’ ಹೈ ಶ್ರೇಣಿ ಕಲಾವಿದರಾಗಿದ್ದ ವಿಜಯಾ ಅವರು ಅನೇಕ ಗಾಯನ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಹಂಪಿ ಉತ್ಸವ, ಮೈಸೂರು ದಸರಾ, ಆನೆಗುಂದಿ ಉತ್ಸವ, ಪುರಂದರ ದಾಸರ ಆರಾಧನಾ ಮಹೋತ್ಸವಗಳಲ್ಲೂ ಹಾಡಿದ್ದರು. ದೆಹಲಿಯಲ್ಲೂ ಕಾರ್ಯಕ್ರಮ ನೀಡಿದ್ದರು. ಹೋದಕಡೆಗಳಲ್ಲಿ ತಮಗೆ ಇಷ್ಟವಾದ ಕವಿತೆ, ವಚನ ಮತ್ತು ಕೀರ್ತನೆಗಳನ್ನು ಅದ್ಭುತವಾಗಿ ಪ್ರಸ್ತುತಪಡಿಸುತ್ತಿದ್ದರು. ಅವು ಕೇಳುಗರ ಕಿವಿಗೂ ಹಿತವಾಗಿರುತ್ತಿದ್ದವು.

ತಮ್ಮ ನೋವನ್ನು ಯಾರ ಬಳಿ ಹೇಳಿಕೊಳ್ಳದೆ, ತಮ್ಮ ಪಾಡಿಗೆ ತಾವು ಬದುಕಲು ಸಂಗೀತವೇ ಅವರಿಗೆ ಸಂಗಾತಿಯಾಗಿತ್ತು. ಪ್ರತಿಭಾವಂತ ಗಾಯಕಿ ಯಾಗಿದ್ದರೂ ಎಲೆಮರೆ ಕಾಯಾಗಿದ್ದರು. ತಮಗೆ ಸೂಕ್ತ ಮನ್ನಣೆ ಸಿಗಲಿಲ್ಲ ಎನ್ನುವ ಕೊರಗಿನಲ್ಲೇ ವಿಜಯಾ ಕಣ್ಮರೆಯಾದರು. ಆದರೆ, ಅವರು ಪ್ರಸ್ತುತಪಡಿಸಿದ ಭಾವಗೀತೆಗಳು, ಕೀರ್ತನೆಗಳು ನಮ್ಮೊಂದಿಗೆ ಶಾಶ್ವತವಾಗಿ ಉಳಿದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.