ವೀಣಾವಾದನದ ಮೂಲಕ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪ್ರಪಂಚಕ್ಕೆ ಅದ್ವಿತೀಯ ಕೊಡುಗೆ ಸಲ್ಲಿಸಿದ ಶ್ರೇಷ್ಠ ಸ್ವರಸಾಧಕ ದತ್ತಾತ್ರೇಯ ಪರ್ವತೀಕರ. ಇವರು ನುಡಿಸಿದ ಕೆಲವು ರಾಗಗಳು ‘ಯುನೆಸ್ಕೋ ಕಲೆಕ್ಷನ್ ಆಫ್ ಟ್ರೆಡಿಷನಲ್ ಮ್ಯೂಸಿಕ್ ಆಫ್ ದಿ ವರ್ಲ್ಡ್’ನಲ್ಲಿ ದಾಖಲಾಗಿವೆ.
ಸಹೃದಯರೇ..
‘ನಾನು ನನ್ನ ವಾದ್ಯವನ್ನು ಹೊಂದಿಸಿಕೊಳ್ಳುತ್ತಿದ್ದೇನೆ. ನೀವು ಕೂಡ ನಿಮ್ಮ ದೇಹವೆಂಬ ವಾದ್ಯವನ್ನು ಹೊಂದಿಸಿಕೊಳ್ಳಿ. ನನ್ನ ಎದುರು ನೆರೆದಿರುವ ನೀವೇ ವಾದ್ಯ. ನನ್ನ ಮೂಲಕ ನಿಮ್ಮನ್ನು ನುಡಿಸಲು ಅವನಿಗೆ (ಭಗವಂತನಿಗೆ) ಅವಕಾಶ ಕೊಡಿ. ನಾದದ ಅಲೆಯಲ್ಲಿ ಎಲ್ಲರೂ ಅವನಿಗೆ ಶರಣಾಗಿ...’
ಬದರಿನಾಥ ಕ್ಷೇತ್ರದಲ್ಲಿ 70ರ ದಶಕದಲ್ಲಿ ಸಂತರೊಬ್ಬರು ಈ ಸಾಲುಗಳನ್ನು ಹೇಳಿ ವೀಣಾವಾದನ ಆರಂಭಿಸುತ್ತಿದ್ದರು. ಕೊರೆವ ಚಳಿಯಲ್ಲೂ ಅರೆಬೆತ್ತಲಾಗಿ ಕುಳಿತು ಅವರು ನುಡಿಸುತ್ತಿದ್ದ ವೀಣೆ ಅಲ್ಲಿದ್ದವರ ಅಂತರಂಗಕ್ಕೆ ದೈವಿಸ್ಪರ್ಶದ ಅನುಭವ ನೀಡುತ್ತಿತ್ತು.
ಈ ಘಟನೆಯನ್ನು ಪ್ರಸಿದ್ಧ ಯೋಗಗುರು ಸ್ವಾಮಿ ರಾಮ್, ‘ಲಿವಿಂಗ್ ವಿತ್ ಹಿಮಾಲಯನ್ ಮಾಸ್ಟರ್ಸ್’ ಕೃತಿಯಲ್ಲಿ ದಾಖಲಿಸಿದ್ದಾರೆ. ಈ ಕೃತಿ ಹದಿನೆಂಟು ಬಾರಿ ಮುದ್ರಣಗೊಂಡಿದೆ. ಅಲ್ಲಿ ವೀಣೆ ನುಡಿಸುತ್ತಿದ್ದ ವ್ಯಕ್ತಿ ಬೇರೆ ಯಾರೂ ಅಲ್ಲ; ಅಪ್ಪಟ ಕನ್ನಡಿಗ ದತ್ತಾತ್ರೇಯ ಪರ್ವತೀಕರ.
1958ರಲ್ಲಿ ಭಾರತಕ್ಕೆ ಬಂದಿದ್ದ ಬ್ರಿಟನ್ ಚಲನಚಿತ್ರ ನಿರ್ಮಾಪಕ ಲೆಸ್ಲಿ ಶೆಫರ್ಡ್, ಋಷಿಕೇಶದಲ್ಲಿ ಒಬ್ಬ ಸಾಧುವನ್ನು ಭೇಟಿಯಾದರು. ಅವರಿಂದ ಸಂಗೀತ ಕಲಿತು ‘ಎ ಪೋರ್ಟ್ರೇಟ್ ಆಫ್ ಎನ್ ಇಂಡಿಯನ್ ಮ್ಯೂಜಿಸಿಯನ್’ ಎಂಬ ಲೇಖನ ಬರೆದರು. ಲೇಖನದಲ್ಲಿ ‘ಅಪಾರ ಸಂಗೀತ ಜ್ಞಾನ ಹೊಂದಿದ ಸಾಧುವೊಬ್ಬರು ದೇವಸ್ಥಾನಗಳಲ್ಲಿ ಅನಾಥರಂತೆ ಬದುಕುವುದನ್ನು ಕಂಡು ಆಶ್ಚರ್ಯಗೊಂಡೆ. ಇದು ಭಾರತದ ಶ್ರೀಮಂತಿಕೆ’ ಎಂದು ಉಲ್ಲೇಖಿಸಿದ್ದರು. ಲೆಸ್ಲಿ ಉಲ್ಲೇಖಿಸಿದ ಸಾಧು ಕೂಡ ದತ್ತಾತ್ರೇಯ ಪರ್ವತೀಕರ.
ಫ್ರೆಂಚ್ ದೇಶದ ಇತಿಹಾಸಕಾರ, ಸಂಗೀತಜ್ಞ ಅಲೆನ್ ಡೇನಿಯಲ್ ಭಾರತ ಪ್ರವಾಸ ಕೈಗೊಂಡಾಗ ಕಾಶಿಯಲ್ಲಿ ಋಷಿಸದೃಶ ವ್ಯಕ್ತಿ ವೀಣೆ ನುಡಿಸುವುದನ್ನು ಕಂಡು ಆಕರ್ಷಿತರಾದರು. ಅವರು ನುಡಿಸಿದ ಕೆಲವು ರಾಗಗಳನ್ನು ರೆಕಾರ್ಡ್ ಮಾಡಿಕೊಂಡರು. 1960ರಲ್ಲಿ ಯುರೋಪ್‌ಗೆ ತೆರಳಿದ ಡೇನಿಯಲ್ ಯುನೆಸ್ಕೋದ ಅಂತರರಾಷ್ಟ್ರೀಯ ಸಂಗೀತ ಪರಿಷತ್ ಸಲಹೆಗಾರರಾಗಿ ಆಯ್ಕೆಯಾದಾಗ ಕಾಶಿಯಲ್ಲಿ ರೆಕಾರ್ಡ್ ಮಾಡಿಕೊಂಡ ರಾಗಗಳನ್ನು ‘ಯುನೆಸ್ಕೋ ಕಲೆಕ್ಷನ್ ಆಫ್ ಟ್ರೆಡಿಷನಲ್ ಮ್ಯೂಸಿಕ್ ಆಫ್ ದಿ ವರ್ಲ್ಡ್’ ನಲ್ಲಿ ದಾಖಲಿಸಿದರು. ಅಂದು ದಾಖಲಿಸಿದ ರಾಗಗಳನ್ನು ಅಮೆರಿಕದ ನ್ಯೂಯಾರ್ಕ್ ಎಥಿಕ್ ಫೋಕ್‌ವೇಸ್ ಲೈಬ್ರರಿಯಲ್ಲಿ ಇಂದಿಗೂ ಕೇಳಬಹುದಾಗಿದೆ. ಡೇನಿಯಲ್ ಮುಂದೆ ವೀಣೆ ನುಡಿಸಿದವರು ಕೂಡ ದತ್ತಾತ್ರೇಯ ಪರ್ವತೀಕರ.
ಇಂಥ ಅಪರೂಪದ ಸಂಗೀತ ಸಾಧನೆಗೆ ಸಾಕ್ಷಿಯಾದ ವೀಣಾವಾದಕ ದತ್ತಾತ್ರೇಯ ಪರ್ವತೀಕರ ಎಲೆ ಮರೆಯ ಕಾಯಿಯಾಗಿಯೇ ಉಳಿದು ಇತಿಹಾಸ ಪುಟ ಸೇರಿದ್ದಾರೆ.
ಪರ್ವತೀಕರ ಮೂಲತಃ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣದವರು. ನಾದನಂದ ಬಾಪು ಎಂಬ ಗುರುವಿನ ಬಳಿ ಸಿತಾರ್ ಹಾಗೂ ವೀಣಾವಾದನ ಕಲಿತದ್ದು ಹೈದರಾಬಾದ್‌ನಲ್ಲಿ. ಬಿಎಸ್ಸಿ ಪದವೀಧರರಾಗಿದ್ದ ಪರ್ವತೀಕರ, ಗಣಿತದ ಅನೇಕ ಸೂತ್ರಗಳಿಗೆ ಅನುಗುಣವಾಗಿ ಸ್ವರಗಳನ್ನು ಜೋಡಿಸಿ ಸಂಶೋಧನೆ ನಡೆಸಿದ್ದಾರೆ. ಸಿತಾರ್, ಸ್ವರಮಂಡಲ ಹಾಗೂ ವಿಚಿತ್ರ ವೀಣೆಯ ಉತ್ತಮ ಅಂಶಗಳನ್ನು ಆಯ್ದುಕೊಂಡ 1961ರಲ್ಲಿ ಹೊಸ ವೀಣೆಯನ್ನು ತಾವೇ ರೂಪಿಸಿ ಅದನ್ನು ದತ್ತ ವೀಣೆ ಎಂದು ಕರೆದಿದ್ದರು. ಈ ವೀಣೆಯ ತಂತಿಗಳ ರಚನೆ ಬಗ್ಗೆ ಭೌತವಿಜ್ಞಾನಿ ಸರ್ ಸಿ.ವಿ.ರಾಮನ್ ಅವರೊಂದಿಗೂ ಚರ್ಚಿಸಿದ್ದರು. ದೆಹಲಿಯ ಸಂಗೀತ ನಾಟಕ ಅಕಾಡೆಮಿ ಕಚೇರಿಯಲ್ಲಿ ಇಂದಿಗೂ ದತ್ತ ವೀಣೆಯನ್ನು ನೋಡಬಹುದು.
ನಮ್ಮ ದೇಶದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರಿಗೂ ವೀಣಾವಾದನ ಕಲಿಸಿದ್ದಾರೆ. ಮತ್ತೊಬ್ಬ ರಾಷ್ಟ್ರಪತಿ ವಿ.ವಿ.ಗಿರಿ ಅವರು ಪರ್ವತೀಕರ ಅವರಿಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ರಾಯಭಾರಿಯಾಗಿ ವಿದೇಶಗಳಲ್ಲೂ ವೀಣೆ ನುಡಿಸುವಂತೆ ಆಹ್ವಾನ ನೀಡಿದ್ದರು. ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದಿದ್ದ ಪರ್ವತೀಕರ ವಿದೇಶ ಪ್ರವಾಸವನ್ನು ನಯವಾಗಿ ತಿರಸ್ಕರಿಸಿದರು. ನಂತರ ದೆಹಲಿಯಲ್ಲಿ ‘ಸ್ಪುಟ್ನಿಕ್ ವಿಂಗ್ ಪ್ರೋಗ್ರಾಮ್’ ಎಂಬ ಕಾರ್ಯಕ್ರಮದಲ್ಲಿ ಪರ್ವತೀಕರ ಅವರ ವೀಣಾವಾದನ ನಡೆಯಿತು. ಈ ಕಾರ್ಯಕ್ರಮ 24 ದೇಶಗಳಲ್ಲಿ ಪ್ರಸಾರವಾಯಿತು.
ಮುಂಬೈನಲ್ಲಿ ಪಂಪಾ ಪಿಕ್ಚರ್ಸ್ ಲಿಮಿಟೆಡ್ ಎಂಬ ಚಲನಚಿತ್ರ ಕಂಪನಿ ಆರಂಭಿಸಿದ್ದ ಶಾಂತೇಶ ಪಾಟೀಲ, ‘ಚಂದ್ರಹಾಸ’ ಎಂಬ ಚಲನಚಿತ್ರ ನಿರ್ಮಿಸಲು ಮುಂದಾಗಿದ್ದರು. ಈ ಚಿತ್ರದ ಸಂಗೀತ ನಿರ್ದೇಶನಕ್ಕೂ ಪರ್ವತೀಕರ ಅವರಿಗೆ ಅವಕಾಶ ಬಂದಿತ್ತು. ಇದನ್ನೂ ತಿರಸ್ಕರಿಸಿದ್ದರು. ಪರ್ವತೀಕರ ಅವರ ಸಂಗೀತದ ಉದ್ದೇಶವೇ ಬೇರೆಯಾಗಿತ್ತು.
1951ರಲ್ಲಿ ಕಾಂಗ್ರೆಸ್ ಆಫ್ ವರ್ಲ್ಡ್ ಎಂಬೆಸಿಯಲ್ಲಿ, 1961ರಲ್ಲಿ ಪ್ರಧಾನಿ ಜವಾಹರ್‌ಲಾಲ್ ನೆಹರು ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೌಹಾರ್ದ ಸಮ್ಮೇಳನದಲ್ಲೂ ಪರ್ವತೀಕರ ವೀಣೆ ನುಡಿಸಿದ್ದಾರೆ. ಪರ್ವತೀಕರ ಅವರ ವೀಣಾವಾದನಕ್ಕೆ ಪಂಡಿತ್ ಭೀಮಸೇನ್ ಜೋಶಿ, ಪಂಡಿತ್ ರವಿಶಂಕರ್ ಕೂಡ ತಲೆದೂಗಿದ್ದಾರೆ.
ಭಕ್ತಿ ಸಾಹಿತ್ಯ ಕ್ಷೇತ್ರದಲ್ಲೂ ಕೊಡುಗೆ ಸಲ್ಲಿಸಿದ ಪರ್ವತೀಕರ ಅವರ ಅನೇಕ ಕೃತಿಗಳು ಉತ್ತರ ಪ್ರದೇಶದ ಹಾತ್‌ರಸ ಪ್ರೆಸ್‌ನಲ್ಲಿ ಮುದ್ರಣಗೊಂಡಿವೆ. ಇವರು ರಚಿಸಿದ ಒಂದು ಕೃತಿಗೆ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಧ್ವನಿ ನೀಡಿದ್ದಾರೆ.
ಪರ್ವತೀಕರ ಅವರ ವೀಣಾವಾದನ ಪರಂಪರೆ ಉತ್ತರಾಖಂಡ, ಉತ್ತರ ಪ್ರದೇಶದ ಹಲವೆಡೆ ಇಂದಿಗೂ ಮುಂದುವರಿದಿದೆ. ಇವರ ಹೆಸರಿನಲ್ಲಿ ಮಥುರಾ, ವೃಂದಾವನಗಳಲ್ಲಿ ಸಂಗೀತ ಶಾಲೆಗಳಿವೆ. ಅಮೆರಿಕದ ಹುನುಲುಲು ದ್ವೀಪದಿಂದ 1976ರಲ್ಲಿ ಭಾರತಕ್ಕೆ ಬಂದು ಪರ್ವತೀಕರ ಅವರಿಂದ ವೀಣೆ, ಧ್ಯಾನವನ್ನು ಕಲಿತ ಲೀಸಾ ಚೋಕ್ ಎಂಬ ಮಹಿಳೆ ಇಂದಿಗೂ ಅಮೆರಿಕದಲ್ಲಿ ಪರ್ವತೀಕರ ಅವರ ಸಂಗೀತ, ಧ್ಯಾನ, ಯೋಗ ಪರಂಪರೆಯನ್ನು ಮುಂದುವರಿಸಿದ್ದಾರೆ.
1975ರಲ್ಲಿ ಭಾರತಕ್ಕೆ ಬಂದಿದ್ದ ಜಪಾನಿನ ಕೋರೊ ಇಟೋ ಕೂಡ ಪರ್ವತೀಕರ ಅವರಿಂದ ವೀಣಾ ವಾದನ ಕಲಿತವರು. ಇವರು ಕೂಡ ಜಪಾನ್‌ನಲ್ಲಿ ಸಿತಾರ್ ಶಿಕ್ಷಣ ನೀಡುತ್ತಿದ್ದಾರೆ. ಪರ್ವತೀಕರ ಅವರ ಶಿಷ್ಯ, ಉತ್ತರಾಖಂಡದ ದಿನೇಶ್ ಡಿಯುಂಡಿ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಜಪಾನ್‌ನಲ್ಲಿ ಸಂಗೀತ ಶಿಕ್ಷಕರಾಗಿದ್ದಾರೆ.
ಭಕ್ತಿ ಸಂಗೀತ ಪ್ರಸಾರ ಮತ್ತು ಅಧ್ಯಾತ್ಮ ಶಿಕ್ಷಣ ನೀಡುವ ಉದ್ದೇಶದಿಂದ 1968ರಲ್ಲಿ ಪರ್ವತೀಕರ ದೆಹಲಿಯಲ್ಲಿ ‘ಶ್ರೀ ರಾಘವೇಂದ್ರ ಸ್ವಾಮಿ ಮಿಷನ್’ ಸಂಸ್ಥೆ ಆರಂಭಿಸಿದ್ದರು. ಈ ಸಂಸ್ಥೆ ಕಚೇರಿ ಪ್ರಸ್ತುತ ಬೆಂಗಳೂರಿನ ಇಂದಿರಾನಗರದ ರಾಘವೇಂದ್ರ ಸ್ವಾಮಿ ಮಠದಲ್ಲಿದೆ. ಇದೇ ಸಂಸ್ಥೆಯಿಂದ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ₹10 ಲಕ್ಷ ನೀಡಲಾಗಿದ್ದು, ಡಿ.ಆರ್.ಪರ್ವತೀಕರ ಅವರ ಹೆಸರಿನಲ್ಲಿ ದತ್ತಿನಿಧಿ ಸ್ಥಾಪಿಸಲಾಗಿದೆ.
ದತ್ತಾತ್ರೇಯ ಪರ್ವತೀಕರ ಅವರ ಸಂಗೀತ ಸಾಧನೆ ಮೇಲೆ ಅವರ ವಂಶಸ್ಥರೇ ಆದ ರಾಜೇಂದ್ರ ಪರ್ವತೀಕರ ಈಚೆಗೆ ಹೊರತಂದ ‘ಬದರಿಧಾಮದ ತಪೋನಿಧಿ’ ಕೃತಿ ಸಾಕಷ್ಟು ಬೆಳಕು ಚೆಲ್ಲಿದೆ. ಉತ್ತರ ಭಾರತದ ಚಳಿಯಲ್ಲಿ ಹೆಪ್ಪುಗಟ್ಟಿದ್ದ ನಾದಯೋಗಿಯ ಸ್ವರಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ. ಈ ಕೃತಿ ಇಂಗ್ಲಿಷಿಗೂ ಭಾಷಾಂತರವಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.