ADVERTISEMENT

PV Web Exclusive | ರುದ್ರವೀಣೆಯಲ್ಲಿ ಅಸಾಧಾರಣ ಪಾಂಡಿತ್ಯದ ಅಸದ್‌ಅಲಿ ಖಾನ್

ರುದ್ರವೀಣೆ ಸಾಧಕನ ಜನ್ಮದಿನದ ನೆನಕೆ

ಉಮಾ ಅನಂತ್
Published 28 ಅಕ್ಟೋಬರ್ 2020, 5:09 IST
Last Updated 28 ಅಕ್ಟೋಬರ್ 2020, 5:09 IST
ಉಸ್ತಾದ್‌ ಅಸದ್‌ ಅಲಿ ಖಾನ್
ಉಸ್ತಾದ್‌ ಅಸದ್‌ ಅಲಿ ಖಾನ್   

ರುದ್ರವೀಣೆಯಲ್ಲಿ ದಿ. ಉಸ್ತಾದ್‌ ಅಸಾದ್‌ ಅಲಿ ಖಾನ್‌ ಅವರ ಹೆಸರು ಬಹಳ ಖ್ಯಾತಿ. ರುದ್ರವೀಣೆ ಅಥವಾ ಬೀನ್‌ ಎಂಬ ಪ್ರಾಚೀನ ತಂತಿವಾದ್ಯ ನುಡಿಸುವವರ ಸಂಖ್ಯೆ ಬಹಳ ಕಡಿಮೆಯಿದ್ದು, ಅಸದ್‌ ಅಲಿ ಖಾನ್‌ ರುದ್ರವೀಣೆ ಸಾಮ್ರಾಟನಂತೆ ಮೆರೆದವರು.

ಡಿಸೆಂಬರ್‌ 1, 1937ರಲ್ಲಿ ಜನಿಸಿದ ಉಸ್ತಾದ್‌ ಅಸದ್‌ ಅಲಿ ಖಾನ್‌ ದೇಶದ ವಿರಳಾತಿವಿರಳ ರುದ್ರವೀಣೆ ವಾದಕರಲ್ಲಿ ಒಬ್ಬರಾಗಿದ್ದರು. ರುದ್ರವೀಣೆ ನುಡಿಸುವುದರಲ್ಲಿ ಇವರದು ಏಳು ತಲೆಮಾರಿನ ಕಲೆಗಾರಿಕೆ. ದ್ರುಪದ್‌ ಶೈಲಿಯಲ್ಲಿ ಪರಿಪಕ್ವವಾಗಿರುವ ಉಸ್ತಾದ್‌ ಖಾನ್‌ ಆಕಾಶವಾಣಿಯಲ್ಲಿ ಹಲವಾರು ವರ್ಷ ಸೇವೆ ಸಲ್ಲಿಸಿದವರು. ದೆಹಲಿಯ ಮ್ಯೂಸಿಕ್‌ ಅಂಡ್‌ ಫೈನ್‌ ಆರ್ಟ್ಸ್‌ ವಿಶ್ವವಿದ್ಯಾಲಯದಲ್ಲಿ 17 ವರ್ಷ ಸಿತಾರ್‌ ಕಲಿಸಿದವರು.

ನಿವೃತ್ತಿಯ ನಂತರವೂ ಹಲವಾರು ವರ್ಷ ಆಸಕ್ತ ಸಂಗೀತ ವಿದ್ಯಾರ್ಥಿಗಳಿಗೆ ಸಿತಾರ್‌, ರುದ್ರವೀಣೆ ನುಡಿಸುವುದನ್ನು ಕಲಿಸಿದವರು. ದೇಶದ ನಾನಾ ಭಾಗಗಳಲ್ಲದೆ ಅಮೆರಿಕ, ಆಸ್ಟ್ರೇಲಿಯಾ, ಆಫ್ಘಾನಿಸ್ತಾನ್‌, ಇಟಲಿ ಹಾಗೂ ಯೂರೋಪ್‌ ದೇಶಗಳಲ್ಲಿ ಕಛೇರಿ ನೀಡಿದ್ದಾರೆ. ಅಮೆರಿಕದಲ್ಲಿಯೂ ಸಂಗೀತ ಕೋರ್ಸ್ ನಡೆಸಿ ಅಲ್ಲಿನ ಸಂಗೀತಾಸಕ್ತರಿಗೆ ಕಲಿಸಿದವರು. 2008ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದರು.

ADVERTISEMENT

ವಿರಳ ತಂತಿವಾದ್ಯ

ರುದ್ರವೀಣೆ ಅಥವಾ ಬೀನ್‌ ಭಾರತೀಯ ಮೂಲದ ತಂತಿ ವಾದ್ಯವೇ ಆಗಿದ್ದರೂ ಇದು ವಿರಳ ವಾದ್ಯಗಳ ಗುಂಪಿಗೆ ಸೇರಿದ್ದು. ಹಿಂದೂಸ್ತಾನಿ ಸಂಗೀತದಲ್ಲಿ ಮಾತ್ರ ಈ ವಾದ್ಯವನ್ನು ನುಡಿಸಲಾಗುತ್ತದೆ. ನಾದದ ಮಟ್ಟಿಗೆ ಹೇಳುವುದಾದರೆ ರುದ್ರವೀಣೆ ಮತ್ತು ಸಿತಾರ್‌ ಅಕ್ಕತಂಗಿಯರು ಎನ್ನಬಹುದು, ರುದ್ರವೀಣೆ ನುಡಿಸಬೇಕಾದರೆ ಗಾಯನ ಹಾಗೂ ಸಿತಾರ್‌ ನುಡಿಸಾಣಿಕೆ ಜ್ಞಾನವಿದ್ದರೆ ಸುಲಭ, ದ್ರುಪದ್‌ ಮತ್ತು ಖಯಾಲ್‌ ಪ್ರಕಾರಗಳ ನುಡಿಸಾಣಿಕೆಗೆ ಅತ್ಯಂತ ಸೂಕ್ತವಾದ ವಾದ್ಯವಿದು.

ದಕ್ಷಿಣ ಭಾರತದಲ್ಲಿ ಮೈಸೂರು ಹಾಗೂ ತಂಜಾವೂರು ಬಾನಿಯ ಸರಸ್ವತಿ ವೀಣೆ ಹಾಗೂ ಚಿತ್ರವೀಣೆ ನುಡಿಸಾಣಿಕೆ ಹೆಚ್ಚು ಪ್ರಚಲಿತದಲ್ಲಿದ್ದರೆ ಉತ್ತರಭಾರತದಲ್ಲಿ ರುದ್ರವೀಣೆ ನುಡಿಸಾಣಿಕೆ ಹೆಚ್ಚು ಚಾಲ್ತಿಯಲ್ಲಿದೆ. ರುದ್ರವೀಣೆಯನ್ನು ತಾರಕ ಮತ್ತು ಅತಿತಾರಕ ಸ್ಥಾಯಿಯಲ್ಲಿ ನುಡಿಸುವುದು ಕಷ್ಟ ಆದರೆ ಮಂದ್ರ, ಮಧ್ಯ ಸ್ಥಾಯಿಗಳಲ್ಲಿ ಲೀಲಾಜಾಲವಾಗಿ ನುಡಿಸಬಹುದು. ರುದ್ರವೀಣೆಗೆ ಪಖಾವಾಜ್‌ ಉತ್ತಮ ಸಾಥಿ ವಾದ್ಯ. ತಬಲಾ ಲಯಕ್ಕಿಂತಲೂ ಪಖಾವಾಜ್‌ ನಾದವೇ ಹೇಳಿಮಾಡಿಸಿದಂತಿರುತ್ತದೆ.

ದಿ. ಲಾಲ್‌ಮಣಿ ಮಿಶ್ರಾ ರುದ್ರವೀಣೆಯಲ್ಲಿ ಸಾಕಷ್ಟು ಹೆಸರುಮಾಡಿ ಜನಪ್ರಿಯಗೊಳಿಸಿದ್ದರು. ಜಿಯಾ ಮೊಹಿಯುದ್ದೀನ್‌ ಡಾಗರ್‌ ಅವರೂ ರುದ್ರವೀಣೆ ಪ್ರವೀಣರೇ ಆಗಿದ್ದರು, ಇವರಿಬ್ಬರ ಬಳಿಕ ಉಸ್ತಾದ್‌ ಅಸದ್‌ ಅಲಿಖಾನ್‌, ಶಂಸುದ್ದೀನ್‌ ಫರೀದಿ, ಬಹಾವುದ್ದೀನ್‌ ಡಾಗರ್, ಬೀನ್‌ಕರ್‌ ಸುವಿರ್‌ ಮಿಶ್ರಾ ರುದ್ರವೀಣೆ ಪಂಡಿತರಾಗಿದ್ದವರು. ಕರ್ನಾಟಕದಲ್ಲಿ ದಿ. ಬಿಂದುಮಾಧವ ಪಾಠಕ್‌ ಹಾಗೂ ಅವರ ಮಗ ಶ್ರೀಕಾಂತ್‌ ಪಾಠಕ್ ರುದ್ರವೀಣೆ ಕಲಾವಿದರು. ಶಿರಸಿಯ ಆರ್‌.ವಿ. ಹೆಗಡೆ, ಸುಬ್ರಹ್ಮಣ್ಯ ಹೆಗಡೆ, ಜ್ಯೋತಿ ಹೆಗಡೆ ರುದ್ರವೀಣೆ ನುಡಿಸುವ ಕಲಾವಿದರು.

ರುದ್ರವೀಣೆ ತಂತಿಯಿಂದ ಹೊರಡುವ ನಾದ ಖಡ್ಗದಂತೆ ಹರಿತವಾದದ್ದು. ಇದು ಬಹಳ ಪ್ರಾಚೀನ ವಾದ್ಯವಾಗಿದ್ದು, ತಂತಿವಾದ್ಯಗಳ ಮಟ್ಟಿಗೆ ‘ಕಿಂಗ್‌ ಆಫ್‌ ವೀಣಾ’ ಎಂಬ ಖ್ಯಾತಿ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.