ADVERTISEMENT

ಸಹಾಯಾರ್ಥ ಸಂಗೀತೋತ್ಸವ

ಶಶಿಕುಮಾರ್ ಸಿ.
Published 31 ಆಗಸ್ಟ್ 2018, 19:30 IST
Last Updated 31 ಆಗಸ್ಟ್ 2018, 19:30 IST
ಶುಭೇಂದ್ರ ರಾವ್ ಹಾಗೂ ಸಾಸ್ಕಿಯಾ ರಾವ್ ಸಂಗೀತ ಕಛೇರಿ
ಶುಭೇಂದ್ರ ರಾವ್ ಹಾಗೂ ಸಾಸ್ಕಿಯಾ ರಾವ್ ಸಂಗೀತ ಕಛೇರಿ   

ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಭಾರತೀಯ ಸಂಗೀತ ಲೋಕದ ದಿಗ್ಗಜ. ಅವರು ಭೌತಿಕವಾಗಿ ನಮ್ಮೊಂದಿಗಿಲ್ಲವಾದರೂ, ರಾಗರೂಪಿಯಾಗಿ ಹಾಗೂ ನಾದರೂಪಿಯಾಗಿ ನಮ್ಮ ನಡುವೆ ಜೀವಂತ. ಅವರ ಸಂಗೀತವೂ ಅವರಂತೆಯೇ ಕೇಳುಗರ ಮನದಲ್ಲಿ ಅಚ್ಚಳಿಯದೆ ಉಳಿಯುತ್ತದೆ.

ತನ್ನ ಬದುಕಿನ ಕೊನೆಯ ದಿನಗಳಲ್ಲಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು,ಬೆಂಗಳೂರು ಕಿಡ್ನಿ ಫೌಂಡೇಷನ್‌ಗೆ (ಬಿಕೆಎಫ್) ಸೇರಿ, ಅಲ್ಲೇ ಗುಣಮುಖರಾದರು. ಬಳಿಕ ಬಿಕೆಎಫ್‌ನೊಂದಿಗೆ ಅವರು ನಿಕಟವಾದ ಸಂಬಂಧ ಬೆಳೆಸಿಕೊಂಡಿದ್ದರು.ಆ ಸಂದರ್ಭದಲ್ಲಿ, ನಗರದಲ್ಲಿ ಸಂಗೀತ ಕಛೇರಿ ನಡೆಸಿದಮನ್ಸೂರ್, ಅದರಿಂದ ಬಂದ ಹಣವನ್ನೆಲ್ಲ ಬಿಕೆಎಫ್‌ನ ಜನಸೇವಾ ಕಾರ್ಯಗಳಿಗೆ ಧಾರೆ ಎರೆದಿದ್ದರು.

ಅವರ ಈ ನಡೆಯು, ಅವರದ್ದೇ ಸ್ಮರಣಾರ್ಥವಾಗಿ ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಸಂಗೀತೋತ್ಸವ ಆಯೋಜಿಸಲು ಬಿಕೆಎಫ್‌ಗೆ ಪ್ರೇರಣೆಯಾಯಿತು. ಅಂತೆಯೇ ಪ್ರತಿವರ್ಷ ಈ ಕಾರ್ಯಕ್ರಮ ಆಯೋಜಿಸಿ, ‘ಪಂ.ಮಲ್ಲಿಕಾರ್ಜುನ ಮನ್ಸೂರ್’ ಪ್ರಶಸ್ತಿ ನೀಡಲಾಗುತ್ತಿದೆ.

ADVERTISEMENT

‘15ನೇ ವರ್ಷದ ‘ಬಿಕೆಎಫ್ ಪಂ. ಮಲ್ಲಿಕಾರ್ಜುನ ಮನ್ಸೂರ್ ಸಂಗೀತೋತ್ಸವ’ವನ್ನು ಈ ಬಾರಿ ಸೆಪ್ಟೆಂಬರ್ 1 ಹಾಗೂ 2ರಂದು, ಜಯನಗರ 8ನೇ ಹಂತದ ಜೆಎಸ್‌ಎಸ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ. 2018ನೇ ಸಾಲಿನ ‘ಪಂ.ಮಲ್ಲಿಕಾರ್ಜುನ ಮನ್ಸೂರ್’ ಪ್ರಶಸ್ತಿಗೆ ಈ ಬಾರಿ ಪಂಡಿತ್ ಕೇದಾರ ನಾರಾಯಣ ಬೋಡಾಸ್ ಆಯ್ಕೆಯಾಗಿದ್ದು, ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು ₹ 1 ಲಕ್ಷ ನಗದು ಬಹುಮಾನ, ಬಿನ್ನವತ್ತಳೆ, ಮನ್ಸೂರ್ ಅವರ ಕಂಚಿನ ಪುತ್ಥಳಿಯನ್ನು ಒಳಗೊಂಡಿದೆ’ ಎಂದು ಮಾಹಿತಿ ನೀಡುತ್ತಾರೆ ಬಿಕೆಎಫ್‌ ಅಧ್ಯಕ್ಷ ಶ್ರೀರಾಮ್.

ಸಂಗೀತೋತ್ಸವದ ವಿವರ
ಸೆಪ್ಟೆಂಬರ್ 1ರಂದು ಸಂಜೆ 5ಕ್ಕೆ ‘ಭವಿಷ್ಯದ ಸಂಗೀತಗಾರ’ ವಿಭಾಗದಲ್ಲಿ ದತ್ತಾತ್ರೇಯ ಮುತಾಲಿಕ್ ದೇಸಾಯಿ ಅವರಿಂದ ಕೊಳಲು ವಾದನ. ನಂತರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಬಳಿಕ ಪಂಡಿತ್ ಸಂಜೀವ ಅಭ್ಯಂಕರ್, ಗಾಯನಗೋಷ್ಠಿ ನಡೆಸಿಕೊಡಲಿದ್ದಾರೆ. ಸೆ.2ರಂದು ಬೆಳಿಗ್ಗೆ 10ಕ್ಕೆ ಕೇದಾರ ನಾರಾಯಣ ಬೋಡಾಸ್ ಅವರು ಹಿಂದೂಸ್ತಾನಿ ಸಂಗೀತ ಕಛೇರಿ ನಡೆಸಿಕೊಡಲಿದ್ದು, ಸಂಜೆ 5.15ಕ್ಕೆ ಕುಮಾರಿ ಅಂಕಿತಾ ಜೋಷಿ ಹಿಂದೂಸ್ತಾನಿ ಗಾಯನ ಪ್ರಸ್ತುತ ಪಡಿಸಲಿದ್ದಾರೆ. ರಾತ್ರಿ 7.30ಕ್ಕೆ ಪಂಡಿತ್ ಶುಭೇಂದ್ರ ರಾವ್ ಹಾಗೂ ಸಾಸ್ಕಿಯಾ ರಾವ್ ಅವರು ಸಿತಾರ್ ಹಾಗೂ ಸೆಲ್ಲೊ ವಾದನ ಪ್ರಸ್ತುತ ಪಡಿಸಲಿದ್ದಾರೆ ಎನ್ನುತ್ತಾರೆ ಶ್ರೀರಾಮ್.

ಬಿಕೆಎಫ್‌ ಪರಿಚಯ
ಬೆಂಗಳೂರು ಕಿಡ್ನಿ ಫೌಂಡೇಷನ್ (ಬಿಕೆಎಫ್) ಕಿಡ್ನಿ ಸಂಬಂಧಿತ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಿದ್ದು, ಮಲ್ಲಿಕಾರ್ಜುನ ಮನ್ಸೂರ್ ಅವರ ಸ್ಮರಣಾರ್ಥವಾಗಿ ಈ ಸಂಗೀತ ಹಬ್ಬವನ್ನು ಆಯೋಜಿಸುತ್ತಿದೆ. ಹಿಂದೂಸ್ತಾನಿ ಸಂಗೀತದ ಬಗ್ಗೆ ಯುವಕರಲ್ಲಿ ಆಸಕ್ತಿ ಮೂಡಿಸುವುದರ ಜೊತೆಗೆ ಕಾರ್ಯಕ್ರಮದಿಂದ ಸಂಗ್ರಹವಾಗುವ ನಿಧಿಯನ್ನು ತನ್ನ ‘ದಿನಕ್ಕೊಂದು ಉಚಿತ ಡಯಾಲಿಸಿಸ್’ ಯೋಜನೆಗೆ ಬಿಕೆಎಫ್ ಬಳಸುತ್ತಿದೆ.

2007ರಿಂದ ಇಲ್ಲಿಯವರೆಗೆ 38,373 ಮಂದಿಗೆ ಡಯಾಲಿಸಿಸ್‌ ಮಾಡಿಸಲು ಆರ್ಥಿಕ ನೆರವು ನೀಡಿರುವ ಬಿಕೆಎಫ್, ರಂಗದೊರೆ ಸ್ಮಾರಕ ಆಸ್ಪತ್ರೆಯಲ್ಲಿ ರಿಯಾಯಿತಿ ದರದಲ್ಲಿ ಡಯಾಲಿಸಿಸ್‌ಗೆ ನೆರವು ನೀಡಿದೆ. ಪ್ರತಿ ತಿಂಗಳು 2,500 ಮಂದಿಗೆ ಡಯಾಲಿಸಿಸ್ ನಡೆಸುತ್ತಿದೆ. 12 ರಿಂದ 16 ವಯಸ್ಸಿನ ಶಾಲಾ ಮಕ್ಕಳಲ್ಲಿ ಮೂತ್ರಪಿಂಡ ಸಂಬಂಧಿ ಕಾಯಿಲೆಗಳನ್ನು ಪತ್ತೆ ಹಚ್ಚಲು ‘ಪ್ರಿವೆನ್ಷನ್ ಈಸ್ ಕ್ಯೂರ್’ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಡಿ 18 ತಿಂಗಳುಗಳಲ್ಲಿ 16 ಶಾಲೆಗಳ 4,000 ಅಧಿಕ ಮಕ್ಕಳನ್ನು ತಪಾಸಣೆ ಮಾಡಿಸಿದೆ.

*

ಕೇದಾರ್ ಬೋಡಾಸ್

ಬೋಡಾಸ್ ಪರಿಚಯ
ಪಂಡಿತ್ ಕೇದಾರ ನಾರಾಯಣ ಬೋಡಾಸ್ ಅವರು ಹಿಂದೂಸ್ತಾನಿ ಸಂಗೀತಗಾರರಾಗಿದ್ದು, ಗ್ವಾಲಿಯರ್ ಮತ್ತು ಆಗ್ರಾದಲ್ಲಿ ಸಂಗೀತ ಶಿಕ್ಷಕರಾಗಿದ್ದಾರೆ. ರಾಗ, ತಾಳ ಮತ್ತು ಬಂಧಿಶ್‌ನಂತಹ ಮೂಲ ಸಂಗತಿಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದಾರೆ. ಹಲವು ಸಾಕ್ಷ್ಯಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿರುವ ಅವರು ರಷ್ಯನ್ ಶಾಸ್ತ್ರೀಯ ಸಂಗೀತ ಹಾಗೂ ಜಾನಪದ ಗೀತೆಗಳನ್ನು ಹಾಡಿದ್ದಾರೆ. ರಷ್ಯನ್ ಏಕಾಂಕ ನಾಟಕಗಳಲ್ಲೂ ನಟಿಸಿದ್ದಾರೆ.

ಪಾಸ್‌ಗಳು ದೊರೆಯುವ ಸ್ಥಳ
* ಕೆ.ಸಿ.ದಾಸ್, ಎಂ.ಜಿ.ರಸ್ತೆ– 080 25592021
* ಕ್ಯಾಲಿಪ್ಸೋ, ಜಯನಗರ 4ನೇ ಹಂತ– 080 41210889
* ಚಾನಲ್ 9, ಜಯನಗರ 7ನೇ ಹಂತ– 080 26654443
* ಬಿಕೆಎಫ್ ಕಚೇರಿ– 8971789169
(ಟಿಕೆಟ್ ದರ ₹ 100)

***

ಅಂಕಿತಾ ಜೋಷಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.