ADVERTISEMENT

ಮ್ಯೂಸಿಕಲ್ ಮ್ಯೂಸಿಯಂ

ಮನೆ ತುಂಬ ತಂ ತನನ ತಾನದ ಅನುರಣನ

ಉಮಾ ಅನಂತ್
Published 19 ನವೆಂಬರ್ 2018, 19:45 IST
Last Updated 19 ನವೆಂಬರ್ 2018, 19:45 IST
ಮಸೆಂಕೋ ನುಡಿಸುತ್ತಿರುವುದು
ಮಸೆಂಕೋ ನುಡಿಸುತ್ತಿರುವುದು   

ವಿಶ್ವ ಮನ್ನಣೆಯ ಅಂಕ್ಲಂಗ್ ವಾದಕಿ ಡಾ.ಅನಸೂಯ ಕುಲಕರ್ಣಿ ಸುಮಾರು 25 ದೇಶಗಳನ್ನು ಸುತ್ತಿ ಸಂಗೀತಗಾರರೇ ಕಂಡು ಕೇಳರಿಯದ ಸುಮಾರು 300 ವಿವಿಧ ನಾದ, ಲಯ ವೈಶಿಷ್ಟ್ಯದ ವಾದ್ಯಗಳನ್ನು ಸಂಗ್ರಹಿಸಿದ್ದಾರೆ. ಅಷ್ಟೇ ಅಲ್ಲ ಈ ಎಲ್ಲ ವಾದ್ಯಗಳನ್ನು ನುಡಿಸುವ ಅಪರೂಪದ ಕಲೆಗಾರಿಕೆ ರೂಢಿಸಿ
ಕೊಂಡಿದ್ದಾರೆ. ಬೆಂಗಳೂರಿನ ಜೆ.ಪಿ. ನಗರದ ಅವರ ಮನೆಯಲ್ಲಿ ಅಷ್ಟೂ ವಾದ್ಯಗಳನ್ನು ಮ್ಯೂಸಿಯಂನಲ್ಲಿರುವಂತೆ ಜೋಡಿಸಿದ್ದಾರೆ.

ಎಂಬತ್ತಮೂರರ ಹರೆಯದ ಅನಸೂಯ ತಾವು ಸಂಗ್ರಹಿಸಿರುವ ಎಲ್ಲ ವಾದ್ಯಗಳನ್ನು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದ ‘ವಿಶ್ವ ಸಂಗೀತ ಮ್ಯೂಸಿಯಂ’ಗೆ ದೇಣಿಗೆಯಾಗಿ ನೀಡಲಿದ್ದಾರೆ. ಮುಂದಿನ ತಿಂಗಳು (ಡಿಸೆಂಬರ್‌) ಆ ಮ್ಯೂಸಿಯಂ ಲೋಕಾರ್ಪಣೆಗೊಳ್ಳಲಿದೆ.

ಅನಸೂಯ ಅವರ ಸಂಗ್ರಹದಲ್ಲಿ ಈಗಾಗಲೇ ಚಿರಪರಿಚಿತವಾಗಿರುವ ವೀಣೆ, ಪಿಟೀಲು, ಮೃದಂಗ, ತಂಬೂರಿ, ತಬಲಾ, ಹಾರ್ಮೋನಿಯಂ, ಅಕಾರ್ಡಿಯನ್‌ಗಳಿವೆ. ಜತೆಗೆ, ತಂತಿ, ಸುಷಿರ, ಘನ, ಅವನದ್ಧ ಎಂಬ ವೈವಿಧ್ಯಮಯ ವಾದ್ಯಗಳನ್ನು ಒಂದೇ ಕಡೆ ಕಲೆ ಹಾಕಿದ್ದಾರೆ. ಇವುಗಳಲ್ಲಿ ಇಂಡೋನೇಷ್ಯಾದ ಅಂಕ್ಲಂಗ್‌, ಭಾಂಗ್‌, ಗಮಲನ್‌, ಕಾಬೂಲಿನಿಂದ ತಂದ ಸ್ವರಮಂಡಲ, ರುಬಾಬ್‌, ಮಂಗೋಲಿಯಾದ ದರ್ಬುಕ, ಶೋಂಜ್‌ (shonz) ಚೀನಾದ ಅರುಡು, ಕಿಪಾ, ಅರ್ಹೊ, ಮೋರ್ಚಿಂಗ್‌ ವಾದ್ಯಗಳೂ ಸೇರಿವೆ. ಇವೆಲ್ಲವೂ ನುಡಿಸಾಣಿಕೆಯಲ್ಲಿ ವಿಭಿನ್ನವಾದರೂ ನಾದ, ಲಯ ಮಾತ್ರ ಅತ್ಯಂತ ಸುಶ್ರಾವ್ಯ, ಮಧುರಾತಿ ಮಧುರ. ಈ ಎಲ್ಲ ವಾದ್ಯಗಳನ್ನು ಅನಸೂಯ ಲೀಲಾಜಾಲವಾಗಿ ನುಡಿಸುತ್ತಾರೆ.

ADVERTISEMENT

ಅನಸೂಯ ಅವರ ವಿದೇಶಗಳಲ್ಲಿನ ಸಂಗೀತ ಪಯಣದ ‘ಕಥೆ’ ನಿಜಕ್ಕೂ ರೋಚಕ. ಜೀವನದುದ್ದಕ್ಕೂ ಸಂಗೀತ ಹಾಗೂ ವಾದ್ಯಗಳೊಂದಿಗೇ ಒಡನಾಡಿರುವ ಅವರ ಗಾನ–ಯಾನದ ರಸನಿಮಿಷಗಳನ್ನು ಅವರ ಮಾತುಗಳಲ್ಲೇ ಕೇಳಿದರೆ ಮತ್ತಷ್ಟು ಅರ್ಥಪೂರ್ಣ ಎನ್ನಿಸೀತು;

ಅದು 1965ನೇ ಇಸವಿ. ನನ್ನ ಪತಿ ನಾರಾಯಣ ಕುಲಕರ್ಣಿ ಅವರು ಆಫ್ಘಾನಿಸ್ಥಾನದ ಕಾಬೂಲಿನಲ್ಲಿ ವಿಶ್ವಸಂಸ್ಥೆಯ ಡೆಪ್ಯೂಟಿ ರೆಸಿಡೆಂಟ್ ರೆಪ್ರೆಸೆಂಟೆಟಿವ್‌ ಆಗಿ ವೃತ್ತಿ ಆರಂಭಿಸಿದರು. ನಾ ನು ಬಾಲ್ಯದಿಂದಲೂ ಸಂಗೀತಾಭ್ಯಾಸ ಮಾಡಿದ್ದೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ಗುರುಗಳಾದ ಆರ್‌.ಆರ್‌. ಕೇಶವಮೂರ್ತಿ ಹಾಗೂ ಚೌಡಯ್ಯ ಅವರ ಬಳಿ ಸುಮಾರು 25 ವರ್ಷ ಸಂಗೀತ ಕಲಿತಿದ್ದೆ. ಹಾಗಾಗಿ, ನನಗೆ ಆಫ್ಘಾನಿಸ್ತಾನಕ್ಕೆ ಹೋದಾಗ ಅಲ್ಲಿನ ‘ಸ್ವರಮಂಡಲ’ ವಾದ್ಯ ಕಲಿಯಬೇಕೆನಿಸಿತು. ಅಲ್ಲಿ ಹಿಂದೂಸ್ತಾನಿ ಸಂಗೀತವನ್ನು ಪಾಟಿಯಾಲ ಘರಾಣೆಯಲ್ಲಿ ಗುರು ಮಹಮ್ಮದ್‌ ಹುಸೇನ್‌ ಸಾರಹಂಗ್‌ ಅಫಲ್‌ ಅವರ ಬಳಿ ಕಲಿಯಲಾರಂಭಿಸಿದೆ. ಗುರುಗಳ ಮುಂದೆ ಕರ್ನಾಟಕ ಶಾಸ್ತ್ರೀಯ ಸಂಗೀತದ ‘ಹಂಸಧ್ವನಿ’ ರಾಗದಲ್ಲಿ ‘ವಾತಾಪಿ ಗಣಪತಿಂ ಭಜೆ’ಯನ್ನು ಆಲಾಪ, ಸ್ವರಪ್ರಸ್ತಾರದೊಂದಿಗೆ ಹಾಡಿದೆ. ಅವರು ತುಂಬ ಖುಷಿಪಟ್ಟರು. ಅವರು ಹಿಂದೂಸ್ತಾನಿ ಶೈಲಿಯ ‘ದರ್ಬಾರಿ ಕಾನಡ’ ರಾಗ ಹೇಳಿಕೊಟ್ಟರು. ಅಷ್ಟೇ ಅಲ್ಲ ಉಸ್ತಾದರು ಒಂದು ಸ್ವರಮಂಡಲವನ್ನು ಉಡುಗೊರೆಯಾಗಿಯೂ ಕೊಟ್ಟರು. ಗುರುಗಳ ಜತೆ ಅಲ್ಲಿ ಅನೇಕ ರೇಡಿಯೊ ಕಾರ್ಯಕ್ರಮಗಳಲ್ಲಿ ಹಾಡಿದೆ.

ವಾದ್ಯಗಳು ಎಲ್ಲೆಲ್ಲಿಂದಲೋ ಬಂದು ಹೇಗೆ ಕೈ ಸೇರುತ್ತವೆ ನೋಡಿ. ಒಮ್ಮೆ ಕಾಬೂಲಿನಲ್ಲಿ ವಿಪರೀತ ಹಿಮ ಮಳೆ. ಆ ಥಂಡಿ ಸಹಿಸದೆ ಬಿಸಿಲಲ್ಲಿ ಕುಳಿತಿದ್ದೆ. ಪಕ್ಕದ ಮನೆಯಿಂದ ಯಾವುದೋ ವಾದ್ಯದ ಇಂಪಾದ ನಾದ ಕೇಳಿಬಂತು. ಅದರ ಬಗ್ಗೆ ವಿಚಾರಿಸಿದೆ. ಆ ವಾದ್ಯ ‘ರುಬಾಬ್‌’ ಅಂತ ಗೊತ್ತಾಯಿತು. ತಕ್ಷಣ ವಾದ್ಯ ನುಡಿಸುವವರ ಬಳಿ ಹೋಗಿ ಅದರ ನುಡಿಸಾಣಿಕೆ ಕ್ರಮ ಕೇಳಿ ತಿಳಿದುಕೊಂಡೆ. ಒಂದೆರಡು ದಿನಗಳಲ್ಲಿ ‘ರುಬಾಬ್‌’ ವಾದ್ಯ ನನ್ನ ಸಂಗ್ರಹಕ್ಕೆ ಸೇರಿತು. ಜತೆಗೆ ಮಡಿಕೆಯಲ್ಲಿ ಮಾಡಿ ಚರ್ಮದ ಕವರ್‌ ಹಾಕಿದ ‘ದರ್ಬುಕ’ ಎಂಬ ವಾದ್ಯವನ್ನು ತೆಗೆದುಕೊಂಡೆ.

ಅಲ್ಲಿಂದ ನಾವು ಮಂಗೋಲಿಯಾ ದೇಶಕ್ಕೆ ಹೋದವು. ಇದು ಚೀನಾ ಸಮೀಪದಲ್ಲಿದ್ದರಿಂದ ರೈಲಿನಲ್ಲಿ ಪ್ರಯಾಣಿಸಿದೆ. ರೈಲು ನಿಲ್ದಾಣದ ವೇಟಿಂಗ್‌ ರೂಮ್‌ನಲ್ಲಿದ್ದಾಗ ಸಹಪ್ರಯಾಣಿಕರ ಬಳಿ ಅಲ್ಲಿ ಸಿಗುವ ವಾದ್ಯಗಳ ಬಗ್ಗೆ ವಿಚಾರಿಸಿದೆ. ಅಲ್ಲಿ ಕಾಣಲು ಸಿಕ್ಕಿದ ಅರುಡು, ಕಿಪಾ, ಅರ್ಹೊ ಎಂಬ ವಾದ್ಯಗಳನ್ನು ಖರೀದಿಸಿದೆ.

ಅಂಕ್ಲಂಗ್‌ನೊಂದಿಗೆ ಅನಸೂಯ

ಇಂಡೋನೇಷ್ಯಾದಲ್ಲಿ...
ಮುಂದೆ ನಮ್ಮ ಪಯಣ ಇಂಡೋನೇಷ್ಯಾಕ್ಕೆ. ಅಲ್ಲಿ ಕಣ್ಣಿಗೆ ಬಿದ್ದಿದ್ದು ಬಿದಿರು ವಾದ್ಯ. ಆ ವಾದ್ಯಕ್ಕೆ ‘ಅಂಕ್ಲಂಗ್‌’ ಎಂಬ ಹೆಸರು. ಅದರ ನಾದಕ್ಕೆ ಮಾರುಹೋಗ್ಬಿಟ್ಟೆ. ಅದನ್ನು ಭಾರತೀಯ ಸಂಗೀತಕ್ಕೆ ಅಳವಡಿಸಬೇಕು ಎಂಬ ಆಲೋಚನೆ ಬಂತು. ಮೃದಂಗ, ಪಿಟೀಲು ಎಲ್ಲವೂ ನಮ್ಮ ಸಂಗೀತದ ಪಕ್ಕವಾದ್ಯವಾಗಿ ಬೇಕು. ಹೀಗಾಗಿ ಅಂಕ್ಲಂಗ್‌ಗೆ ಕೈಗೆ ಎಟುಕುವಷ್ಟು ಎತ್ತರದ ಒಂದು ಸ್ಟ್ಯಾಂಡ್‌ ಮಾಡಿ ಒಂದೊಂದು ಸ್ವರಕ್ಕೂ ಒಂದೊಂದು ಭಾಗಗಳನ್ನು ಜೋಡಿಸಿ ವಾದ್ಯ ತಯಾರಿಸಿದೆ. ಅಂಕ್ಲಂಗ್‌ನಲ್ಲಿ ಶಾಸ್ತ್ರೀಯ ರಾಗಗಳು ಸುಶ್ರಾವ್ಯವಾಗಿ ಹೊಮ್ಮಿದವು. ಇದನ್ನು ವಿಶ್ವಸಂಸ್ಥೆಯಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ನುಡಿಸಿದೆ. ಅದು ‘ನಳಿನಕಾಂತ’ ರಾಗ. ಅದರ ತಿಲ್ಲಾನ ಎಲ್ಲರಿಗೂ ಮೆಚ್ಚುಗೆಯಾಯಿತು. ಅಲ್ಲಿನ ಟಿವಿಗಳಲ್ಲಿ ಕಾರ್ಯಕ್ರಮ ಪ್ರಸಾರವಾಯಿತು.

ಇಂಡೋನೇಷ್ಯಾದ ಪ್ರಸಿದ್ಧ ಅಂಕ್ಲಂಗ್‌ ವಾದಕಿ ಸೇತಿ ಫಾತಿಮಾ ಲಘು ಸಂಗೀತ ಕಲಿಸುವಂತೆ ಕೇಳಿಕೊಂಡರು. ಅವರಿಗೆ ಹೇಳಿಕೊಟ್ಟ ನಂತರ ನನಗೂ ‘ಅಂಕ್ಲಂಗ್‌’ ವಾದ್ಯ ಮಾಡಿಕೊಡುವಂತೆ ಕೇಳಿದೆ. ಹೀಗೆ ವಾದ್ಯ ನಮ್ಮನೆಯ ಅತಿಥಿಯಾಯಿತು. ಇದರ ಜತೆಗೆ ಲೋಹದ ವಾದ್ಯ ಭಾಂಗ್‌, ಗಮಲನ್‌ ವಾದ್ಯಗಳನ್ನೂ ಖರೀದಿಸಿದೆ. ವಾದ್ಯಗಳ ಸಂಗ್ರಹ ವಿಸ್ತಾರವಾಯಿತು.

1970–71ರ ಅವಧಿಯಲ್ಲಿ ಇಂಡೋನೇಷ್ಯಾದಲ್ಲಿ ‘ಗಮಲನ್‌’ ವಾದ್ಯ ತಯಾರಿಸುವ ಸ್ಥಳಕ್ಕೇ ಭೇಟಿ ನೀಡಿ, ಕರ್ನಾಟಕ ಶಾಸ್ತ್ರೀಯ ಸಂಗೀತದ ಮೇಳಕರ್ತ ರಾಗ ‘ಶಂಕರಾಭರಣ’ಕ್ಕೆ ಸರಿಹೊಂದುವ ವಾದ್ಯ ಮಾಡಿಸಿಕೊಂಡೆ. ಅಲ್ಲೇ ಕೊಳಲಿನಂತಹ ಬಿದಿರು ವಾದ್ಯ ‘ರಿಂಗ್‌ ಶ್ರೂಟ್‌’ ನುಡಿಸಲು ಕಲಿತಿದ್ದು. ಮುಂದೆ ಅಲ್ಲಿಂದ ಆಸ್ಟ್ರೇಲಿಯಾ, ಇಂಡೋನೇಷ್ಯಾ ಗಡಿ ಭಾಗಕ್ಕೆ ಭೇಟಿ ನೀಡಿದೆ. ಅಲ್ಲಿ ವಿವಿಧ ರೀತಿಯ ಕೊಳಲು, ಡ್ರಮ್ಸ್‌ಗಳು ಕಂಡವು. ಅಲ್ಲಿರುವ ನ್ಯಾಷನಲ್‌ ಆರ್ಟ್‌ ಸ್ಕೂಲ್‌ನಲ್ಲಿ ನಮ್ಮ ಸಂಗೀತವನ್ನು ಅವರಿಗೆ ಕಲಿಸಿ, ಅಲ್ಲಿನ ಸಂಗೀತ ನಾನು ಕಲಿತೆ.

ಮುಂದಿನ ಪಯಣ ಉಗಾಂಡಕ್ಕೆ. ಅಲ್ಲಿನ ಯುನಿರ್ವಸಿಟಿಯಲ್ಲಿ ಫ್ಯೂಷನ್‌ ಸಂಗೀತವನ್ನು ವಾದ್ಯಗಳಲ್ಲಿ ನುಡಿಸಿದೆ. ಅಲ್ಲಿಂದ ಇಥಿಯೋಪಿಯಾಕ್ಕೆ ಬಂದು ಇಂಡಿಯನ್‌ ಹೋಟೆಲ್‌ನಲ್ಲಿ ಉಳಿದುಕೊಂಡೆವು. ಅಲ್ಲಿರುವ ಖ್ಯಾತ ಸಂಗೀತಗಾರರನ್ನೆಲ್ಲ ಭೇಟಿಯಾಗಿ ‘ಸಂಗೀತ ವಿನಿಮಯ’ ಕಾರ್ಯಕ್ರಮ ಮಾಡಿಕೊಂಡೆ. ಅದಾಗಿ ಭೂತಾನ್‌ಗೆ ಬಂದು ತಬಲಾ, ತಂತಿ ವಾದ್ಯಗಳನ್ನು ನೋಡಿದೆ. ಆದರೆ ಅದು ನಮ್ಮ ವಾದ್ಯಗಳ ತರಹ ಇರದೇ ಬೇರೆ ತರವೇ ಇತ್ತು. ಇಷ್ಟೆಲ್ಲ ದೇಶ ಸುತ್ತಿದ ಮೇಲೆ ಭಾರತಕ್ಕೆ ಮರಳಿದೆ.

ವಾದ್ಯಗಳಿಗಾಗಿ ವಿದೇಶ ಸಂಚಾರ
ನನ್ನ ಸಂಗೀತ ವಾದ್ಯಗಳ ಸಂಗ್ರಹದ ಬಯಕೆ ಅಲ್ಲಿಗೇ ನಿಲ್ಲಲಿಲ್ಲ. ವಾದ್ಯಗಳ ಸಂಗ್ರಹಕ್ಕಾಗಿಯೇ ಫಿಲಿಪಿನ್ಸ್‌, ಸಿಂಗಾಪುರ, ಕ್ವಾಲಾಲಂಪುರ, ನಮೀಬಿಯಾ, ಮೆಕ್ಸಿಕೊ ರಾಷ್ಟ್ರಗಳನ್ನು ಸುತ್ತಾಡಿ, ವೈವಿಧ್ಯಮಯ ವಾದ್ಯಗಳನ್ನು ಸಂಗ್ರಹಿಸಿದೆ. ಅಲ್ಲಿಂದ ಭಾರತಕ್ಕೆ ಬಂದು ಮದ್ರಾಸ್‌ ಮ್ಯೂಸಿಕ್‌ ಅಕಾಡೆಮಿಯಲ್ಲಿ ಅಷ್ಟೂ ವಾದ್ಯಗಳ ಸಂಗ್ರಹದ ಪ್ರದರ್ಶನ ಏರ್ಪಡಿಸಿದೆ. ಅಲ್ಲದೆ ಅಂಕ್ಲಂಗ್‌ ನುಡಿಸಾಣಿಕೆಯ ಸ್ಲೈಡ್‌ ಪ್ರದರ್ಶಿಸಿದೆ. ಸಂಗೀತೋತ್ಸವದಲ್ಲಿ ‘ಈ ವಾದ್ಯ ನುಡಿಸಿ ತೋರಿಸಿ’ ಎಂದು ಕೇಳಿದರು. ಅಂಕ್ಲಂಗ್‌ನಲ್ಲಿ ‘ಕಾಂಬೋಧಿ, ಭೈರವಿ ರಾಗ ನುಡಿಸುವುದು ಕಷ್ಟ. ಆದರೆ ಕಲ್ಯಾಣಿ, ಹಿಂದೂಸ್ತಾನಿ ಕಾಫಿ ರಾಗ, ಭಜನ್ಸ್‌, ಜಾನಪದ ಸಂಗೀತ, ರಾಗತಾನ ಪಲ್ಲವಿಗಳನ್ನು ಚೆನ್ನಾಗಿ ನುಡಿಸಬಹುದು.

ಹೀಗೆ ಅನುಸೂಯ ಕುಲಕರ್ಣಿ ಅವರು ದೇಶ ವಿದೇಶಗಳ ಸಂಗೀತ ವಾದ್ಯಗಳ ಪರಿಚಯ ಮತ್ತು ಅವುಗಳನ್ನು ನುಡಿಸಲು ಕಲಿತ ಕಥೆ ಹೇಳಿ ಮುಗಿಸಿದಾಗ, ‘ಸಂಗೀತದೊಂದಿಗೆ ಪ್ರಪಂಚ ಪರ್ಯಟನೆ’ ಮಾಡಿದಂತಾಗಿತ್ತು. ಐದು ದಶಕಗಳಲ್ಲಿ ವಿಶ್ವದಾದ್ಯಂತ ಸಂಗೀತ ಎಂಬ ಸಂಗಾತಿಯೊಂದಿಗೆ ಸುತ್ತಾಡಿ, ವಾದ್ಯಗಳನ್ನು ಜತನದಿಂದ ರಕ್ಷಿಸಿರುವ ಅನುಸೂಯ ಒಬ್ಬ ಅಪರೂಪದ ಕಲಾವಿದೆ.

ವಿವಿಧ ದೇಶಗಳ ಸಂಗೀತ ಪರಿಕರಗಳೊಂದಿಗೆ ಅನಸೂಯ ಕುಲಕರ್ಣಿ ಹಾಗೂ ಪತಿ ನಾರಾಯಣ ಕುಲಕರ್ಣಿ

ಚಿತ್ರಗಳು: ಅನುಸೂಯ ಕುಲಕರ್ಣಿ ಅವರ ಸಂಗ್ರಹದಿಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.