ADVERTISEMENT

ಸಂಗೀತದ ಮಹಾ ಮಹೋಪಾಧ್ಯಾಯ!

ಉಮಾ ಅನಂತ್
Published 11 ಅಕ್ಟೋಬರ್ 2025, 23:53 IST
Last Updated 11 ಅಕ್ಟೋಬರ್ 2025, 23:53 IST
ಪಂ. ವಿ.ಎಂ. ನಾಗರಾಜ್
ಪಂ. ವಿ.ಎಂ. ನಾಗರಾಜ್   

ಹಿಂದೂಸ್ತಾನಿ ಗಾಯನವಲ್ಲದೆ ತಬಲಾ, ಕೊಳಲು ಗಿಟಾರ್, ಮ್ಯಾಂಡೊಲಿನ್‌ನಂತಹ ವಾದ್ಯಗಳ ನುಡಿಸಾಣಿಕೆಯಲ್ಲೂ ಪ್ರಾವೀಣ್ಯರಾಗಿರುವ ಪಂಡಿತ ವಿ.ಎಂ. ನಾಗರಾಜ್, ಸಂಗೀತದ ಅಪರೂಪದ ಬಿರುದು ‘ಮಹಾಮಹೋಪಾಧ್ಯಾಯ’ ತನ್ನ ಮುಡಿಗೇರಿಸಿಕೊಂಡಿದ್ದಾರೆ....

ಸಂಗೀತದಲ್ಲಿ ‘ಮಹಾಮಹೋಪಾಧ್ಯಾಯ’ ಎಂಬುದು ಬಹು ದೊಡ್ಡ ಬಿರುದು. ‘ಮಹಾ ವಿದ್ವಾಂಸ’, ‘ಮಹಾ ಪಂಡಿತ’, ‘ಅತ್ಯಂತ ಶ್ರೇಷ್ಠ ಶಿಕ್ಷಕ’ ಎಂಬುದು ಇದರ ಅರ್ಥ. ಹಿಂದೂಸ್ತಾನಿ ಸಂಗೀತದಲ್ಲಿ ಪಂಡಿತ ಆರ್‌.ವಿ. ಶೇಷಾದ್ರಿ ಗವಾಯಿಗಳು ಸ್ವತಃ ಉತ್ತಮ ಗಾಯಕರಾಗಿ, ವಾದಕರಾಗಿ, ಬೋಧಕರಾಗಿ, ಸಂಘಟಕರಾಗಿದ್ದಲ್ಲದೆ ನೂರಾರು ಶಿಷ್ಯಂದಿರನ್ನು ತಯಾರು ಮಾಡಿ ‘ಮಹಾಮಹೋಪಾಧ್ಯಾಯ’ ಬಿರುದು ಪಡೆದವರು. ಈ ಬಿರುದು ಒಲಿಯಬೇಕಾದರೆ ಅಸಾಧಾರಣ ಸಾಧನೆ, ಪರಿಶ್ರಮ ಬೇಕು. ಗವಾಯಿ ಅವರದೇ ಗರಡಿಯಲ್ಲಿ ಸುಮಾರು ಎರಡೂವರೆ ದಶಕಗಳ ಕಾಲ ಪಳಗಿ, ಮಹತ್ತರ ಸಾಧನೆ ಮಾಡಿ ‘ಮಹಾಮಹೋಪಾಧ್ಯಾಯ’ ಬಿರುದನ್ನು ಈಗ ತನ್ನದಾಗಿಸಿಕೊಂಡವರು ಹಿಂದೂಸ್ತಾನಿ ವಿದ್ವಾಂಸ, ಬೆಂಗಳೂರಿನ ಪಂಡಿತ ವಿ.ಎಂ. ನಾಗರಾಜ್.

ಮುಂಬಯಿಯ ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ ನೀಡುವ ‘ಮಹಾಮಹೋಪಾಧ್ಯಾಯ’ ಬಿರುದು, ಅಗಣಿತ ಗುಣವನ್ನು ಸಂಗೀತದಲ್ಲಿ ನಿರೀಕ್ಷಿಸುತ್ತದೆ. ತಮ್ಮ ಗುರುಗಳಂತೆಯೇ ಪಂಡಿತ ವಿ.ಎಂ. ನಾಗರಾಜ್ ಅವರೂ ಗಾಯನ, ವಾದನ, ಬೋಧನೆ, ಸಂಗೀತ ಕೃತಿ ರಚನೆ, ತಾಳಗಳ ರಚನೆ, ಸಂಗೀತ ಬರವಣಿಗೆ, ಸಂಗೀತ ಪರೀಕ್ಷಾ ನಿರ್ವಹಣೆಯಲ್ಲಿ ತೊಡಗಿ ಸುಮಾರು ಏಳು ದಶಕಗಳು ಸಂಗೀತಕ್ಕಾಗಿ ಶಕ್ತಿಮೀರಿ ಶ್ರಮಿಸಿದ್ದಾರೆ. ಹಿಂದೂಸ್ತಾನಿ ಸಂಗೀತದ ಗ್ವಾಲಿಯರ್‌ ಘರಾಣೆಯಲ್ಲಿ ಹಾಡುವ ಪಂಡಿತ ನಾಗರಾಜ್‌ ಗಾಯನ ಮಾತ್ರವಲ್ಲದೆ ತಬಲಾ, ಕೊಳಲು, ಗಿಟಾರ್, ಹಾರ್ಮೋನಿಯಂ ಮುಂತಾದ ವಾದ್ಯಗಳನ್ನು ನುಡಿಸುವುದರಲ್ಲೂ ಪರಿಣತರು.

ADVERTISEMENT

ಕರ್ನಾಟಕ ಸರ್ಕಾರ ನಡೆಸುವ ಸಂಗೀತ ಬೋರ್ಡ್‌ ಪರೀಕ್ಷಾ ಮಂಡಳಿಯ ಅಧ್ಯಕ್ಷರಾಗಿ, ಅನೇಕ ಸಂಗೀತ ಪರೀಕ್ಷೆ ಹಾಗೂ ಸ್ಪರ್ಧೆಗಳ ನಿರ್ಣಾಯಕರಾಗಿ ಸಂಗೀತಕ್ಕಾಗಿ ಅವಿರತವಾಗಿ ದುಡಿದವರು. ಪುರಂದರದಾಸರು, ಕನಕದಾಸರು, ಹಿಂದಿ ಭಜನ್‌, ವಚನಗಳು, ಕನ್ನಡ ಗೀತೆಗಳಿಗೆ ರಾಗ ಸಂಯೋಜನೆ ಮಾಡಿ ನಿರಂತರವಾಗಿ ಸಂಗೀತ ಕೈಂಕರ್ಯ ಮಾಡುತ್ತಾ ಬಂದವರು. ಅನೇಕ ಪುಸ್ತಕ, ಸೀಡಿಗಳನ್ನು ಬಿಡುಗಡೆ ಮಾಡಿ ಸಂಗೀತವನ್ನು ಮುಂದಿನ ಪೀಳಿಗೆಗೂ ತಲುಪುವಂತೆ ಜತನವಾಗಿ ಕಾಪಿಟ್ಟವರು ಈ ವಿದ್ವಾಂಸರು.

ಅಖಿಲ ಭಾರತ ಮಟ್ಟದಲ್ಲಿ ಮುಂಬಯಿಯ ಗಂಧರ್ವ ಮಹಾವಿದ್ಯಾಲಯ ವರ್ಷಕ್ಕೆರಡು ಬಾರಿ ಸಂಗೀತದ ವಿವಿಧ ಹಂತಗಳ ಪರೀಕ್ಷೆಗಳನ್ನು ನಡೆಸುತ್ತಾ ಬರುತ್ತಿದೆ. ದೇಶ ಹಾಗೂ ವಿದೇಶಗಳ ಒಟ್ಟು 800 ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆಯುತ್ತದೆ. ಬೆಂಗಳೂರಿನಲ್ಲಿ ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯದ ಸಮಸ್ತ ಹೊಣೆ ಹೊತ್ತು ಸಾವಿರಾರು ಮಕ್ಕಳಿಗೆ ಸಂಗೀತ ಪರೀಕ್ಷೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದವರು ಇವರು.

ಎಲ್ಲ ಸಾಧಕರ ಬದುಕಿನಲ್ಲೂ ಅವಿಸ್ಮರಣೀಯ ಘಟನೆಗಳಿರುತ್ತವೆ. ಪಂಡಿತ ನಾಗರಾಜ್ ಅವರ ಬದುಕಿನ ಮರೆಯಲಾಗದ ಕ್ಷಣವನ್ನು ನೆನಪಿಸುವಂತೆ ಕೇಳಿದಾಗ ಅವರು ಹೇಳಿದ್ದಿಷ್ಟು. ‘ಅದು ನಾನು ಹೈಸ್ಕೂಲ್ ಓದುತ್ತಿದ್ದ ದಿನಗಳು. ಅಂದರೆ 1958ನೇ ಇಸವಿ. ಬೆಂಗಳೂರಿನ ಸೈಂಟ್‌ ಜೋಸೆಫ್‌ ಸ್ಕೂಲ್‌ನಲ್ಲಿ ಓದುತ್ತಿದೆ. ಆಗ ನಡೆಸಿದ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿದೆ. ನನಗೆ ಪ್ರಥಮ ಬಹುಮಾನವೂ ಬಂತು. ಇದನ್ನು ಸರ್‌.ಎಂ. ವಿಶ್ವೇಶ್ವರಯ್ಯ ಅವರಿಂದ ಪಡೆದೆ. ಅದೂ ಕುವೆಂಪು ಅವರ ಸಮ್ಮುಖದಲ್ಲಿ. ಇದು ನನ್ನ ಸೌಭಾಗ್ಯ ಎಂದೇ ಭಾವಿಸುತ್ತೇನೆ’. ಹಳೆಯ ಘಟನೆಯನ್ನು ಮೆಲುಕು ಹಾಕಿದ ಪಂಡಿತರ ಮುಖದಲ್ಲಿ ಸಂತೃಪ್ತ ಭಾವ.

ಸಂಗೀತ ಬರವಣಿಗೆ

ಎಷ್ಟೋ ಸಂದರ್ಭದಲ್ಲಿ ಚೆನ್ನಾಗಿ ಹಾಡುವ ಗಾಯಕ, ಬರವಣಿಗೆಯಲ್ಲಿ ಯಶ ಸಾಧಿಸಲು ಆಗದು. ಆದರೆ ಪಂಡಿತ ನಾಗರಾಜ್, ಗಾಯನ, ವಾದನ, ಬೋಧನೆ ಜೊತೆಗೆ ಬರವಣಿಗೆಯಲ್ಲೂ ನಿಸ್ಸೀಮರು. ಪಂಡಿತ ಶೇಷಾದ್ರಿ ಗವಾಯಿಗಳು ‘ಗಾಯನ ಗಂಗಾ’ ಎಂಬ ಸಂಗೀತ ಮ್ಯಾಗಸಿನ್‌ ಹೊರತರುತ್ತಿದ್ದರು. ಸುಮಾರು 50 ವರ್ಷಗಳು ಅಚ್ಚುಕಟ್ಟಾಗಿ ಹೊರಬಂದ ಈ ಮ್ಯಾಗಸಿನ್‌ಗೆ ವಿ.ಎಂ. ನಾಗರಾಜ್ ಅವರು, ಸುಮಾರು 25 ವರ್ಷಗಳು ನಿರಂತರವಾಗಿ ಸಂಗೀತ ಲೇಖನಗಳನ್ನು ಬರೆದಿದ್ದಾರೆ.

ಸಂಗೀತ ಕೃತಿ ರಚನೆಯಲ್ಲೂ ತೊಡಗಿಕೊಂಡಿರುವ ಇವರು, ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿಯೂ ಅನೇಕ ಭಕ್ತಿಗೀತೆಗಳನ್ನು ರಚಿಸಿದ್ದಾರೆ. ಅಲ್ಲದೆ ಹತ್ತು ತಾಳಗಳನ್ನೂ ರಚಿಸಿದ್ದಾರೆ. ಹಿಂದೂಸ್ತಾನಿ ಶೈಲಿಯ 12 ಸ್ವರಗಳ ಮೇಲೆ ಒಂದು ಸರ್‌ಗಮ್‌ ಗೀತೆ ಮತ್ತು ತರಾನ ರಚನೆ ಮಾಡಿದ್ದಾರೆ. ಸಂಗೀತದ ‘ಥಾಟ್‌’ ರಾಗಗಳ ಮೇಲೆ ‘ಥಾಟ್‌ ಮಾಲಿಕಾ’ ಎಂದು ಹಾಡುಗಳನ್ನು ರಚಿಸಿದ್ದಾರೆ. ಭೈರವ್‌, ಭೈರವಿ, ಕಾಫಿ, ಅಸಾವರಿ, ತೋಡಿ.. ಹೀಗೆ ಎಲ್ಲ ಥಾಟ್‌ಗಳನ್ನು ತೆಗೆದುಕೊಂಡು ಇದರ ಮೇಲೆ ಹೊಸ ಕೃತಿ ರಚನೆ ಮಾಡಿದ್ದಾರೆ. ಅಲ್ಲದೆ ಪುರಂದರದಾಸ, ಕನಕದಾಸರ ಕೃತಿಗಳಿಗೆ, ಹಿಂದಿ ಭಜನ್‌, ವಚನಗಳು, ಕನ್ನಡ ಗೀತೆಗಳಿಗೆ ರಾಗ ಸಂಯೋಜನೆ ಮಾಡಿರುವುದು ಇವರ ಸಾಧನೆಗೆ ಸಾಕ್ಷಿ.

ಬೆಂಗಳೂರಿನ ಕೆಂಗೇರಿ ಸಮೀಪ ನಾದವಾಹಿನಿ ಶ್ರೀ ದತ್ತ ಸಂಗೀತ ವಿದ್ಯಾನಿಕೇತನ ಸಂಗೀತ ಸಂಸ್ಥೆ ನಡೆಸುತ್ತಿರುವ ವಿ.ಎಂ.ಎನ್. ತಮ್ಮ ಎಂಬತ್ತರ ಇಳಿವಯಸ್ಸಿನಲ್ಲೂ ಸಂಗೀತ ಪಾಠ ಹೇಳಿಕೊಡುತ್ತಿದ್ದಾರೆ. ಬಡಮಕ್ಕಳ ಪರೀಕ್ಷಾ ಶುಲ್ಕವನ್ನೂ ಭರಿಸಿ ತಮ್ಮ ಸಂಗೀತಾಭಿಮಾನ ಮೆರೆದಿರುವುದು ಅನುಕರಣೀಯ ಆದರ್ಶವೂ ಹೌದು. ತಮ್ಮ ಸಂಸ್ಥೆಯಲ್ಲಿ ಗಾಯನ, ತಬಲಾ, ಕೊಳಲು, ಮ್ಯಾಂಡೊಲಿನ್‌, ಹಾರ್ಮೋನಿಯಂ, ವಯೊಲಿನ್‌, ಗಿಟಾರ್‌ ಮುಂತಾದ ವಾದ್ಯಗಳನ್ನು ಸಹ ಮಕ್ಕಳಿಗೆ
ಕಲಿಸುತ್ತಿದ್ದಾರೆ.

ಪ್ರಶಸ್ತಿಗಳು

ಹಿಂದೂಸ್ತಾನಿ ಸಂಗೀತ ಸುಧರ್ಣವ, ಸಂಗೀತ ಕಲಾರವಿಂದ, ಸಂಗೀತ ಕೇಸರಿ, ಸ್ವರಕಲಾ, ಸವಿಗಾನ ರತ್ನ, ಕರ್ನಾಟಕ ಕಲಾಶ್ರೀ, ಕೆಂಪೇಗೌಡ ಪ್ರಶಸ್ತಿ, ಸಂಗೀತ ಸಾಧಕ ಮುಂತಾದ ಪ್ರಶಸ್ತಿಗಳನ್ನು ಮುಡಿಗೇರಿಸಿರುವ ಅವರಿಗೆ ಸಂಗೀತದ ಅತ್ಯುನ್ನತ ಗೌರವ ‘ಮಹಾಮಹೋಪಾಧ್ಯಾಯ’ ಲಭಿಸಿರುವುದು ಸಂಗೀತ ಪ್ರಿಯರಿಗೆ ಹೆಮ್ಮೆಯ ವಿಷಯ.

ಪಂ. ಪುಟ್ಟರಾಜ ಗವಾಯಿ ಹಾಗೂ ಪಂ. ಶೇಷಾದ್ರಿ ಗವಾಯಿ ಅವರೊಂದಿಗೆ
ಪಂ. ವಿ.ಎಂ. ನಾಗರಾಜ್
ಪಂ. ವಿ.ಎಂ. ನಾಗರಾಜ್ 4

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.