ಮೂಡಣದಲಿ ನೇಸರ ಉದಯಿಸುವ ಕಾತುರದಲ್ಲಿದ್ದ. ಹೊಸಪೇಟೆಯ ಆಕಾಶವಾಣಿ ಕೇಂದ್ರದ ಸಮೀಪದ ಈಶ್ವರ ನಗರದಲ್ಲಿ ವಾಕಿಂಗ್ ಹೊರಟಿದ್ದೆ. ಈ ಬೀದಿಯಲ್ಲಿ ಬರೀ ಮರಗಿಡಗಳೇ. ಆ ನೀರವತೆ, ಶುದ್ಧಗಾಳಿ, ತಂಗಾಳಿ, ಹಕ್ಕಿಗಳ ಇಂಚರವನ್ನು ಅನುಭವಿಸುತ್ತಾ ಹೆಜ್ಜೆ ಹಾಕುತ್ತಿದ್ದೆ. ಇದ್ದಕ್ಕಿದ್ದಂತೆ ಮನೆಯೊಂದರಿಂದ ಕೊಳಲಿನ ನಿನಾದ ತೇಲಿ ಬಂತು. ಅದಕ್ಕೆ ಮೋಹಿತನಾಗಿ, ವಾದನ ಕೇಳಿ ಬರುತ್ತಿವತ್ತ ಅಪ್ರಯತ್ನಪೂರ್ವಕವಾಗಿ ಹೆಜ್ಜೆ ಹಾಕಿದೆ. ನಾಲ್ಕು ಹೆಜ್ಜೆ ಹೋಗಿ ಆ ಮನೆಯ ಮುಂದೆ ನಿಲ್ಲುವಷ್ಟರಲ್ಲಿ ವಾದನ ನನ್ನನ್ನೂ ಪೂರ್ಣವಾಗಿ ಆವರಿಸಿ ಮೈಮರೆಸಿತು. ಕೆಲ ಹೊತ್ತಿನ ನಂತರ ಕೂತೂಹಲ ಹೆಚ್ಚಾಗಿ ದೃಷ್ಟಿ ಕಿರಿದಾಗಿಸಿ ಅರೆ ತೆರೆದಿದ್ದ ಬಾಗಿಲಿನಿಂದ ಒಳ ನೋಡಿದರೆ ಎದುರಿನ ಕುರ್ಚಿಗಳಲ್ಲಿ ಕುಳಿತಿದ್ದ ದಂಪತಿ ತಲೆದೂಗುತ್ತಾ ವಾದನ ಕೇಳುವುದರಲ್ಲೇ ತಲ್ಲೀನರಾಗಿದ್ದರು. ಮನಸ್ಸು ತಡೆಯಲಿಲ್ಲ. ಕದ ತಟ್ಟಿದೆ. ಪ್ರತ್ಯುತ್ತರ ಬರಲಿಲ್ಲ. ಕೊನೆಗೆ ಧೈರ್ಯ ಮಾಡಿ ಕದ ತಳ್ಳಿ ಬಿಟ್ಟೆ! ಆಗ ಮನೆ ಒಡತಿ ಎದ್ದು ಬಂದರು.
‘ಅಮ್ಮ ಈ ಕೊಳಲು ನುಡಿಸುತ್ತಿರುವವರು ಯಾರು? ಅವರನ್ನು ಕಾಣಬಹುದಾ?’ ಎಂದೆ.
‘ಅದು ಪಂಡಿತ್ ಪನ್ನಾಲಾಲ್ ಘೋಷ್‌ರವರದ್ದು. ಗ್ರಾಮಫೋನ್‌ನಲ್ಲಿ ಪ್ಲೇ ಮಾಡುತ್ತಿರೋದು’ ಅಂದರು ಜಯಲಕ್ಷ್ಮಿ.
ಜಯಲಕ್ಷ್ಮಿ, ಶ್ರೀನಿವಾಸ್ ರಾವ್ ಅವರ ಮನೆಯಷ್ಟೇ ಸಂಗೀತಮಯ ಆಗಿರುವುದಿಲ್ಲ. ಇವರು ಹಾಕುವ ಪ್ರತಿ ಹಾಡುಗಳು, ಸಂಗೀತ ಇಡೀ ಬೀದಿಯನ್ನೆಲ್ಲ ತುಂಬುತ್ತವೆ. ಸಂಗೀತ ಆಲಿಸುವುದರೊಂದಿಗೆ ಈ ಬೀದಿಯ ದಿನದ ಆರಂಭವಾಗುತ್ತದೆ, ಹಾಗೆಯೇ ಮುಕ್ತಾಯ ಕೂಡ. ಅಂದಹಾಗೆ ಇವರು ಪ್ಲೇ ಮಾಡುವ ಹಾಡುಗಳು, ಸಂಗೀತ ಇಂದು ನಿನ್ನೆಯವಲ್ಲ. ಅವು ಕೇಳುಗರನ್ನು ಆರೇಳು ದಶಕಗಳ ಹಿಂದಕ್ಕೆ ಕರೆದೊಯ್ದು ಮಂತ್ರಮುಗ್ಧಗೊಳಿಸುವಂಥವು. ಹಾಗಾಗಿ ಇಲ್ಲಿಯವರೆಲ್ಲ ಈ ಸಂಗೀತವನ್ನು ಒಂದಿಷ್ಟೂ ಅಲಕ್ಷಿಸದೆ ಸದಾ ಕಾದಿದ್ದು, ಅಪೇಕ್ಷೆಪಟ್ಟು ಕೇಳುತ್ತಾರೆ. ಅಚಾನಕ್ ಆಗಿ ಕೆಲವೊಮ್ಮೆ ಇವರು ಸೌಂಡ್ ಕಮ್ಮಿ ಇಟ್ಟರೆ ದಾರಿಹೋಕರು, ಮನೆಯ ಆಜುಬಾಜಿನವರು ‘ತಮಗೂ ಒಂಚೂರು ಕೇಳಿಸುವಂತೆ ಸೌಂಡ್ ಇಡಿ’ ಎಂದು ಪ್ರೀತಿಪೂರ್ವಕವಾಗಿ ಆಗ್ರಹಿಸುತ್ತಾರೆ. ಹೀಗಾಗಿ ಇವರಿರುವ ಮನೆ, ಬೀದಿ ಸಂಗೀತಮಯವಾಗಿದೆ. ಸ್ಥಳೀಯರಲ್ಲಿ ‘ಜಯಲಕ್ಷ್ಮಿ ಶ್ರೀನಿವಾಸ್ ರಾವ್ ದಂಪತಿ ಮನೆ ಎಲ್ಲಿ?’ ಎಂದು ಕೇಳಿದರೆ ತಕ್ಷಣಕ್ಕೆ ಗೊತ್ತಾಗುವುದಿಲ್ಲ. ಅದೇ ‘ಒಳ್ಳೊಳ್ಳೆ ಹಳೆಯ ಹಾಡುಗಳು, ಕ್ಲಾಸಿಕಲ್ ಮ್ಯೂಸಿಕ್ ಸದಾ ಮನೆಯಲ್ಲಿ ಹಾಕುತ್ತಾರಲ್ಲ, ಅವರ ಮನೆ..?’ ಅಂದರೆ ಥಟ್ ಅಂಥ ತೋರಿಸುತ್ತಾರೆ.
ಜಯಲಕ್ಷ್ಮಿ ಅವರಿಗೆ ಚಿಕ್ಕಂದಿನಿಂದಲೂ ಸಂಗೀತದ ಮೇಲೆ ವಿಪರೀತ ಮೋಹ. ಇಂಥ ಅಭಿರುಚಿ ತಾಯಿಯಿಂದ ಬಂದ ಬಳುವಳಿ. ಬಡತನದ ಕಾರಣಕ್ಕೆ ಬಾಲ್ಯದಲ್ಲಿ ಕೇವಲ ಸಿನಿಮಾ ನೋಡುತ್ತಾ, ರೇಡಿಯೊದಲ್ಲಿ ಹಾಡು, ಸಂಗೀತ ಕೇಳುತ್ತಾ ತಮ್ಮ ಆಸೆ, ಆಸಕ್ತಿಯನ್ನು ತಣಿಸಿಕೊಳ್ಳುತ್ತಿದ್ದರು. ಮುಂದೆ ಬ್ಯಾಂಕ್ ಉದ್ಯೋಗಿ ಆದ ನಂತರ ಬರುತ್ತಿದ್ದ ಸಂಬಳ ಭತ್ಯೆ ಬೋನಸ್‌ಗಳಲ್ಲಿ ಗರಿಷ್ಠ ಮೊತ್ತವನ್ನು ಇವುಗಳ ಖರೀದಿಗೆ ವ್ಯಯಿಸಿದರು.
‘ನಾನು ದುಬಾರಿ ಬಟ್ಟೆ-ಬರೆ, ಅಲಂಕಾರ, ಬಂಗಾರ.. ಇದಕ್ಕೆಲ್ಲ ದುಡ್ಡು ಇಡಲಿಲ್ಲ. ಬದಲಿಗೆ ಹತ್ತಾರು ಸುಪ್ರಸಿದ್ಧ ಗಾಯಕರು ಹಾಡಿದ, ವಾದಕರು ನುಡಿಸಿದ ಧ್ವನಿಸುರುಳಿಗಳಿಗೆ, ಟೇಪ್‌ರೆಕಾರ್ಡರ್, ಸೌಂಡ್ ಬಾಕ್ಸ್‌ಗಳಿಗೆ ಖರ್ಚು ಮಾಡಿದೆ. ನನ್ನವರಿಗೆ ನನ್ನಂತೆ ಸಂಗೀತದಲ್ಲಿ ಆಸಕ್ತಿ. ಅದು ಒಳ್ಳೆಯದೇ ಆಯಿತು. ಮಂಗಳೂರಿನ ಸೆಕೆಂಡ್ ಹ್ಯಾಂಡ್ ಶೋ ರೂಂನಿಂದ ತರೇಹವಾರಿ ಸೌಂಡ್ ಬಾಕ್ಸ್‌ಗಳನ್ನು ಖರೀದಿಸಿ ತರುತ್ತಿದ್ದೆವು’ ಎನ್ನುತ್ತಾರೆ ಜಯಲಕ್ಷ್ಮಿ.
ಇವರು ತಮ್ಮ ಮೊದಲ ಸಂಬಳದಲ್ಲಿ ಖರೀದಿಸಿದ್ದು ಪಂಡಿತ್ ಭೀಮಸೇನ್ ಜೋಶಿಯವರ (ದಾಸವಾಣಿಯನ್ನು!.) ಮದುವೆ ವೇಳೆ ಇವರ ಅಣ್ಣ ಉಡುಗೊರೆ ಆಗಿ ಕೊಟ್ಟಿದ್ದು ಫಿಲಿಪ್ಸ್ ರೇಡಿಯೊವನ್ನು!. 800 ರೂಪಾಯಿಗಳಲ್ಲಿ ಖರೀದಿಸಿದ ಗ್ರಾಮಫೋನ್ ಅನ್ನು ಜಯಲಕ್ಷ್ಮಿ ಅವರ ತಂದೆ ಅಳಿಯನಿಗೆ ಉಡುಗೊರೆ ಆಗಿ ಕೊಟ್ಟಿದ್ದರು!. ಇವರ ಹುಟ್ಟುಹಬ್ಬ ಸೇರಿದಂತೆ ಶುಭದಿನಕ್ಕೆಲ್ಲ ಬಂಧುಮಿತ್ರರು ಬಹುತೇಕವಾಗಿ ಉಡುಗೊರೆ ರೂಪದಲ್ಲಿ ಕೊಟ್ಟಿದ್ದು ಸಂಗೀತದ ಸಿಡಿ, ಕ್ಯಾಸೆಟ್‌ಗಳನ್ನೇ. ಇನ್ನು ಮುಂಬೈನಲ್ಲಿದ್ದ ಶ್ರೀನಿವಾಸ್ ರಾವ್ ಅವರ ಚಿಕ್ಕಪ್ಪ ತಮ್ಮ ಕೊನೆಗಾಲದಲ್ಲಿ ‘ಗ್ರಾಮಫೋನ್ ಪ್ಲೇಟ್ಸ್, ಸಂಗೀತದ ಧ್ವನಿಸುರುಳಿಗಳನ್ನು ನನ್ನ ಕಾಲವಾದ ನಂತರ ಬಿಸಾಡಬೇಡಿ. ಮಾರಲೂ ಬೇಡಿ. ಜಯಾಗೆ ಗಿಫ್ಟ್ ಕೊಟ್ಟುಬಿಡಿ’ ಎಂದು ಮನೆಯವರಿಗೆ ತಿಳಿಸಿದ್ದರು. ಅದರಂತೆ ಅವರ ಮರಣದ ನಂತರ ಇವರು ಮುಂಬೈಗೆ ಹೋಗಿ ಅವುಗಳನ್ನೆಲ್ಲ ನೀಟಾಗಿ ಪ್ಯಾಕ್ ಮಾಡಿಕೊಂಡು ಸುರಕ್ಷಿತವಾಗಿ ತಂದಿದ್ದನ್ನು ಮೆಲುಕು ಹಾಕಿದರು.
ಕನ್ನಡ, ಹಿಂದಿ, ತೆಲುಗು, ಮರಾಠಿ ಭಾಷೆಯ ಭಾವಗೀತೆ, ಭಕ್ತಿಗೀತೆ, ರೋಮ್ಯಾಂಟಿಕ್, ಕ್ಲಾಸಿಕಲ್, ಇನ್ಸ್ಟ್ರುಮೆಂಟಲ್, ವೆಸ್ಟ್ರನ್ ಮ್ಯೂಸಿಕ್, ಅಭಂಗಗಳು, ಹರಿಕತೆಗಳು.. ಇವೆಲ್ಲ ಇವರ ಸಂಗ್ರಹದಲ್ಲಿವೆ. ಗ್ರಾಮಫೋನ್ ತಟ್ಟೆಗಳು ಎಲ್.ಪಿ (ಲಾಂಗ್ ಪ್ಲೇಸ್) - 500, ಶಾರ್ಟ್ ಪ್ಲೇಸ್ - 200, ಕ್ಯಾಸೆಟ್‌ಗಳು- 300 ಸಂಖ್ಯೆಯಲ್ಲಿವೆ. ಅವುಗಳಲ್ಲಿ ತುಂಬಾ ಹಳೆಯ ಮತ್ತು ಇತ್ತೀಚಿನ ಸುಪ್ರಸಿದ್ಧ ಗಾಯಕರು, ವಾದಕರಾದ ಉಸ್ತಾದ್ ಅಬ್ದುಲ್ ಅಲಿ ಜಾಫರ್ ಖಾನ್, ಡಿ.ವಿ. ಪಲೋಸ್ಕರ್, ಸಿ.ಆರ್. ವ್ಯಾಸ್, ಉಸ್ತಾದ್ ವಿಲಾಯತ್ ಖಾನ್, ಹರಿಪ್ರಸಾದ್ ಚೌರಾಶಿಯಾ, ಕುನ್ನಕುಡಿ ವೈದ್ಯನಾಥನ್, ಕುಮಾರ ಗಂಧರ್ವ, ಗಂಗೂಬಾಯಿ ಹಾನಗಲ್, ಎಂ.ಎಸ್.ಸುಬ್ಬಲಕ್ಷ್ಮಿ ಮುಂತಾದವರ ಕಲೆಕ್ಷನ್ಸ್ ಇದ್ದು, ಇವೆಲ್ಲ ಒರಿಜಿನಲ್ ಎನ್ನುವುದು ವಿಶೇಷ. ‘1974 ರಲ್ಲಿ ಲಂಡನ್‌ನಲ್ಲಿ ಲತಾ ಮಂಗೇಶ್ವರ್ ನಡೆಸಿಕೊಟ್ಟ ಸಂಗೀತ ಕಛೇರಿಯ ನಾಲ್ಕು ಗ್ರಾಮಫೋನ್ ಪ್ಲೇಟ್ಸ್ ನಮ್ಮ ಅಪರೂಪದ, ಅತ್ಯಮೂಲ್ಯ ಸಂಗ್ರಹಗಳಲ್ಲಿ ಒಂದು..’ ಎನ್ನುತ್ತಾರೆ ಶ್ರೀನಿವಾಸ್‌ರಾವ್. ಇವುಗಳಿಗೆ ಇಂದು ಲಕ್ಷಾಂತರ ಬೆಲೆ ಇದೆ. ಇವರು ತಮ್ಮ ವೃತ್ತಿ ಬದುಕಿನಲ್ಲಿ ಹತ್ತಾರು ಊರುಗಳಿಗೆ ಅಲೆದರೂ ಇವುಗಳನ್ನು ಅತ್ಯಂತ ಕಾಳಜಿ ಮಾಡಿಕೊಂಡು ಬಂದಿದ್ದಾರೆ.
ತುಂಬಾ ಹಳೆಯದಾದ ಸಂಗೀತ ಪ್ಲೇ ಮಾಡುವ ಸಾಧನಗಳು ಇಂದಿಗೂ ಸುಸ್ಥಿತಿಯಲ್ಲಿರುವುದು ವಿಶೇಷ. ಕೇನ್‌ವುಡ್ ಕಂಪನಿಯ ಎಂಪಿ ಪ್ಲೈಯರ್, ರಾಯಕ್ ಸಿಸ್ಟಮ್ ಟೇಪ್ ರೆಕಾರ್ಡರ್, ಟು ಇನ್ ಒನ್, ತ್ರಿ ಇನ್ ಒನ್, ಒಟ್ಟಿಗೆ 06 ಸಿ.ಡಿ ಹಾಕಿ ಪ್ಲೇ ಮಾಡುವ ಸಿಡಿ ಪ್ಲೇಯರ್, ಗ್ರಾಫಿಕ್ ಎನ್ ಕ್ಯುಲೇಸರ್... ಇವುಗಳನ್ನೆಲ್ಲಾ ಶ್ರೀನಿವಾಸ್ ರಾವ್ ಆಗ್ಗಾಗ್ಗೆ ಸ್ವಚ್ಛ ಮಾಡಿ ಸುಸ್ಥಿತಿಯಲ್ಲಿಡುತ್ತಾರೆ. ಕೈಕೊಟ್ಟರೆ ರಿಪೇರಿ ಮಾಡುತ್ತಾರೆ. ‘ಇಂದಿಗೂ ಇವೆಲ್ಲ ಒಂದಿಷ್ಟೂ ರಸಭಂಗವಾದಂತೆ ಕಾರ್ಯನಿರ್ವಹಿಸುತ್ತಿದ್ದು, ಓಣಿಯಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ವೇಳೆ ಅಕ್ಕಪಕ್ಕದವರು, ಪರಿಚಯಸ್ಥರು ಸಂಗೀತದ ಧ್ವನಿಸುರುಳಿಗಳನ್ನು ಕೇಳಿ ಒಯ್ಯುತ್ತಾರೆ. ಅವರ ಅಭಿರುಚಿ ಸಂತಸ ತಂದಿದೆ..’ ಎನ್ನುತ್ತಾರೆ ಜಯಲಕ್ಷ್ಮಿ.
ಇಲ್ಲಿ ನಿತ್ಯ ಸಂಗೀತ ಕೇಳುವುದರಿಂದ ತಮ್ಮೊಳಗೆ ಮತ್ತು ಪರಿಸರದಲ್ಲಿ ಗುಣಾತ್ಮಕ ಬದಲಾವಣೆ ಆಗುತ್ತಿರುವುದನ್ನು ಇವರು ಗುರುತಿಸಿದ್ದಾರೆ. ವಯೋಸಹಜ ಕಾಯಿಲೆಗಳು ಉಲ್ಭಣವಾಗದೇ ನಿಯಂತ್ರಣದಲ್ಲಿರುವುದು ಇವರ ಅನುಭವಕ್ಕೆ ಬಂದಿದೆ. ಇಳಿವಯಸ್ಸಿನಲ್ಲಿ ಚಿಂತೆ, ಒತ್ತಡ ಕಾಡದೇ ಇರುವುದಕ್ಕೆ ಸದಾ ಉತ್ಸಾಹ–ಲವಲವಿಕೆಯಿಂದ ಇರಲಿಕ್ಕೆ ಅನುದಿನ ಹೊಚ್ಚ ಹೊಸತು ಆಗಿ ಕಾಣುವಲ್ಲಿ ಮನಶಾಂತಿಯಲ್ಲಿ ಸಂಗೀತ ಆಲಿಸುವುದು ಕಾರಣ ಎನ್ನುತ್ತಾರೆ ಈ ದಂಪತಿ.
ಒಂದೊಳ್ಳೆ ಹವ್ಯಾಸ, ಸದಭಿರುಚಿ ಇಳಿವಯಸ್ಸಿನಲ್ಲಿ ಆಪ್ತ ಸಂಗಾತಿ ಆಗುವ ಪರಿಯೇ ಅದ್ಭುತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.