ADVERTISEMENT

Zakir Hussain | 'ಜಾಕಿರ್‌ ಹುಸೇನ್‌ ನನ್ನ ಮಾನಸ ಗುರು'

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2024, 1:59 IST
Last Updated 17 ಡಿಸೆಂಬರ್ 2024, 1:59 IST
ಸಿತಾರ್‌ ಮಾಂತ್ರಿಕ ಪಂಡಿತ್‌ ರವಿಶಂಕರ್‌ ಅವರೊಂದಿಗೆ ನವದೆಹಲಿಯಲ್ಲಿ 1995ರ ಫೆ. 27ರಂದು ಜಾಕಿರ್‌ ಹುಸೇನ್‌ ಅವರು ಕಛೇರಿ ನೀಡಿದ ಸಂದರ್ಭ
ಸಿತಾರ್‌ ಮಾಂತ್ರಿಕ ಪಂಡಿತ್‌ ರವಿಶಂಕರ್‌ ಅವರೊಂದಿಗೆ ನವದೆಹಲಿಯಲ್ಲಿ 1995ರ ಫೆ. 27ರಂದು ಜಾಕಿರ್‌ ಹುಸೇನ್‌ ಅವರು ಕಛೇರಿ ನೀಡಿದ ಸಂದರ್ಭ   

ನಾನೂ ಸೇರಿದಂತೆ ಅಸಂಖ್ಯಾತ ತಬಲಾ ವಾದಕರು ಉಸ್ತಾದ್ ಜಾಕಿರ್‌ ಹುಸೇನ್‌ ಅವರಿಂದ ನೇರವಾಗಿ ಪಾಠ ಹೇಳಿಸಿಕೊಳ್ಳದಿರಬಹುದು, ಆದರೆ, ನಮ್ಮೆಲ್ಲರಿಗೂ ಅವರೇ ಮಾನಸ ಗುರುವಾಗಿದ್ದಾರೆ. ಅವರನ್ನು ನೋಡಿದರೆ ಸಾಕು, ನಮ್ಮ ಕೈಬೆರಳುಗಳು ಭೋಲ್‌ಗಳಿಂದ ಕುಣಿಯುತ್ತವೆ. ಮನಸ್ಸಿನಲ್ಲಿ ಆನಂದ ತುಂಬಿಕೊಳ್ಳುತ್ತದೆ.

ತಬಲಾಕ್ಕೂ ಮೊದಲೇ ಗಾಯನ ಕಾರ್ಯಕ್ರಮಗಳಲ್ಲಿ ಪಖವಾಜ್‌ ವಾದ್ಯ ಇರುತ್ತಿತ್ತು. ಸಿದ್ಧಾರ್‌ ಖಾನ್‌ ದಾಡಿವಾಲೆ ತಬಲಕ್ಕೆ ಮೂಲಪುರುಷ. ಪಖವಾಜ್‌ನ ಭೋಲ್‌ಗಳನ್ನು ಖಾನ್‌ ಸಾಹೇಬರೇ ತಬಲಕ್ಕೆ ಅಳವಡಿಸಿದರು. ನಂತರ ಜಾಕಿರ್‌ ಹುಸೇನ್‌ ಅವರ ತಂದೆ ಉಸ್ತಾದ್‌ ಅಲ್ಲಾ ರಖಾ ತಬಲಾಕ್ಕೆ ಹೊಸ ರೂಪ ಕೊಟ್ಟರು. ತಂದೆಯ ಹಾದಿಯಲ್ಲೇ ನಡೆದ ಉಸ್ತಾದ್‌ ಜಾಕಿರ್‌ ಹುಸೇನ್‌ ಅವರು ವಾದ್ಯವನ್ನು ಬಲು ಎತ್ತರಕ್ಕೆ ಕೊಂಡೊಯ್ದರು. ವಾದ್ಯಕ್ಕೆ ಮಾಧುರ್ಯ ತುಂಬುವಲ್ಲಿ ಅವರು ಯಶಸ್ವಿಯಾದರು. ಅವರಿಂದಾಗಿಯೇ ತಬಲಾ ಎಲ್ಲಾ ಪ್ರಕಾರಗಳ ಸಂಗೀತದ ಅವಿಭಾಜ್ಯ ಅಂಗವಾಯಿತು.

ಮೊದಲೆಲ್ಲಾ ಆಕಾಶವಾಣಿಯಲ್ಲೂ ತಬಲಕ್ಕೆ ಸ್ಥಾನ ಇರಲಿಲ್ಲ. ಆದರೆ ಜಾಕಿರ್‌ ಹುಸೇನ್‌ ಅವರು ತಮ್ಮ ಅಗಾಧ ಜ್ಞಾನದಿಂದಾಗಿ ವಾದ್ಯದ ಸಾಧ್ಯತೆಗಳನ್ನು ಅನಾವರಣಗೊಳಿಸಿದರು. ಇಂದು ನಾವೆಲ್ಲಾ ಶಾಸ್ತ್ರೀಯ ಸಂಗೀತ ಕಛೇರಿಗಳಲ್ಲಿ ತಬಲಾ ನುಡಿಸುತ್ತಿದ್ದೇವೆ, ಆಕಾಶವಾಣಿಯಲ್ಲಿ ಗುರುತಿಸಿಕೊಂಡಿದ್ದೇವೆ ಎಂದರೆ ಜಾಕಿರ್‌ ಹುಸೇನ್‌ ಅವರು ನೀಡಿರುವ ತಬಲಾ ಜ್ಞಾನ ಭಂಡಾರವೇ ಕಾರಣ.

ADVERTISEMENT

5 ವರ್ಷಗಳ ಹಿಂದೆ ನಾನು ಪುಣೆಯಲ್ಲಿ ಉಸ್ತಾದ್‌ ಜಾಕಿರ್‌ ಹುಸೇನ್‌ ಅವರನ್ನು ಭೇಟಿಯಾಗುವ ಅವಕಾಶ ಒದಗಿಬಂದಿತ್ತು. ಸುಭಾಷ್‌ ವ್ಯಾಸ್‌ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಉಸ್ತಾದರು ಸೋಲೊ ಕಛೇರಿ ನುಡಿಸಿದ್ದರು. ಶಶಿ ವ್ಯಾಸ್‌ ಅವರು ಜಾಕಿರ್‌ ಹುಸೇನರಿಗೆ ನನ್ನನ್ನು ಪರಿಚಯಿಸಿದರು. ಉಸ್ತಾದರು ‘ನೀನು ನುಡಿಸುವುದನ್ನು ನಾನು ಕೇಳಬೇಕು’ ಎಂದರು. ಅವರ ಪ್ರೀತಿಗೆ ನಾನು ಬೆಕ್ಕಸ ಬೆರಗಾದೆ. ಸಣ್ಣವರನ್ನೂ ಅವರು ಕೇಳಿಸಿಕೊಳ್ಳುತ್ತಿದ್ದರು. ಅವರ ಕಾಲಿಗೆ ಹಣೆ ಹಚ್ಚಿ ನಮಸ್ಕರಿಸಿದೆ, ಕಣ್ಣಲ್ಲಿ ನೀರು ಸುರಿಯಿತು. ‘ಯಾಕೆ ಅಳುತ್ತೀಯ’ ಎಂದು ಕೇಳಿದರು. ‘ನೀವು ನನ್ನ ದೇವರು, ದೇವರ ದರ್ಶನ ಸಿಕ್ಕಿತು, ಕಣ್ಣಲ್ಲಿ ನೀರು ಬಂತು’ ಎಂದೆ. ಕೈಗಳನ್ನು ಹಿಡಿದು ಆಶೀರ್ವಾದ ಮಾಡಿದರು. ಅವರ ಪ್ರೀತಿಯೇ ನನಗೆ ಪಾಠವಾಗಿದೆ, ಹಾಗಾಗಿ ಅವರೇ ಮಾನಸ ಗುರುವಾಗಿದ್ದಾರೆ.

ಲೇಖಕ: ತಬಲಾ ವಾದಕ
ಉಸ್ತಾದ್‌ ಜಾಕಿರ್‌ ಹುಸೇನ್‌ ಅವರ ಜೊತೆ ಪಂ.ಶ್ರೀಧರ ಮಾಂಡ್ರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.