ಸುಂದರವಾದ ಪ್ರಾಕೃತಿಕ ಹಿನ್ನೆಲೆಯಲ್ಲಿ ಕನಕಪುರ ರಸ್ತೆಯ ಈಚೆಗೆ ನೆಟ್ಟಿಗೆರೆಯಲ್ಲಿ ನಿರ್ಮಾಣಗೊಂಡು ಕಲಾ ಚಟುವಟಿಕೆಗಳ ತಾಣವಾಗಿರುವ ಎಸ್.ವಿ.ನಾರಾಯಣರಾವ್ ಸ್ಮಾರಕ ಸಭಾಭವನವು ಸೊಂಪಾಗಿ, ಶಾಖೋಪಶಾಖೆಯಾಗಿ ನಾಗಸ್ವರ ಯುಗಳ ಕಛೇರಿಯಲ್ಲಿ ಸಂವಹಿಸಿದ ತುಂಬು ನಾದದ ಖರಹರಪ್ರಿಯ ರಾಗವು ಕೇಳುಗರನ್ನು ಆನಂದಪರವಶಗೊಳಿಸಿತು. ಶ್ರೀರಾಮಸೇವಾ ಮಂಡಳಿ ಟ್ರಸ್ಟ್‌ನ ವತಿಯಿಂದ ಆಚರಿಸಲ್ಪಟ್ಟ ತಮ್ಮ ಸ್ಥಾಪಕ-ಸಹೃದಯ ಕಲಾ ಪೋಷಕ ದಿವಂಗತ ಎಸ್.ವಿ.ನಾರಾಯಣಸ್ವಾಮಿರಾಯರ ಜನ್ಮ ಶತಮಾನೋತ್ಸವದ ಸಮಾರೋಪ ಸಮಾರಂಭಕ್ಕೆ ಅದೊಂದು ಮಂಗಳಪ್ರದ ಶುಭಾರಂಭವಾಗುತ್ತದೆ.. ವರ್ಷಪೂರ್ತಿ ವೈವಿಧ್ಯಮಯ ಸಂಗೀತ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದು ಅವರ ಹುಟ್ಟುಹಬ್ಬದ ದಿನದಂದೇ ಸಮಾರೋಪ ಸಮಾರಂಭವು ನಡೆದು ಹಿರಿಯ ಹಾಗೂ ಸುಪ್ರಸಿದ್ಧ 20 ಕಲಾವಿದರು ಮತ್ತು ಕಲಾಸಕ್ತರಿಗೆ “ಜೀವಮಾನ ಕಲಾ ಸಾಧನೆ” ಪ್ರಶಸ್ತಿಯೊಂದಿಗೆ ಗೌರವಿಸಲಾಯಿತು.
ಪಿಚಳ್ಯಪ್ಪ ಮತ್ತು ಗಣೇಶನ್(ನಾಗಸ್ವರ ದ್ವಯ) ಡೆಂಕಣಕೋಟಿ ಮಣಿ ಮತ್ತು ಗೌತಮ್‌ರಾಮ್‌ರ ಡೋಲು ಜೋಡಿಯೊಂದಿಗೆ ನವರಾಗಮಾಲಿಕಾ ವರ್ಣವನ್ನು ಎರಡು ಕಾಲಗಳಲ್ಲಿ ವಿನಿಕೆ ಮಾಡಿ ತಮ್ಮ ಅಪೂರ್ವ ಕೌಶಲ, ವೇಗ ಮತ್ತು ಪರಿಣತಿಗಳ ಪ್ರದರ್ಶನವದಾಯಿತು. ಪಾಪನಾಶನ್‌ರ ʼಗಜವದನʼ(ಶ್ರೀರಂಜಿನಿ) ಚುರುಕಾಗಿ ಗಮನ ಸೆಳೆದ ನಿರೂಪಣೆ. ʼರಾಮ ನನ್ನು ಬ್ರೋವರಾʼ(ಹರಿಕಾಂಭೋಜಿ) ಲವಲವಿಕೆಯ ಗತಿಯಲ್ಲಿ ಕಿವಿಗಳನ್ನು ತುಂಬಿದವು. ಶ್ರೀರಾಗದ ಪಂಚರತ್ನ ಕೃತಿ ʼಎಂದರೋ ಮಹಾನುಭಾವುಲುʼ ರಾಗ ಮತ್ತು ಸಾಹಿತ್ಯ ಭಾವಸತ್ಯ ಮತ್ತು ಸತ್ವವನ್ನು ಸೊಗಸಾಗಿ ಮೆರೆಸಿತು. ಕಛೇರಿಯ ಪ್ರಧಾನ ಅಂಶವಾಗಿ ಖರಹರಪ್ರಿಯ ಗ್ರಹಭೇದದ ಕಲಾತ್ಮಕ ಹಾಗೂ ಸುಂದರ ಅಡಕ ಮತ್ತು ಸವಿವರ ಕಲ್ಪನಾಸ್ವರಗಳೊಂದಿಗೆ ಹಸಿರು ಹಸಿರಾದ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿತು. ಡೋಲು ತನಿವಾದನವು ಅನೇಕ ಕ್ಲಿಷ್ಟ ಮಾದರಿಗಳನ್ನು ವಿಜೃಂಭಿಸಿತು.
ಪ್ರಶಸ್ತಿ ಪ್ರದಾನದ ನಂತರ ಹಿರಿಯ ಗಾಯಕ ಎಸ್. ಶಂಕರ್ ತಮ್ಮ ಪುತ್ರ ಎಸ್.ರಮಣಿಯವ ರೊಡಗೂಡಿ ಶಾಸ್ತ್ರ ಮತ್ತು ಸಂಪ್ರದಾಯಗಳ ತಿರುಳನ್ನು ವೈಭವೀಕರಿಸಿ ತಮ್ಮ ಪ್ರತಿಪಾದನೆಗಳನ್ನು ಆಪ್ಯಾಯಮಾನಗೊಳಿಸಿದರು. ಎಂದಿನಂತೆ ಅಂದಿನ ಕಛೇರಿಯಲ್ಲಿಯೂ ಸಹ ಅವರು ಆಯ್ದು ಕೊಂಡಿದ್ದ ರಚನೆಗಳು ಮತ್ತು ಮನೋಧರ್ಮದ ಅಲಂಕರಣಗಳಲ್ಲಿ ಶಾಸ್ತ್ರೀಯತೆ ಮತ್ತು ಘನತೆ ಎಂದಿಗೂ ದೂರವಾಗಲಿಲ್ಲ. ಆರಂಭದ ʼತುಳಸೀದಳʼ(ಮಾಯಾಮಾಳವಗೌಳ) ಕೀರ್ತನೆಯನ್ನು ಸಂಕ್ಷಿಪ್ತ ನೆರೆವಲ್(ʼಸರಸೀರುಹʼ) ಮತ್ತು ಸ್ವರವಿನ್ಯಾಸದ ಸವಿಸ್ತಾರ ಸೌಂದರ್ಯದೊಂದಿಗೆ ತಂದೆ-ಮಗ ಜೋಡಿಯು ಹೊಸಹೊಸದನ್ನು ಹೊಳೆಯಿಸುವ ಪ್ರತಿಭೆ ಮತ್ತು ನೈಪುಣ್ಯ ಆಹ್ಲಾದಕತೆಯನ್ನು ಹೊಂದಿತ್ತು. ಶಂಕರ್ ಮತ್ತು ರಮಣಿಅವರು ನಿರೂಪಿಸಿದ ಸಂಕ್ಷಿಪ್ತ ಆದರೆ ಸಾರ ಗರ್ಭಿತ ಮೋಹನ ರಾಗ ಆಲಾಪನೆಯು ಶಾಂತವಾದ ತ್ರಿಸ್ಥಾಯಿ ಅನುಕ್ರಮದಿಂದ ಗುರುತಿಸಲ್ಪಡುತ್ತದೆ. ʼನನ್ನು ಪಾಲಿಂಪ ನಡಚಿ ವಚ್ಚಿತಿವೊʼ ತ್ಯಾಗರಾಜ ಕೀರ್ತನೆಗೆ ಲಘು ಸ್ವರವಿನ್ಯಾಸವಯ ಮಕುಟಪ್ರಾಯವಾಗುತ್ತದೆ. ಹಿರಿಯ ಮತ್ತು ಬಹುಮಾನಿತ ಮೇರು ಮೃದಂಗ ವಿದ್ವಾಂಸರಾದ ಎಲ್ಲಾ ವೆಂಕಟೇಶ್ವರರಾವ್ ಅವರ ಪಕ್ಕಾ ಹಾಗೂ ಪರಿಪಕ್ವವಾದ ಮೃದಂಗ ವಾದನ ಕಛೇರಿಯ ಆಯಾಮವನ್ನು ವಿಸ್ತರಿಸುವಂತ್ತಿತ್ತು. ಯುವ ವೈಭವ ರಮಣಿ(ಪಿಟೀಲು) ಮತ್ತು ರವಿಕುಮಾರ್(ಘಟ) ಕಛೇರಿಯ ಘನತೆಯನ್ನು ಇಮ್ಮಡಿಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.