ADVERTISEMENT

New Year Resolution| ಸ್ವಂತಿಕೆಯ ಯತ್ನಕ್ಕೆ ವಿಶ್ವವೇ ವೇದಿಕೆ: ವಾರಿಜಾಶ್ರೀ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2022, 19:31 IST
Last Updated 31 ಡಿಸೆಂಬರ್ 2022, 19:31 IST
ವಾರಿಜಾಶ್ರೀ
ವಾರಿಜಾಶ್ರೀ   

ನಾಲ್ಕೈದು ವರ್ಷಗಳಿಂದ ಮನಸ್ಸಿನಲ್ಲಿಯೇ ಬಿತ್ತಿಕೊಂಡಿದ್ದ ಬೀಜ ಹೊಸವರ್ಷದಲ್ಲಿ ಫಲ ನೀಡಲಿದೆ. ಜಗತ್ತಿನ ಹಲವು ಖ್ಯಾತನಾಮ ಸಂಗೀತ ನಿರ್ದೇಶಕರ ಜೊತೆ ಕೆಲಸ ಮಾಡಿದ್ದೇನೆ, ಬಿಡಿಬಿಡಿಯಾದ ಹಲವು ಆಲ್ಬಂಗಳಲ್ಲಿ ಹಾಡಿದ್ದೇನೆ, ಸಂಗೀತ ಸಂಯೋಜನೆ ಮಾಡಿದ್ದೇನೆ. ಆದರೆ ಸಂಪೂರ್ಣ ಸ್ವಂತಿಕೆಯ ಮೂಲ ಸಂಗೀತ ಆಲ್ಬಂ (ಒರಿಜಿನಲ್‌ ಮ್ಯೂಸಿಕ್ ಆಲ್ಬಂ) ಹೊರತರಬೇಕೆಂಬ ಕನಸು ಕನಸಾಗಿಯೇ ಇತ್ತು, ಈಗ ಆ ಕನಸಿಗೆ ಸ್ವರೂಪ ಸಿಕ್ಕಿದೆ.

ಹೊಸ ಕನಸಿನ ಪಯಣಕ್ಕೆ ವಿಶ್ವವೇ ವೇದಿಕೆ (ಗ್ಲೋಬಲ್‌ ಮ್ಯೂಸಿಕ್‌ ಫ್ಲಾಟ್‌ಫಾರ್ಮ್‌). ಯಾವುದೋ ಒಂದು ಪ್ರಕಾರದ ಚೌಕಟ್ಟು ಈ ಸಂಗೀತ ಸಂಪುಟಕ್ಕಿಲ್ಲ, ಭಾಷೆ, ದೇಶಗಳ ಬೇಲಿಯಿಲ್ಲ. ಎಲ್ಲಾ ದಿಕ್ಕುಗಳ ಕೇಳುಗ ಈ ಸಂಗೀತ ಆಲಿಸಿ ತಲೆದೂಗಬೇಕಷ್ಟೆ. ಇಲ್ಲಿ ಭಾರತೀಯ ಸಂಗೀತದ ಬಲವಾದ ಅಡಿಪಾಯವಿದೆ. ಶೇ 90ರಷ್ಟು ಭಾರತೀಯ ಪ್ರಾಚೀನ ವಾದ್ಯಗಳನ್ನೇ ಬಳಸಿದ್ದೇನೆ. 40– 50 ಸಂಗೀತಗಾರರು ನನ್ನ ಕಲ್ಪನೆಗಳಿಗೆ ಜೀವ ತುಂಬಿದ್ದಾರೆ. ಬಹುವಾದ್ಯ ಪಾರಂಗತ, ಅಮೆರಿಕದ ಮೈಕೆಲ್‌ ಲೀಗ್‌ ವಾದ್ಯ ನಿರ್ವಹಣೆ ಮಾಡಿದ್ದಾರೆ.

ಇದು ಸಂಪೂರ್ಣ ಸ್ವಂತಿಕೆಯ ಪ್ರಯತ್ನ ಎನ್ನಲು ಇನ್ನೊಂದು ಕಾರಣವಿದೆ, ಆಲ್ಬಂನ ಸಾಹಿತ್ಯ ಕೂಡ ನನ್ನದೇ. ಕಳೆದ ವರ್ಷದ ಕೋವಿಡ್‌ ಬಿಡುವಿನಲ್ಲಿ ಮೂಡಿದ ಭಾವನೆಗಳಿಗೆ ಸಾಹಿತ್ಯ ರೂಪ ನೀಡಿದ್ದೇನೆ. ಹಲವು ಸಂಗೀತಗಳ ವೈವಿಧ್ಯವಿದ್ದರೂ ಸಾಹಿತ್ಯ ಮಾತ್ರ ನನ್ನ ಭಾಷೆ ಕನ್ನಡದಲ್ಲಿರುತ್ತದೆ, ಇದು ಕೂಡ ಇನ್ನೊಂದು ವಿಶೇಷ.

ADVERTISEMENT

ಎಲ್ಲವೂ ಅಂದುಕೊಂಡಂತೆ ನಡೆದರೆ 2023ರ ಮೇ ತಿಂಗಳಲ್ಲಿ ಈ ಆಲ್ಬಂ ನಾಮಕೋಟಿಗಳನ್ನು ಮೀಟಿ ವಿಶ್ವಾರ್ಪಣೆಯಾಗಲಿದೆ. ನಾನು ವೇದಿಕೆಯಲ್ಲಿ ಹಾಡಲಿಕ್ಕೆ ಆರಂಭಿಸಿ 25 ವರ್ಷ ತುಂಬುತ್ತಿರುವ ಮತ್ತೊಂದು ವಿಶೇಷ ಈ ಮೇ ತಿಂಗಳ ಜೊತೆ ಬೆಸೆದುಕೊಂಡಿದೆ. ಇದರ ಜೊತೆಗೆ ಭಾರತೀಯ ಸಂಗೀತದಲ್ಲಿ ಹೊಸತೆನ್ನುವ ಧ್ವನಿ, ಹೊಸ ಸವಿಯ ಹುಡುಕಾಟವೂ ಈ ವರ್ಷ ಸೇರಿಕೊಳ್ಳಲಿದೆ.

ನಿರೂಪಣೆ: ಎಂ.ಎನ್‌.ಯೋಗೇಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.