ADVERTISEMENT

ಭಾವದೊಲ್ಮೆ ಮತ್ತು ಲಯಭಾವ ಸಾಂದ್ರತೆಯ ಗಾಯನ

ಎಂ.ಸೂರ್ಯ ಪ್ರಸಾದ್
Published 27 ನವೆಂಬರ್ 2024, 10:12 IST
Last Updated 27 ನವೆಂಬರ್ 2024, 10:12 IST
   

ನುರಿತ ಹಾಗೂ ಅನನ್ಯ ಪ್ರತಿಭಾನ್ವಿತ ಉತ್ಕೃಷ್ಟ ಮೃದಂಗ ವಾದಕ-ಬೋಧಕ-ಸಂಘಟಕ ಹೆಚ್.‌ಎಸ್‌.ಸುಧೀಂದ್ರ ನಮ್ಮ ನಾಡಿನ ಹೆಸರಾಂತ ವ್ಕಕ್ತಿತ್ವ. ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ತನ್ನದೇ ಆದ ಮೌಲಿಕ ಸೇವೆ ಮತ್ತು ಪೋಷಣೆಯನ್ನು ಮಾಡುತ್ತಿರುವ ಸುಧೀಂದ್ರ ತಮ್ಮ ಜನಪ್ರಿಯ ಸಂಗೀತ ಕಲಾ ತಾಣ ಸುಸ್ವರಲಯ ಪ್ರೌಢ ಸಂಗೀತ ಕಲಾಶಾಲೆಯ 5 ದಿನಗಳ ರಜತ ಜಯಂತಿ ಮಹೋತ್ಸವವನ್ನು ಅದ್ವಿತೀಯ ರೀತಿಯಲ್ಲಿ ಆಚರಿಸಿದರು.

ಹಿರಿಯ ಸಂಗೀತ ಕಲಾವಿದರುಗಳಿಗೆ ಸಮ್ಮಾನ, ಹೆಸರಾಂತ ಕಲಾವಿದರಿಂದ ಸಂಗೀತ ಕಛೇರಿಗಳು, ಪ್ರಾತ್ಯಕ್ಷಿಕೆಗಳು, ಭಾಷಣಗಳು ಮುಂತಾದವುಗಳಿಂದ ರಜತೋತ್ಸವವು ಅನುಪಮವೆನಿಸಿಕೊಂಡಿತು. ಇವೆಲ್ಲಕ್ಕಿಂತಲೂ ಗಣನೀಯವಾದ ಕಾರ್ಯವೆಂದರೆ ವಿವಿಧ ರಸಿಕ ಜನೋಪಯೋಗಿ ಪುಸ್ತಕಗಳ (ಮೂರು ಕನ್ನಡ ಮತ್ತು ಒಂದು ಇಂಗ್ಲಿಷ್‌) ‘ಉಗಾಭೋಗದರ್ಶನ’(ಕನ್ನಡ ಮತ್ತು ಇಂಗ್ಲಿಷ್‌ ಅವತರಿಣಿಕೆಗಳು, ‘ನವರತ್ನ ಕೃತಿಗಳು’ಮತ್ತು ಬಹುಮುಖ್ಯ ಹಾಗೂ ಬಹು ಉಪಯೋಗಿ ‘ಕರ್ನಾಟಕ ಸಂಗೀತ ಮತ್ತು ನೃತ್ಯ ಕಲಾವಿದರ ಕೈಪಿಡಿ’ಯ 10ನೆಯ ಆವೃತ್ತಿ) ಆರ್‌.ಕೆ.ಪದ್ಮನಾಭ, ಡಾ.ಟಿ.ಎಸ್.ಸತ್ಯವತಿ ಮತ್ತು ಡಾ.ಎಂ.ಆರ್.ವಿ. ಪ್ರಸಾದ್‌ ಅವರಿಂದ ಲೋಕಾರ್ಪಣೆ.

ರಜತೋತ್ಸವದ ಉದ್ಭಾಟನೆ ಹಾಗೂ ಪುಸ್ತಕ ಲೋಕಾರ್ಪಣೆಗಳ ನಂತರ ನಾಡಿನ ಹಿರಿಯ ಹಾಗೂ ಸುಪರಿಚಿತ ಗಾಯಕಿ ಎಂ.ಎಸ್.‌ಶೀಲ ತಮ್ಮ ಗಾಯನ ಕಛೇರಿಯಲ್ಲಿ ಶಾಸ್ತ್ರೀಯ ಗಾಯನದ ವಿವಿಧ ಮಗ್ಗುಲುಗಳ ಸಮಗ್ರ ಪರಿಚಯ ಮಾಡಿಕೊಡುತ್ತಾರೆ. ಕಛೇರಿಯ ಆದರ್ಶ ಯೋಜನೆ, ಕಟ್ಟುನಿಟ್ಟಿನ ನಿರ್ವಹಣೆ, ಮನೋಧರ್ಮ ಸಂಗೀತದ ಆಳ ಮತ್ತು ವ್ಯಾಪ್ತಿಯ ವಿನ್ಯಾಸ, ಸೂಕ್ಷ್ಮ ಲೆಕ್ಕಾಚಾರಗಳ ವಿಶೇಷತೆಗಳ ಮೂಲಕ ಆಸಕ್ತ ಶ್ರೋತೃಗಳಿಗೆ ಶೀಲ ಮತ್ತಷ್ಟು ಹತ್ತಿರವಾಗಲು ಅನುಕೂಲವಾಗತ್ತದೆ. ಅಲ್ಪಾವಧಿಯ ಕಛೇರಿಯಾದರೂ ಸಹ ಗಂಭೀರವಾದ ಭಾವದೊಲ್ಮೆ ಮತ್ತು ಲಯಭಾವ ಸಾಂದ್ರತೆಯ ಆಕರ್ಷಣೆಯೊಂದಿಗೆ ನಿರೂಪಣೆಯ ಆಶಯ ಮತ್ತು ಸಾರದಲ್ಲಿ ಏಕರೂಪತೆ ಅಭಿನಂದನೀಯ.

ADVERTISEMENT

ವಿರಳ ವಿನಿಕೆಗಳು

ತಡವಾಗಿ ಆರಂಭವಾದರೂ ಸಹ ಕಛೇರಿಯ ಹಳಿ ತಪ್ಪದೆ ಅನುಕೂಲಕ ಮೂಡ್‌ ಗಮನಾರ್ಹ. ಅಪರೂಪವಾಗಿ ಕೇಳಿಬಂದ ಆದಿತಾಳದ ದರ್ಬಾರ್‌ ವರ್ಣದ ಎರಡು ಮತ್ತು ಮಧ್ಯಮ ಕಾಲಗಳಲ್ಲಿ ವಿನಿಕೆಯನ್ನು ಚುರುಕುಗೊಳಿಸಿತು. ಅಷ್ಟೇ ಅಪರೂಪದ ‘ರಮಾರಮಣ ನಾರಾಯಣ’(ನಾಗಸ್ವರಾವಳಿ ರಾಗ, ಮೈಸೂರು ವಾಸುದೇವಾಚಾರ್ಯ ವಿರಚಿತ) ಲಘು ರಾಗಾಲಾಪನೆ ಮತ್ತು ಚಿಟ್ಟೆಸ್ವರಗಳೊಂದಿಗೆ ಗಾಯನದಲ್ಲಿ ಆಪ್ತತೆಯನ್ನು ಕಾಣಬಹುದು. ವಿರಳ ವಿನಿಕೆಯ ಸರಣಿ ಮುಂದುವರೆಯುವಂತೆ ತ್ಯಾಗರಾಜರ ‘ಪಟ್ಟಿವಿಡುವರಾದು’(ಮಂಜರಿ ರಾಗ),‘ನಿರವಧಿಸುಖದಾ’(ರವಿಚಂದ್ರಿಕೆ), ‘ಮೀವಲ್ಲಗುಣದೋಷ’(ಕಾಪಿ, ಚುರುಕಾದ ಮತ್ತು ಲಘು ರಾಗವಿಸ್ತಾರ ಮತ್ತು ಚಿಟ್ಟೆಸ್ವರ ಜೋಡಣೆ) ಪ್ರಸ್ತುತಿಗಳು ಮೂಡಿ ಬಂದವು.

ಅಂದಿನ ಕಛೇರಿಯ ಪ್ರಧಾನ ಘಟ್ಟಗಳಾಗಿ ಸವಿಸ್ತಾರ ತೋಡಿ (‘ರಾಜುವೆಡಲ’, ‘ಕಾವೇರಿ ತೀರಮುನ’ಎಂಬಲ್ಲಿ ನೆರವಲ್‌ ಮತ್ತು ಸ್ವರಕಲ್ಪನೆ ಮತ್ತು ಶಂಕರಾಭರಣ(‘ಅಕ್ಷಯಲಿಂಗವಿಭೋ’, ‘ಬದರೀವನಮೂಲ’ಕ್ಕೆ ಸಾಹಿತ್ಯ ಮತ್ತು ಸ್ವರಗಳ ಕಲಾತ್ಮಕ ಅಲಂಕರಣ) ಮೈತಳೆದ ಅವುಗಳೊಂದಿಗೆ ಅವರು ನಡೆಸಿದ ಅನುಸಂಧಾನದಲ್ಲಿ ಸಕಲ ವಿವರಗಳು ಅಷ್ಟೇ ಅಲ್ಲ ಹೊಳಹುಗಳು ಶೀಲ ಅವರ ಏಕಾಗ್ರ ಮನೋಭಾವ ಮತ್ತು ನಿರುದ್ವಿಗ್ನತೆಗೆ ಸಾಕ್ಷಿ ನುಡಿದವು. ಮತ್ತೂರು ಶ್ರೀನಿಧಿ(ಪಿಟೀಲು), ರಂಜನಿ ಸಿದ್ಧಾಂತಿ ವೆಂಕಟೇಶ್‌(ಮೃದಂಗ) ಮತ್ತು ಅರುಣ್‌ಕುಮಾರ್‌(ಮೋರ್ಸಿಂಗ್‌) ಅವರ ಪಕ್ಕವಾದ್ಯಗಳ ಸಹಕಾರದಲ್ಲಿ ಗಾಯಕಿಯ ಕಲಾವಂತಿಕೆ ಹಾಗೂ ಕಲ್ಪನಾಶಕ್ತಿಗೆ ಸರಿದೊರೆಯಾಗಿ, ಕಛೇರಿಯ ಒಟ್ಟಂದವನ್ನು ಹೆಚ್ಚಿಸುವಂತಹ ಸತ್ವ ಮತ್ತು ಪ್ರೌಢಿಮೆ ತುಂಬಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.