ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ‘ಅವಧಾನ ಪಲ್ಲವಿ’ ಒಂದು ವಿಶಿಷ್ಟ ಗಾಯನ ಪ್ರಕಾರ. ಇದನ್ನು ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಪರಿಚಯಿಸಿ ಹಾಡಿ ಜನಪ್ರಿಯಗೊಳಿಸಿದವರು ವಿದುಷಿ ಆರ್.ಎ. ರಮಾಮಣಿ.
‘ಅವಧಾನ ಪಲ್ಲವಿ’ ಹಾಡುವುದು ಬಹಳ ಕಷ್ಟ. ಅಪಾರ ಪರಿಶ್ರಮ, ನೈಪುಣ್ಯತೆ, ತಾಳ್ಮೆ ಮತ್ತು ಶ್ರದ್ಧೆ ಮೇಲಾಗಿ ಸಂಗೀತದ ಆಳವಾದ ಜ್ಞಾನ ಇದ್ದರೆ ಮಾತ್ರ ಇದನ್ನು ಹಾಡಬಹುದು. ಎರಡು ಕೈಗಳಲ್ಲಿ ಬೇರೆ ಬೇರೆ ತಾಳ ಹಾಕುವ ಮೂಲಕ ರಾಗವನ್ನು ಮನೋಧರ್ಮಕ್ಕೆ ಕೊಂಚವೂ ಧಕ್ಕೆಯಾಗದಂತೆ ಹಾಡಬೇಕು. ಇದನ್ನು ಸಿದ್ಧಿಸಿಕೊಂಡು ವಿದ್ವಾಂಸರನ್ನೇ ಬೆರಗುಗೊಳಿಸುವಂತೆ ಹಾಡುತ್ತಿದ್ದ ಅಪರೂಪದ ವಿದುಷಿ ರಮಾಮಣಿಯವರು.
ತಮ್ಮ ಪತಿ ಟಿ.ಎ.ಎಸ್. ಮಣಿ ಅವರೊಂದಿಗೆ ಸೇರಿ ಜಾಸ್ ಸಂಗೀತವನ್ನು ಯುರೋಪ್ ಸೇರಿದಂತೆ ವಿಶ್ವದ ನಾನಾ ಭಾಗಗಳಲ್ಲಿ ಹಾಡಿದ ರಮಾಮಣಿಯವರು ಕರ್ನಾಟಕ ಸಂಗೀತದೊಂದಿಗೆ ಪಾಶ್ಚಾತ್ಯ ಸಂಗೀತವನ್ನು ಬೆಸೆಯುವ ಮೂಲಕ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡವರು. ಸುಮಾರು ಐದು ದಶಕಗಳ ಕಾಲ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಾಯಕಿ ಇವರು.
‘ಸಂಗೀತದಲ್ಲಿ ರಮಾಮಣಿ ಅವರದು ಅದ್ಭುತ ಸಾಧನೆ. ಹಲವು ಶಿಷ್ಯಂದಿರನ್ನು ತಯಾರು ಮಾಡಿರುವ ರಮಾಮಣಿ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ಸಾಧನೆ ಮಾಡಿದ ಅಪರೂಪದ ಗಾಯಕಿ’ ಎನ್ನುತ್ತಾರೆ ಖ್ಯಾತ ಮೃದಂಗ ವಿದ್ವಾಂಸ ಆನೂರು ಅನಂತಕೃಷ್ಣ ಶರ್ಮ.
ಕರ್ನಾಟಕ ಗಾನಕಲಾಭೂಷಣ, ಗಾನಕಲಾಶ್ರೀ ಸೇರಿದಂತೆ ಸಂಗೀತದ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಇವರು ಆಕಾಶವಾಣಿ ಟಾಪ್ ಗ್ರೇಡ್ ಕಲಾವಿದೆ. ಇಂತಹ ಅಸಾಧಾರಣ ಪ್ರತಿಭೆಯ ಗಾಯಕಿ ಇನ್ನು ನೆನಪಷ್ಟೆ.
ಅಂತ್ಯಕ್ರಿಯೆ ಇಂದು
ಬೆಂಗಳೂರು: ಕರ್ನಾಟಕ ಶಾಸ್ತ್ರೀಯ ಸಂಗೀತದ ಹೆಸರಾಂತ ಕಲಾವಿದೆ ವಿದುಷಿ ಆರ್.ಎ. ರಮಾಮಣಿ ಶನಿವಾರ ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 75 ವರ್ಷ (ಜನನ 1950) ವಯಸ್ಸಾಗಿತ್ತು.
ಬೆಂಗಳೂರಿನವರೇ ಆದ ಅವರು ಖ್ಯಾತ ಮೃದಂಗ ವಿದ್ವಾನ್ ದಿವಂಗತ ಟಿ.ಎ.ಎಸ್. ಮಣಿ ಅವರ ಪತ್ನಿ. ರಮಾಮಣಿ ಅವರು ಪುತ್ರ ಘಟಂ ವಾದಕ ಕಾರ್ತಿಕ್ ಮಣಿ ಅವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಭಾನುವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಶ್ರೀರಾಮಪುರ ಬಳಿಯ ಹರಿಶ್ಚಂದ್ರ ಘಾಟ್‌ನಲ್ಲಿ ನಡೆಯಲಿದೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.