ADVERTISEMENT

ಅಣ್ಣನ ವೆಸ್ಟ್‌ಕೋಟ್‌

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 19:30 IST
Last Updated 21 ಏಪ್ರಿಲ್ 2018, 19:30 IST
ಕಲೆ: ಶಶಿಧರ್ ಹಳೇಮನಿ
ಕಲೆ: ಶಶಿಧರ್ ಹಳೇಮನಿ   

ವಸಂತ ಕಲ್‌ಬಾಗಿಲ್

ಕೊಟ್ಟಳು ಅತ್ತಿಗೆ, ಅಣ್ಣನ ನೆನಪಿಗೆ ಪ್ರೀತಿಯ ವೆಸ್ಟ್‌ಕೋಟು
ನಶ್ಯದ ಬಣ್ಣದ ಮಾಸಿದ ಕೋಟು ನಾಲ್ಕಾರು ಜೇಬಿನದು
ಒಗೆದೇ ಇಲ್ಲ, ಕೊಡವೇ ಇಲ್ಲ, ಇಸ್ತ್ರಿ ಇರಲಿ ಮಡಿಚಿಟ್ಟಿಲ್ಲ
ಸುಮ್ಮನೆ ಹಾಗೇ ನೇತು ಬಿದ್ದ ಹ್ಯಾಂಗರಿನಲ್ಲಿದ್ದದ್ದು

ಆಘ್ರಾಣಿಸಿದರೆ ಹೌದು ಇಹುದು ಅಣ್ಣನ ವಿಸ್ಮಯದ ಗಂಧ
ಬಣ್ಣದ ಬದುಕಿನ ಥಣ್ಣನೆ ಮನಸಿನ ಕೀಟಲೆ ಕೋಟಲೆ ಅಂದ
ತಾನಾರೆಂದು ಅರಿಯುವ ಮುನ್ನವೆ ಪರಾರಿಯಾಗುವೆನೆಂದ
ಏನೋ ಕನಸು, ಎಲ್ಲೊ ನಿಟ್ಟು, ದಿಗಂತ ದೃಷ್ಟಿ ಎಂದಿನಿಂದ

ದೇಶವಿದೇಶ ಊರೂರಲೆದ ಕುಂದಿಲ್ಲದ ಕಂದು
ಹಿತವಾದ ಚಳಿಗೆ ಬೆನ್ನಿಗೆ ಬೆಚ್ಚಗೆ ಅಂಗಿಗಂಟಿದ ವೆಸ್ಟು
ಒಂದೊಂದು ಜೇಬಿನಲೊಂದೊಂದು ಕತೆಯು ಅವಿತು ಕುಳಿತಿತ್ತು
ಬಿಡಿಸಿ ನೋಡಲು ಕಚಗುಳಿ ಇಡುವ ಸವಿನೆನಪಿನಿತಿನಿತು

ಬಾಜಿರಾವ್ ಮಸ್ತಾನಿ ಸಿನಿಮಾ ಟಿಕೆಟ್ಟಿನ ಚೂರು
ಅರ್ಧತಿಂದ ಅಲ್ಲೇ ಮರೆತ ಚಕ್ಕುಲಿ ಎಳೆಮೂರು
ಸ್ನೇಹಿತರೊಂದಿಗೆ ಒಂದೊಂದೇ ಹೆಕ್ಕಿದ ಕಡಲೆಕಾಯಿ ಸಿಪ್ಪೆ
ನಶ್ಯದ ಡಬ್ಬಿ ಖಾಲಿಯಾಗಿತ್ತು ಆದರೂ ಬದುಕಲ್ಲವೇ ಅಲ್ಲ ಸಪ್ಪೆ

ADVERTISEMENT

ಎಂದೋ ಬರೆದ ಕವನದ ತುಣುಕು ಅರ್ಧಂಬರ್ಧ ಸಾಲು
ಮುಲಾನ್ ರೂಜ್‌ನ ಚೀಟಿಯೊಂದು ಇರಬಹುದಿತ್ತು ಕಾಲು
ಚಾಟ್ ಮಸಾಲೆ ಅರಗಲೆಂದು ಹೋಮಿಯೊಪತಿ ಸಣ್ಣಗುಳಿಗೆ
ಜಿಲೇಬಿ ತಿಂದು ಬಾಯ ಒರೆಸಿಕೊಂಡ ರುಮಾಲಿನ ಸಿಹಿಗಳಿಗೆ

ಹೆಸರೇ ಇಲ್ಲದ ಮೊಬೈಲ್ ಅಂಕಗಳು ಒಂದರ ಕೆಳಗೊಂದು
ಮರೆತೇ ಬಿಟ್ಟಿರಬೇಕವರನ್ನು ಜೇಬಿಗೆ ಇಳಿದಂದು
ಸಣ್ಣಗೆ ಮಡಿಚಿದ ಸಾಬರ ಟೋಪಿ ಇರಲಿ ಹೀಗೆಂದು
ಯಾರ‍್ಯಾರೋ ಕೊಟ್ಟ ಪೆಪ್ಪರಮೆಂಟು, ಹುಟ್ಟುಹಬ್ಬಗಳ ನಂಟು

ಕ್ಯಾಮೆರ ಕಣ್ಣಿನ ಲೆನ್ಸಿನ ಮಚ್ಚಳ ಮತ್ತೊಂದು ಜೇಬಿನಲಿ
ಲೆನ್ಸನು ಒರೆಸುವ ಮಕಮಲ್ ತುಂಡು ಸಣ್ಣ ಡಬ್ಬಿಯಲಿ
ಶೀಫರ್, ಪಾರ್ಕರ್, ಲೇಖನಿ, ನಿಶಾನಿ ಸಂದುಗೊಂದಿನಲಿ
ಅಣ್ಣನ ನೆನಪು ತಣ್ಣನೆ ಕಟ್ಟಿತು ಕಣ್ಣಿನಂಚಿನಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.