ADVERTISEMENT

ಕವನ | ದೀಪಾ ಹಿರೇಗುತ್ತಿ ಅವರ ‘ಆಕ್ರಮಣ‘

ದೀಪಾ ಹಿರೇಗುತ್ತಿ
Published 2 ಜುಲೈ 2023, 1:32 IST
Last Updated 2 ಜುಲೈ 2023, 1:32 IST
   

ನುಚ್ಚುನೂರಾದ ಹೂದೋಟ ಸಾಕ್ಷಿ ಹೇಳುತ್ತಿತ್ತು
ಹೆಜ್ಜೆಗುರುತು ಕಾಣದಿದ್ದರೂ ಅಂಗಳದ ಮಣ್ಣು
ಕಲಸಿ ರಾಡಿಯಾಗಿತ್ತು ಕುರುಹುಗಳು ಸ್ಪಷ್ಟವಾಗಿದ್ದವು

ಆಯುಧ ತರದೇ ಬಂದು ಸೇರಿದವರ ಗುಸುಗುಸು ಮಾತುಗಳು
ಬೇಲಿಯ ಮುಳ್ಳಿನಂತೆ ಇರಿಯುತ್ತಿದ್ದವು
ಕಟಾವು ಮಾಡಿದ ಗದ್ದೆಯ ಕೂಳೆಯಂತೆ ಚುಚ್ಚುತ್ತಿದ್ದವು

ಅಂತೂ ಪರಾಂಬರಿಸಿ ಮಹಾಜನಗಳು
ಮೊನ್ನೆಯ ಬಿರುಗಾಳಿಯನ್ನು ಬೈದುಕೊಂಡರು
ಜೇಬಿನಲ್ಲಿ ಬೆಚ್ಚಗಿರುವ ತಂತಮ್ಮ ತೋಟಗಳ ಕಬ್ಬಿಣದ ಪಾಗಾರಗಳ
ಬೀಗದ ಕೈಯ್ಯನು ಸವರಿಕೊಳ್ಳುತ್ತ ಸಮಾಧಾನ ಹೇಳಿದರು. . .

ADVERTISEMENT

ಆದರೆ, ಬೇಗುದಿಯ ಬಾವಿಯಲಿ ಬಿದ್ದವರ
ಆತಂಕಗಳೋ ಅಮೆಝಾನಿನಂತೆ ಹರಿಯುತ್ತಿದ್ದವು
ಅರಬ್ಬೀ ಸಮುದ್ರದಂತೆ ಮೊರೆಯುತ್ತಿದ್ದವು

ಮುರುಕು ಮನೆಯ ಉಳಿವಿಗೀಗ ಮೌನವೋ ಮೋಟುಗಂಬಳಿಯಂತೆ
ಮಾತೋ ಸೋರುವ ಮಾಡಿನಂತೆ
ಕಾದ ಕಾವಲಿಯೋ ಉರಿವ ಒಲೆಯೋ
ಬಿಸಿತುಪ್ಪ !ಬಿಸಿತುಪ್ಪ!

ಮಳೆಬಿಲ್ಲ ಕನಸಿನ ಲೋಕವೀಗ ಅಮಾವಾಸ್ಯೆಯ ಇರುಳ ಬಾನಿನಂತೆ
ಕಣ್ಣಕ್ಷಿತಿಜವ ನೋಯಿಸುವ ಮರಳುಗಾಡಂತೆ
ಸುಡುಗಾಡಿನ ಉರಿವ ಚಿತೆಯಂತೆ
ಒಂಟಿಕಿರುದೋಣಿಯ ಕಡಲ ಹಾದಿಯಂತೆ

ನೆಲಕಚ್ಚಿದ ಬೇಲಿಯ ಸುತ್ತ ಎಲ್ಲ ತಲೆಗೊಂದು ಮಾತಾಡುತ್ತಿರುವಾಗ
ಇವರ ಕಣ್ಣೀರಿಗೆ ಪಕ್ಕದ ನದಿಯ ಮೊಸಳೆ ನಾಚುತ್ತಿರುವಾಗ
ಕೊಟ್ಟಿಗೆಯಾಚೆ ಮೈಮರೆತು ಮಲಗಿದ್ದ
ಆನೆ ಮದವಿಳಿದು ಎದ್ದು ಕದ್ದು ನೋಡಿತು
ತನ್ನ ಹೆಜ್ಜೆಗುರುತು ಕಾಣಲಿಲ್ಲವೆಂದು ಖಾತ್ರಿಗೊಳಿಸಿಕೊಂಡಿತು
ಕಾಲುದಾರಿಯಲ್ಲಿ ನಿಧಾನಕ್ಕೆ ಸರಿದುಹೋಯಿತು
ಆನೆಪಾದಕಂಟಿದ ಹೂಗನಸುಗಳ ಪರಾಗ
ಈಗ ಅಕ್ಷರಶಃ ಅನಾಥ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.