ಗೋಡೆ ಬಿರುಕುಗಳು ಕಾಣಿಸದಂತೆ
ಬಣ್ಣದ ಹಾಳೆ ಅಂಟಿಸಿದ ಈ ನಗರದ ನಡು ಬೀದಿಯಲ್ಲಿ
ಯಾರದೋ ಕಾರಿನ ಕನ್ನಡಿ ಮುಂದೆ ನಿಂತ ಹುಡುಗರು
ತಮ್ಮ ಎಳೆಮೀಸೆಯನ್ನು ತಿರುವಿ, ತೀಡಿ
ಎಡಗೈಯಲ್ಲಿ ಮೊಬೈಲ್ ಹಿಡಿದು ಸೆಲ್ಫೀ ತೆಗೆದುಕೊಳ್ಳುವಾಗ
ನಾನು ಅವಳ ಕಪ್ಪು-ಬಿಳುಪಿನ ಫೊಟೊ ಹಿಡಿದು ಅಲೆಯುತ್ತೇನೆ!
ಅದು ಪ್ರೀತಿಯೆಂದು ಖಾತರಿ ಆದ ದಿನ
ನಿನ್ನಪ್ಪನನ್ನು ಕೇಳಬೇಕಿತ್ತು ನಾನು ಹಾಗೆ ಮಾಡಬಹುದೆ ಎಂದು
ಆದರೆ, ಮಕ್ಕಳ ತಾಯಿಯಾದ ನಿನ್ನನ್ನು
ಅವುಗಳ ಅಪ್ಪನೆದುರು ಬೇಡುವುದೆಂದರೆ ಏನು?
ನನ್ನ ಪಾಪಗಳ ತಲೆದಿಂಬಿನಡಿ ನೀನೊಂದು ಪಡಿತರ ಚೀಟಿ
ಸಂಖ್ಯೆಯಿಂದ ಗುರುತಿಸಲ್ಪಡುವ ಹೋಟೆಲ್‌ರೂಮಿನ
ಕನ್ನಡಿಗಂಟಿದ ಕಂದು ಬಣ್ಣದ ಅನಾಥ ಟಿಕಳಿ
ಅದಕ್ಕೆ ಕನಸಿನಲ್ಲಿ ಮಲಗುವ ಈ ಕಳಂಕಕ್ಕೆ ಒಂದು ಹೆಸರು ಕೊಡು
ಹಾಗೊಮ್ಮೆ ಮಕ್ಕಳಾದರೆ, ಜಗತ್ತೇ ಅವಕ್ಕೊಂದು ಹೆಸರು ಕೊಡುತ್ತದೆ!
ಯಾರನ್ನು ಪ್ರೀತಿಸುವುದು ಈ ರಾತ್ರಿಗೆ?
ಉದ್ದನೆಯ ಉಗುರು ಸಾಕಿ, ಅವಕ್ಕೆ ಬಣ್ಣ ಬಳಿದವಳನ್ನು ಅಥವಾ
ಬಿಟ್ಟರೆ ಗಲೀಜು ಮುತ್ತುವುದೆಂದು ಕತ್ತರಿಸಿ ಒಪ್ಪ ಮಾಡಿಟ್ಟವಳನ್ನು?
ದೇವರೆ, ನನ್ನ ವಾಂಛೆಗಳಲ್ಲೂ ನಿನ್ನ ಬುದ್ಧಿ ತೋರಿದೆ ನೋಡು!
ಕೇಳು, ಮತದಾನದ ದಿನ ಓಟು ಹಾಕದವನನ್ನು ಎಳೆದು ತಂದು
ಒಂದು ಅಸಲಿ ಗುರುತಿನ ಚೀಟಿ ತಯಾರಿಸಿ; ನಕಲಿ ಸರಾಯಿ ಕುಡಿಸಿದರು
ಮಾರನೆಯ ದಿನ ನನ್ನ ಮತವನ್ನು ನಿನಗೆ ಮಾರಿಕೊಂಡವನೆಂದು
ಡಂಗುರ ಹೊಡಿಸಿದರು!
ಒಂದು ದೇಶದ ಕೈಯಲ್ಲಿ ಪಾಟಿ ಹಿಡಿಸಿದವರಿಗೆ ಇದ್ಯಾವ ಲೆಕ್ಕ ಬಿಡು!
ಟೀವಿ, ಪೇಪರ್ ಕೂಗಿದವು ದೀನ ದಲಿತರ ಬಂಧು,
ದೇಶೋದ್ಧಾರಕ, ಈತನಿಗೆ ನಿನ್ನ ಓಟು ಎಂದು.
ಅದಕ್ಕಾಗಿ ಕೋರ್ಟು ಗೊರಕೆಯಲ್ಲಿದ್ದಾಗ ಪ್ರಮಾಣವಾಯಿತು
ಮನೆ ದೇವರೆದುರು ಮತ್ತು ಪಡೆದ ಉಡುಗೊರೆಗಳ ಮೇಲೆ
ಅವರವರು ಮಾರಿಕೊಂಡಿದ್ದಕ್ಕೆ ಪುರಾವೆಯಿರಲೆಂದು!
ಪೋಸ್ಟರ್‌ಗಳಲ್ಲಿ ತುಟಿಗೆ ರಂಗು ಮೆತ್ತಿಕೊಂಡ ಪಿತಾಮಹರು
ನನ್ನನ್ನು ನೋಡಿ ಗಹಗಹಿಸಿದಾಗ ಕೊರಳ ಗುರುತಿನ ಚೀಟಿಯನ್ನು
ಕಿತ್ತಿ ಆಕಾಶಕ್ಕೆ ಎಸೆಯುತ್ತೇನೆ ಮತ್ತು ಅಲೆಯುತ್ತಲೇ ಇರುತ್ತೇನೆ
ಒಂದು ಓಣಿಯತ್ತ, ಊರಿನತ್ತ, ಎಲ್ಲೊ ಪಾರ್ಕಿನತ್ತ, ನಿಲ್ದಾಣದತ್ತ
ಸಿಕ್ಕ ಯಾರಾದರು ತಂದೊಪ್ಪಿಸಿ ಪ್ರಮಾಣ ಪಡೆಯಬಹುದೇ ಎಂದು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.