ಶಿವನ ಸತಿ ಪಾರ್ವತಿಯು
ಸ್ನಾನ ಮಾಡಲು ಹೊರಟಿರಲು
ಮನದಿ ಮೂಡಿತು ಚಿಂತೆಯು
ಯಾರು ಕಾಯುವರು ಬಾಗಿಲು
ಮೈಯ ಮಣ್ಣಲಿ ಮೂರ್ತಿ ಮಾಡಿ
ಜೀವವ ತುಂಬಿ ಕಾವಲಿಟ್ಟಳು
ಯಾರೇ ಬಂದರೂ ಬಿಡದಂತೆ
ಕಟ್ಟುನಿಟ್ಟಿನ ಆಜ್ಞೆಯಿತ್ತಳು
ಬಾಗಿಲು ಬಳಿ ಬಂದ ಶಿವನು
ಪುಟ್ಟ ಬಾಲಕನ ಕಂಡನು
ಯಾರು ನೀನು ದಾರಿಬಿಡು
ಎನ್ನುತ ಕೋಪಗೊಂಡನು
ತಾಯಿಮಾತಿಗೆ ಬದ್ಧನಾಗಿಹೆನು
ಯಾರನ್ನೂ ಒಳಗೆ ಬಿಡಲಾರೆ
ಅಡ್ಡಗಟ್ಟಿ ನಿಲ್ಲುತ ಹೇಳಿದ
ಬನ್ನಿ ನೋಡುವೆ ಧೈರ್ಯವಿದ್ದರೆ
ಬಿಡದೆ ಇರಲು ಯುದ್ಧವಾಗಿ
ಮಾತಿಗೆ ಮಾತು ಬೆಳೆಯಿತು
ಶಿವನ ಕೋಪ ಹೆಚ್ಚಾಗಿ
ಬಾಲಕನ ತಲೆಯೇ ಹೋಯಿತು
ಪೂಜೆಯ ಮಾಡಲು ಅಣಿಯಾಗಿ
ಪಾರ್ವತಿ ಬಂದಳು ಹರುಷದಲಿ
ಮಗುವಿನ ದೇಹದ ರೂಪವ ಕಂಡು
ಕುಸಿದಳು ನೆಲಕೆ ದುಃಖದಲಿ
ಬೇಡಿಕೊಂಡಳು ಶಿವನನ್ನು
ಬದುಕಿಸುವಂತೆ ಮಗನನ್ನು
ಸತಿಯ ಸಂಕಟ ತಾಳಲಾರದೆ
ದೂತರ ಕರೆದನು ತಡಮಾಡದೆ
ಉತ್ತರ ದಿಕ್ಕಿಗೆ ಮಲಗಿರುವ
ಪ್ರಾಣಿಯ ತಲೆಯನ್ನು ತನ್ನಿರಿ
ಹುಡುಕುತ ಹೋದ ದೂತರು
ಆನೆಯ ತಲೆಯ ತಂದರು
ಬಾಲಕನಿಗೆ ಆನೆಯ ತಲೆಯನ್ನು
ಜೋಡಿಸಿ ಜೀವವ ನೀಡಿದ ಶಿವನು
ಉದ್ದ ಸೊಂಡಿಲಿನ ಅಗಲ ಕಿವಿಯ
ಗಜಮುಖನಾದನು ಗಣಪತಿಯು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.