ADVERTISEMENT

ಗಾಯದ ಮಳೆ

ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆ: ತೀರ್ಪುಗಾರರ ಮೆಚ್ಚುಗೆ ಪಡೆದ ಕವಿತೆ

ಡಾ.ಪ್ರಸನ್ನ ನಂಜಾಪುರ
Published 1 ಡಿಸೆಂಬರ್ 2018, 19:30 IST
Last Updated 1 ಡಿಸೆಂಬರ್ 2018, 19:30 IST
ಚಿತ್ರ: ಗಣೇಶ ಅರಳಿಕಟ್ಟಿ
ಚಿತ್ರ: ಗಣೇಶ ಅರಳಿಕಟ್ಟಿ   

ಒಂದು ನೊಂದs ಊರು

ಊರಿsನ ಸುತ್ತsಲು

ಉತ್ತರೆಯ ಮಳೆಬಂದು ತುಂಬಿತ್ತು ಕೆರೆಯು

ADVERTISEMENT

ಮಲಗಿದ್ದ ಗಂಗವ್ವ

ಎದ್ದsಳು ಮುಗಿಲುದ್ದ

ಊರೊಳಗೆ ಚೆಲ್ಲಿತ್ತು ಬೆಳೆದಂತ ನೀರು||1||

ಊರಿsಗೆ ದೊಡ್ಡsದು

ಬೆಟ್ಟಯನ ಹಟ್ಟಿsಯು

ಘನವಾಗಿ ಕಟ್ಟಿತ್ತು ಕಾಲsದ ಹಿಂದೆ

ನಿಂತಿದ್ದ ಕಟ್ಟೆsಯ

ಒಡೆದsಳು ಗಂಗವ್ವ

ನಡೆದsಳು ಮೈಯೆಲ್ಲ ಕಾಲಾಗಿ ಮುಂದೆ||2||

ಗೊಂಬೆsಯ ಕಂಬಗಳು

ಬಣ್ಣsದ ಬಿಂಬಗಳು

ಬೆಟ್ಟsದ ಕಲ್ಲಿsನ ತೊಟ್ಟಿsಯ ಮನೆಯು

ಮುರಿದಿತ್ತು ಮುನ್ನೂರು

ತುಂಬಿತ್ತು ಕೆನ್ನೀರು

ಬೆಟ್ಟಯ್ಯ ಕರೆದನು ತನ್ನಾಳು ಮಗನ||3||

ಆಳುಮಗನೆ ಬಾರೋ

ಹಾಳಾಯ್ತು ಹಟ್ಟಿsಯು

ನುಗ್ಗsವೆ ನಡುಮನೆಗೆ ಹಳೆ ಕೆರೆಯ ನೀರು

ಆಳು ಮಗನೂ ಇಲ್ಲ

ಕಾಳು ಮಗನೂ ಇಲ್ಲ

ಬಿದ್ದsವೆ ಹಟ್ಟಿsಯ ಕಲ್ಲುಗೋಡೆಗಳು ||4||

ಯಾವ ದೈವದ ಆಟ

ಯಾವ ಭೂತದ ಕಾಟ

ಹುಡುಕುತ್ತ ಓಡಿದನು ಜೋಯಿಸರ ಬಳಿಗೆ

ಊರುsನು ಇರಲಿಲ್ಲ

ಕೇರಿsಯು ಇರಲಿಲ್ಲ

ಒಂದಾಗಿ ನೊಂದsವು ಜೀವಗಳು ಒಳಗೆ||5||

ಉತ್ತರೆಯ ನಡೆಯಲ್ಲಿ

ಗಂಗವ್ವ ನಡೆಯಾಗಿ

ದಾರಿsಲಿ ನೆನೆದsರೊ ಭಾಗವ್ವ ಕತೆಯ

ಮಾಯsದ ಮಳೆಯಲ್ಲ

ಮಂತ್ರದ ಮಳೆಯಲ್ಲ

ಊರಿsಗೆ ಸುರಿದsರೊ ಗಾಯsದ ಮಳೆಯ ||6||

ತೇಲುತ್ತ ಮುಳುಗುತ್ತ

ಮುಳುಗುತ್ತ ತೇಲುತ್ತ

ತಪ್ಪಾಯಿತೆಂದsನು ಜೋಯಿಸನು ಕೆರೆಗೆ

ಇತಿಹಾಸ ಬಂದಿತ್ತು

ಚಕ್ರsವು ತಿರುಗಿತ್ತು

ಅಳಿದಿತ್ತು ಹೊತ್ತಿಗೆಯು ಮುನ್ನೀರ ಮಳೆಗೆ||7||

ಸೂರ್ಯsನು ಇರುವಂತ

ಚಂದ್ರsನು ಇರುವಂತ

ಏರಿsಯ ಮೇಲಿದ್ದ ಮಾಸsತಿ ಕಲ್ಲು

ಇಂದಿsಗೆ ಮುಗಿದಿತ್ತು

ನಾಳೆsಗೆ ಸಾಗಿತ್ತು

ಊರಿsನ ಬಂಡಿsಯ ನೊಗಹೊತ್ತ ಕಾಲ||8||

***

ಡಾ. ಪ್ರಸನ್ನ ನಂಜಾಪುರ ಇವರು ರಾಮನಗರ ಜಿಲ್ಲೆ, ರಾಮನಗರ ತಾಲ್ಲೂಕಿನ ನಂಜಾಪುರ ಎಂಬ ಊರಿನವರು. ಯುವ ಬರಹಗಾರರಾದ ಇವರು ‘ಸಂತೆಯೊಳಗೊಂದು ಪ್ರೀತಿಯ ಮಾಡಿ’ ಎಂಬ ಕವನಸಂಕಲನವನ್ನು, ‘ದೇಸಿ ವಿಮರ್ಶೆ’ ಎಂಬ ವಿಮರ್ಶಾ ಸಂಕಲನವನ್ನು ಹೊರತಂದಿದ್ದಾರೆ. ‘ದಲಿತ ಬಂಡಾಯ ಸಣ್ಣಕಥೆಗಳಲ್ಲಿ ಜಾನಪದ ಪ್ರಜ್ಞೆ’ ಎಂಬ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ. ಪದವಿಯನ್ನು ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.