ADVERTISEMENT

ಟಿ.ಎಸ್.ರಾಜೇಂದ್ರ ಪ್ರಸಾದ್ ಅವರ ಕವಿತೆ: ರಣ ಹದ್ದು ಮತ್ತು ಒಂಟಿ ಮೊಲ...!

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 23:33 IST
Last Updated 13 ಸೆಪ್ಟೆಂಬರ್ 2025, 23:33 IST
<div class="paragraphs"><p> ಹದ್ದು</p></div>

ಹದ್ದು

   

1
ಚೆಲ್ಲಾಪಿಲ್ಲಿಯಾದವು
ನಕ್ಷತ್ರ ಕೂಟರಾಶಿಗಳು!
ಕಿತ್ತಾಡಿಕೊಂಡವು
ಕಾರ್ಮೋಡಗಳು ಆಗಸದಲಿ
ಒಂದಕ್ಕೊಂದು ಉಜ್ಜಿ
ಒಡೆಯನ ಹೆಣದ ಮುಂದೆ
ಅದುರುತಿರಲು ಹಚ್ಚಿಟ್ಟ ದೀಪ!

2
ಹೂಡಿತ್ತು ಸಂಚು ದುರ್ವಿಧಿ
ನೀತಿಗೆಟ್ಟವರ ಪಡಸಾಲೆಯಲಿ!
ಆ ವಿಷ ಗಳಿಗೆಯಲಿ
ಹೊಂಚುಹಾಕುತ್ತಿತ್ತು
ಸಮಯಸಾಧಕ ರಣಹದ್ದು!
ಅಳುತ್ತಿತ್ತು ಹಸುಳೆ ಮೊಲ
ಜೇಡಗಟ್ಟಿದ ಮೂಲೆಯಲಿ
ರಣಮೌನ ಸೀಳಿ!

ADVERTISEMENT

3
ರಭಸದಿ ಸೊಕ್ಕಿನ ಹದ್ದು
ಹಾರಿ ಹಾರಿ, ದಾಟಿ ದಾಟಿ ಸರಹದ್ದು
ಕರ್ಕಶ ಸದ್ದು
ಉರಿಮುಖದ ಕೆಂಗಣ್ಣು
ಕೆಂಪು ಮೂತಿಯನು ತೆರೆಯುತ್ತಾ
ಬೀಸುತ್ತಾ ರೆಕ್ಕೆಗಳನು
ನೆಲಕ್ಕಂಟಿಸಿ ನೆರಳನು
ಸೀಳುತ್ತಾ ಕಡು ದಟ್ಟ ಕಾಡನು!

4
ಬೆದರಿತು ಅದುರಿತು
ನರಳಿತು ಸಣ್ಣನೇ
ಹಸುಳೆ ಒಂಟಿ ಮೊಲ
ರಣಹದ್ದು ಬರುವ ರಭಸಕೆ!
ಕಳಚಿಬಿತ್ತು ಆಗಸ
ಕವಚಿತು ಕಗ್ಗತ್ತಲು
ಪುಟ್ಟ ಕಣ್ಣೊಳಗೆ
ತೆರೆಯಿತು ರೌರವ ನರಕದ
ಹೆಬ್ಬಾಗಿಲು!

5
ಹುಟ್ಟಬಾರದು ಹೆಣ್ಣಾಗಿ
ಕಾಡ ಹೂವಾಗಿ!
ಧೇನಿಸಿತು ಕಣ್ಣು ಮುಚ್ಚಿ
ಈಡಾಗದಿರಲಿ
ತನ್ನ ರಕ್ತಮಾಂಸ ರಣಹದ್ದಿಗೆ!


***

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.