ADVERTISEMENT

ಮುನವ್ವರ್ ಜೋಗಿಬೆಟ್ಟು ಅವರ ಕವನ 'ಜೋಳಿಗೆ'

ಮುನವ್ವರ್ ಜೋಗಿಬೆಟ್ಟು
Published 27 ಜುಲೈ 2025, 1:30 IST
Last Updated 27 ಜುಲೈ 2025, 1:30 IST
   

ನಿರಂತರ ಕಡಲು ಕಾಣುತ್ತಿದ್ದರೂ
ಎಷ್ಟೋ‌ ದಿನಗಳ‌ ನಂತರ
ಕಡಲನ್ನೇ ನೋಡಲು ಹೋದದ್ದು ‌ನಿನ್ನೆಯೇ
ಬೆಲೆ ಬಾಳುವ ಬೂಟಿನೊಳಗೆ
ಮರಳ ಕಣಗಳು ತರಚುವಾಗ
ಕಣ್ಣ ಕೆರೆಯಲ್ಲಿ ಕೂದಲು ಬಿದ್ದಂತಹ ಹಿಂಸೆ
ಒಗೆದು ಬರಿಗಾಲಲ್ಲಿ ನಡೆದಾಗಲೇ ತಿಳಿದದ್ದು
ತೊರೆದು ನಡೆಯುವುದರ ಖುಷಿ

ರೆಕ್ಕೆಯೇ ಇಲ್ಲದೆ ಹಡೆಯೆತ್ತಿ
ಹಾರುವ ಕಾಗದದ ಕಾಳಿಂಗನಿಗೆ
ಸೂತ್ರವೆಂಬ ಬಾಲ ಹಿಡಿದ ಹಾವಾಡಿಗ
ಕಡಲ ನಿಟ್ಟುಸಿರಿಗೆ ಹಗುರವಾಗುವ
ನಿರ್ಜೀವ ಬಿದಿರ‌ ಮಕ್ಕಳ ಮುಂದೆ
ಬೆನ್ನುಮೂಳೆ ಇರುವ ತೊಗಳುಗಳೇ ಭಾರ

ನೀರ ಜೋಳಿಗೆಯಲ್ಲಿ ನಿದ್ರೆ ತೂಗುವ ಮಗು
ಬೆಳಕ ಚೆಂಡನ್ನು ನುಂಗಿದ ನೀಲಿ ಮೊಸಳೆ
ನಡೆದಷ್ಟು‌ ಹಿಮ್ಮಡಿ ಎಳೆಯುವ‌ ಉಸುಕಿನಲ್ಲಿ
ನೋವುಗಳೂ ಇಂಗುವುದೇ?
ಮರಳಲ್ಲಿ ಬರೆದದ್ದೆಲ್ಲವೂ ಅಳಿಸುವ ಅಲೆಗೆ
ಮನಸ್ಸಿಗೂ ಬಾ ಎಂದ ಕರೆಯಬಹುದೇ?
ಮಾಯಕದ ನೇವರಿಕೆಗಾಗಿ 
ಈ ಸಂಜೆ ಕಾದು ಕುಳಿತಿದ್ದೇನೆ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.