ನೀ ಕೊಟ್ಟ ಉಂಗುರವನು ಎಸೆದ
ಆ ಹಾಳು ಬಾವಿಯ ಹುಡುಕುತ್ತಿರುವೆ
ಏಸು ವಸಂತಗಳು ಕಳೆದವು
ಉಂಗುರ ತೊಟ್ಟ ಬೆರಳು ಉಸಿರಾಡಿ
ಭಾವ ಕಡಲನು ಕಡೆದು
ನೆಮ್ಮದಿ ತೊಟ್ಟಿದ್ದ ಮನಸು
ಬೀದಿಯಲಿ ಅಲೆಯುತ್ತಿದೆ
ನಿನ್ನ ಕಣ್ಣ ಭಾವದ ತೊಟ್ಟಿಲನು
ಎದೆಯ ತೀರಿಗೆ ಕಟ್ಟಿಕೊಂಡು
ಎಲ್ಲಿ ಪಾದ ಊರಿದರೂ ಆ ನೆಲದ ಮೇಲೆ
ನೀನಾಡಿದ ಮಾತುಗಳು ಮಗುವಾಗಿ ಕೈ ಚಾಚುತ್ತಿವೆ
ಕನ್ನಡಿಯಾದ ಕನಸುಗಳು ಮೈದಡವುತ್ತಿವೆ
ಕೆಸರಾದ ಬದುಕಲಿ ನಿನ್ನೆಸರ ಹುಡುತ್ತಿರುವೆ
ಉರಿಬೇಗೆಯ ನುಂಗಿದ ಕರಿನೆಲ ನೀನು
ಬಿತ್ತುವುದಿತ್ತು ಭಾವ ಬೀಜ
ಮಳೆ ಬಂದು ಕನಸಲಿ
ಕೊಚ್ಚಿಹೋಯಿತು ತೊರೆ ಬಂದು
ಕೊಡಮೆಗೆ ಬಿದ್ದ ಪ್ರೀತಿ ಮೀನು
ಉಸಿರಾಡುತ್ತಿದೆ ಇನ್ನೂ
ಅಲೆವ ಎದೆಗೂಡ ಹಕ್ಕಿಗೆ
ಎಸೆದ ಉಂಗುರದ್ದೇ ಕನಸು
ಎಲ್ಲಂತ ಹುಡುಕಲಿ
ಬತ್ತಿದ ಬಾವಿಯ ಮೇಲೆ
ಮನೆಗಳು ತಲೆ ಎತ್ತಿವೆ
ಎದೆಯ ರಕ್ಕೆಯ ಮುರಿದು
ಕನಸುಗಳ ಪಾಯ ಮಾಡಿಕೊಂಡು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.