ADVERTISEMENT

ಒಂದು ತುಂಡು ಭೂಮಿಗಾಗಿ (ಕವಿತೆ)

ಮೂಡ್ನಾಕೂಡು ಚಿನ್ನಸ್ವಾಮಿ
Published 19 ಅಕ್ಟೋಬರ್ 2019, 19:31 IST
Last Updated 19 ಅಕ್ಟೋಬರ್ 2019, 19:31 IST
ಕಲೆ: ನಾಗಲಿಂಗ ಬಡಿಗೇರ್‌
ಕಲೆ: ನಾಗಲಿಂಗ ಬಡಿಗೇರ್‌   

ಪಾಪಿಷ್ಠ ಪರಂಗಿ ಮಂದಿ ಬಂದು
ನವ ಭಾರತದ ನಕಾಶೆಯ ಗೆರೆ ಎಳೆದು ಹೋದರು
ನಾವು ಒಂದು ಬೃಹನ್ ನಾಗರಿಕತೆಯ ಕುರುಹಿನ ಮೇಲೆ
ಮತ್ತೆ ಬರೆ ಎಳೆದುಕೊಂಡೆವು
ಸಿಂಧೂ ಮತ್ತು ಹಿಂದೂ ಎರಡೂ ಬೇರೆಯಾದವು

ಅಂದು ಶುರುವಾದ ಜಗಳ ನಿಂತಿಲ್ಲ
ನಿಲ್ಲುವ ಸೂಚನೆಯೂ ಇಲ್ಲ
ಒಂದು ತುಂಡು ಭೂಮಿ ಈ ದೇಶದ ಸ್ವಾಭಿಮಾನ, ಅಸ್ಮಿತೆ
ಭಕ್ತಿ ಎಲ್ಲವೂ ಆಗಿದೆ. ಅಲ್ಲಿಂದ ನಯಾಪೈಸೆ ಲಾಭವಿಲ್ಲ, ಪರವಾಗಿಲ್ಲ
ಓಟಿನ ಖಜಾನೆ ಅದಾಗಿದೆ

ಒಂದು ತುಂಡು ಭೂಮಿಗಾಗಿ ನಾವು
ಒಂದು ಧರ್ಮವನ್ನು ನಖಶಿಖಾಂತ ದ್ವೇಷಿಸುತ್ತೇವೆ
ನಮ್ಮಂತೆಯೆ ಇರುವ ಮನುಷ್ಯರನ್ನು ಅನುಮಾನಿಸುತ್ತೇವೆ
ಅವನು ಭಾರತ ಮಾತೆ ಎಂದು ತೊದಲುವಷ್ಟರಲ್ಲಿ
ರಾಮ ರಾಮಾ ಎನ್ನು ಅನ್ನುತ್ತಾ
ಹೊಡೆದು ಹೊಡೆದು ಲಿಂಚಿಸುತ್ತೇವೆ

ADVERTISEMENT

ಒಂದು ತುಂಡು ಭೂಮಿಗಾಗಿ
ನಾವು ದೇಶಪ್ರೇಮವನ್ನು ಒತ್ತೆ ಇಟ್ಟಿದ್ದೇವೆ
ಬಳ್ಳಾರಿಯ ನಡುಹಗಲ ಸುಡುಬಿಸಿಲಿನಲ್ಲಿ ಹುಟ್ಟಿದ ಸೈನಿಕ
ಸಿಯಾಚಿನ್ ಕಣಿವೆಯ ಹಿಮಗಡ್ಡೆಯಲ್ಲಿ ಸೆಡೆತುಕೊಂಡು
ಸಾಯುವುದು ದೇಶಪ್ರೇಮದ ಪರಾಕಾಷ್ಠೆ ಎಂದು ತಿಳಿದಿದ್ದೇವೆ

ರೈತರು ಆತ್ಮಹತ್ಯೆ ಮಾಡಿಕೊಳ್ಳಲಿ
ನಿರುದ್ಯೋಗಿ ಯುವಕರು ಹತಾಶರಾಗಿ ಅಂಡಲೆಯಲಿ
ಬ್ಯಾಂಕುಗಳಲ್ಲಿ ನಮ್ಮ ಠೇವಣಿಯನ್ನು ದೋಚುವ
ಶ್ರೀಮಂತರು ಪಲಾಯನವಾಗಲಿ
ಹಸುಳೆಗಳ ಮೇಲೆ ಅತ್ಯಾಚಾರ ನಡೆಯುತ್ತಿರಲಿ
ಇಷ್ಟು ದೊಡ್ಡ ದೇಶದಲ್ಲಿ ಅವೆಲ್ಲ ಸಣ್ಣ ವಿಷಯ ಎನ್ನುತ್ತೇವೆ

ಅಸಲಿಗೆ ಭೂಮಿಗೆ ನಕಾಶೆಯೆಂಬುದಿಲ್ಲ
ಐವತ್ತು ಮಿಲಿಯ ವರ್ಷಗಳ ಹಿಂದೆ
ಹಿಮಾಲಯವೆಂಬುದು ಇರಲೇ ಇಲ್ಲ, ಜೊತೆಗೆ ಗಂಗೆಯೂ
ಆಫ್ರಿಕಾ ಖಂಡ ತುಂಡಾಗಿ ಹಿಂದೂ ಮಹಾಸಾಗರದಲ್ಲಿ ತೇಲುತ್ತಾ ಬಂದು
ಏಷಿಯಾವನ್ನು ಅಪ್ಪಳಿಸಿದಾಗ ಜಂಬೂದ್ವೀಪ ಉಗಮಿಸಿತು
ದೇವರುಗಳು ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಂಡರು

ಹುಟ್ಟುವ ಜೀವಿಗಳಿಗೆ
ಸಾವು ಖಚಿತ ಎಂದು ತಿಳಿದೇ
ಭೂಮಿತಾಯಿ ನಮ್ಮೆಲ್ಲರನ್ನೂ ಪೊರೆದಿದ್ದಾಳೆ
ಅಂತಿಮ ದಿನದಂದು ಕಾದಿರಿಸಿದ್ದಾಳೆ
ಒಂದು ತುಂಡು ಭೂಮಿಯನ್ನು
ಅತ್ತುಕೊಂಡು ಹೊತ್ತು ಬಂದವರಿಗೆ ಮೂರು ಹಿಡಿ ಮಣ್ಣನ್ನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.