
ಕವಿತೆ
ಮೊನ್ನೆ ಆ ನದಿ ತೀರದಲ್ಲಿ
ಕೂತಿದ್ದ ಕವಿಯೊಬ್ಬನು
ಮುಟ್ಟಿ ಮುಟ್ಟಿ ಕಲ್ಲುಗಳನ್ನು ಎಸೆಯುತ್ತಿದ್ದ!
ಅಲ್ಲಿ ಈ ಕವಿಯನ್ನು ನೋಡಿದವರಲೊಬ್ಬನು
ಹೀಗೆ ಉಸುರಿದನು, "ಕಲ್ಲಳತೆ
ಕಂಡುಹಿಡಿಯುತ್ತಿರಬಹುದು! ಅವನು"
ಮರದ ಬುಡದಲ್ಲಿ ನಿಂತಿದ್ದ ಮತ್ತೊಬ್ಬ
"ಇಲ್ಲ ಇಲ್ಲ ಅವನು ನದಿಯಾಳವ
ಅಳೆಯುತ್ತಿರಬಹುದು!" ಎಂದನು.
ಬಟ್ಟೆ ಸೆಳೆಯುತ್ತಿದ್ದ ಹೆಂಗಸೊಬ್ಬಳು
"ಅವನಿಗೆ ಎಲ್ಲೋ ಭ್ರಾಂತಾಗಿರಬೇಕು"
ಎಂದು ಹುಬ್ಬನ್ನು ಮೇಲೇರಿಸಿದಳು!
ಅಲ್ಲಿಯೇ ಗಾಣ ಹಾಕಿ ಮೀನ್ಹಿಡಿಯುತ್ತಿದ್ದವನೊಬ್ಬ
"ಇಲ್ಲ! ಇಲ್ಲ! ಅಲ್ಲಿ ಈಜುತ್ತಿರುವ
ಮೀನಿನ ಸ್ವಾತಂತ್ರ‍್ಯದ ಬಗ್ಗೆ
ಅವನಿಗೆ ಹೊಟ್ಟೆಕಿಚ್ಚಾಗಿರಬೇಕು" ಎಂದು
ವ್ಯಂಗ್ಯದ ನಗೆ ಬೀರಿದನು!
ಇಲ್ಲಿ ನಾವು ಹಾಡುವ ಹಾಡಿಗೆ
ಬೇಡದವರದು ಒಂದು ಅರ್ಥ
ಬೇಕಾದವರದು ಮತ್ತೊಂದು ಅರ್ಥ
ನಡುವಿನವರದು ಇವೆರಡುಗಳ
ಗೋಡೆಯ ಮೇಲಿನ ಸಂಕೀರ್ಣ ಚಿತ್ರ!
ಇದ್ದವರದು ಒಂದು ಗುಂಪು
ಇದ್ದು ಇಲ್ಲದಂತಿರುವವರದು
ಮತ್ತೊಂದು ಗುಂಪು!
ತಮ್ಮ ತಮ್ಮೊಳಗೆ ಕಿರೀಟ ಕಟ್ಟಿ
ಪಟ್ಟ ಕಟ್ಟಲು ಹವಣಿಸುತ್ತಾರೆ!
ಮಧ್ಯ ಬಂದವರ ಕಿತ್ತೊಗೆಯದೆ,
ಇವರುಗಳ
ನಾಲಿಗೆಗೆ ರುಚಿ ಹತ್ತುವುದೇ ಇಲ್ಲ!
ರೆಕ್ಕೆಗಳಿಲ್ಲದ ದನಿ
ಪದಚೌಕದೊಳಗೆ
ಕಾಲೂರಿ ಬಿದ್ದಿದೆ.
ಅಬ್ಬಾ!
ಒಂದು ದೃಶ್ಯಕ್ಕೆ
ಇಲ್ಲಿ ಎಷ್ಟೊಂದು ಅರ್ಥಗಳು.
ಮಿಂಚುಳ್ಳಿ ಸಾಹಿತ್ಯ ಮಾಸಿಕದ ಮುಖ್ಯ ಸಂಪಾದಕ. ಹುಟ್ಟಿದ್ದು ಮಲೆನಾಡು ಶಿವಮೊಗ್ಗದಲ್ಲಿ. ಖಾಸಗಿ ಕಂಪೆನಿಯೊಂದರಲ್ಲಿ ಸೀನಿಯರ್ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ‘ಇರುವೆ ಮತ್ತು ಗೋಡೆ’ ಕವಿತೆಗಳ ಹಸ್ತಪ್ರತಿಯು 2023ನೇ ಸಾಲಿನ ಕಡೆಂಗೋಡ್ಲು ಕಾವ್ಯ ಪುರಸ್ಕಾರ ಪಡೆದುಕೊಂಡಿದೆ. ‘ಕರಿಧೂಳು’ ಕಥೆಗೆ ಗುಲ್ಬರ್ಗ ವಿಶ್ವವಿದ್ಯಾಲಯದ ದಿ. ಜಯತೀರ್ಥ ರಾಜಪುರೋಹಿತ ಸ್ಮಾರಕ ದತ್ತಿ ಕಂಚಿನ ಪದಕ ದೊರಕಿದೆ. ಪ್ರಜಾವಾಣಿಯಲ್ಲಿ ಪ್ರಕಟಗೊಂಡಿದ್ದ ಇವರ ‘ಹೊಳಲೂರಿನ ಹಾಸ್ಟೆಲ್ ಹುಡುಗರು’ ಕಥೆಯು ಬೆಂಗಳೂರು ವಿಶ್ವವಿದ್ಯಾಲಯದ ಬಿ.ವಿ.ಎ. ಮತ್ತು ಬಿ.ಎಫ್.ಎ. ಪದವಿಗೆ ಪಠ್ಯವಾಗಿದೆ. ಇದುವರೆಗೂ ಒಟ್ಟು ಐದು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.