ADVERTISEMENT

‘ಸಿದ್ಧ, ಸೇವಾಕ್ಷೇತ್ರ: ನಿತ್ಯ ದಾಸೋಹಕ್ಕೆ’: ಚನ್ನವೀರ ಕಣವಿ ಕವನ

ಚನ್ನವೀರ ಕಣವಿ
Published 21 ಜನವರಿ 2019, 11:09 IST
Last Updated 21 ಜನವರಿ 2019, 11:09 IST
   

ಶಿವಕುಮಾರ ಸ್ವಾಮೀಜಿ ಕುರಿತ ಕವಿ ಚನ್ನವೀರ ಕಣವಿ ಅವರ ಕವನ‘ಸಿದ್ಧಗಂಗಾಶ್ರೀ’

–––

ಬೆಟ್ಟ–ಬಂಡೆಯ ನಡುವೆ ಗಂಗೆ ಪುಟಿದದ್ದೆಂದೊ

ADVERTISEMENT

ಜನಜೀವನದ ಕಷ್ಟಕೋಟಲೆಯ ಸ್ತರದಲ್ಲಿ

ಇಳಿದು ತಂಪಿಸಿ, ಮತ್ತೆ ಮೇಲೆದ್ದು ಬರುವಲ್ಲಿ

ಸಿದ್ಧ, ಸೇವಾಕ್ಷೇತ್ರ: ನಿತ್ಯ ದಾಸೋಹಕ್ಕೆ

ವಿದ್ಯಾವಿಶಾಲತೆಗೆ, ನೂತನ–ಪುರಾತನದ

ಚೇತನವ ಹಿಡಿದು ಹೂಡಿ ಜನಮನೋರಥಕೆ

ಜಾತ್ರೆಯೂ ಬೇಕು ಸರ್ವರುತ್ಸಾಹ ಸೌಂದರಕೆ

ಏಕಾಂತ ಪಾತ್ರೆಯು ತುಂಬಿ ತೀರದ ನಿನಾದ

ಕಂಡಿಹನು ನಾನವರನೊಮ್ಮೆ ಹತ್ತಿರದಿಂದ

ತ್ಯಾಗದೆತ್ತರಕೆ ತೂಗಿ, ಮುಗಿಲು ಸುತ್ತಲು ಬಾಗಿ

ನೆಲದ ಬದುಕಿಗೆ ಕರುಣೆ ಕಾಯಕದಲ್ಲಿ ಕರಗಿ

ಮಿರುಗುವ ವಿಭೂತಿ: ನಿರ್ಭಾವದಲಿ ನಡೆಯುವಂದ

ಮನದೊಳಗೆ ಆಗೀಗ ಸದ್ದಿಲ್ಲದೆಯೆ ಮೂಡಿ

ಗೆದ್ದವರು: ಪಡೆದದ್ದಲ್ಲ ಹೇಗೊ ಕಾಡಿ–ಬೇಡಿ.

–ಚನ್ನವೀರ ಕಣವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.