ನಾನೇನೊ ಹೇಳಬೇಕು
ಹೂವು ಅರಳುವಂತೆ
ರೆಕ್ಕೆ ಬಡಿದಾಗ ಉದುರಿದ ಹಕ್ಕಿ ಪುಕ್ಕದಂತೆ
ತುಟಿ ನಗುವನ್ನ ಪ್ರೀತಿಸಿದಂತೆ
ಹೇಳುವುದೇನು?
ಆದರೂ ನೆನಪಾಗುತ್ತಿಲ್ಲ
ಹುಡುಕುತ್ತಿದ್ದೇನೆ ಸದಾ
ಕಳೆದುಹೋದದ್ದು ಏನೆಂಬುದೂ ಗೊತ್ತಿಲ್ಲದೆ
ನಿನ್ನೆದೆ ಆಳದೊಳಗೆ
ನನ್ನೊಳಗೆ ಆಗಾಗ ಸಾಯುವ
ಮರುಕ್ಷಣವೇ ಚಿಗಿಯುವ ಕನಸುಗಳಿಗೆ
ಬೇಸತ್ತು ನೋಡುತ್ತಲೇ ಇದ್ದೇನೆ ಹೊರಗೆ
ಮಳೆ ಅಡಗಿದೆಯೋ?
ಸಿಡಿಲು ಅಡಗಿದೆಯೋ?
ನಕ್ಷತ್ರಗಳೆರಡು ಮಾತ್ರ ಕುಣಿಯುತ್ತಿವೆ
ನಡೆಯಬೇಕು ಎಲ್ಲಿಗೆ?
ಕಾಲುಗಳಿವೆ, ಮಾತು ಕೇಳುತ್ತಿಲ್ಲ
ಕಣ್ಣುಗಳಿಗೆ ದಾರಿ ನೋಡಲು ಮೈಗಳ್ಳತನ
ದಾರಿ ಮುನಿಸಿಕೊಂಡಿರಬಹುದೇ?
ಛೇ ಛೇ ಬೈದರೂ ಕರೆದಪ್ಪಿಕೊಳ್ಳುತ್ತಿದ್ದ ಅವಳ ಬೆತ್ತಲ ನಾಚಿಕೆಯಂತಹದು ಅದು
ನಡೆಯುವ ಹುಕಿ
ನೆನಪುಗಳನ್ನಷ್ಟೇ ಕಕ್ಕುವ ಉಸಿರಿನ ಸಂಕಟಕ್ಕೆ
ಬದುಕಬೇಕು
ಅನಾಮಿಕ ಹುಳುವಿನ ತೆವಳಿನಂತೆ
ಹಣೆಬರಹದ ಗಾಯಕ್ಕೆ
ಉಚ್ಚೆಯೇ ಮದ್ದು
ಹಸಿಯಾದರೆ ಒಂದು ಚಿಟಗುಬ್ಬಿಯ ಇಂಪಾದರೂ ಕಿವಿಯ ಪ್ರೇಮಿಸಬೇಕು
ಸಾವು ಒಂದು ಸುಖ
ಸತ್ತು ಬಿಡಬೇಕು
ಹೂವಿನ ಚಂದದ ಘಮದಂತೆ
ಅಂತ್ಯಕ್ಕಿರುವ ನೂರು ದಾರಿಗಳು
ಆರಂಭಕ್ಕೆ ಅನ್ಯಾಯ ಎಸಗಿವೆ
ಸಾಯುವುದೆಂದರೇನು? ಎಂಬ ಪ್ರಶ್ನೆಗುತ್ತರ
ಸತ್ತಾಗಿದೆ ಯಾವಾಗಲೋ
ದಾಖಲೆ ಮೊಹರು ಪತ್ರಗಳು ಬಚ್ಚಿಡಲ್ಪಟ್ಟಿವೆ
ಹೂವಿಗೂ
ಕಂಡ ಬೆಳಕುಗಳಲ್ಲಿ ಕೆಲವು ರೋಗಗ್ರಸ್ತ ಎಂಬ ಶಂಕೆ
ಅದಕ್ಕೆ ಬೀಜವಾಗಲೇ ಅದು ಉದುರಿ ನಗುತ್ತದೆನಿಸುತ್ತದೆ
ಬೆಳಕು ಸಿಟ್ಟಾಗಬಹುದು
ಕತ್ತಲು ಅದನ್ನು ತಣಿಸುತ್ತದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.