ಹಸಿವನ್ನೇ ಅನ್ನ ಮಾಡಿ
ದಣಿವನ್ನೇ ದ್ರವ ಮಾಡಿ
ಆಯಾಸಕ್ಕೆ ಮುಲಾಮು ಹಚ್ಚಿ
ಚಿಲ್ಲರೆಯ ಸದ್ದಿಗೆ ಆಹ್ಲಾದಗೊಳ್ಳತ್ತಾಳೆ
ಯಾರದೋ ತಾಯಿ
ಅವ್ವ ಎಂದಾಗ ಕಿವಿ ಅಗಲಿಸಿ
ಪರದೆಯ ಸರಿಸುತ್ತಾಳೆ
ಉರುಳು ಗಾಲಿಗಳ ಸಂಧಿಯ ಇಣುಕಿ
ಹೊರಟ ಪಾದಗಳ ಅಚ್ಚಿಗೆ ಹರಸಿ
ತೂತು ಬಿದ್ದ ಆಕಾಶದ ಅಳುವಿಗೆ
ತಾನೂ ಜೊತೆಯಾಗುತ್ತಾಳೆ
ನಕ್ಷತ್ರ ಮಿನುಗುತ್ತವೆ
ಚಂದಿರ ಫಲಿಸುತ್ತಾನೆ
ಮುಸ್ಸಂಜೆಗೆ ಮಿಡಿವ ಹಕ್ಕಿಗಳ
ಗೂಡಿನ ತಾಣ ಬಾಗಿಲು ಹಾಕುತ್ತದೆ
ಅವಳು ಕಾಯುತ್ತಲೇ ಇದ್ದಾಳೆ
ಮತ್ತೆ ಮಳೆಗಾಗಿ
ತೋರದಂತೆ ತನ್ನ ಕಣ್ಣ ತೇವಕಾಗಿ
ಒಳಗಿನ ಕಣ್ಣು ಬೀಳುವ ಉಲ್ಕೆ
ಹೆಪ್ಪುಗಟ್ಟುವ ಹೃದಯಕ್ಕೆ ಮಂಜಿನ ಕಣ್ಣು
ಅವಳು ಒಂದು ನೆರಳಿಗಾಗಿ
ಒಂದು ಕರುಳಿಗಾಗಿ
ಮತ್ತೆ ಒಂದು ಮಡಿಲಿಗಾಗಿ
ಲೋಕವನೇ ಅಲೆಯುತ್ತಾಳೆ
ಪಾಪಿ ಯಾರು ಜಗದಲಿ
ದೇವರು ಈಗ ಬರೆದಿಡಬೇಕು
ಶಾಯಿ ಮುಗಿದರೇನು
ಅವಳ ಶಾಪ ಕಳೆಯಬೇಕು
ಹೇಳಿ ನೀವೆ? ಯಾರದೋ ತಾಯಿ
ಇಲ್ಲಿ ಯಾಕೆ ಮರುಗುತ್ತಾಳೆ?
ಇಲ್ಲದ ವಾತ್ಸಲ್ಯಕೆ
ದುರ್ಬೀನು ಯಾಕೆ ಹಿಡಿಯುತ್ತಾಳೆ?
ಸತ್ತು ಗೋರಿಕಟ್ಟಿಕೊಂಡ ಊರಿನಲಿ
ಸಾವನೇಕೆ ಹರಸುತ್ತಾಳೆ
ತೂತು ಬಿದ್ದ ಕೈಗಳಲಿ
ಉಂಡು ಹೋದವರೆಷ್ಟೋ
ನನ್ನವರೇ ಎಂದ ಹಸುಳೆಗಳು
ಕೊಂದ ಕ್ರಿಮಿಗಳೆಷ್ಟೋ
ಅವಳು ಗಾಯಗಳನ್ನು ಮುಚ್ಚಿಡುತ್ತಾಳೆ
ಕತ್ತಲೆಯಲಿ ಜಗವ ಮರೆಯುತ್ತಾಳೆ
ಪಾದ ಮೆಟ್ಟಿದ ಧೂಳಿನ ಕಣದಲಿ
ಜಗ ಎಂದೋ ತೊಯ್ಯಬೇಕಿತ್ತು
ಅವಳು ಯಾರದೋ ತಾಯಿ
ಕ್ಷಮಿಸಿ ಬಿಡುತ್ತಾಳೆ
ಅವಳ ಕಣ್ಣುಗಳು ನೋವಿನಲ್ಲಿ
ಷರಾ ಬರೆಯುತ್ತವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.