
ಕವಿತೆ
ಈಗ ಏನು ಅನ್ನಿಸುವುದಿಲ್ಲ
ಗೆದ್ದರೂ ಸೋತರು..
ನಕ್ಕರೂ ಅತ್ತರೂ
ಇದರಿಂದ ಆಟದ ಗತಿಯೇನು
ಕುಂದಿಲ್ಲ
ಅವರು ಕೇಳುತ್ತಾರೆ,
ನಿಜಕ್ಕೂ ನಿಮಗೆ ಏನೂ ಅನ್ನಿಸುವುದಿಲ್ಲವಾ?
ಎಷ್ಟೆಲ್ಲ ಪ್ರಯತ್ನ, ಹೆಣಗಾಟದ ನಡುವೆ
ಒಂದು ಸಣ್ಣ ನಿರಾಸೆಯೂ..
ಹಾಗೆ, ಅನ್ನಿಸುವುದ್ದಕ್ಕಾದರೂ ಏನಿದೆ?
ಒಂದೋ ಸೋಲು, ಇಲ್ಲವೇ ಗೆಲುವು
ಸಾವು; ಮರುಹುಟ್ಟು
ಎರಡು ಸಂಭವನೀಯತೆಗಳ
ನಡುವೆ ಆಯ್ಕೆ ಒಂದೇ.
ನಾನು ಬೀಗಿದಾಗ
ಅವರ ಬಿಕ್ಕುವಿಕೆ ನನಗೆ ಕೇಳಿಸದೇ
ಹೋಗಬಹುದು
ಆಕಾಶದಲ್ಲಿ ಹಾರುವ ಅವರಿಗೆ
ನೆಲದಲ್ಲಿ ನಡೆಯುವ ನಾನು
ತೆವಳಿದಂತೆ ತೋರಬಹುದು.
ಯಾವುದೋ ಕಾಲಕ್ಕೆ
ಯಾವುದೋ ಆಗುತ್ತದೆ
ಮಳೆ ಬೆಳೆ, ಅತಿವೃಷ್ಟಿ ಅನಾವೃಷ್ಟಿ
ಬುದ್ಧ- ಅಂಗುಲಿಮಾಲ
ಮುಖಾಮುಖಿ; ಶರಣಾಗತಿ.
ಇವತ್ತು ನಾನು, ನಾಳೆ ಅವರು
ಈ ತಿರುಗಣಿಯೊಳಗೆ
ತಿರುಗುಮುರುಗಾಗಿ ಬಿಡಬಹುದು
ದೇವರು ಆಟದ ಅಂಗಳಕ್ಕಿಳಿದ ಹೊತ್ತು
ನಾವೇ ಪ್ರೇಕ್ಷಕರು
ಗಡುವು ಮೀರಿದರೆ
ಹಾಲು ಒಲೆಯ ಮೇಲಿಟ್ಟರೂ
ಉಕ್ಕುತ್ತದೆ,
ಸ್ಟೌವಿನ ಮೇಲಿಟ್ಟರೂ ..
ಒಲೆ ಯಾವುದೇ ಇರಲಿ,
ಹದದ ಪಾಠಕ್ಕೆ ಅಣಿಗೊಳಿಸಿದರೆ
ಕಣ್ಗಾವಲಿಲ್ಲದೆಯೂ ಮೀರದು
ಮೇರೆ
ಇದೊಂದು ಸ್ಥಿತಿ
-ಗೆ,
ಸಂತನಾಗಬೇಕೂ ಇಲ್ಲ
ತಪಸ್ಸುಗೈಯಬೇಕಾಗಿಯೂ ಇಲ್ಲ
ಧ್ಯಾನವೊಂದ ಹೀಗೆ ಎದೆಯೊಳಗೆ
ನೆಲೆಗೊಳಿಸಿ
ಒಳಗಿನ ನೋಟವೊಂದ ಹರಿತಗೊಳಿಸಿದರೆ
ಸಾಕು.
ಈಗ
ವಿಜ್ಞಾನದ ಸೂತ್ರದೊಳಗೆ
ಅಧ್ಯಾತ್ಮವನ್ನೂ
ಅಧ್ಯಾತ್ಮದೊಳಗೆ ವಿಜ್ಞಾನವನ್ನು
ನಮಗೆ ಬೇಕಾದಂತೆ ಒಗ್ಗಿಸಿಕೊಳ್ಳಬಹುದು
ಅಂಗಳದ ಹಕ್ಕಿ ಬಾನಂಚಿನವರೆಗೂ
ಹಗೂರಕ್ಕೆ ಹಾರುವುದು ಹೇಗೆಂಬುದು
ಸೋಜಿಗವೆನಿಸದು ಆಗ
ಸ್ಮಿತಾ ಅಮೃತರಾಜ್. ಸಂಪಾಜೆ ಗೃಹಿಣಿ ಮತ್ತು ಕೃಷಿಕ ಮಹಿಳೆ. ಕೊಡಗಿನ ಸಂಪಾಜೆ ಬಳಿಯ ಚೆಂಬುವಿನಲ್ಲಿ ವಾಸ. ಲಲಿತ ಪ್ರಬಂಧ ಕವನ ಸಂಕಲನ ಪುಸ್ತಕ ಪರಿಚಯ ಸೇರಿದಂತೆ ಒಟ್ಟು ಏಳು ಪುಸ್ತಕಗಳು ಪ್ರಕಟಗೊಂಡಿವೆ. ಕೆಲವು ಕವಿತೆ ಮತ್ತು ಪ್ರಬಂಧಗಳಿಗೆ ಬಹುಮಾನಗಳು ಸಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.