ಉರಿದು ಉಳಿದ ಮೂಳೆ
ಉರಿಸಿ ಉಳಿದ ಮರದ ಕೊರಡು
ಸಾಧ್ಯವಾದರೆ
ನೆಟ್ಟು ಬಿಡಿ
ಅಲ್ಲೇ ಮಸಣದ ಒಂದು ಬದಿ..
ಹೆಗಲ ಮೇಲೆ ಯಾತ್ರೆ ಬರುವಾಗ
ಹೂ ಎಸೆದಿದ್ದರು
ಕೆಲವರು
ತಮ್ಮ ಶಾಪದಲ್ಲಿ ಅದ್ದಿಕೊಂಡು,
ದಾರಿಯಲ್ಲೇ ತೊಳೆದುಕೊಂಡಿದ್ದರು
ಹಲವರು
ಮೈಲಿಗೆ,
ತಮ್ಮ ತಮ್ಮ ಕಣ್ಣೀರು
ಸುರಿಸಿಕೊಂಡು..
ನಾಲ್ಕು ಹೂವು
ಬೊಗಸೆ ದುಃಖ ಸುರಿಯಿರಿ
ನೆಟ್ಟ ಮೂಳೆಗೆ
ಊರಿದ ಮರದ ಕೊರಡಿಗೆ..
ಕಣ್ಣೀರಿಗೆ
ಕೊನರುವುದಿಲ್ಲ
ಯಾವ ಉರಿದ ಕೊರಡೂ
ಉರಿದು ಉಳಿದ ನನ್ನ ಮೂಳೆ
ತುಂಡು
ಮೊಳೆತರೆ ಅಚ್ಚರಿ ಪಡಬೇಡಿ..
ನಾಳೆ ನೀವು ಇಲ್ಲೇ
ಮಲಗುವಿರಲ್ಲ.. ಮಸಣದಲಿ
ಬಿಸಿಲು ಹಾಸಿಕೊಂಡು
ಚೂರು ನೆರಳು ಹಾಸುವೆ ನಿಮಗೆ
ಬೇಸರಿಸಿಕೊಳ್ಳಬೇಡಿ..
***
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.