ADVERTISEMENT

ಚಂದ್ರಿಕಾ ಹೆಗಡೆ ಅವರ ಕವನ: ಮುದುಕಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 23:30 IST
Last Updated 17 ಜನವರಿ 2026, 23:30 IST
   

ನಡೆಯುತ್ತಿದ್ದಾಳೆ ಮುದುಕಿ
ಮುಸ್ಸಂಜೆಯ ದಾರಿಯಲಿ
ಉದ್ದಾನುದ್ದದ ಹಾದಿಯಲಿ 
ನಡೆನಡೆದು ಕೃಶವಾದ ದೇಹ
ಬಾಗಿದ ಬೆನ್ನು
ತಲೆ ಮೇಲೆ ಉದುರಿ ಉಳಿದ ಬೆಳ್ಳಿ ಕೂದಲಿನ ತೆಳುಗಂಟು 
ಮತ್ತು ಬಗಲಲ್ಲಿ ಅವಚಿಕೊಂಡಿದ್ದಾಳೆ
ಒಂದು ಹಳೆಯ ಬಟ್ಟೆಯ ಗಂಟು.


ಅಂತಾದ್ದೇನಿಲ್ಲ ಮಾಸಿದ ಗಂಟಿನೊಳಗೆ
ಇಂದಿನ ಕೂಳಿಗೆ ಬೇಕಾದ ಒಂದು ಹಿಡಿ ಕಾಳು
ಎರಡು ಈರುಳ್ಳಿ , ಒಂದು ಟೊಮೇಟೊ
ಇನ್ನೂ ಬಿಡಿಸಿದರೆ ಒಳಗಿರಬಹುದು
ಒಂದಷ್ಟು ನೋವು ದುಃಖ ದುಮ್ಮಾನ, ಅವಮಾನ..
ಹಿಂದಿರುಗಿ ನೋಡದೇ ನಡೆಯುತ್ತಿದ್ದಾಳೆ ಅವಳು
ತಿರುತಿರುಗಿ ನೋಡುವಂತಾ ಮಧುರ ನೆನಪುಗಳೇನಿಲ್ಲ
ಈ ತನಕ ನಡೆದು ಬಂದ ಹಾದಿಯಲಿ
ಹಸಿವು ಬಡತನ ಕಾಯಕಗಳ ನಡುವೆ
ಹೆಕ್ಕುವಂತಾ ಸುಖದ ತುಣುಕುಗಳೇನಿಲ್ಲ.


ನಡೆಯುತ್ತಿದ್ದಾಳೆ ಸುಮ್ಮನೇ ಮುಂದೆ ಮುಂದೆ
ಅವಳ ಗುರಿ ಯಾವಾಗಲೂ ಒಂದೇ
ಮನೆ ಸೇರುವುದು ಮತ್ತು
ಅಂದಿನ ಹಸಿವೆಗೊಂದಿಷ್ಟು ತುತ್ತಿಡುವುದು
ತನದೊಂದೇ ಅಲ್ಲ
ತನ್ನ ಜೊತೆಗಿದ್ದವರ ಹಸಿವೆಗೂ
ತುತ್ತಿಡುತ್ತಲೇ ಬಂದವಳು ಅವಳು
ಹೊಟ್ಟೆ ತುಂಬಿದವರು ಬಿಟ್ಟು ಹೋದ ಮೇಲೆ
ಈಗವಳು ಒಂಟಿ ಜೀವ.

ADVERTISEMENT


ಬಲವಿಲ್ಲದಿದ್ದರೂ ಕಾಲುಗಳಲ್ಲಿ
ಹೆಜ್ಜೆ ತಪ್ಪಿಸದೇ ನಡೆಯುತ್ತಲೇ ಇದ್ದಾಳೆ
ಮಂಜುಗಣ್ಣಿಗೆ
ಬಹಳ ದೂರವೇನೂ ಕಾಣುತ್ತಿಲ್ಲ ಮುಂದಿನ ದಾರಿ
ಕಂಡಷ್ಟೇ ದಾರಿಯಲಿ ಒಂದೊಂದೇ ಹೆಜ್ಜೆಯಿಡುತ್ತಿದ್ದಾಳೆ
ಇನ್ನೇನೂ ಹೆಚ್ಚು ದೂರವಿರಲಿಕ್ಕಿಲ್ಲ ಈ ದಾರಿ.


ಒಂದೊಂದು ನೆರಿಗೆಗೂ ಒಂದೊಂದು 'ಹೆಣ್ಣುಕಥೆ ' ಹೇಳುವ 
ಮುಖದ ಸುಕ್ಕುಗಳಲ್ಲಿ
ಅಂತಾ ದೂರುಗಳೇನಿಲ್ಲ ಸದ್ಯ
ಬದಲಾಗಿ
ಹರಿದರೂ ಮಾಸಿದರೂ
ಬೆತ್ತಲಾಗಿಸದೇ
ದಯಪಾಲಿಸಿದ ಈ ಒಂದು ಸೀರೆಗಾಗಿ
ಕೃತಜ್ಞತೆಯೇ ಇದೆ ಆ ದೇವರಲ್ಲಿ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.