
ದೊಡ್ಡಿಶೇಖರ
ಹುಲಿಯನಾಗಲು ಹೊರಟು
ಬಸ್ಸಿನ ಹವೆಯಲ್ಲಿ ಈಜುತ್ತಿದ್ದಾಗ
ಮೊಬೈಲ್ ಗಾಳದಲ್ಲಿ ಸಿಕ್ಕಿಬಿದ್ದು
ಶವದ ಸುದ್ದಿಯ ಮುಳ್ಳು ಚುಚ್ಚಿ
ಬೇಸರದ ಕಲೆ ಕದಡಿ ಹರಿಯಿತು
ಬೈಕಿನಲ್ಲಿ ಅಡ್ಡಾಡುತ್ತಿದ್ದವ ಬ್ಯಾನರಿನಲ್ಲಿ ನಿಂತಿದ್ದ
ಬೊಂಬಾಟ್ ಬಾಯ್ಸ್ ಶ್ರದ್ಧಾಂಜಲಿ ಸಲ್ಲಿಸಿತ್ತು
ಲೈಟ್ ಕಂಬಕ್ಕೆ ಬಿಗಿದ ಚಿತ್ರದ ದೀಪಗಳು ಉರಿಯುತ್ತಾ
ನೂರಾರು ಬಾಯಲ್ಲಿ ಕಥನವಾಗಿ, ಹತ್ತಾರು ಕಣ್ಣಲ್ಲಿ ನೀರಾಗಿ
ಕಾಡಿ ಕದಲೊಲ್ಲದೆ ಕೈಕಟ್ಟಿ ಮಲಗಿದ್ದಾನೆ ಕಾಟಿನ ತುಂಬ
ಕಣ್ಣು ಬಿಟ್ಟಿದ್ದರೆ ಆಕಳಿಸುವನು ಎದ್ದು ಕೂರುವನು ಎಂಬಂತೆ
ಹೊರವಾಗಿ ಬೆಳೆದ ಕಪ್ಪಹಸಿರು ಗುಂಗುರು ಗಡ್ಡ ಮೀಸೆ
ಮೈಮನದ ಒಳಾಸೆಗೆ ಭಾಷೆಯ ಚಿತ್ರಲಿಪಿಯಾಗಿತ್ತು
ತುತ್ತು ನೀಡುವ ಹೊತ್ತಾಗಿತ್ತು ಹೆತ್ತವರಿಗೆ ಆಸೆ ಪಸೆಗಟ್ಟಿ
ಕಿಡಿಕಾಣದ ಅಕ್ಷರದ ಮಣಿಸರವ ಎಂದೋ ಕಿತ್ತೊದರಿದ್ದ
ಕಾಸಿನ ಮರಿನಾಯಿಯ ಹಿಡಿದು ಹುಲಿಯನಾಗಲು ಹೊರಟಿದ್ದ
ನಾಯಿ ಮೂಗೊಳ್ಳೆ ಬಿರಿಯುವುದು ಶುರುವಾದಂತೆ
ಮೂಳೆಯ ಚೈನಿನಲ್ಲೇ ಹಗಲು ರಾತ್ರಿಯ ಕೂಡಿಕಟ್ಟುವುದು
ಹುಲಿ ವೇಷದ ಅವತಾರಕ್ಕೆ ಅಮಲು ನೊರೆಗರೆವ ಬಾಟಲು
ತುಂಡು ಗುಂಡಿನಲ್ಲೇ ಜೀವನದ ಸರ್ವಸ್ವ ಕಥನ ಕಾರ ಕಡೆದಿತ್ತು
ರುಚಿಯೇ ದಾರಿ ಮಜವೇ ಗುರಿ ಸೂತ್ರದಲ್ಲಿ ಸಿಕ್ಕಿದ ನಟನಾಗಿ
ಆಡುತ್ತಾ ಆಡುತ್ತಾ ಮೈದಾಳಿದ ತರೇಹವಾರಿ ಘಟಕ್ಕೆ
ಡೇರೆಗೆ ನುಗ್ಗಿದ ಒಂಟೆಯಂತೆ ಎತ್ತಿದ್ದೇನು ತೋರಿದ್ದೇನು
ಹುಣ್ಣು ಹುಣ್ಣು ಕಣ್ಣು ಕರುಳಿಲ್ಲದ ಹುಣ್ಣು ಅವ್ವ ಅಪ್ಪನಾಗಿ
ಕೆರಳಿ ನರಳಿ ಅತ್ತು ಸತ್ತವರು ಮಾತು ಬಿಟ್ಟು ಮುದುಡಿದರು
***