ಎಲ್ಲಾ ಬಗೆಯ
ಹಾಳೆಯಲ್ಲಿಯೂ,
ತುರುಸು ಬಿರುಸು
ಕ್ಯಾನ್ವಾಸಿನ ಮೇಲೂ
ಮೃದುವಾಗಿ ಸ್ಪರ್ಷಿಸಿ
ನಯವಾಗಿ, ಮೆದುವಾಗಿ
ಕುಂಚ ಮೂಡಿಸುವ
ಆಕಾರ, ಚಿತ್ರಬಿಂಬ
ವಿಷಯಾಧಾರಿತ
ಕಲ್ಪನೆಯ ವ್ಯಾಖ್ಯಾನ
ಆಳದ ಆಂತರ್ಯ
ಎತ್ತರಕ್ಕೆ ನಿಲುಕುವ
ರಮ್ಯ ಸಂಭವನೀಯತೆ
ಸೃಷ್ಟಿಕ್ರಿಯೆಯ ದಿವ್ಯಾರಂಭ
ಮತ್ತು ಅನನ್ಯ ಅಂತ್ಯ
ಶಕ್ತಿಯ ಒಳಪ್ರವಾಹ
ಚೌಕಟ್ಟಿನ ಪರದೆಯ
ಉಪರಿಯಲ್ಲಿ ಹಠಾತ್ತಾಗಿ
ಹಾರಾಡುವ ಸೃಜನಶೀಲ
‘ರಂಗಿ’ನಾಟ
ಕೆಲವೊಮ್ಮೆ ಸಾಕಾರ ,
ಮತ್ತೊಮ್ಮೆ ನಿರಾಕಾರ.
ಆದಿಮೂಲ ಪ್ರಕ್ರಿಯೆ
ಗೆರೆಗಳು ಸಂಧಿಸುತ್ತಾ
ಸೇರುವ ಓಕುಳಿಯ ಬಣ್ಣದ
ಆತ್ಯಂತಿಕ ರೂಪು
ಬಿಂದುವಿನ ನಾಭಿಯಿಂದ
ಬ್ರಹ್ಮಾಂಡದಂಚು ತಲುಪುವ
ಮಹಾಪಾತಾಳಿ ಪಯಣ
ಮೂರ್ತ ಅಮೂರ್ತ
ಚಿತ್ರ ವೈವಿಧ್ಯ
ಆ ಅನುಭವ, ಲಯಬದ್ಧ
ಏಕಾಗ್ರಚಿತ್ತದ ಸರಳ
ಸಹಜ ಭಾವಬದ್ಧತೆ
ಭೂಮಿ ಕ್ಷಿತಿಜಗಳ
ವರ್ಣಾಲಿಂಗನ
ಏಕಸೂತ್ರದಲ್ಲಿ ಬಂಧಿಸುವ
ಸಮಯ, ಸೀಮಾರೇಖೆಗಳ
ಏಕ ಪ್ರತ್ಯೇಕ ರೂಪಾಂತರಿತ
ಪಂಚಭೂತಗಳ ಸಮ್ಮಿಲನ
ಸ್ವಯಂಭೂವಿನಿಂದ
ಸ್ವಾಧಾರಿತ ಅನುಭೂತಿಯತ್ತ
ಚಲಿಸುವ ಮಹಾಅಭಿಯಾನ
ಕಲಾವಿದನ ಆತ್ಮಾನುಸಂಧಾನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.