ADVERTISEMENT

ಸಾಹಿತ್ಯ ಸಮ್ಮೇಳನದ ಸಿಹಿ ಖಾದ್ಯದಲ್ಲಿ ಬೆಲ್ಲದ ಸವಿ;ಮಾದ್ಲಿ, ಶೇಂಗಾ ಹೋಳಿಗೆ ತಯಾರಿ

150 ಬಾಣಸಿಗರಿಂದ ಭಕ್ಷ್ಯಗಳ ತಯಾರಿ

ಇ.ಎಸ್.ಸುಧೀಂದ್ರ ಪ್ರಸಾದ್
Published 3 ಜನವರಿ 2019, 9:50 IST
Last Updated 3 ಜನವರಿ 2019, 9:50 IST
ಸಮ್ಮೇಳನದಲ್ಲಿ ಉಣಬಡಿಸಲು ಮಾದ್ಲಿ ಸಿದ್ಧತೆಯಲ್ಲಿರುವ ಅಡುಗೆ ಸಿಬ್ಬಂದಿ
ಸಮ್ಮೇಳನದಲ್ಲಿ ಉಣಬಡಿಸಲು ಮಾದ್ಲಿ ಸಿದ್ಧತೆಯಲ್ಲಿರುವ ಅಡುಗೆ ಸಿಬ್ಬಂದಿ   

ಧಾರವಾಡ: 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆ ಭರದಿಂದ ಸಾಗಿದೆ. ಅತಿಥಿಗಳಿಗೆ ಉಣಬಡಿಸಲು ಮಾದ್ಲಿ ಹಾಗೂ ಶೇಂಗಾ ಹೋಳಿಗೆ ತಯಾರಿಸುವ ಕಾರ್ಯದಲ್ಲಿ ಬಾಣಸಿಗರು ತಲ್ಲೀನರಾಗಿದ್ದಾರೆ.

ಈ ಹಿಂದೆ ನಾಲ್ಕು ಸಮ್ಮೇಳನಗಳಲ್ಲಿ ಅಡುಗೆ ಸಿದ್ಧಪಡಿಸಿದ ಅನುಭವ ಇರುವ ಭೈರು ಕೇಟರ್ಸ್‌ನ ಎರಡು ಸಾವಿರ ಸಿಬ್ಬಂದಿ, ಈಗಾಗಲೇ ಸಮ್ಮೇಳನ ನಡೆಯಲಿರುವ ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಬೀಡು ಬಿಟ್ಟಿದ್ದಾರೆ. ಜ.4ರಿಂದ ಸಮ್ಮೇಳನ ಆರಂಭವಾಗುತ್ತದೆಯಾದರೂ ಸಿಹಿ ತಿನಿಸುಗಳ ಸಿದ್ಧತೆ ಈಗಾಗಲೇ ಆರಂಭವಾಗಿದೆ.

ಸಂಕ್ರಾಂತಿ ಸಂದರ್ಭದಲ್ಲಿ ರಾಜ್ಯದ ದಕ್ಷಿಣದ ಭಾಗದಲ್ಲಿ ಎಳ್ಳು– ಬೆಲ್ಲ ಸಿದ್ಧಪಡಿಸುವಂತೆ, ಉತ್ತರ ಕರ್ನಾಟಕದಲ್ಲಿ ಗೋಧಿಹಿಟ್ಟಿನಿಂದ ತಯಾರಿಸುವ ಮಾದ್ಲಿ ವಿಶೇಷ. ಅಂದಾಜು 150 ಬಾಣಸಿಗರು ಇದರ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. 30 ಕ್ವಿಂಟಲ್‌ ಗೋಧಿ ಹಿಟ್ಟು ಮತ್ತು 30 ಕ್ವಿಂಟಲ್ ಬೆಲ್ಲ ಬಳಸುತ್ತಿದ್ದಾರೆ.

ADVERTISEMENT

ಓವನ್ (ಅವನ್‌) ಮಾದರಿಯಲ್ಲಿರುವ ವಿಶೇಷ ಯಂತ್ರದಲ್ಲಿ ಗೋಧಿಯ ಉಂಡೆಗಳನ್ನು ಇಟ್ಟು ಸುಡಲಾಗುತ್ತದೆ. ಹದವಾಗಿ ಬೆಂದ ಉಂಡೆಗಳು ನೋಡಲು ಕ್ರಿಕೆಟ್ ಚೆಂಡಿನಂತೆಯೇ ಕಾಣಿಸುತ್ತವೆ. ಹೀಗೆ ಬೆಂದ ಹಿಟ್ಟಿನ ಉಂಡೆಗಳನ್ನು ಇಲ್ಲಿ ನಿಯೋಜನೆಗೊಂಡಿರುವ ಮಹಿಳಾ ಸಿಬ್ಬಂದಿ ಸಣ್ಣಗೆ ಪುಡಿ ಮಾಡುತ್ತಾರೆ. ನಂತರ ಅದಕ್ಕೆ ಬೆಲ್ಲ, ತುಪ್ಪವನ್ನು ಬೆರೆಸಿ ಮಾದ್ಲಿ ಸಿದ್ಧಪಡಿಸಲಾಗುತ್ತದೆ. 80 ಸಾವಿರ ಶೇಂಗಾ ಹೋಳಿಗೆ ಸಿದ್ಧವಾಗುತ್ತಿವೆ.

ಸಮ್ಮೇಳನದಲ್ಲಿ ಉಣಬಡಿಸುವ ಹುಗ್ಗಿ, ಶೇಂಗಾ ಮತ್ತು ಮಾದ್ಲಿಯಲ್ಲಿ ಸಕ್ಕರೆ ಬದಲಿಗೆ ಬೆಲ್ಲ ಬಳಸಲಾಗುತ್ತಿದೆ. ಈ ಸಲುವಾಗಿ 150 ಕ್ವಿಂಟಲ್ ಬೆಲ್ಲ ತರಿಸಲಾಗಿದೆ. 200 ಕ್ವಿಂಟಲ್‌ ಸೋನಾ ಮಸೂರಿ ಜೀರಾ ಅಕ್ಕಿ, 30 ಕ್ವಿಂಟಲ್‌ ಕಲಬುರ್ಗಿಯ ಪಟಗಾ ಬೇಳೆ, 100 ಕ್ವಿಂಟಲ್‌ ಗೋಧಿ ಹಿಟ್ಟು, ಸಾವಿರ ಅಡುಗೆ ಎಣ್ಣೆಯ ಡಬ್ಬಗಳನ್ನು (ಒಂದರ ತೂಕ 15 ಕೆ.ಜಿ) ಇಲ್ಲಿನ ಅಡುಗೆ ಕೋಣೆಯಲ್ಲಿ ದಾಸ್ತಾನು ಮಾಡಲಾಗಿದೆ.

ಕುಡಿಯುವ ನೀರಿಗಾಗಿ ಎರಡು ಸಾವಿರ ಲೀಟರ್‌ ಸಾಮರ್ಥ್ಯದ 15 ಟ್ಯಾಂಕ್‌ಗಳನ್ನು ಇಟ್ಟು, ಅವುಗಳಿಗೆ 600 ನಳಗಳನ್ನು ಅಳವಡಿಸಲಾಗಿದೆ. ನೋಂದಾಯಿತ ಪ್ರತಿನಿಧಿಗಳಿಗೆ 100 ಪ್ರತ್ಯೇಕ ನಳಗಳನ್ನು ಅಳವಡಿಸಲಾಗಿದೆ. ಬೆಳಗಿನ ಉಪಾಹಾರ ಬಡಿಸುವ ಹಾಗೂ ಅಡುಗೆ ನಿರ್ವಹಿಸುವ ಹೊಣೆಯ‌ನ್ನು ಧಾರವಾಡದಿಂದ 5 ಕಿ.ಮೀ. ಸುತ್ತಳತೆಯಲ್ಲಿರುವ ಅಂಗನವಾಡಿಯ ಅಡುಗೆ ಸಹಾಯಕರಿಗೆ
ವಹಿಸಲಾಗಿದೆ.

ಅಡುಗೆ ಕೋಣೆಯ ಮೇಲ್ವಿಚಾರಣೆ ವಹಿಸಿರುವ ಆಹಾರ ಇಲಾಖೆ ಜಂಟಿ ನಿರ್ದೇಶಕ ಡಾ. ಸದಾಶಿವ ಮರ್ಜಿ ಅವರು ಪ್ರತಿಕ್ರಿಯಿಸಿ, ‘ಸಮ್ಮೇಳನದಲ್ಲಿ ಸಾಹಿತ್ಯದಷ್ಟೇ ಮುಖ್ಯವಾದದ್ದು ಊಟ. ಹೀಗಾಗಿ ಯಾವುದರಲ್ಲಿಯೂ ರಾಜಿ ಮಾಡಿಕೊಳ್ಳುತ್ತಿಲ್ಲ. ಪಾಲಿಕೆ ಆಯುಕ್ತ ಶಕೀಲ್ ಅಹ್ಮದ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎನ್.ಮುನಿರಾಜು ಸ್ಥಳದಲ್ಲೇ ಮೊಕ್ಕಾಂ ಹೂಡಿ ಅಡುಗೆ ಮೇಲ್ವಿಚಾರಣೆ ನೋಡುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.