‘ಮಹಿಳೆಯರು ಆತ್ಮಕಥನ ಬರೆಯುವುದೆಂದರೆ ಮೊದಲು ಹಿಂಜರಿಕೆಯ ವಿಷಯವಾಗಿತ್ತು. ಇದೀಗ ಅದು ಬದಲಾಗಿದೆ. ಅಭಿವ್ಯಕ್ತಗೊಳಿಸಬಾರದೆಂಬ ಮಾನಸಿಕ ಸ್ಥಿತಿಗೆ ಪುನಶ್ಚೇತನ ಸಿಕ್ಕಿದೆ’ ಎಂದು ಲೇಖಕಿ ಬಾನು ಮುಷ್ತಾಕ್ ಅಭಿಪ್ರಾಯಪಟ್ಟರು.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕರ್ನಾಟಕ ಚಕ್ರವರ್ತಿ ಚಿಕ್ಕದೇವರಾಜ ಒಡೆಯರ್ ವೇದಿಕೆಯಲ್ಲಿ ಭಾನುವಾರ ನಡೆದ ‘ಪುನಶ್ಚೇತನವಾಗಬೇಕಿರುವ ಸಾಹಿತ್ಯ ಪ್ರಕಾರಗಳು’ ಗೋಷ್ಠಿಯಲ್ಲಿ ಲೇಖಕ ಅರುಣ್ ಜೋಳದಕೂಡ್ಲಿಗಿ ಮಾತುಗಳಿಗೆ ಪ್ರತಿಕ್ರಿಯಿಸಿದರು.
‘ಆತ್ಮಕಥನ ಸಾಹಿತ್ಯ ಪ್ರಕಾರವು ಬಹುಸಂಖ್ಯಾತ ವರ್ಗಕ್ಕೆ ಸೀಮಿತವಾಗಿವೆ. ಪುರುಷರು, ಮೇಲ್ವರ್ಗದವರ ಆತ್ಮಚರಿತ್ರೆಗಳು ಮಾತ್ರ ಹೆಚ್ಚು ಬಂದಿವೆ. ಮಹಿಳೆಯರು, ಶೋಷಿತರ ಆತ್ಮಚರಿತ್ರೆಗಳು ನಿರ್ಲಕ್ಷಕ್ಕೆ ಒಳಗಾಗಿದ್ದು, ಯಾವುದೇ ಸ್ಥಾನಮಾನ ಸಿಕ್ಕಿಲ್ಲ’ ಎಂದು ಅರುಣ್ ಪ್ರತಿಪಾದಿಸಿದರು.
‘ಆತ್ಮಕಥನವೆಂದರೆ ಅಂತರಂಗದ ಶೋಧನೆ. ಮನೆಯ ಮರ್ಯಾದೆ ಉಳಿಸಲು, ನಂಬಿಕೆಯ ಆವರಣಗಳನ್ನು ಒಡೆದು ಹೊರಬಂದು ಮುಕ್ತವಾಗಿ ಮಾತನಾಡುವುದು ಹೆಣ್ಣು ಮಕ್ಕಳಿಗೆ ಕಷ್ಟ. ಅದರಲ್ಲೂ ಅಲ್ಪಸಂಖ್ಯಾತ ಮುಸ್ಲಿಂ ಮಹಿಳೆಯಾಗಿ ನಾನು ಆತ್ಮಕಥೆ ಬರೆಯಲು ಮೂರು ದಶಕ ಬೇಕಾಯಿತು’ ಎಂದು ಬಾನು ಉತ್ತರಿಸಿದರು.
‘1986ರಲ್ಲಿ ಮೈಸೂರಿನಲ್ಲಿ ಲೇಖಕಿಯರ ಸಂಘದವರು 25 ಮಹಿಳೆಯರ ಆತ್ಮಕಥನವನ್ನು ಅಕ್ಷರಕ್ಕಿಳಿಸಲು ಸಭೆ ಏರ್ಪಡಿಸಿದ್ದರು. ಅಂದು ನಾನು ಮಾತನಾಡಲು ಆಗಲೇ ಇಲ್ಲ. ಅವರ ‘ಲೇಖಾಲೋಕ’ ಸಂಕಲನದಲ್ಲಿ ನನ್ನ ಕಥನ ಪ್ರಕಟವಾಗಲೇ ಇಲ್ಲ. ಅಂದು ಅಕ್ಷರಶಃ ಕಕ್ಕಾಬಿಕ್ಕಿಯಾಗಿ ಏನನ್ನೂ ಹೇಳಲು ಸಾಧ್ಯವಾಗಲಿಲ್ಲ’ ಎಂದು ಸ್ಮರಿಸಿದರು.
‘ಅಂತರಂಗವನ್ನು ಬಹಿರಂಗಗೊಳಿಸುವುದು ಕಷ್ಟ. ಆತ್ಮಕತೆಯೆಂದರೆ ಅನ್ವೇಷಣೆ, ನಮ್ಮ ಗುರುತಿನ ಮರುಶೋಧನೆ. ಇದೀಗ ಆತ್ಮಕಥೆ ಬರೆದಿದ್ದು, 2025ರಲ್ಲಿ ಪ್ರಕಟವಾಗಲಿದೆ. ಮುಕ್ತವಾಗಿ ಮಾತನಾಡಲು ಇಷ್ಟು ವರ್ಷ ಬೇಕಾಯಿತು. ಆತ್ಮಕಥೆಯನ್ನು ಯಾರು ಹೇಗಾದರೂ ಗ್ರಹಿಸಲಿ, ತಿರಸ್ಕರಿಸಲಿ. ಅದರ ಬಗ್ಗೆ ನನಗೇನೂ ಕಾಳಜಿಯಿಲ್ಲ’ ಎಂದರು.
‘ಲಿಂಗತ್ವ ಅಲ್ಪಸಂಖ್ಯಾತರನ್ನು ಸಮಾಜವು ಒಳಗೊಳ್ಳಬೇಕು. ಯಾವುದೋ ಗ್ರಹದ ಜೀವಿಗಳೆಂದು ಹಲವು ವರ್ಷದ ಹಿಂದೆ ನಾನೇ ನೋಡಿದ್ದೆ. ನಾನು ತಿದ್ದಿಕೊಂಡೆ. ಮನುಷ್ಯರಂತೆ ನಾವು ನೋಡಬೇಕು. ಅವರೊಂದಿಗೆ ಒಡನಾಡಿದರೆ ಅವರ ಕಥೆಗಳು ನಮ್ಮ ಬರೆಹದಲ್ಲಿ ಮೂಡಬಹುದು. ದನಿಯಾಗಬಹುದು’ ಎಂದು ತಿಳಿಸಿದರು.
‘ಪ್ರಬಂಧ ಸಾಹಿತ್ಯ’ ಕುರಿತು ಮಾತನಾಡಿದ ಲೇಖಕ ಚ.ಹ.ರಘುನಾಥ, ‘ಎಸ್.ದಿವಾಕರ್ ಐದು ಪ್ರಬಂಧ ಸಂಕಲನ, ಎರಡು ಕಥಾ ಸಂಕಲನ ಪ್ರಕಟಿಸಿದ್ದರೂ ಕನ್ನಡ ವಿಮರ್ಶೆಯು ಕಥೆಗಾರರಾಗಿಯೇ ಗುರುತಿಸುತ್ತಿದೆ. ಪ್ರಬಂಧಕ್ಕಿಂತಲೂ ಕಥೆ, ಕವಿತೆ ಮುಖ್ಯವೆಂಬ ಸಾಹಿತ್ಯ ವಲಯದ ಮನಸ್ಥಿತಿಗೆ ಉದಾಹರಣೆಯಾಗಿದೆ’ ಎಂದರು.
‘ಪ್ರಬಂಧ ಮಾದರಿಯ ಅತ್ಯುತ್ತಮ ಉದಾಹರಣೆಗಳು ಕನ್ನಡದಲ್ಲಿದ್ದರೂ, ಯಾವ ಸಮಯದಲ್ಲೂ ಸಾಹಿತ್ಯದ ಮುಖ್ಯ ಪ್ರಕಾರವೆಂದು ಪರಿಗಣಿಸಿಲ್ಲ. ಹಾಗೆಯೇ ತೆರೆಮರೆಗೆ ಸರಿಯುವಷ್ಟು ಈ ಪ್ರಕಾರ ಕ್ಷೀಣವಾಗಿಲ್ಲ. ಮಾಹಿತಿಯ ಕ್ರೋಡೀಕರಣವೇ ಪ್ರಬಂಧ ಎನ್ನುವ ಸಿದ್ಧಸೂತ್ರವನ್ನು ಪ್ರಸ್ತುತ ಕಾಣಲಾಗುತ್ತಿದೆ. ಆರಕ್ಕೇರದ ಮೂರಕ್ಕಿಳಿಯದ ಸ್ಥಿತಿಯ ಪ್ರಕಾರವಾಗಿದ್ದು, ಪುನಶ್ಚೇತನದ ಮಾತು ಈ ಸಾಹಿತ್ಯಕ್ಕೆ ಅನ್ವಯಿಸದು’ ಎಂದು ಪ್ರತಿಪಾದಿಸಿದರು.
‘ವಿಜ್ಞಾನ ಸಾಹಿತ್ಯ’ದ ಕುರಿತು ಡಾ.ಬಿ.ಎಸ್.ಶೈಲಜಾ ಮಾತನಾಡಿದರು.
‘ಆತ್ಮಕಥನಗಳು’ ಕುರಿತು ವಿಚಾರ ಮಂಡಿಸಿದ ಲೇಖಕ ಅರುಣ್ ಜೋಳದಕೂಡ್ಲಿಗಿ ‘ಬೇರ ಭಾಷೆಯ ಆತ್ಮಕಥನಗಳು ಕನ್ನಡಕ್ಕೆ ಹೆಚ್ವು ಬಂದಿವೆ. ಆದರೆ ಕನ್ನಡದ ಆತ್ಮಕಥೆಗಳು ಬೇರೆ ಭಾಷೆಗೆ ಅನುವಾದವಾಗಿರುವುದು ಕಡಿಮೆ’ ಎಂದರು. ‘ಕನ್ನಡದ ಆತ್ಮಕಥನ ಅನುಭವ ಲೋಕ ಕನ್ನಡಕ್ಕೆ ಮಾತ್ರ ಸೀಮಿತವಾಗಿದೆಯೇ ಎಂಬ ಪ್ರಶ್ನೆ ಮೂಡುತ್ತದೆ. ಇತ್ತೀಚಿನ ಆತ್ಮಕಥನಗಳು ಪಲ್ಲಟ ಉಂಟು ಮಾಡುತ್ತಿಲ್ಲ. ಐಎಎಸ್ ಐಪಿಎಸ್ ಅಧಿಕಾರಿಗಳು ಕೂಡ ಇಂದು ಆತ್ಮಕಥೆ ಬರೆಯಲು ಆರಂಭಿಸಿದ್ದಾರೆ’ ಎಂದು ಹೇಳಿದರು. ‘ಕನ್ನಡದಲ್ಲಿ ದಲಿತ ಮಹಿಳೆಯರ ಆತ್ಮಕಥೆಗಳು ಇನ್ನೂ ಹೊರಬಂದಿಲ್ಲ. ಹೆಚ್ಚು ಕಥನಗಳು ಬರಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.