ಶಾಸನಗಳ ಓದು ಕಬ್ಬಿಣದ ಕಡಲೆಯಿದ್ದಂತೆ, ವಿದ್ವಾಂಸರಿಂದ ಮಾತ್ರ ಓದಲು ಸಾಧ್ಯ, ಪ್ರಾಚೀನ ಲಿಪಿ ಓದಿದರೆ ತಲೆ ಹೋಳಾಗುತ್ತದೆ..!
–‘ಇವೆಲ್ಲ ಅಪ್ಪಟ ಸುಳ್ಳುಗಳು. ಮಕ್ಕಳು ಕೂಡ ಪ್ರಾಚೀನ ಕನ್ನಡವನ್ನು ಸರಳವಾಗಿ ಓದಬಹುದು’ ಎಂದು ‘ದಿ ಮಿಥಿಕ್ ಸೊಸೈಟಿ’ ಸದಸ್ಯರು ‘ಅಕ್ಷರ ಭಂಡಾರ’ ಸಾಫ್ಟ್‌ವೇರ್ ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟರು.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆಗಳ ಪೈಕಿ, ಸೊಸೈಟಿಯು ಶಾಸನಗಳ 3ಡಿ ಡಿಜಿಟಲ್ ತಂಡ ಅಭಿವೃದ್ಧಿಪಡಿಸಿರುವ ಪ್ರಾಚೀನ ಕನ್ನಡ ಲಿಪಿ ಕಲಿಕೆಯ ಸಾಫ್ಟ್‌ವೇರ್ ಪ್ರಾತ್ಯಕ್ಷಿಕೆಯುಳ್ಳ ಮಳಿಗೆಯು ಅದೇ ಕಾರಣದಿಂದ ನೂರಾರು ವಿದ್ಯಾರ್ಥಿ–ಯುವಜನರ ವಿಶೇಷ ಗಮನ ಸೆಳೆದಿತ್ತು.
ಡಿಜಿಟಲ್ ಪರದೆಯ ಮೇಲೆ ಶಾಸನಗಳನ್ನು ಪ್ರದರ್ಶಿಸಿ, ‘ಇದು ಯಾವ ಅಕ್ಷರ?, ಇದು ಯಾವ ಪದ?’ ಎಂದು ಸಮ್ಮೇಳನಕ್ಕೆ ಬಂದಿದ್ದ ಮಕ್ಕಳು ಮತ್ತು ಜನರನ್ನು ಕೇಳುತ್ತಾ, ಅವರಿಂದ ಉತ್ತರ ಪಡೆದ ನಂತರ, ಸರಿ ಉತ್ತರವನ್ನು ತೋರಿಸುತ್ತಿದ್ದರು. ಪ್ರಾಚೀನ ಕನ್ನಡ ಕಲಿಯಲು ಜನ ತೋರುತ್ತಿದ್ದ ಉತ್ಸಾಹಕ್ಕೆ ಸೊಸೈಟಿಯ ಸದಸ್ಯರು ಬೆರಗಾದರು.
‘ಅಕ್ಷರ ಭಂಡಾರ’ ಅಪ್ಲಿಕೇಶನ್ ಅನ್ನು ಕಾರ್ತಿಕ್ ಆದಿತ್ಯ ಅಭಿವೃದ್ಧಿಪಡಿಸಿದ್ದಾರೆ. ಇದು ಕನ್ನಡ ಲಿಪಿಗಳ ಸಮೃದ್ಧ ಜಗತ್ತಿಗೆ ಪ್ರವೇಶ ದ್ವಾರ. ಈ ಹೊಸ ಸಾಫ್ಟ್‌ವೇರ್‌ನ ಮೂಲಕ ಅತ್ಯಾಧುನಿಕ 3ಡಿ ಡಿಜಿಟಲ್ ಸ್ಕ್ಯಾನಿಂಗ್ ತಂತ್ರಜ್ಞಾನದೊಂದಿಗೆ, ಶಾಸನಗಳಲ್ಲಿ ಗೋಚರಿಸುವ ಅಕ್ಷರಗಳನ್ನು ಬಿಡಿಬಿಡಿಯಾಗಿ ಜೋಡಣೆ ಮಾಡಿ, ಅಪ್ಲಿಕೇಶನ್‌ನಲ್ಲಿ ಸಂರಕ್ಷಿಸಿಡಲಾಗಿದೆ.
‘ಶಾಸನಗಳ 3ಡಿ ಡಿಜಿಟಲ್ ಮಾಡೆಲ್‌ಗಳಿಂದ ಹೊರತೆಗೆದ ಸ್ವರಗಳು, ವ್ಯಂಜನಗಳು, ಸಂಯುಕ್ತಾಕ್ಷರಗಳು, ಸಂಖ್ಯೆಗಳು ಮತ್ತು ಶಾಸನಗಳ ಸಂಪೂರ್ಣ ಅಕ್ಷರಗಳನ್ನೊಳಗೊಂಡ 30 ಸಾವಿರಕ್ಕೂ ಹೆಚ್ಚು ಚಿತ್ರಗಳನ್ನು ಇಲ್ಲಿ ನೋಡಬಹುದು. ಪ್ರಾಚೀನ ಲಿಪಿಗಳ ಬಗ್ಗೆ ಹೆಚ್ಚಿನ ಅರಿವು ನೀಡುವುದರ ಜೊತೆಗೆ ಲಿಪಿ ಸಂಬಂಧಿತ ನಿಮ್ಮ ಜ್ಞಾನವನ್ನು ಪರೀಕ್ಷಿಸಲು ಸಂವಹನಾತ್ಮಕ ಅಭ್ಯಾಸ ವಿಭಾಗವನ್ನು ವಿನ್ಯಾಸಗೊಳಿಸಲಾಗಿದೆ’ ಎಂದು ಸೊಸೈಟಿಯ ಗೌರವ ನಿರ್ದೇಶಕ ಉದಯಕುಮಾರ್ ತಿಳಿಸಿದರು.
‘ಐದು ವರ್ಷಗಳಿಂದ ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ 5ರಿಂದ 18ನೇ ಶತಮಾನದ ಸುಮಾರು 700 ಶಿಲಾ ಶಾಸನಗಳನ್ನು ಡಿಜಿಟಲ್ ಮಾದರಿಯಲ್ಲಿ ಸಂರಕ್ಷಿಸಿದ್ದೇವೆ. ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ಅಧ್ಯಯನ ಮಾಡಿದ ಐವರು ಪದವೀಧರರ ತಂಡ ಶಾಸನಗಳ ಸಂರಕ್ಷಣೆಯಲ್ಲಿ ತೊಡಗಿದೆ’ ಎಂದು ಸಂಶೋಧಕಿ ಅನುಷಾ ಮೋರ್ಚಿಂಗ್ ತಿಳಿಸಿದರು.
ರಾಜ್ಯದ ಶೇ 70ರಷ್ಟು ಶಾಸನಗಳು ಪ್ರಾಚೀನ ಕನ್ನಡ ಲಿಪಿಗಳಲ್ಲಿವೆ. ‘ಅಕ್ಷರ ಭಂಡಾರ’ ಉಚಿತ ತಂತ್ರಾಂಶದಿಂದ ಲಿಪಿಯನ್ನು ಸುಲಭವಾಗಿ ಓದಬಹುದು– ಉದಯಕುಮಾರ್ ಪಿ.ಎಲ್ ಗೌರವ ನಿರ್ದೇಶಕ ಮಿಥಿಕ್ ಸೊಸೈಟಿ ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.