ADVERTISEMENT

ಕನ್ನಡ ಸಾಹಿತ್ಯ ಸಮ್ಮೇಳನ | ಚಳವಳಿಗಳು ನಾಡಿನ ಬದಲಾವಣೆಯ ಸಾಕ್ಷಿಪ್ರಜ್ಞೆ

‘ಕರ್ನಾಟಕದ ಚಿತ್ರಣ ಬದಲಿಸಿದ ಚಳವಳಿಗಳು’ ಗೋಷ್ಠಿ: ಅಭಿಮತ

ಮೋಹನ್‌ ಕುಮಾರ್‌ ಸಿ.
Published 22 ಡಿಸೆಂಬರ್ 2024, 7:08 IST
Last Updated 22 ಡಿಸೆಂಬರ್ 2024, 7:08 IST
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂಚಿ ಹೊನ್ನಮ್ಮ ಮತ್ತು ಕಾದಂಬರಿ ಸಾಮ್ರಾಜ್ಞಿ ತ್ರಿವೇಣಿ ವೇದಿಕೆಯಲ್ಲಿ ಶನಿವಾರ ನಡೆದ ‘ಕರ್ನಾಟಕದ ಚಿತ್ರಣ ಬದಲಿಸಿದ ಚಳವಳಿಗಳು’ ಗೋಷ್ಠಿಯಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿದರು –ಪ್ರಜಾವಾಣಿ ಚಿತ್ರ 
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂಚಿ ಹೊನ್ನಮ್ಮ ಮತ್ತು ಕಾದಂಬರಿ ಸಾಮ್ರಾಜ್ಞಿ ತ್ರಿವೇಣಿ ವೇದಿಕೆಯಲ್ಲಿ ಶನಿವಾರ ನಡೆದ ‘ಕರ್ನಾಟಕದ ಚಿತ್ರಣ ಬದಲಿಸಿದ ಚಳವಳಿಗಳು’ ಗೋಷ್ಠಿಯಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿದರು –ಪ್ರಜಾವಾಣಿ ಚಿತ್ರ    

ಮಂಡ್ಯ: ‘ಸ್ವಾತಂತ್ರ್ಯ ಹೋರಾಟದ ನಂತರ ರಾಜ್ಯದಲ್ಲಿ ನಡೆದ ಎಲ್ಲ ಚಳವಳಿಗಳು ಜನರನ್ನು ಎಚ್ಚರಿಸಿದ ಚಳವಳಿಗಳಾಗಿದ್ದು, ಸಾಮಾಜಿಕ, ಸಾಂಸ್ಕೃತಿಕ ಬದುಕಿನ ಮೇಲೆ ಆಳವಾದ ಪ್ರಭಾವ ಬೀರಿವೆ’ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು. 

ಸಂಚಿ ಹೊನ್ನಮ್ಮ ಮತ್ತು ಕಾದಂಬರಿ ಸಾಮ್ರಾಜ್ಞಿ ತ್ರಿವೇಣಿ ವೇದಿಕೆ ಸಮ್ಮೇಳನದ ಸಮಾನಾಂತರ ವೇದಿಕೆ–2ರಲ್ಲಿ ಶನಿವಾರ ನಡೆದ ‘ಕರ್ನಾಟಕದ ಚಿತ್ರಣ ಬದಲಿಸಿದ ಚಳವಳಿಗಳು’ ಗೋಷ್ಠಿಯಲ್ಲಿ ಮಾತನಾಡಿ, ‘ಸಾಮಾಜಿಕ ಹಾಗೂ ಆರ್ಥಿಕ ನ್ಯಾಯ ನೀಡಲು, ವ್ಯವಸ್ಥೆಯಲ್ಲಿ ಬದಲಾವಣೆ ತರಲು ರೈತ, ದಲಿತ, ಬಂಡಾಯ ಹಾಗೂ ಗೋಕಾಕ್‌ ಚಳವಳಿಗಳು ನಡೆದಿವೆ’ ಎಂದರು. 

‘ಕರ್ನಾಟಕ ಏಕೀಕರಣ ಚಳವಳಿ ನಾಡನ್ನು ಒಂದು ಮಾಡಿದರೆ, ಗೋಕಾಕ್‌ ಚಳವಳಿ ಭಾಷಾಭಿಮಾನ, ಅಸ್ಮಿತೆ ಸಾರಿತು. ರಾಜ್ಯದ ಸಾಂಸ್ಕೃತಿಕ ಬುನಾದಿಯನ್ನೂ ಬಲಪಡಿಸಿತು. ದಲಿತ, ಬಂಡಾಯ ಚಳವಳಿಗಳು ಭೂಸ್ವಾಮ್ಯ, ಸಾಮಾಜಿಕ ನ್ಯಾಯಕ್ಕಾಗಿ ಮಾಡಿದ ಹೋರಾಟವಾಗಿವೆ’ ಎಂದು ಅಭಿಪ್ರಾಯಪಟ್ಟರು. 

ADVERTISEMENT

‘ರೈತ ಚಳವಳಿಯು ರೈತರ ಅಸ್ಮಿತೆಯನ್ನು ಕಾಪಾಡಿದ್ದಲ್ಲದೇ ಕೃಷಿಯ ಸಮಗ್ರ ಅಭಿವೃದ್ಧಿಗೆ ನೆರವಾಯಿತು. ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಕೆ.ಎಸ್‌.ಪುಟ್ಟಣ್ಣಯ್ಯ ಅವರು ಸಂಘಟಿಸಿದ ಜಾಗತೀಕರಣ ವಿರೋಧಿ ಹೋರಾಟ, ಕಾವೇರಿ ನೀರು ಹಂಚಿಕೆ, ರೈತರ ಸಾಲಮನ್ನಾ, ಬೆಳೆಗೆ ಬೆಂಬಲ ಬೆಲೆ ಸೇರಿದಂತೆ ವಿವಿಧ ಹೋರಾಟಗಳು ರಾಜ್ಯದ ಜನರನ್ನು ಕಾಯ್ದಿದ್ದಲ್ಲದೇ ದೇಶದ ವಿವಿಧ ಚಳವಳಿಗೂ ದಿಕ್ಕು ತೋರಿವೆ’ ಎಂದು ಹೇಳಿದರು. 

ರೈತ ಮುಖಂಡ ಜಿ.ಎಸ್‌.ರಾಜೇಂದ್ರ ಅಸುರನಾಡು ಮಾತನಾಡಿ, ‘ರೈತ ಚಳವಳಿಯು ಭಾಷೆಯ ಅಸ್ಮಿತೆಯನ್ನು ಭಿನ್ನವಾಗಿ ನಿರೂಪಿಸಿದೆ. ಕೃಷಿ ಭೂಮಿ, ರೈಲ್ವೆ ನಿಲ್ದಾಣ ಸೇರಿದಂತೆ ಎಲ್ಲೆಡೆ ಕೆಲಸ ಮಾಡುವವರನ್ನು ಕೂಲಿ ಎಂದು ರೈತರು ಕರೆಯುವುದಿಲ್ಲ. ಅಣ್ಣ ಎಂತಲೇ ಹೇಳುತ್ತಾರೆ. ರಾಜ್ಯದ ಮುಖ್ಯ ಕಾರ್ಯದರ್ಶಿಯೂ ರಾಜ್ಯದ, ಜಿಲ್ಲಾಧಿಕಾರಿ ಜಿಲ್ಲೆಯ ಮೊದಲ ಕೂಲಿಯೆಂದು ರೈತ ಚಳವಳಿಯ ಮುಖಂಡರು ಕರೆದರು. ಈ ಮೂಲಕ ಕೆಲಸದಲ್ಲಿ ಎಲ್ಲರೂ ಸಮಾನರೆಂದು ಸಾರಿದರು’ ಎಂದರು. 

ಡಾ.ರಾಜ್‌ಕುಮಾರ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಆಶಯ ನುಡಿಗಳನ್ನಾಡಿದರು. ‘ಗೋಕಾಕ್‌ ಚಳವಳಿಯ ನಂತರದಲ್ಲಿನ ಕರ್ನಾಟಕದ ಚಿತ್ರಣ’ ಕುರಿತು ಬಂಕಾಪುರ ಚನ್ನಬಸ‍ಪ್ಪ ಮಾತನಾಡಿದರು.

‘ಕೃಷಿ ಭೂಮಿ ಕಬಳಿಕೆ’ ‘ಜನಪರ ಚಳವಳಿಗಳು: ಮುಂದೇನು’ ಕುರಿತು ಮಾತನಾಡಿದ ಇಂದಿರಾ ಕೃಷ್ಣಪ್ಪ ‘ದೇಶದ ಆರ್ಥಿಕ ನೀತಿಗಳು ವಿದೇಶಿ ವಸುಹಾತುಶಾಹಿಯನ್ನು ಮತ್ತೆ ಸ್ಥಾ‍ಪಿಸುತ್ತಿವೆ. ರೈತರ ಕೃಷಿ ಭೂಮಿಯನ್ನು ಸರ್ಕಾರವೇ ಕಬಳಿಕೆ ಮಾಡುತ್ತಿದೆ’ ಎಂದರು. 

‘ಅಲೆಮಾರಿ ಬುಡಕಟ್ಟು ಸಮುದಾಯಗಳನ್ನು ನಾಗರಿಕ ಸಮಾಜವು ಒಳಗೊಂಡಿಲ್ಲ. ದೇಶದಲ್ಲಿ ಮಹಿಳಾ ವಿರೋಧಿ ಕೌರ್ಯಗಳು ನಡೆಯುತ್ತಿವೆ. ಸಂವಿಧಾನದತ್ತವಾದ ಮಹಿಳಾ ಮೀಸಲಾತಿ ಜಾರಿಗೊಳಿಸಬೇಕು. ಸಾಮಾಜಿಕ ನ್ಯಾಯ ಎಲ್ಲ ಸಮುದಾಯಗಳಿಗೂ ಸಿಗಬೇಕಿದೆ. ಈ ನಿಟ್ಟಿನಲ್ಲಿ ಚಳವಳಿಗಳು ಮುಂದುವರಿಯಬೇಕು’ ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.