ADVERTISEMENT

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ: ಸಮ್ಮಾನ, ಪ್ರತಿಭಟನೆ ಜಂಟಿಯಾನ

ಕೆ.ನರಸಿಂಹ ಮೂರ್ತಿ
Published 23 ಡಿಸೆಂಬರ್ 2024, 0:33 IST
Last Updated 23 ಡಿಸೆಂಬರ್ 2024, 0:33 IST
<div class="paragraphs"><p>ಮಂಡ್ಯದಲ್ಲಿ ಭಾನುವಾರ ಮೈಸೂರಿನ ಕರ್ನಾಟಕ ಪೊಲೀಸ್‌ ಬ್ಯಾಂಡ್‌ ವಾದನದೊಂದಿಗೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆಬಿತ್ತು</p></div>

ಮಂಡ್ಯದಲ್ಲಿ ಭಾನುವಾರ ಮೈಸೂರಿನ ಕರ್ನಾಟಕ ಪೊಲೀಸ್‌ ಬ್ಯಾಂಡ್‌ ವಾದನದೊಂದಿಗೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆಬಿತ್ತು

   

ಚಿತ್ರ: ಅನೂಪ್‌ ರಾಘ್‌.ಟಿ

ಮಂಡ್ಯ: ಲೈಂಗಿಕ ಅಲ್ಪಸಂಖ್ಯಾತರು, ದಲಿತರು, ಮಹಿಳೆಯರು ಮತ್ತು ಮಕ್ಕಳ ಪರ
ವಾದ ವೈವಿಧ್ಯಮಯ ಧ್ವನಿ–ಆಗ್ರಹಗಳಿಗೆ ಗಟ್ಟಿ ವೇದಿಕೆಗಳನ್ನು ಕಲ್ಪಿಸಿದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಸಮ್ಮಾನ, ಪ್ರತಿಭಟನೆಗಳ ಜಂಟಿಯಾನದಲ್ಲೇ ಭಾನುವಾರ ಸಮಾರೋಪಗೊಂಡಿತು.

ADVERTISEMENT

ಜಾಗತಿಕ ನೆಲೆಯಲ್ಲಿ ಮತ್ತು ಗಡಿನಾಡಿನಲ್ಲಿ ಕನ್ನಡ ಕಟ್ಟುವ ಬಗೆ, ಕನ್ನಡ ಶಾಲೆಗಳ ಸಬಲೀಕರಣಕ್ಕೆ ದಾರಿಗಳ ಹುಡುಕಾಟದ ನಡುವೆಯೇ ಆಂಧ್ರ ಗಡಿನಾಡ ಕನ್ನಡಿಗರ ಪ್ರತಿಭಟನೆಗೂ ನುಡಿ ಜಾತ್ರೆ ಸಾಕ್ಷಿಯಾಯಿತು.  ಬಾಡೂಟ ಬಳಗದ ಸದಸ್ಯರು ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರ ಒತ್ತಾಯಕ್ಕೆ ಮಣಿದ ಜಿಲ್ಲಾಡಳಿತವು ಕಡೆಯ ದಿನವಾದ ಭಾನುವಾರ ರಾತ್ರಿ ಊಟ ದೊಂದಿಗೆ ಬೇಯಿಸಿದ ಕೋಳಿಮೊಟ್ಟೆಗಳನ್ನು ವಿತರಿಸುವ ಮೂಲಕ, ಸಮ್ಮೇಳನದ ಇತಿಹಾಸದಲ್ಲಿ ಮಾಂಸಾಹಾರಕ್ಕೆ ಮುನ್ನುಡಿ ಬರೆಯಿತು.

ಗಡಿನಾಡ ಕನ್ನಡಿಗರು ಶಿಕ್ಷಣ–ಉದ್ಯೋಗದಲ್ಲಿ ಮೀಸಲಾತಿ ಅವಕಾಶಗಳಿಗಾಗಿ ಪ್ರತಿಭಟಿಸಿದರು.
‘ಮಹಾರಾಷ್ಟ್ರ, ಕೇರಳ ಕನ್ನಡಿಗರಿಗೆ ಇರುವ ಮೀಸಲಾತಿ ನಮಗೇಕೆ ಇಲ್ಲ’ ಎಂದು ಪ್ರಶ್ನಿಸಿ ‘ಸರ್ಕಾರದ ತಾರತಮ್ಯ ನೀತಿ’ಯನ್ನು ಪ್ರಶ್ನಿಸಿದರು.

ಕಲ್ಪವೃಕ್ಷವಾಗದ ಕೈ: ಸಮ್ಮೇಳನದ ಪ್ರಧಾನ ವೇದಿಕೆಯ ಮುಂಭಾಗ ನಿಂತ ಗಡಿನಾಡ ಕನ್ನಡಿಗರಾದ ಕೆ.ಆರ್‌.ನಾಗರಾಜಶೆಟ್ಟಿ, ಎಚ್‌.ವೈ.ಶೇಷಾದ್ರಿ ಹಾಗೂ ಜೊತೆಗಾರರು, ‘ಕನ್ನಡಕ್ಕಾಗಿ ಕೈ ಎತ್ತಿದ್ದೇವೆ, ನಮ್ಮ ಕೈ ಇನ್ನೂ ಕಲ್ಪವೃಕ್ಷವಾಗಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
‘ಆಂಧ್ರ ಪ್ರದೇಶದ ಗಡಿನಾಡ ಕನ್ನಡಿಗರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಿ’, ‘ನಮ್ಮ ತನು, ಮನ, ಭಾಷೆ, ಬದುಕು ಕನ್ನಡ. ಆದರೆ ನಾವೇಕೆ ಕನ್ನಡಿಗರಲ್ಲ?’, ‘ಹೊರರಾಜ್ಯದಲ್ಲಿದ್ದರೂ ನಾವು ಕನ್ನಡವನ್ನು ಕಾಪಾಡುತ್ತಿದ್ದೇವೆ, ನಾವೇಕೆ ನಿಮಗೆ ಕಾಣುತ್ತಿಲ್ಲ?’, ‘ಸ್ವಾಮೀ, ನಾವೂ ಕನ್ನಡಿಗರೇ, ನಮ್ಮನ್ನು ಗುರುತಿಸಿ’ ಎಂಬ ಫಲಕಗಳನ್ನು ಪ್ರದರ್ಶಿಸಿದರು.

ಉತ್ಸಾಹ ತುಂಬಿದ ಗೊರುಚ: 94ರ ವಯಸ್ಸಿನಲ್ಲೂ ಗೋಷ್ಠಿಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡ ಸಮ್ಮೇಳನಾಧ್ಯಕ್ಷ ಗೊ.ರು.ಚನ್ನಬಸಪ್ಪ, ಸಂಪನ್ಮೂಲ ವ್ಯಕ್ತಿಗಳೊಂದಿಗೆ ವೇದಿಕೆಯಲ್ಲೇ ಸಮಾಲೋಚಿಸಿ, ಗೋಷ್ಠಿಗಳ ಗುಣಮಟ್ಟ ವೃದ್ಧಿಗೂ ಸದ್ದಿಲ್ಲದೆ ಕೊಡುಗೆ ನೀಡಿದ್ದು ವಿಶೇಷ.

ವಹಿವಾಟಿಗೆ ತೊಡಕು: ನೂರಾರು ಪುಸ್ತಕ ಮಳಿಗೆ, ವಾಣಿಜ್ಯ ಮಳಿಗೆಗಳನ್ನು ಸ್ಥಾಪಿಸಿದ್ದ ಪರಿಷತ್ತು, ಇಂಟರ್‌ನೆಟ್‌ ವ್ಯವಸ್ಥೆಯನ್ನು ಕಲ್ಪಿಸದೇ ಇದ್ದುದು ಆನ್‌ಲೈನ್‌ ಹಣ ಸಂದಾಯ ಹಾಗೂ ಖರೀದಿ ವಹಿವಾಟಿಗೆ ಕೊಂಚ ತೊಡಕಾಗಿತ್ತು.

ಮಾಂಸಾಹಾರಕ್ಕೆ ಮಂಡ್ಯ ಸಮ್ಮೇಳನ ಮುನ್ನುಡಿ

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ನಿಷೇಧ ಎಂದು ನಿಬಂಧನೆ ಹಾಕಿದ್ದರಿಂದ, ಪ್ರಗತಿಪರ ಸಂಘಟನೆಗಳ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಆಹಾರ ಸಮಾನತೆ ಕಾಪಾಡುವಂತೆ
ಆಗ್ರಹಿಸಿದ್ದರು. ‘ಉಸ್ತುವಾರಿ ಸಚಿವರು ಪ್ರತಿಭಟನಕಾರರೊಂದಿಗೆ ಮಾತುಕತೆ ನಡೆಸಿ ಕೊನೆ ದಿನ ಬೇಯಿಸಿದ ಮೊಟ್ಟೆ ವಿತರಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಅವರು ನುಡಿದಂತೆ ನಡೆದಿದ್ದಾರೆ. ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ’ ಎಂದು ಬಾಡೂಟ ಬಳಗದ ಸದಸ್ಯರು ಸಂತಸ ವ್ಯಕ್ತಪಡಿ ಸಿದರು. ಬಳಗದ ಸದಸ್ಯರು ಇದಕ್ಕೂ ಮುನ್ನ ಮಧ್ಯಾಹ್ನ ತಾವು ತಂದಿದ್ದ ಚಿಕನ್‌ ಸಾಂಬಾರ್‌, ರಾಗಿ ಮುದ್ದೆ, ಕಬಾಬ್ ಮತ್ತು ಕೋಳಿಮೊಟ್ಟೆಯನ್ನು ಆಹಾರ ಕೌಂಟರ್‌ನಲ್ಲಿ ವಿತರಿಸಿದ್ದರು.

 5 ನಿರ್ಣಯಗಳ ಮಂಡನೆ

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರ ನಡೆದ ಬಹಿರಂಗ ಅಧಿವೇಶನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಪಟೇಲ್‌ ಪಾಂಡು ಅವರು ಐದು ನಿರ್ಣಯಗಳನ್ನು ಮಂಡಿಸಿದರು.

1) ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022ರ ಎಲ್ಲ ಉಪ– ಬಂಧಗಳು ಮತ್ತು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮವನ್ನು ಸಮಗ್ರವಾಗಿ ಕೂಡಲೇ ಅನುಷ್ಠಾನಗೊಳಿಸಬೇಕು. ಅಧಿನಿಯಮದ ರಾಜ್ಯ ಮಟ್ಟದ ಸಮಿತಿಯ ಉಪಾಧ್ಯಕ್ಷರನ್ನಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನು ನೇಮಿಸಲು ತಿದ್ದುಪಡಿ ತರಬೇಕು

2) ರಾಜ್ಯದ ಎಲ್ಲ ಸರ್ಕಾರಿ ಕನ್ನಡ ಶಾಲೆಗಳಿಗೆ ಕಟ್ಟಡ, ವಾಚನಾಲಯ, ಆಟದ ಮೈದಾನ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸಬೇಕು. ಶಿಕ್ಷಕರ ಹುದ್ದೆಗಳ ಭರ್ತಿಗೆ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು. ಕನ್ನಡೇತರ ಶಾಲೆಗಳಿಗೆ ಕನ್ನಡ ಶಿಕ್ಷಕರನ್ನು ಕಡ್ಡಾಯವಾಗಿ ನೇಮಿಸಬೇಕು

3) ಕನ್ನಡ ಅನ್ನದ ಭಾಷೆಯಾಗಲು, ಕನ್ನಡಿಗರ ಉದ್ಯೋಗಕ್ಕೆ ತಡೆಯಾಗಿ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಸರ್ಕಾರ ಸಮರ್ಪಕವಾಗಿ ಎದುರಿಸಬೇಕು. ಸರೋಜಿನಿ ಮಹಿಷಿ ವರದಿಯನ್ನು ಅನುಷ್ಠಾನಗೊಳಿಸಬೇಕು 

4) ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ಅತಿ ಶೀಘ್ರದಲ್ಲಿ ನಡೆಸಬೇಕು 

5) ರಾಷ್ಟ್ರಕವಿಯನ್ನು ಅತಿ ಶೀಘ್ರ ಘೋಷಿಸಬೇಕು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.