ADVERTISEMENT

ಅಕ್ಷಯ ತೃತೀಯಾ: ಮಿತಿಯಿಲ್ಲದ ಫಲ

ಛಾಯಾಪತಿ
Published 3 ಮೇ 2019, 19:30 IST
Last Updated 3 ಮೇ 2019, 19:30 IST
ಕಲೆ: ವಿಜಯಾ ನಟರಾಜನ್ 
ಕಲೆ: ವಿಜಯಾ ನಟರಾಜನ್    

ಅಕ್ಷಯ ತೃತೀಯಾ ಇಂದು ತುಂಬ ಜನಪ್ರಿಯವಾಗಿರುವ ಹಬ್ಬಗಳಲ್ಲಿ ಒಂದಾಗಿದೆ. ದೇವತೆಗಳ ಪೂಜೆಗೂ ಪಿತೃಗಳ ಪೂಜೆಗೂ ಈ ದಿನ ಒಳ್ಳೆಯದು ಎನ್ನುತ್ತದೆ ಪರಂಪರೆ.

ನಮ್ಮಲ್ಲಿ ನಾಲ್ಕು ಯುಗಗಳ ಕಲ್ಪನೆ ಉಂಟಷ್ಟೆ. ಮೊದಲನೆಯ ಯುಗವೇ ಸತ್ಯಯುಗ. ಆ ಸತ್ಯಯುಗ ಆರಂಭವಾದದ್ದು ‘ಅಕ್ಷಯ ತೃತೀಯಾ’ದಂದು ಎನ್ನುವ ನಂಬಿಕೆ ಉಂಟು. ವೈಶಾಖಮಾಸದ ಶುಕ್ಲಪಕ್ಷದ ತೃತೀಯಾದಿನವೇ ‘ಅಕ್ಷಯ ತೃತೀಯಾ’. ಅಂದು ಆಚರಿಸುವ ಆಚರಣೆಗಳು ಅಕ್ಷಯವಾದ, ಎಂದರೆ ಮಿತಿಯೇ ಇಲ್ಲದಷ್ಟು ಫಲವನ್ನು ಕೊಡುತ್ತದೆ ಎನ್ನುವುದು ಇದರ ಹೆಗ್ಗಳಿಕೆ. ಆದುದರಿಂದ ಈ ದಿನ ದೇವತಾಪೂಜೆಯನ್ನು ಆಚರಿಸಬೇಕು; ದಾನವನ್ನು ಕೊಡಬೇಕು; ಜಪವನ್ನು ಮಾಡಬೇಕು; ತೀರ್ಥಸ್ನಾನವನ್ನು ಮಾಡಬೇಕು; ಅಧ್ಯಯನವನ್ನು ಆಚರಿಸಬೇಕು – ಎನ್ನುವುದು ಸಂಪ್ರದಾಯದ ನಿಲುವು. ಆದರೆ ಇತ್ತೀಚಿನ ದಿನಗಳಲ್ಲಿ ಇದು ’ಬಂಗಾರವನ್ನು ಕೊಳ್ಳುವ ಹಬ್ಬ’ವಾಗಿ ಮಾರ್ಪಾಡಾಗಿದೆ!

ಅಂದು ಬೆಳಗ್ಗೆ ಸಂಕಲ್ಪಪೂರ್ವಕವಾಗಿ ಗಂಗಾನದಿಯಲ್ಲಿ ಸ್ನಾನ ಮಾಡಬೇಕು. ಎಲ್ಲರಿಗೂ ಗಂಗಾಸ್ನಾನ ಸಾಧ್ಯವಾಗದು. ಹಾಗಾದರೆ ಅಂಥವರು ಏನು ಮಾಡಬೇಕು? ನಾವು ಯಾವ ನೀರಿನಿಂದ ಸ್ನಾನ ಮಾಡುತ್ತೇವೆಯೋ ಅದು ಕೂಡ ಗಂಗೆಯೇ ಹೌದು. ಈ ಭಾವದಿಂದ ಸ್ನಾನ ಮಾಡಿದಾಗ ಅದರ ಫಲ ಸಿಗುತ್ತದೆ ಎನ್ನುತ್ತವೆ ಶಾಸ್ತ್ರಗಳು. ಶ್ರೀಕೃಷ್ಣನ ಪೂಜೆಯನ್ನು ಮಾಡುವ ಕ್ರಮವೂ ಈ ದಿನದಲ್ಲುಂಟು. ಶ್ರೀಗಂಧವನ್ನು ಕೃಷ್ಣನ ಮೂರ್ತಿಗೆ ಲೇಪಿಸಿ ವಿಶೇಷ ಪೂಜೆಯನ್ನು ಸಲ್ಲಿಸಲಾಗುವುದು. ಪೂಜೆಯನ್ನು ಮಾಡಿದ ಬಳಿಕ, ಅರ್ಹರಾದವರಿಗೆ ದಾನವನ್ನು ನೀಡಬೇಕು. ಹೀಗೆ ಕೊಡುವ ದಾನ ಮರಳಿ ನಮ್ಮಲ್ಲಿಗೆ ಅಕ್ಷಯವಾಗಿ ಬರುತ್ತದೆ ಎಂಬುದು ಇಲ್ಲಿರುವ ನಂಬಿಕೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.