ADVERTISEMENT

ಚಟ

ಡಾ.ಎಸ್.ಬಿ.ಜೋಗುರ
Published 30 ಮಾರ್ಚ್ 2019, 19:45 IST
Last Updated 30 ಮಾರ್ಚ್ 2019, 19:45 IST
ಚಿತ್ರ: ಎಸ್‌.ವಿ. ಹೂಗಾರ್
ಚಿತ್ರ: ಎಸ್‌.ವಿ. ಹೂಗಾರ್   

ಆ ಅಡ್ನಾಡಿಗೆ ಮೈ ಬಗ್ಗಸೂದೇ ಗೊತ್ತಿಲ್ಲ. ಅವನವ್ವಗ ಗಿಣಿಗೆ ಹೇಳದಂಗ ಹೇಳಿದ್ದೆ, ಅಂವಗ ಲಗ್ನ ಮಾಡೂದು ಬ್ಯಾಡ, ಹೆಂಡ್ರು ಮಕ್ಕಳನ್ನ ಅಂವಾ ಉಪಾಸ ಕೆಡವತಾನಂತ, ಆಕಿ ಕೇಳಲಿಲ್ಲ. ‘ಅವನ ಕೊಳ್ಳಿಗೊಂದು ಲೊಳ್ಳಿ ಬಿಗದರ ತಾನೇ ದಾರಿಗಿ ಬರ್ತಾನ’ ಅಂದಿದ್ದಳು. ಈಗ ಆಕಿ ಇದ್ದಿದ್ದರ ಇವನ ಬಾಳೇವ ನೋಡಿ ತೋಬಾ ತೋಬಾ ಅಂತಿದ್ದಳು. ಅಂತೆಲ್ಲಾ ಗೇನಸಕೋಂತ ಮುದಕಪ್ಪ ಮೂರೂ ಸಂಜಿ ಮುಂದ ಹೊರಸಿನ ಮ್ಯಾಲ ಕುತ್ಗೊಂಡು ಹಗ್ಗ ಹೊಸೀತಿದ್ದ. ಇಟ್ಟು ವಯಸ್ಸಾದ ಮ್ಯಾಲೂ ಅಂವಗ ಹೊಲಕ್ಕೋಗಿ ದುಡಿಯೂದು ತಪ್ಪಿರಲಿಲ್ಲ. ಮುದಕಪ್ಪಗ ಮೂರು ಮಕ್ಕಳು. ಎರಡು ಹೆಣ್ಣು ಒಂದು ಗಂಡು. ಇಲ್ಲೀಮಟ ಅಂವಾ ಸೊಸಿ ನಾಗಮ್ಮಳ ಮುಂದ ಹಂಪ ಹರೀತಿದ್ದ ಕುಲಪುತ್ರನೇ ಶಂಕರಲಿಂಗ.

‘ಇದ್ದೊಬ್ಬ ಮಗನ್ನರೇ ಓದಸರಿ’ ಅಂತ ಮುದಕಪ್ಪನ ಹೆಂಡತಿ ತಾರಾಬಾಯಿ ಬೆನ್ನಿಗಿ ಬಿದ್ದಿದ್ದಕ ಮಗನ್ನ ಸಾಲಿಗಿ ಸೇರ್ಸದ. ಶಂಕರಲಿಂಗ ಸಾಲಿಗಿ ಹೋಗ್ತೀನಿ ಅಂತ್ಹೇಳಿ ಕೆರೆಗೆ ಹೋಗಿ ಈಜಾಡ್ತಾ ಕೂಡತಿದ್ದ. ಸಾಲಿ ಮಾಸ್ತರು ಮುದಕಪ್ಪಗ ಸಿಕ್ಕಾಗ ‘ನಿಮ್ಮ ಹುಡುಗ ವಾರಕ್ಕೊಮ್ಮ ಬಂದರ ಪುಣ್ಯ’ ಅಂದಾಗಲೇ ಅಂವಾ ಸಾಲಿಗಿ ಚಕ್ಕರ್ ಹಾಕೂದು ಮುದುಕಪ್ಪಗ ಗೊತ್ತಾಯ್ತು. ಅಂವಾ ಕಲಿಯೂದು ಅಟ್ಟರೊಳಗೇ ಐತಿ ಅಂತ ಹೇಳಿ ಅವನ ಸಾಲಿ ಬಿಡಿಸಿ, ಮನ್ಯಾಗಿರೋ ಕುರಿ ಕಾಯಾಕ ಹೊಲಕ ದಬ್ಬಿಬಿಟ್ಟ. ಅದೂ ಅಂವಗ ನೀಗಲಿಲ್ಲ. ಅವ್ವ ತಾರಾಬಾಯಿ ಗದ್ದ-ತುಟಿ ಹಿಡಿದು ಬುದ್ಧಿ ಮಾತು ಹೇಳಿದ್ದು ಅವನ ತಲಿಗಿ ಇಳೀತಿರಲಿಲ್ಲ. ಮೈಯೊಳಗ ಮಾಡಬ್ಯಾಡ ಅಂದಿದ್ದೇ ಮಾಡೋ ಮೊಂಡತನ ಹೊಕ್ಕೊಂಡಿತ್ತು. ಸಣ್ಣವಯಸ್ಸಿನೊಳಗೇ ಚಾವಡಿಯೊಳಗ ಕುಂತು ಇಸ್ಪೀಟ ಆಡೂದು, ಬೀಡಿ ಸೇದೂದು ಸುರು ಮಾಡಿದ್ದ. ಹೊಟ್ಟಿ ಕವ ಕವ ಅಂದಾಗಲೇ ಅಂವಗ ಮನಿ ನೆನಪಾಗತಿತ್ತು. ಅವ್ವ ತಾರಾಬಾಯಿಗಿ ಮಗಂದೇ ದೊಡ್ಡ ಚಿಂತಿ ಆಯ್ತು.

‘ಅಂವಗೊಂದು ಲಗ್ನ ಮಾಡದರ ತಾನೇ ಸರಿ ಹೋಗ್ತಾನ’ ಅಂತ ಮುದಕಪ್ಪನ ಮುಂದ ಹೇಳಿದ್ದೇ ಅಂವಾ ‘ಅದು ನಾಯಿ ಬಾಲ, ನಾಳೆ ಆ ಹುಡಗೀ ಪಾಪ ನಮಗ ಬರತೈತಿ’ ಅಂತ ಎಟ್ಟು ಹೇಳದರೂ ತಾರಾಬಾಯಿ ‘ಅಂವಗೊಂದು ಕಟ್ರಿ ಎಲ್ಲಾ ನೆಟ್ಟಗಾಗತೈತಿ’ ಅಂತ ಹೇಳಿ ಒಳಗಿನ ಸಂಬಂಧದೊಳಗೇ ಮದುವಿ ಮಾಡದ್ರು. ಲಗ್ನ ಆದ ಮ್ಯಾಗ ಅಂವಾ ಮತ್ತೂ ಮುಗ್ಗಲಾದ. ಬರ್ತಾ ಬರ್ತಾ ಅವನ ರಿಕಾಮಿತನದ ಜೋಡಿ ಲಪುಟತನನೂ ಬೆಳ್ಕೊಂತ ಬಂತು. ಆಡೂದರ ಜೋಡಿ ಕುಡಿಯೂ ಚಟಾನೂ ಬಿತ್ತು. ಚಟ ಅಂದಮ್ಯಾಗ ಅದನ್ನ ನಿಭಾಯಿಸಲಿಕ್ಕ ರೊಕ್ಕ ಬೇಕಲ್ಲ... ಸಣ್ಣಗ ಒಂದೊಂದ ಹೆಂಡತಿ ಮೈ ಮ್ಯಾಲಿನ ದಾಗೀನ ಮಾರದ. ಆಕಿ ಕೊಡೂದಿಲ್ಲ ಅಂದ್ರ ಅಂವ ಕೇಳೂವಂಗಿರಲಿಲ್ಲ. ಲಗ್ನ ಆಗಿ ಇನ್ನೂ ವರ್ಷ ಸೈತ ಆಗಿರಲಿಲ್ಲ. ಕುಡದು ಬಂದು ಹೆಂಡತಿನ್ನ ದನಕ್ಕ ಬಡದಂಗ ಬಡಿಯಾಕ ಸುರು ಮಾಡದ. ಅವ್ವ ಅಪ್ಪ ಯಾರ ಮಾತೂ ಕೇಳ್ತಿರಲಿಲ್ಲ. ಮುದುಕ ಹೇಳದಂಗ ಕೇಳಿದ್ದರ ಆ ಹುಡುಗಿಗಿ ಇಂಥಾ ಸ್ಥಿತಿ ಬರ್ತಿರಲಿಲ್ಲ. ತಪ್ಪು ಮಾಡದೆ ಅನ್ಕೊಂತ ಮಗನ ಚಿಂತಿಯೊಳಗೇ ಸಣ್ಣಾಗಿ ತಾರಾಬಾಯಿ ತಣ್ಣಗಾದಳು.

ADVERTISEMENT

ಮುದಕಪ್ಪಗೂ ಮಗನ ಲಂಪಟತನ ಸಾಕು ಸಾಕಾಗಿತ್ತು. ಅವನ್ನ ಸರಿ ದಾರಿಗಿ ತರೂದು ನೀಗಲಾರದ ಮಾತು ಅನ್ನೂವಂಗಾಗಿತ್ತು. ಹಂಗೇನರೇ ಬುದ್ದಿ ಮಾತು ಹೇಳಾಕ ಹೋದರ, ಅಪ್ಪ ಅನ್ನೂ ಖಬರ ಇಲ್ಲದೇ ನಶೆಯೊಳಗ ಅವನ ಮ್ಯಾಲೂ ಏರಿ ಹೋಗತಿದ್ದ. ಮುದಕಪ್ಪಗ ತಾ ಬಿದ್ದ ಹೋದ ದಿನಾನೇ ಇಂವಾ ಹೊಲ ಮನಿ ಎರಡೂ ಮಾರೂದು ಖಾತ್ರಿ ಅಂತ ಗೊತ್ತಿತ್ತು. ಹಂಗಾಗೇ ಅಂವಾ ಅವೆರಡನ್ನೂ ತನ್ನ ಸೊಸಿ ನಾಗಮ್ಮ ಮತ್ತು ಮೊಮ್ಮಗಳು ಸಾವಿತ್ರಿ ಹೆಸರಲೇ ಮಾಡಬೇಕು ಅಂತ ಅಂದಕೊಂಡಿದ್ದ. ಮಗನ ಚಟಕ್ಕ ಮನ್ಯಾಗಿರೋ ಪಾತ್ರೆ, ಪಗಡಿ ಯಾವದೂ ಈಡಾಗಲಿಲ್ಲ. ಕುಡಿಯಾಕ ಆಡಾಕ ದುಡ್ಡ ಕಡಿಮಿ ಬಿದ್ರ ಅಂವಾ ಎಲ್ಲದಕ್ಕೂ ತಯಾರಾಗತಿದ್ದ. ಅವತ್ತೊಂದಿನ ರೊಕ್ಕ ಕಡಿಮಿ ಬಿತ್ತು ಅಂತ ಹೇಳಿ ವತ್ತಲದೊಳಗ ಹೂತಿರೋ ತಾಮ್ರದ ಹಂಡೆ ಹಡ್ಡಿ ತಗದು ಮಾರಿದ್ದ. ಆವತ್ತು ಮುದಕಪ್ಪಗ ಹೆಂಡತಿ ಬೆನ್ನ ಮ್ಯಾಲ ತಾನೂ ಹೋಗಿದ್ದರ ಬಾಳ ಪಾಡಿತ್ತು ಅನಸಿತ್ತು. ಹೆಂಡತಿ ನಾಗಮ್ಮ ಅಂವಾ ಬ್ಯಾಡ ಅಂತ ಹೇಳದರೂ ಹೊಡೀತಾನಂತ ಗೊತ್ತಿದ್ದರೂ ಹಂಡೆ ಹಡ್ಡೂವಾಗ ಕದ್ದೀ ತಗದಳು.

ಮೂಲ್ಯಾಗಿರೋ ವಡಗಟಗಿ ತಗೊಂಡು ಆಕಿ ವಾರದ ಮಟ ಏಳಲಾಕ ಬರಲಾರದಂಗ ಹೊಡದಿದ್ದ. ಅವನ ವಂಡತನಕ್ಕ ಆಜೂ ಬಾಜೂ ಮನಿಯವರೂ ಸೈತ ಬಿಡಸಾಕ ಬರತಿರಲಿಲ್ಲ. ಹೆಂಡತಿ ಇವನ ರಿಕಾಮಿತನ ನೋಡಿನೇ ಬ್ಯಾಡ ಬ್ಯಾಡ ಅಂದರೂ ಮತ್ತೊಂದು ಕೂಸಿನ್ನ ಮಾಡಕೊಂಡಿದ್ದ. ಎರಡನೆಯ ಕೂಸೂ ಹೆಣ್ಣಾಗಿದ್ದಕ ನಾಗಮ್ಮ ಮತ್ತಷ್ಟು ಕಿರಕಿರಿ ಅನುಭವಿಸಬೇಕಾಗಿತ್ತು. ಮಾತಿಗೊಮ್ಮ ಅವನೇ ಸಾಕೂವಂಗ ‘ಹೆಣ್ಣ ಹಡದು ಮೂಲಾ ಮಾಡದಿ’ ಅಂತಿದ್ದ. ನಾಗಮ್ಮ ಮನಿ ಕೆಲಸ ಮುಗಿಸಿ, ಹೊಟೇಲೊಂದರೊಳಗ ಮುಸುರಿ ತಿಕ್ಕಿ ಮ್ಯಾಲಿನ ಖರ್ಚು ಜಗ್ಗತಿದ್ದಳು. ಆವಾಗವಾಗ ಗಂಡನ ಒಡ್ಡಲಕೂ ಆಸರಾಗಬೇಕು. ಅಟ್ಟಾದ ಮ್ಯಾಲೂ ‘ಆಕಿನ್ನ ಲಗ್ನ ಆಗಿದ್ದೇ ತನಗ ಸಾಡೇಸಾತಿ ಸುರು ಆಯ್ತು’ ಅಂತಿದ್ದ. ಅವನ ಚಟಕ್ಕ ಮನ್ಯಾಗಿನ ಯಾವುದೂ ಸಾಮಾನು ಉಳೀಲಿಲ್ಲ. ಇದ್ದ ಹತ್ತು ಕುರಿ ವರ್ಷದೊಳಗ ಮುದಕಪ್ಪನ ಜೋಡಿ ಜಗಳಾಡಿ ನಿಖಾಲಿ ಮಾಡಿದ್ದ. ಮುದಕಪ್ಪ ತಕರಾರು ಮಾಡದಾಗೊಮ್ಮ ಅವನ ಮ್ಯಾಗ ಹೊಡಿಯುವಂಗ ಏರಿ ಹೋಗತಿದ್ದ. ಆವಾಗ ನಾಗಮ್ಮ ಅಡ್ಡ ಬಂದು ಮಾವಗ ಬೀಳೊ ಹೊಡತ ತಾನು ಅನುಭವಿಸಿದ್ದಿತ್ತು. ಅವತ್ತೊಂದಿನ ರಾತ್ರಿ ಕುಡದು ಬಂದು ‘ನನಗ ಮನಿಯೊಳಗ ಪಾಲು ಬೇಕು’ ಅಂತ ನಿಂತು ಬಿಟ್ಟ.

ಮುದಕಪ್ಪ ‘ನಾ ಇರೂಮಟ ಆ ಮಾತೇ ಆಡಬ್ಯಾಡ’ ಅಂದ. ‘ನೀ ಇದ್ದರೂ ಅಟ್ಟೇ... ಹೋದರೂ ಅಟ್ಟೇ.. ನನಗ ನನ್ನ ಪಾಲು ಬೇಕು’ ಅಂದಾಗ ಮುದಕಪ್ಪನ ಕಣ್ಣಾಲಿ ತುಂಬಿದಂಗ ಆಗಿತ್ತು. ಸೊಸಿ ನಾಗಮ್ಮಗ ಗಂಡನ ಮಾತು ತಡೀಲಿಕ್ಕ ಆಗದೇ ‘ನಿನಗ ಆಸ್ತಿ ಕೊಟ್ಟು ನನ್ನ ಮಕ್ಕಳು ನಾನು ಬೀದಿಗಿ ಬೀಳಬೇಕಾ.. ನಿನಗ ಹೊಲ ಮನಿ ಒಂದು ವಾರದ ಚಟಕ್ಕ ಮೂಲ. ನಾನೇ ಮಾವಗ ಪಾಲು ಕೊಡಬ್ಯಾಡ್ರಿ ಅಂತ ಹೇಳ್ತೀನಿ’ ಅಂದದ್ದೇ ನಾಗಮ್ಮಳ ಕೂದಲು ಹಿಡದು ಎಳದಾಡಿ ಒದಿಲಿಕ್ಕ ಸುರು ಮಾಡದ. ಮುದಕಪ್ಪಗ ಸಿಟ್ಟನ್ನೂದು ಒತ್ತರಿಸಿಕೊಂಡು ಬಂದರೂ ಮೈಯಾಗ ತ್ರಾಣ ಇರಲಾರದಕ್ಕ ‘ಸತ್ತುಗಿತ್ತಿತ್ತು ಹೊಡಿಬ್ಯಾಡ’ ಅಂತ ಅಷ್ಟೇ ಹೇಳಿ ಸುಮ್ಮಾಗಿದ್ದ. ಮಗನ ಮಾತು, ವ್ಯವಹಾರ ಎಲ್ಲಾ ನೋಡಿ ಮುದಕಪ್ಪಗ ಅಂವಾ ಈಗ ಸೈತಾನ ಆಗ್ಯಾನ, ಚಟಕ್ಕ ರೊಕ್ಕಾ ಹುಟ್ಟಲಿಲ್ಲಂದ್ರ ಯಾರನ್ನರೇ ಚಟ್ಟ ಕಟ್ಟಾಕೂ ಅಂವಾ ತಯಾರದಾನ. ಮುಂಗಾರು ಬಿತ್ತಲಿಕ್ಕಂತ ಜ್ವಾಳಾ ತಂದು ಗಂಧಕದ ಪೌಡರ್ ಹಚ್ಚಿಟ್ಟದ್ದನ್ನೂ ಎತಗೊಂಡು ಹೋಗಿ ಮಾರಿ ಚಟಾ ಮಾಡೋ ಮಟ್ಟಕ್ಕ ಅಂವಾ ಬೆಳದಾನಂದ್ರ ಅಂವಾ ಏನು ಮಾಡಾಕೂ ಹೇಸೂದಿಲ್ಲಂತ ಗೊತ್ತಾಗಿತ್ತು.

***

ಆ ದಿವಸ ರಾತ್ರಿ ಒಂದು ಗಂಟೆಯಾದರೂ ಶಂಕರಲಿಂಗ ಮನಿಗಿ ಬರಲಿಲ್ಲ. ಸೊಸಿ ನಾಗಮ್ಮ ಮಾವನ ಮುಂದೆ ‘ಇಟ್ಟೊತ್ತಾದರೂ ಮನಿಗಿ ಬರಲಿಲ್ಲ, ಎಲ್ಲಿ ಏನು ಲಿಗಾಡು ಮಾಡಕೊಂಡಾನೋ ಏನೋ...’ ಅಂತ ಮತ್ತ ಮತ್ತ ಹೇಳದ ಮ್ಯಾಲ ಮಾವ ‘ಅಂವಗೇನೂ ಆಗಲ್ಲ ನೀ ಸುಮ್ಮ ಮಲಕೊ’ ಅಂದ ಮ್ಯಾಲೂ ನಾಗಮ್ಮ ಮತ್ತೆ ‘ಇಲ್ಲೇ ಹನಮಂತ ದೇವರ ಗುಡಿ ಹಿಂದ ಒಂದು ಸಾರಿ...’ ಅನ್ನೂವಾಗಲೇ ಮುದಕಪ್ಪ ಕೈಯೊಳಗ ಬ್ಯಾಟರಿ ಹಿಡಕೊಂಡು ಹಗೂರಕ ನಡದೇ ಬಿಟ್ಟ. ವಾರದಾಗ ಒಮ್ಮೆರೆ ಕುಡದಾಗ ತನ್ನ ಮ್ಯಾಲ ಏರಿ ಬರೂದು, ಸೊಸಿಗಿ ಹೊಡಿಯೂದು, ನೀ ಇದ್ದರೆಷ್ಟು ಹೋದರೆಷ್ಟು ಅಸ್ತಿ ಪಾಲು ಕೊಡು ಅಂದದ್ದು ಎಲ್ಲಾ ನೆನಪಾಗಿ ಮುದಕಪ್ಪನ ಬಾಯಿ ಕಹಿ ಆದಂಗ ಆಯ್ತು. ಕೈ ಊರುತಾ ಹನಮಂತ ದೇವರ ಗುಡಿ ಪಾವಟಣಿಗಿ ಹತ್ತಿದ. ಕೇರಿ ನಾಯಿಗಳೆಲ್ಲಾ ವಿಕಾರವಾಗಿ ಬೊಗಳತಿದ್ದವು. ಆ ಅವರಾತ್ರಿಯೊಳಗ ಕುರಬರ ಬಾವ್ಯಾಗ ದಡಲ್.. ಅನ್ನೋ ಅವಾಜು ಕೇಳಿಬಂತು. ನಾಯಿಗಳು ಬೊಗಳೋದು ಮತ್ತೂ ಜೋರಾಯ್ತು. ಕೈಯಾಗಿನ ಬಡಗಿ ನೆಲಕ್ ಟಕ್...ಟಕ್ ಅಂತ ಬಡ್ಕೊಂತ ಮಾವ ಒಬ್ಬನೇ ಬ್ಯಾಟರಿ ಹಿಡ್ಕೊಂಡು ಬರೋದನ್ನು ನೋಡಿ ನಾಗಮ್ಮ ಗಾಬರಿಯಾದಳು. ಮುದಕಪ್ಪ ಮಾತ್ರ ಕೈಯಿಂದ ‘ಅಂವಾ ಅಲ್ಲಿಲ್ಲ’ ಅನ್ನೊ ಸನ್ನೆ ಮಾಡಿ ‘ಬಾಗಿಲು ಹಾಕೊಂಡು ಮಲ್ಕೊ ಹೋಗು’ ಅಂದವನೇ ದೊಡ್ಡದೊಂದು ನಿಟ್ಟುಸಿರು ಬಿಟ್ಟು ತಾನು ಮಲಗೊ ಹೊರಸಿನ ಕಡೆ ಶಿವ ಶಿವ ಅನ್ಕೊಂತ ಹೆಜ್ಜಿ ಹಾಕದಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.