ADVERTISEMENT

ಮಕ್ಕಳ ಸಾಹಿತ್ಯ | ಕಾಗೆ ಮತ್ತು ಮರಕುಟಿಗ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2022, 19:30 IST
Last Updated 12 ನವೆಂಬರ್ 2022, 19:30 IST
ಕಲೆ: ಗುರು ನಾವಳ್ಳಿ
ಕಲೆ: ಗುರು ನಾವಳ್ಳಿ   

ಹಳೆಯ ಕಾಲದಲ್ಲಿ ಒಂದು ಸಲ ಒಂದು ಕಾಗೆಗೆ ಬಹಳ ಬಾಯಾರಿಕೆ ಆಯಿತು. ಅದು ಬೇಸಿಗೆ ಕಾಲ. ನದಿ ಹಳ್ಳಗಳು ಎಲ್ಲಾ ಬತ್ತಿ ಹೋಗಿದ್ದವು. ನಲ್ಲಿಗಳಲ್ಲೂ ನೀರು ಬರುತ್ತಿರಲಿಲ್ಲ. ಆಗ ಕಾಗೆಗೆ ಒಂದು ಹೂಜಿ ಕಾಣಿಸಿತು. ಅದರ ತಳದಲ್ಲಿ ಸ್ವಲ್ಪ ನೀರಿತ್ತು. ಕಾಗೆಗೆ ಅದು ಎಟಕುತ್ತಿರಲಿಲ್ಲ. ಅದು ಒಂದೊಂದೇ ಕಲ್ಲನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಬಂದು ಹೂಜಿಗೆ ಹಾಕತೊಡಗಿತು. ಸ್ವಲ್ಪ ಹೊತ್ತಿನಲ್ಲೇ ನೀರು ಮೇಲೆ ಬಂತು. ಅದನ್ನು ಕುಡಿದು ಕಾಗೆ ಪುರ್‍ರನೆ ಹಾರಿ ಹೋಯಿತು.

ಆದರೆ ಈ ಹೊಸ ಕಾಲದಲ್ಲಿ ಅದೇ ಕಾಗೆಯ ಮರಿ ಮೊಮ್ಮಗ ಕಾಗೆಗೆ ಒಂದು ಸಲ ಬಹಳ ಬಾಯಾರಿಕೆಯಾಯಿತು. ನದಿ ಹಳ್ಳ ಕೆರೆಗಳು ಇದ್ದ ಜಾಗದಲ್ಲೆಲ್ಲ ಮನೆಗಳು ಬಂದಿದ್ದವು. ಬಾವಿಗಳು ಇರಲೇ ಇಲ್ಲ. ಎಲ್ಲಾ ಬೋರ್‌ವೆಲ್‌ಗಳು. ಎಲ್ಲೆಲ್ಲಿ ನೋಡಿದರೂ ಮನೆಗಳ ಮೇಲೆ ಕಪ್ಪು, ಹಳದಿ ಬಣ್ಣದ ಪ್ಲಾಸ್ಟಿಕ್ ಟ್ಯಾಂಕುಗಳು. ನೀರಿನ ಸುಳಿವೇ ಇಲ್ಲ. ಕಾಗೆಗೆ ಹಾರಿ ಹಾರಿ ಸುಸ್ತಾಯಿತು. ಬೇಸಿಗೆಯ ಸೂರ್ಯ ಧಗಧಗಿಸುತ್ತಿದ್ದ. ಅಲ್ಲೊಂದು ಮನೆ. ಮನೆಯ ಮೇಲೆ ಮರದ ನೆರಳು. ಅಲ್ಲೊಂದು ಪ್ಲಾಸ್ಟಿಕ್ ಟ್ಯಾಂಕ್ ಇತ್ತು. ಕಾಗೆ ಹಾರಿ ಹೋಗಿ ಅದರ ಮೇಲೆ ಕುಳಿತುಕೊಂಡಿತು. ಹ್ಞಾ... ಸ್ವಲ್ಪ ತಂಪಾಯಿತು. ಅಗೋ! ಎಲ್ಲೋ ನೀರು ಬುಳುಬುಳು ಬೀಳುತ್ತಿರುವ ಸದ್ದು. ಹ್ಞಾ... ನೀರು... ನೀರು...! ಕಾಗೆ ಕಣ್ಣರಳಿಸಿ ಸುತ್ತಮುತ್ತ ನೋಡಿತು. ಕಿವಿಯಾನಿಸಿ ಕೇಳಿತು. ಆ ಟ್ಯಾಂಕ್ ಒಳಗೆ ನೀರು ಬೀಳುತ್ತಿತ್ತು. ಕೆಳಗೆ ಎಲ್ಲೋ ಪಂಪ್ ಚಾಲನೆಯಲ್ಲಿದ್ದ ಜಿಯ್ ಎಂಬ ಸದ್ದು. ಕೆಳಗಿಂದ ನೀರು ಮೇಲಕ್ಕೆ ಬಂದು ಟ್ಯಾಂಕಿನೊಳಗೆ ಬೀಳುತ್ತಿದೆ. ಇಲ್ಲಿ ನೀರು ಕೇವಲ ಒಂದು ಶಬ್ದವಾಗಿದೆ. ಕಣ್ಣಿಗೆ ಕಾಣಿಸುತ್ತಿಲ್ಲ.

ಕಾಗೆ ಪ್ಲಾಸ್ಟಿಕ್ ಟ್ಯಾಂಕನ್ನು ತನ್ನ ಕೊಕ್ಕಿನಿಂದ ಕುಕ್ಕ ತೊಡಗಿತು. ಟ್ಯಾಂಕ್ ಬಹಳ ಗಟ್ಟಿಯಾಗಿತ್ತು. ಕುಕ್ಕಿ ಕುಕ್ಕಿ ಅದರ ತಲೆ ಗಿಮ್ ಎಂದು ಸುತ್ತಲಾರಂಭಿಸಿತು. ನೀರು ಮಾತ್ರ ಬರಲಿಲ್ಲ. ಆಗ ಕಾಗೆಗೆ ತನ್ನ ಗೆಳೆಯ ಮರಕುಟಿಗನ ನೆನಪಾಯಿತು. ಈ ಕೆಲಸಕ್ಕೆ ಅವನೇ ಸರಿ ಎಂದು ನಿರ್ಧರಿಸಿ ಕಾಗೆ ಹಾರಿ ಹೋಯಿತು.

ADVERTISEMENT

ಅಪರೂಪಕ್ಕೆ ಬಂದ ಗೆಳೆಯನನ್ನು ಕಂಡು ಮರಕುಟಿಗನಿಗೆ ಬಹಳ ಸಂತೋಷವಾಯಿತು. ಚಳ್ಳೆ ಹಣ್ಣು ಕಂಬಳಿ ಹುಳುಗಳನ್ನು ಕೊಟ್ಟು ಉಪಚಾರ ಮಾಡಿತು. ಕಾಗೆ ಮಾತ್ರ ಏನನ್ನು ತಿನ್ನದೆ. ‘ನೀರು... ನನಗೆ ನೀರು ಬೇಕು!’ ಎಂದು ಕೀರಲು ಕಂಠದಲ್ಲಿ ಕೂಗಿತು. ಎಲ್ಲೂ ನೀರೇ ಇರಲಿಲ್ಲ. ಕಾಗೆ ತಾನು ಕಂಡ ನೀರಿನ ಟ್ಯಾಂಕ್‌ ಬಗ್ಗೆ ಹೇಳಿತು. ಮರಕುಟಿಗನು ಟ್ಯಾಂಕನ್ನು ಕುಕ್ಕಿ ನೀರು ಹೊರ ಬರುವಂತೆ ಮಾಡಿದರೆ ನೀರು ಸಿಗಬಹುದು ಎಂದಿತು ಕಾಗೆ.

ಸರಿ, ಕಾಗೆ, ಮರಕುಟಿಗ ಎರಡೂ ಅಲ್ಲಿಗೆ ಹಾರಿ ಬಂದವು. ಮರಕುಟಿಗ ಟ್ಯಾಂಕನ್ನು ಒಂದು ಸುತ್ತು ಹಾಕಿ ಯಾವ ಜಾಗ ಸೂಕ್ತ ಎಂದು ಪರೀಕ್ಷೆ ಮಾಡಿತು. ಅನಂತರ ಒಂದು ಜಾಗದಲ್ಲಿ ಕುಕ್ಕಲು ಆರಂಭಿಸಿತು. ಅದು ಎಷ್ಟು ವೇಗವಾಗಿ ಕೂಗುತ್ತಿತ್ತೆಂದರೆ ನಿಮಿಷಕ್ಕೆ ನೂರಿಪ್ಪತ್ತು ಬಾರಿ ಕುಕ್ಕುತ್ತಿತ್ತು. ಐದೇ ನಿಮಿಷ ಟ್ಯಾಂಕಿನಿಂದ ನೀರು ಚಿಲ್ಲನೆ ಹಾರಿತು. ಕಾಗೆಗೆ ಸಂತೋಷವೋ ಸಂತೋಷ! ಎರಡೂ ಪಕ್ಷಿಗಳು ಹೊಟ್ಟೆ ತುಂಬ ನೀರು ಕುಡಿದವು. ಕಾಗೆ, ‘ಕಾ ಕಾ...ಇಲ್ಲಿ ನೀರಿದೆ ಬನ್ನಿ’ ಎಂದು ತನ್ನ ಬಳಗವನ್ನೆಲ್ಲ ಕರೆಯಿತು. ಸ್ವಲ್ಪ ಹೊತ್ತಿನಲ್ಲಿ ನೂರಾರು ಕಾಗೆಗಳು, ಗೊರವಂಕಗಳು, ಪಾರಿವಾಳಗಳು, ಗಿಣಿಗಳು, ಕೋಗಿಲೆಗಳು, ಗುಬ್ಬಚ್ಚಿಗಳು ಅಲ್ಲಿಗೆ ಹಾರಿ ಬಂದು ನೀರು ಕುಡಿಯ ತೊಡಗಿದವು. ಬಣ್ಣ ಬಣ್ಣದ ಪಕ್ಷಿಗಳಿಂದ ಅದೊಂದು ಪಕ್ಷಿಕಾಶಿಯೇ ಆಯಿತು.

ಅವುಗಳ ಚಿಲಿಪಿಲಿ ಕೇಳಿ ಮನೆಯ ಯಜಮಾನ ಹೊರಗೆ ಬಂದ. ಮೆಟ್ಟಿಲು ಹತ್ತಿ ತಾರಸಿಗೆ ಬಂದ. ಅಲ್ಲಿ ಹಕ್ಕಿಗಳ ಮೇಳವೇ ನಡೆಯುತ್ತಿತ್ತು. ಟ್ಯಾಂಕಿನಿಂದ ಕಾರಂಜಿಯಂತೆ ನೀರು ಚಿಮ್ಮುತಿತ್ತು. ತಾರಸಿಯೆಲ್ಲ ನೀರುಮಯವಾಗಿತ್ತು. ಕೆಲವು ಪಕ್ಷಿಗಳು ನೀರು ಕುಡಿಯುತ್ತಿದ್ದವು. ಮತ್ತೆ ಕೆಲವು ನೀರಿನಲ್ಲಿ ಹೊರಳಾಡಿ ದೇಹ ತಂಪು ಮಾಡಿಕೊಳ್ಳುತ್ತಿದ್ದವು. ಮನೆ ಯಜಮಾನನಿಗೆ ಗಾಬರಿಯಾಯಿತು. ಹುಷ್ ಹುಷ್ ಎಂದು ಪಕ್ಷಿಗಳನ್ನು ಓಡಿಸಿದ. ಟ್ಯಾಂಕಿನ ರಂಧ್ರಕ್ಕೆ ಒಂದು ಬಟ್ಟೆಯ ತುಂಡನ್ನು ಸಿಕ್ಕಿಸಲು ನೋಡಿದ. ಸೋರುವುದು ನಿಲ್ಲಲಿಲ್ಲ. ಕೊಳಾಯಿ ದುರಸ್ತಿ ಮಾಡುವವನಿಗೆ ಫೋನ್ ಮಾಡಿದ. ಅವನು ಬಂದವನೇ ಅದನ್ನು ನೋಡಿ, ‘ದುರಸ್ತಿ ಮಾಡಲು ಆಗುವುದಿಲ್ಲ ಹೊಸದನ್ನ ತರಬೇಕು’ ಎಂದ. ಯಜಮಾನನಿಗೆ ಎದೆ ದಡ್ ಎಂದಿತು. ಹತ್ತು ಸಾವಿರ ರೂಪಾಯಿ ಖರ್ಚು ಮಾಡಬೇಕೆ? ‘ಒಂದು ಪ್ಲಗ್ ಹಾಕಿ, ವಾಷರ್ ಹಾಕಿ ನೋಡಿ’ ಎಂದ.

ಪ್ಲಂಬರ್ ಹೇಳಿದ, ‘ಹಾಗೆ ಮಾಡಬಹುದು. ಆದರೆ ಬೇರೆ ಕಡೆ ತೂತು ಕೊರೆದರೆ?’

‘ಹೌದಲ್ಲಾ... ಹಾಗಾದ್ರೆ ಇದಕ್ಕೆ ಏನು ಉಪಾಯ?’

‘ಒಂದು ಅಗಲವಾದ ಮಣ್ಣಿನ ಪರಾತದಲ್ಲಿ ನೀರು ತುಂಬಿಸಿ ಇಲ್ಲಿಡಿ. ಹಕ್ಕಿಗಳು ಬಂದು ಸಂತೋಷದಿಂದ ನೀರು ಕುಡಿಯುತ್ತವೆ. ದಿನಾ ನೀರು ತುಂಬಿಸಿ. ಹಕ್ಕಿಗಳಿಗೂ ಸಂತೋಷ ನಿಮ್ಮ ಟ್ಯಾಂಕು ಸುರಕ್ಷಿತ’ ಎಂದ ಪ್ಲಂಬರ್‌.

‘ಸರಿ, ಹಾಗೆ ಮಾಡುತ್ತೇನೆ’ ಎಂದ ಆ ಮನೆಯ ಯಜಮಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.